ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಜಯನಗರ: ಬರಲಿದೆ ಹೊಸ ಘನತ್ಯಾಜ್ಯ ವಿಲೇವಾರಿ ಘಟಕ, ₹7 ಕೋಟಿ ಅನುದಾನ ಮಂಜೂರು

ಕಾರಿಗನೂರಿನಲ್ಲಿ 20 ಎಕರೆ ಜಾಗ
Last Updated 28 ಅಕ್ಟೋಬರ್ 2022, 19:30 IST
ಅಕ್ಷರ ಗಾತ್ರ

ಹೊಸಪೇಟೆ (ವಿಜಯನಗರ): ನಗರದಲ್ಲಿ ನಿತ್ಯ ಉತ್ಪಾದನೆಯಾಗುವ ತ್ಯಾಜ್ಯವನ್ನು ಸಮರ್ಪಕವಾಗಿ ವಿಲೇವಾರಿಗೊಳಿಸಲು ನಗರಸಭೆ ಮುಂದಾಗಿದೆ.

ಅದಕ್ಕಾಗಿ ನಗರ ಹೊರವಲಯದ ಕಾರಿಗನೂರಿನಲ್ಲಿ 20 ಎಕರೆ ಜಾಗ ಗುರುತಿಸಿದೆ. ಸ್ವಚ್ಛ ಭಾರತ್‌ ಮಿಷನ್‌ ಯೋಜನೆಯಡಿ ಈಗಾಗಲೇ ₹7 ಕೋಟಿ ಅನುದಾನ ಮಂಜೂರಾಗಿದ್ದು, ಇಷ್ಟರಲ್ಲೇ ಘನ್ಯತ್ಯಾಜ್ಯ ವಿಲೇವಾರಿ ಘಟಕದ ನಿರ್ಮಾಣ ಕಾರ್ಯ ಆರಂಭವಾಗಲಿದೆ.

ಘಟಕ ನಿರ್ಮಾಣಕ್ಕೂ ಮುನ್ನ ನಗರದಿಂದ ವೈಜ್ಞಾನಿಕವಾಗಿ ಕಸ ಸಂಗ್ರಹಿಸುವ ಕಾರ್ಯ ಆರಂಭಿಸಲಾಗಿದೆ. 35 ವಾರ್ಡ್‌ಗಳಿಗೆ ಒಂದರಂತೆ ಕಸ ಸಂಗ್ರಹಿಸುವ ವಾಹನ ನೀಡಲಾಗಿದೆ. ಜೊತೆಗೆ ಹೆಚ್ಚುವರಿ ಕಸ ಉತ್ಪಾದನೆಯಾಗುವ ಪ್ರದೇಶಗಳನ್ನು ಗುರುತಿಸಿ ಹೆಚ್ಚುವರಿಯಾಗಿ 12 ವಾಹನಗಳನ್ನು ಬಿಡಲಾಗಿದೆ.

ಪ್ರತಿಯೊಂದು ವಾರ್ಡಿನ ಮನೆಬಾಗಿಲಿಗೆ ಹೋಗಿ ವಾಹನಗಳು ಕಸ ಸಂಗ್ರಹಿಸುವ ಕೆಲಸ ಮಾಡಲಿವೆ. ಪ್ರಾಥಮಿಕ ಹಂತದಲ್ಲೇ ಅವುಗಳನ್ನು ಪ್ರತ್ಯೇಕವಾಗಿ ಪಡೆದು, ಘನತ್ಯಾಜ್ಯ ವಿಲೇವಾರಿ ಘಟಕಕ್ಕೆ ಸಾಗಿಸಲು ಯೋಜನೆ ರೂಪಿಸಲಾಗಿದೆ.

‘ಕಸ ಸಂಗ್ರಹಿಸುವ ವಾಹನಗಳವರು ಮೂರು ರೀತಿಯಲ್ಲಿ ಕಸವನ್ನು ಪಡೆಯುವಂತೆ ತಿಳಿಸಲಾಗಿದೆ. ಎಲ್ಲ ವಾಹನಗಳಿಗೂ ಧ್ವನಿವರ್ಧಕ ಅಳವಡಿಸಿ, ಕಸವನ್ನು ಹೇಗೆ ಪ್ರತ್ಯೇಕವಾಗಿ ಇಡಬೇಕು ಎನ್ನುವುದರ ಬಗ್ಗೆ ತಿಳಿವಳಿಕೆ ಮೂಡಿಸಲಾಗುತ್ತದೆ. ಜನರು ಹಸಿ ಕಸ, ಒಣ ಕಸವನ್ನು ಪ್ರತ್ಯೇಕವಾಗಿ ಇಡಬೇಕು. ಇನ್ನು, ಅಪಾಯಕಾರಿ ತ್ಯಾಜ್ಯಗಳಾದ ಡೈಪರ್‌, ಸಿರಿಂಜ್‌, ಅವಧಿ ಮೀರಿದ ಔಷಧ ಸೇರಿದಂತೆ ಇತರೆ ರಸಾಯನಿಕ ವಸ್ತುಗಳನ್ನು ಪ್ರತ್ಯೇಕವಾಗಿ ಕೊಡಬೇಕು. ಹೀಗೆ ಮಾಡುವುದರಿಂದ ಕಸ ವಿಲೇವಾರಿ ಸುಲಭವಾಗುತ್ತದೆ’ ಎಂದು ನಗರಸಭೆ ಪೌರಾಯುಕ್ತ ಮನೋಹರ್‌ ನಾಗರಾಜ ತಿಳಿಸಿದರು.

‘ಈ ಹಿಂದೆ 35 ವಾರ್ಡ್‌ಗಳಲ್ಲಿ ವಾಹನಗಳು ತೆರಳಿ, ಕಸ ಸಂಗ್ರಹಿಸುತ್ತಿದ್ದವು. ಆದರೆ, ಎಲ್ಲ ರೀತಿಯ ಕಸವನ್ನು ಒಂದೇ ವಾಹನದಲ್ಲಿ ಕೊಂಡೊಯ್ಯುವುದು ಡಂಪ್‌ ಯಾರ್ಡ್‌ನಲ್ಲಿ ಹಾಕಲಾಗುತ್ತಿತ್ತು. ಇನ್ನೂ ಮುಂದೆ ಆ ರೀತಿ ಆಗುವುದಿಲ್ಲ. ಈ ಕುರಿತು ನಮ್ಮ ಸಿಬ್ಬಂದಿಗೆ ತರಬೇತಿ ನೀಡಲಾಗಿದೆ. ಹಲವೆಡೆ ನಾನೇ ಖುದ್ದು ಎದುರು ನಿಂತು ಪ್ರತ್ಯೇಕವಾಗಿ ಕಸ ಸ್ವೀಕರಿಸುವುದನ್ನು ನೋಡಿದ್ದೇನೆ. ಹಂತ ಹಂತವಾಗಿ ಸಾರ್ವಜನಿಕರು ಕೂಡ ಹೊಸ ವಿಧಾನಕ್ಕೆ ಹೊಂದಿಕೊಳ್ಳುವ ಭರವಸೆ ಇದೆ’ ಎಂದರು.

ಡಂಪ್‌ ಯಾರ್ಡ್‌ಗೆ ಸಿಗದ ಕಾಯಕಲ್ಪ:ನಗರ ಹೊರವಲಯದ ಜಂಬುನಾಥಹಳ್ಳಿ ಬೈಪಾಸ್‌ನಲ್ಲಿ ನಗರಸಭೆಗೆ ಸೇರಿದ ಡಂಪ್‌ ಯಾರ್ಡ್‌ ಇದೆ. ಅಲ್ಲೇ ಘನತ್ಯಾಜ್ಯ ವಿಲೇವಾರಿ ಘಟಕ ಆರಂಭಿಸಲು ಯೋಜಿಸಲಾಗಿತ್ತು. ಆದರೆ, ಈಗ ಅದನ್ನು ಕೈಬಿಟ್ಟು ಹೊಸದಾಗಿ ಕಾರಿಗನೂರಿನಲ್ಲಿ ಆರಂಭಿಸಲಾಗುತ್ತಿದೆ.

ಡಂಪ್‌ ಯಾರ್ಡ್‌ ವೈಜ್ಞಾನಿಕವಾಗಿ ನಿರ್ವಹಣೆ ಮಾಡುತ್ತಿಲ್ಲ. ಕಸ ಸಂಗ್ರಹಿಸುವ ವಾಹನಗಳು ಕಸ ಕೊಂಡೊಯ್ದು ಸುರಿಯುತ್ತವೆ. ಅದು ಗಾಳಿಗೆ ಎಲ್ಲೆಡೆ ಚೆಲ್ಲಾಪಿಲ್ಲಿಯಾಗಿ ಹರಡುತ್ತದೆ. ಅದನ್ನು ಸುಧಾರಿಸಲು ಕ್ರಮ ಕೈಗೊಳ್ಳಬೇಕೆನ್ನುವುದು ಅನೇಕ ವರ್ಷಗಳ ಬೇಡಿಕೆಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT