ಗುರುವಾರ, 10 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಮುಖ್ಯಮಂತ್ರಿ ಸಿದ್ದರಾಮಯ್ಯ ಏನೂ ತಪ್ಪು ಮಾಡಿಲ್ಲ: ಶಾಸಕ ಗವಿಯಪ್ಪ

ಸಿದ್ದರಾಮಯ್ಯರನ್ನು ಬಾಯಿ ತುಂಬ ಹೊಗಳಿದ ಶಾಸಕ ಗವಿಯಪ್ಪ
Published : 24 ಸೆಪ್ಟೆಂಬರ್ 2024, 16:14 IST
Last Updated : 24 ಸೆಪ್ಟೆಂಬರ್ 2024, 16:14 IST
ಫಾಲೋ ಮಾಡಿ
Comments

ಹೊಸಪೇಟೆ (ವಿಜಯನಗರ): ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಪ್ರಾಸಿಕ್ಯೂಷನ್‌ಗೆ ರಾಜ್ಯಪಾಲರು ಅನುಮತಿ ನೀಡಿದ್ದನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿಯನ್ನು ಹೈಕೋರ್ಟ್‌ ವಜಾಗೊಳಿಸಿದ್ದಕ್ಕೆ ಶಾಸಕ ಎಚ್‌.ಆರ್.ಗವಿಯಪ್ಪ ಬೇಸರ ವ್ಯಕ್ತಪಡಿಸಿದ್ದು, ಮುಖ್ಯಮಂತ್ರಿ ಅವರು ಏನೂ ತಪ್ಪು ಮಾಡಿಲ್ಲ, ಅವರು ಹಣದ ಮೋಹ ಇರುವವರೇ ಅಲ್ಲ ಎಂದಿದ್ದಾರೆ.

ನ್ಯಾಯಾಲಯದ ತೀರ್ಪು ಹೊರಬಿದ್ದ ಬಳಿಕ ಮಂಗಳವಾರ ಇಲ್ಲಿ ಮಾಧ್ಯಮದವರಿಗೆ ಪ್ರತಿಕ್ರಿಯೆ ನೀಡಿದ ಶಾಸಕರು, ‘ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಯಾವ ತಪ್ಪೂ ಮಾಡಿಲ್ಲ, ಅವರು ವ್ಯವಹಾರಸ್ಥ ಅಲ್ಲ, ಅವರು ಹಣದ ಮೋಹ ಇರುವ ವ್ಯಕ್ತಿಯೇ ಅಲ್ಲ, ಅವರ ಜೀವನ ಜನಸೇವೆಗೇ ಮುಡಿಪಾಗಿದೆ’ ಎಂದರು.

‘ನಾನು 1994ರಿಂದಲೂ ಸಿದ್ದರಾಮಯ್ಯ ಅವರನ್ನು ನೋಡುತ್ತ ಇದ್ದೇನೆ. ಸಮಾಜ ಸೇವೆ, ಜನ ಸೇವೆ ಹೊರತು ಅವರಿಗೆ ಬೇರೇನೂ ಗೊತ್ತಿಲ್ಲ. ಒಳ್ಳೆಯ ವ್ಯಕ್ತಿಯ ಹೆಸರಿಗೆ ಹಾನಿ ಮಾಡಬೇಕು ಎಂಬುದೇ ವಿರೋಧ ಪಕ್ಷಗಳ ಉದ್ದೇಶ ಇದ್ದಂತಿದೆ. ಅವರು ಏನೂ ತಪ್ಪು ಮಾಡಿಲ್ಲವಾದ ಕಾರಣ ರಾಜೀನಾಮೆ ಕೊಡುವ  ಪ್ರಶ್ನೆಯೇ ಇಲ್ಲ. ಈ ಕೋರ್ಟ್‌ ತೀರ್ಪಿನ ವಿರುದ್ಧ ಕಾನೂನು ಹೋರಾಟ ಮುಂದುವರಿಯಲಿದೆ’ ಎಂದರು ಗವಿಯಪ್ಪ ಹೇಳಿದರು.

‘ಸಿದ್ದರಾಮಯ್ಯ ಅವರ ರಾಜಕೀಯ ಜೀವನದಲ್ಲಿ ಒಂದೂ ಕಪ್ಪು ಚುಕ್ಕೆ ಇಲ್ಲ. ಆದರೆ ಇದೀಗ ಅವರ ಮೇಲೆ ಕಪ್ಪು ಚುಕ್ಕೆ ಇಡೋ ಕೆಲಸ ಮಾಡಲಾಗುತ್ತಿದೆ. ಅವರು ಎಂದೂ ಹಣ, ವ್ಯವಹಾರ ಅಂತ ಓಡಾಡಿದವರಲ್ಲ. ನಿನ್ನ ಕ್ಷೇತ್ರಕ್ಕೆ ಎಷ್ಟು ಅನುದಾನ ಬೇಕು, ಕೇಳು, ತಗೋ ಅನುದಾನ ಅಂತ ಮಂಜೂರು ಮಾಡ್ತಾರೆ ಅಷ್ಟೆ, ಬೇರೆ ಯಾವ ವಿಚಾರವನ್ನೂ ಅವರು ಎಂದಿಗೂ ಚರ್ಚಿಸಿದವರಲ್ಲ. ‘ಮುಡಾ’ದಲ್ಲಿ ಸಣ್ಣಪುಟ್ಟ ತಪ್ಪುಗಳು ಆಗಿರಬಹುದು, ಹಾಗಂತ ಸಿಎಂ ಅವರೇ ತಪ್ಪು ಮಾಡಿಲ್ಲ’ ಎಂದು ಅಭಿಪ್ರಾಯಪಟ್ಟರು.

‘ಸಿದ್ದರಾಮಯ್ಯ ಅವರೇ ಸಿಎಂ ಆಗಿ ಮುಂದುವರಿಯುತ್ತಾರೆ, ಬೇರೆಯವರು ಸಿಎಂ ಆಗುತ್ತಾರೆ ಎಂಬ ಬಗ್ಗೆ ನನಗೆ ಮಾಹಿತಿ ಇಲ್ಲ’ ಎಂದು ಗವಿಯಪ್ಪ ಹೇಳಿದರು.

ಮುನಿಸು ಮಾಯ: ಎರಡು ದಿನದ ಹಿಂದೆಯಷ್ಟೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತುಂಗಭದ್ರಾ ಜಲಾಶಯಕ್ಕೆ ಬಾಗಿನ ಅರ್ಪಿಸಲು ಹೊಸಪೇಟೆ ಸಮೀಪ ಬಂದಿದ್ದರು. ಆಗ ಶಾಸಕ ಗವಿಯಪ್ಪ ಅವರ ಬೆಂಬಲಿಗರು ಮತ್ತು ಕೆಲವು ರೈತ ಮುಖಂಡರನ್ನು ಶಾಸಕರ ಜತೆಗೆ ಅಣೆಕಟ್ಟೆ ಪ್ರದೇಶಕ್ಕೆ ಬಿಟ್ಟಿರಲಿಲ್ಲ. ಇದರಿಂದ ಸಿಟ್ಟುಗೊಂಡಿದ್ದ ಶಾಸಕರು ಮುಖ್ಯಮಂತ್ರಿ ಅವರು ಬಾಗಿನ ಅರ್ಪಿಸುವಾಗ ಗೈರಾಗಿ ತಮ್ಮ ಬಂಡಾಯ ಪ್ರದರ್ಶಿಸಿದ್ದರು. ಆದರೆ ಮಂಗಳವಾರ ಕೋರ್ಟ್‌ ತೀರ್ಪು ಪ್ರಕಟವಾಗುತ್ತಿದ್ದಂತೆಯೇ ಮುಖ್ಯಮಂತ್ರಿ ಅವರ ಮೇಲೆ ಮಮತೆಯ ಮಳೆಗರೆದರು.

ಮುಖ್ಯಮಂತ್ರಿ ಅವರು ಹೊಸಪೇಟೆಗೆ ಬಂದು ಹೋದ ಬಳಿಕ ಪ್ರತಿಕ್ರಿಯಿಸಿದ್ದ ಶಾಸಕ ಗವಿಯಪ್ಪ, ‘ಬಾಗಿನ ಅರ್ಪಿಸುವುದು ರೈತರ ಹಬ್ಬವಾಗಿತ್ತು. ಅವರನ್ನೇ ದೂರ ಇಟ್ಟದ್ದು ನನಗೆ ಸರಿ ಕಾಣಲಿಲ್ಲ’ ಎಂದು ಹೇಳಿದ್ದರು ಹಾಗೂ ತಮ್ಮ ಕ್ಷೇತ್ರದ ಕಡೆಗಣನೆ ಆಗಿದೆ ಎಂದು ಹೇಳುವ ಮೂಲಕ ರಾಜ್ಯ ಸರ್ಕಾರ ಮತ್ತು ಮುಖ್ಯಮಂತ್ರಿ ಅವರ ವಿರುದ್ಧ ಪರೋಕ್ಷವಾಗಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದರು. ಆದರೆ ಮಂಗಳವಾರ ಅವರು ಮುಖ್ಯಮಂತ್ರಿ ಅವರ ಬೆನ್ನಿಗೆ ಗಟ್ಟಿಯಾಗಿ ನಿಂತಿರುವ ರೀತಿಯಲ್ಲೇ ಮಾತನಾಡುವ ಮೂಲಕ ಅಚ್ಚರಿ ಮೂಡಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT