ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತುರ್ತು ಕೆಲಸ ಇದ್ದರಷ್ಟೇ ಹೊರಬನ್ನಿ: ಉಪವಿಭಾಗಾಧಿಕಾರಿ ಸಿದ್ದರಾಮೇಶ್ವರ

ಎಲ್ಲಾ ಧಾರ್ಮಿಕ ಕೇಂದ್ರಗಳಿಗೂ ಭಕ್ತರ ಪ್ರವೇಶ ನಿಷೇಧ
Last Updated 21 ಏಪ್ರಿಲ್ 2021, 16:57 IST
ಅಕ್ಷರ ಗಾತ್ರ

ಹೊಸಪೇಟೆ(ವಿಜಯನಗರ): ‘ಕೋವಿಡ್–19 ಎರಡನೇ ಅಲೆ ವ್ಯಾಪಕವಾಗಿ ಹರಡುತ್ತಿರುವುದರಿಂದ ಜನ ತುರ್ತು ಕೆಲಸ, ಅನಿವಾರ್ಯ ಇದ್ದರಷ್ಟೇ ಹೊರಗೆ ಓಡಾಡಬೇಕು. ವಿನಾಕಾರಣ ಓಡಾಡಬಾರದು. ಸೋಂಕು ಹರಡದಂತೆ ತಡೆಯಬೇಕಾದರೆ ಎಲ್ಲರೂ ನಿಯಮ ಪಾಲಿಸಬೇಕು’ ಎಂದು ಉಪವಿಭಾಗಾಧಿಕಾರಿ ಸಿದ್ದರಾಮೇಶ್ವರ ತಿಳಿಸಿದರು.

ಬುಧವಾರ ಸಂಜೆ ನಗರದಲ್ಲಿ ನಡೆದ ವಿವಿಧ ಸಮುದಾಯದ ಮುಖಂಡರು, ವರ್ತಕರು, ವಾಣಿಜ್ಯ ಸಂಘಗಳ ಪ್ರತಿನಿಧಿಗಳ ಜತೆ ನಡೆಸಿದ ಸಭೆಯಲ್ಲಿ ಮಾತನಾಡಿದರು.

‘ರಾಜ್ಯ ಸರ್ಕಾರ ನೂತನವಾಗಿ ಹೊರಡಿಸಿರುವ ಮಾರ್ಗಸೂಚಿಗಳನ್ನು ಎಲ್ಲರೂ ಕಟ್ಟುನಿಟ್ಟಾಗಿ ಪಾಲಿಸಬೇಕು. ಅದರಲ್ಲೂ ವಾರಾಂತ್ಯದ ಕರ್ಫ್ಯೂ ಸಮಯದಲ್ಲಿ ತುರ್ತು ಕೆಲಸವಿದ್ದರಷ್ಟೇ ಓಡಾಡಬೇಕು. ಅನಗತ್ಯವಾಗಿ ಹೊರಗೆ ಓಡಾಡಬಾರದು’ ಎಂದು ಹೇಳಿದರು.

‘ಸರ್ಕಾರ ಸೂಚಿಸಿದ ದಿನಾಂಕದವರೆಗೂ ಎಚ್ಚರದಿಂದ ಇರಬೇಕು. ಎಲ್ಲಾ ರೀತಿಯ ಧಾರ್ಮಿಕ ಕೇಂದ್ರಗಳಲ್ಲಿ ಇಬ್ಬರು ಸಿಬ್ಬಂದಿ ಧಾರ್ಮಿಕ ಕಾರ್ಯ ಮುಗಿಸಿ, ಬಾಗಿಲು ಮುಚ್ಚಬೇಕು. ಸಾರ್ವಜನಿಕರು ಭೇಟಿ ನೀಡಲು ಅವಕಾಶ ಕೊಡಬೇಡಿ’ ಎಂದು ತಾಕೀತು ಮಾಡಿದರು.

‘ಆಟೊ ಚಾಲಕರು ‌ಅಂತರ ಕಾಯ್ದುಕೊಂಡು ಸುರಕ್ಷತಾ ಕ್ರಮಗಳೊಂದಿಗೆ ಪ್ರಯಾಣಿಕರನ್ನು ಕರೆದೊಯ್ಯಬೇಕು. ಹೊರಭಾಗದಿಂದ ಬರುವ ಪ್ರವಾಸಿಗರು ತಾವು ಬಂದಿರುವುದರ ಸೂಕ್ತ ಕಾರಣ ಮತ್ತು ದಾಖಲಾತಿಗಳನ್ನು ನೀಡಿ ಉಳಿದುಕೊಳ್ಳಬೇಕು’ ಎಂದು ತಿಳಿಸಿದರು.

‘ಮದುವೆಗೆ 50 ಜನ ಸೇರಲು ಅವಕಾಶ ಇದೆ. ಈ ಹಿಂದೆ ನಿಗದಿಯಾಗಿದ್ದ ಮದುವೆ ದಿನಾಂಕಕ್ಕೂ ಮುಂಚೆ ತಾಲ್ಲೂಕು ಕಚೇರಿಗೆ ಬಂದು 50 ಜನರ ಪಾಸ್ ಪಡೆದುಕೊಳ್ಳಬೇಕು. 50 ಜನಕ್ಕಿಂತ ಹೆಚ್ಚು ಕಂಡುಬಂದಲ್ಲಿ ಕಠಿಣ ಕ್ರಮ ಕೈಗೊಳ್ಳಲಾಗುವುದು’ ಎಂದು ತಹಶೀಲ್ದಾರ್ ಎಚ್‌. ವಿಶ್ವನಾಥ್ ಎಚ್ಚರಿಕೆ ನೀಡಿದರು.

ಸಿಪಿಐ ವಿ. ನಾರಾಯಣ, ಶ್ರೀನಿವಾಸ್ ಮೇಟಿ, ಕಂದಾಯ ಇಲಾಖೆಯ ಇನ್‌ಸ್ಪೆಕ್ಟರ್‌ ಮಲ್ಲಿಕಾರ್ಜುನ ಗೌಡ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT