ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪತ್ರಿಕೆ ಓದಿದರೆ ಸ್ಪರ್ಧಾತ್ಮಕ ಪರೀಕ್ಷೆ ಸುಲಭ

‘ಪ್ರಜಾವಾಣಿ’ಯಿಂದ ‘ಸ್ಪರ್ಧಾತ್ಮಕ ಪರೀಕ್ಷೆ’ ಕುರಿತು ವಿದ್ಯಾರ್ಥಿಗಳಿಗೆ ಕಾರ್ಯಾಗಾರ
Last Updated 4 ಜನವರಿ 2023, 13:22 IST
ಅಕ್ಷರ ಗಾತ್ರ

ಮರಿಯಮ್ಮನಹಳ್ಳಿ/ಹೊಸಪೇಟೆ (ವಿಜಯನಗರ): ‘ನಿತ್ಯ ದಿನಪತ್ರಿಕೆ ಓದಿದರೆ ಸಾಮಾನ್ಯ ಜ್ಞಾನ ಹೆಚ್ಚಾಗುತ್ತದೆ. ಯಾವುದೇ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಸುಲಭವಾಗಿ ಎದುರಿಸಿ, ಉತ್ತಮ ಸಾಧನೆ ಮಾಡಬಹುದು’ ಎಂದು ಹೊಸಪೇಟೆ ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತ ಈರಣ್ಣ ಬಿರಾದಾರ ಹೇಳಿದರು.

‘ಪ್ರಜಾವಾಣಿ’ ಅಮೃತ ಮಹೋತ್ಸವದ ಅಂಗವಾಗಿ ತಾಲ್ಲೂಕಿನ ಮರಿಯಮ್ಮನಹಳ್ಳಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಬುಧವಾರ ಏರ್ಪಡಿಸಿದ್ದ ‘ಸ್ಪರ್ಧಾತ್ಮಕ ಪರೀಕ್ಷೆ ಎದುರಿಸುವುದು ಹೇಗೆ?’ ಕಾರ್ಯಾಗಾರದಲ್ಲಿ ಸಂಪನ್ಮೂಲ ವ್ಯಕ್ತಿ ಭಾಷಣ ಮಾಡಿದರು.

ವಿದ್ಯಾರ್ಥಿಗಳಾದವರು ತಾಳ್ಮೆಯಿಂದ ಕೇಳಿಸಿಕೊಂಡು, ಅರ್ಥೈಸಿಕೊಳ್ಳಬೇಕು. ಜೀವನದಲ್ಲಿ ಜಿದ್ದಿಗೆ ಬಿದ್ದು ಓದಿದರೆ ಏನು ಬೇಕಾದರೂ ಸಾಧನೆ ಮಾಡಬಹುದು. ಎಲ್ಲರಿಗಿಂತ ಭಿನ್ನವಾಗಿದ್ದು ಸಾಧನೆ ಮಾಡುವ ಮನೋಭಾವ ಬೆಳೆಸಿಕೊಳ್ಳಬೇಕು. ಸ್ವಯಂಸ್ಫೂರ್ತಿ, ಸ್ವಯಂಗೌರವ ಇದ್ದವರು ಎತ್ತರಕ್ಕೆ ಬೆಳೆಯುವ ಕನಸು ಹೊಂದಿರುತ್ತಾರೆ. ಆ ಕನಸು ಸಾಕಾರಗೊಳಿಸಲು ಶ್ರಮ ವಹಿಸಿ ಓದುತ್ತಾರೆ. ಆ ಸಾಧನೆಯಲ್ಲಿ ದಿನಪತ್ರಿಕೆಗಳ ಪಾತ್ರ ಮಹತ್ವದ್ದು. ಪ್ರತಿದಿನ ಕನಿಷ್ಠ ಎರಡು ತಾಸು ಪತ್ರಿಕೆಗಳನ್ನು ಓದಲು ಮೀಸಲಿಡಬೇಕು. ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಇದರಿಂದ ಸಾಕಷ್ಟು ಅನುಕೂಲವಾಗುತ್ತದೆ. ಅದಕ್ಕೆ ನಾನೇ ಸಾಕ್ಷಿ. ನಾನು ಬಾಲ್ಯದಿಂದಲೂ ‘ಪ್ರಜಾವಾಣಿ’ ಪತ್ರಿಕೆಯ ಓದುಗ ಎಂದು ಹೇಳಿದರು.

ಜೀವನದಲ್ಲಿ ವಿದ್ಯೆಗಿಂತ ದೊಡ್ಡ ಆಸ್ತಿ ಬೇರೇನೂ ಇಲ್ಲ. ನಿಯಮಿತ ಜೀವನ ಶೈಲಿ ಬೆಳೆಸಿಕೊಂಡರೆ ವ್ಯಕ್ತಿಗೆ ನಾಲ್ಕು ತಾಸು ನಿದ್ರೆ ಸಾಕು. ಎಷ್ಟೇ ಕಷ್ಟಬರಲಿ ಎದೆಗುಂದಬಾರದು. ನಮ್ಮ ಗುರಿಗೆ ತಕ್ಕಂತೆ ಸಿದ್ಧತೆ ಮಾಡಿಕೊಂಡರೆ ಯಾವುದಕ್ಕೂ ಹೆದರಬೇಕಿಲ್ಲ. ಪ್ರಯತ್ನ ಪಡುವವರಿಗೆ ಕಾಲ ಕೂಡ ಜತೆಗಿರುತ್ತದೆ. ಹಣೆಬರಹ ಎಂದು ಹೇಳಿಕೊಂಡು ಸುಮ್ಮನಿರಬಾರದು ಎಂದು ತಿಳಿಸಿದರು.

‘ನೆರವಿನ ಕೈಗಳ’ ಸಂಸ್ಥೆ ಅಧ್ಯಕ್ಷ ಕೆ.ಕಲೀಂ ಮಾತನಾಡಿ, ದಿನನಿತ್ಯ ದಿನಪತ್ರಿಕೆಗಳನ್ನು ಓದಿ ಜ್ಞಾನ ಗಳಿಸಿದ ಕಾರಣ ನನಗೂ ಅನೇಕ ಹುದ್ದೆಗಳಲ್ಲಿ ಕೆಲಸ ನಿರ್ವಹಿಸಲು ಸಾಧ್ಯವಾಯಿತು ಎಂದರು.

ಪ್ರಾಚಾರ್ಯ ಕೆ.ಬಾಬು ರಾಜೇಂದ್ರ ಪ್ರಸಾದ್‌ ಮಾತನಾಡಿ, ಪರೀಕ್ಷೆ ಎಂದರೆ ಬಹಳ ಜನರಿಗೆ ಹೆದರಿಕೆ, ಒತ್ತಡ ಶುರುವಾಗುತ್ತದೆ. ನಿರಂತರ ಓದಿನಿಂದ ಒತ್ತಡದಿಂದ ಹೊರಬರಬಹುದು. ದೊಡ್ಡ ದೊಡ್ಡ ಕನಸುಗಳನ್ನು ಕಾಣುತ್ತ ಅವುಗಳ ಬೆನ್ನತ್ತಿ ಕೆಲಸ ಮಾಡಬೇಕೆಂದು ಮಾಜಿ ರಾಷ್ಟ್ರಪತಿ ಎಪಿಜೆ ಅಬ್ದುಲ್‌ ಕಲಾಂ ಹೇಳಿದ್ದಾರೆ. ಅದರಂತೆ ವಿದ್ಯಾರ್ಥಿಗಳು ಯೋಚಿಸಬೇಕು ಎಂದು ತಿಳಿಸಿದರು.

‘ಪ್ರಜಾವಾಣಿ’ ವಿಜಯನಗರ ಜಿಲ್ಲಾ ಹಿರಿಯ ವರದಿಗಾರ ಶಶಿಕಾಂತ ಎಸ್‌. ಶೆಂಬೆಳ್ಳಿ ಪ್ರಾಸ್ತಾವಿಕ ಮಾತನಾಡಿ, 1948ರ ಅಕ್ಟೋಬರ್‌ 15ರಂದು ಹುಟ್ಟಿಕೊಂಡ ‘ಪ್ರಜಾವಾಣಿ’ಗೆ ಈಗ ಅಮೃತ ಮಹೋತ್ಸವದ ಸಂಭ್ರಮ. ವರ್ಷವಿಡೀ ಭಿನ್ನವಾದ ಜನುಪಯೋಗಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ ಎಂದು ತಿಳಿಸಿದರು.

ಸರ್ಕಾರಿ ಪದವಿಪೂರ್ವ ಕಾಲೇಜಿನ ಪ್ರಾಚಾರ್ಯ ಎನ್‌.ಎನ್‌. ಧರ್ಮಾಯತ್‌, ಜಿಟಿಟಿಸಿ ಕಾಲೇಜಿನ ಪ್ರಾಚಾರ್ಯ ಮಹೇಶ ರೆಡ್ಡಿ, ಐಕ್ಯೂಎಸಿ ಸಂಚಾಲಕ ಸುರೇಶ ಇದ್ದರು. ಕಾಲೇಜಿನ ಹಳೆಯ ವಿದ್ಯಾರ್ಥಿ ಯರ್ರಿಸ್ವಾಮಿ ಬಿ. ನಿರೂಪಿಸಿದರು. ದೈಹಿಕ ಶಿಕ್ಷಣ ನಿರ್ದೇಶಕ ಸೋಮಪ್ಪ ಬಡಿಗೇರ್‌ ಸ್ವಾಗತಿಸಿದರು. ಕನ್ನಡ ವಿಭಾಗದ ಮುಖ್ಯಸ್ಥ ಮೌನೇಶ್‌ ಬಡಿಗೇರ್‌ ವಂದಿಸಿದರು. ರಚನಾ ಪ್ರಾರ್ಥನೆ ಗೀತೆ ಹಾಡಿದರು. ಎರಡೂ ಕಾಲೇಜಿನ ಸಿಬ್ಬಂದಿ, ಹಾಲಿ ಹಾಗೂ ಹಳೆಯ ವಿದ್ಯಾರ್ಥಿಗಳು ಹಾಜರಿದ್ದರು.

‘2 ವರ್ಷಗಳಲ್ಲಿ 8 ಸರ್ಕಾರಿ ಹುದ್ದೆ’

‘ನನ್ನ ತಾಯಿಗೆ ನಾನೊಬ್ಬ ಸರ್ಕಾರಿ ಅಧಿಕಾರಿಯಾಗಿ ಕಾರಿನಲ್ಲಿ ಓಡಾಡುವುದನ್ನು ನೋಡಬೇಕೆಂಬ ಆಸೆ ಇತ್ತು. ಅದಕ್ಕಾಗಿ ನಾನು ಶ್ರಮಪಟ್ಟು ಓದಿದೆ. ಎರಡು ವರ್ಷಗಳಲ್ಲಿ ಎಂಟು ಸರ್ಕಾರಿ ಹುದ್ದೆಗಳಲ್ಲಿ ಕೆಲಸ ಮಾಡಿದೆ. ಆರಂಭದಲ್ಲಿ ಪ್ರೌಢಶಾಲೆ ಶಿಕ್ಷಕ, ಅನಂತರ ಎಫ್‌ಡಿಎ, ಎಸ್‌ಬಿಐ ನೌಕರ, ಕಂದಾಯ ಅಧಿಕಾರಿ, ಉಪ ನೋಂದಣಾಧಿಕಾರಿ, ಪಿಡಿಒ ಆಗಿ ಕೆಲಸ ಮಾಡಿದೆ. ಆದರೆ, ಈ ಹುದ್ದೆಗಳಲ್ಲಿದ್ದವರಿಗೆ ಸರ್ಕಾರಿ ಕಾರು ನೀಡುವುದಿಲ್ಲ. ಹಾಗಾಗಿ ಈ ಎಲ್ಲ ಹುದ್ದೆಗಳಿಗೆ ರಾಜೀನಾಮೆ ಕೊಟ್ಟು ಕೆಎಎಸ್‌ ಪರೀಕ್ಷೆ ಬರೆದು ಪಾಸಾದೆ. ನಾನು ಅಧಿಕಾರಿಯಾಗಿ ಕಾರಿನಲ್ಲಿ ಓಡಾಡುತ್ತಿರುವುದನ್ನು ನೋಡಿ ನಮ್ಮಮ್ಮ ಪಟ್ಟ ಖುಷಿ ಅಷ್ಟಿಷ್ಟಲ್ಲ. ನನಗೂ ಅವರ ಆಸೆ ಈಡೇರಿಸಿದೆ ಎಂಬ ಸಾರ್ಥಕ ಭಾವ ಇದೆ’ ಎಂದು ಹೊಸಪೇಟೆ ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತ ಈರಣ್ಣ ಬಿರಾದಾರ ಅವರು ಹೇಳಿದಾಗ ಕರತಾಡನ ಮುಗಿಲು ಮುಟ್ಟಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT