ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಾತಿ ಗಣತಿ ವರದಿ ಬಹಿರಂಗಕ್ಕೆ ವಿಜಯನಗರ ಜಿಲ್ಲೆ ಹಿಂದುಳಿದ ವರ್ಗಗಳ ಒಕ್ಕೂಟ ಆಗ್ರಹ

Last Updated 13 ಅಕ್ಟೋಬರ್ 2021, 9:01 IST
ಅಕ್ಷರ ಗಾತ್ರ

ಹೊಸಪೇಟೆ (ವಿಜಯನಗರ): ನ್ಯಾಯಮೂರ್ತಿ ಕಾಂತರಾಜ ಆಯೋಗದ ಜಾತಿ ಗಣತಿ ಸಮೀಕ್ಷೆ ವರದಿಯನ್ನು ಬಹಿರಂಗಪಡಿಸಬೇಕು ಎಂದು ವಿಜಯನಗರ ಜಿಲ್ಲೆ ಹಿಂದುಳಿದ ವರ್ಗಗಳ ಒಕ್ಕೂಟ ಆಗ್ರಹಿಸಿದೆ.

ಈ ಸಂಬಂಧ ಒಕ್ಕೂಟದ ಮುಖಂಡರು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಬರೆದ ಮನವಿ ಪತ್ರವನ್ನು ಬುಧವಾರ ನಗರದಲ್ಲಿ ತಹಶೀಲ್ದಾರ್‌ ಅವರಿಗೆ ಸಲ್ಲಿಸಿ, ಒತ್ತಾಯಿಸಿದರು.

ನ್ಯಾಯಮೂರ್ತಿ ಕಾಂತರಾಜ ಆಯೋಗವು 2015ರಲ್ಲೇ ಎಲ್ಲ ಜಾತಿಗಳ ಉದ್ಯೋಗ, ಶೈಕ್ಷಣಿಕ ಮತ್ತು ಆರ್ಥಿಕ ಸ್ಥಿತಿಗತಿಗಳ ಸಮೀಕ್ಷೆ ನಡೆಸಿ, ಅಂಕಿ ಅಂಶ ಸಂಗ್ರಹಿಸಿದೆ. ಅದರ ವರದಿ ಬಿಡುಗಡೆ ಮಾಡಿದರೆ ವಿವಿಧ ಜಾತಿಗಳ ನಿಖರವಾದ ಜನಸಂಖ್ಯೆ, ಹಿಂದುಳಿವಿಕೆಯ ಕಾರಣ ಗೊತ್ತಾಗುತ್ತದೆ. ಸರ್ಕಾರಕ್ಕೆ ಅನುದಾನ ಬಿಡುಗಡೆಗೆ ಅನುಕೂಲವಾಗುತ್ತದೆ ಎಂದು ಮನವಿಯಲ್ಲಿ ತಿಳಿಸಿದರು.

ಕೆಲ ಜಾತಿಯವರು ಮೀಸಲಾತಿ ಹೆಚ್ಚಿಸಬೇಕೆಂದು ಹೋರಾಟ ನಡೆಸುತ್ತಿದ್ದಾರೆ. ಆದರೆ, ಆಯೋಗದ ವರದಿ ಬಹಿರಂಗಪಡಿಸಿ, ಅದರನ್ವಯ ಮೀಸಲಾತಿ ನಿಗದಿಪಡಿಸಬೇಕು. ಒಂದುವೇಳೆ ಸರ್ಕಾರ ಒತ್ತಡಕ್ಕೆ ಮಣಿದು ಏಕಪಕ್ಷೀಯವಾಗಿ ಮೀಸಲಾತಿ ಹೆಚ್ಚಿಸಿದರೆ ಜಾತಿ ಸಂಘರ್ಷಕ್ಕೆ ಎಡೆಮಾಡಿಕೊಡುತ್ತದೆ ಎಂದು ಆತಂಕ ವ್ಯಕ್ತಪಡಿಸಿದರು.

‘ಜಾತಿವಾರು ಸಮೀಕ್ಷೆಯ ಅಂಕಿ ಅಂಶಗಳನ್ನೆ ಮಾನದಂಡವಾಗಿಟ್ಟುಕೊಂಡು ವಿವಿಧ ಜಾತಿಗಳ ಗುಂಪಿನ ಮೀಸಲಾತಿ ಪ್ರಮಾಣ ಬದಲಾವಣೆ ಮಾಡುವ ಅಧಿಕಾರ ಸರಕಾರಕ್ಕಿದೆಯೆ ಹೊರತು ಚಳವಳಿ, ರಾಜಕೀಯ ಒತ್ತಡಕ್ಕೆ ಮಣಿದು ಹಾಲಿ ಮೀಸಲಾತಿ ವ್ಯವಸ್ಥೆಯಲ್ಲಿ ಬದಲಾವಣೆ ಮಾಡುವಂತಿಲ್ಲ. ಅದು ಸಂವಿಧಾನಕ್ಕೆ ವಿರುದ್ಧವಾದುದು’ ಎಂದು ತಿಳಿಸಿದರು.
ಒಕ್ಕೂಟದ ಸಂಚಾಲಕ ವೈ. ಯಮುನೇಶ, ಮುಖಂಡರಾದ ಪ್ರಹ್ಲಾದ ಸ್ವಾಮೀಜಿ, ಗೌಳಿರುದ್ರಪ್ಪ, ವೈ.ಬಿ.ಮಧುಸೂದನ್, ಯು.ಆಂಜನೇಯಲು, ಯು.ಅಶ್ವತಪ್ಪ, ಅಗಳಿ ಭಾಸ್ಕರ್, ಟಿ.ರವಿಕುಮಾರ್, ಭೋಜರಾಜ, ಎ.ಮರಿಯಪ್ಪ, ಕೆ.ಶಿವಾನಂದ, ಸೋಮಣ್ಣ ಯಾದವ್, ಕೆ.ವೀರಣ್ಣ, ಎಂ.ಬಿ.ಗೌಡಣ್ಣನವರ್, ಶ್ರೀನಿವಾಸ್, ತಿಪ್ಪೇಸ್ವಾಮಿ, ಜಿ.ಯಂಕಪ್ಪ, ಚಿಂತಾಮಣಿ, ಸುಭಾಷ್‍ಚಂದ್ರ, ನಜೀರ್‌ ಸಾಬ್, ಸೋಮಣ್ಣ, ಬಿ.ಜಹಾಂಗೀರ್, ಮೊಹಮ್ಮದ್‌ ಗೌಸ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT