ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಾಸಕರ ಹೇಳಿಕೆಯಿಂದ ಗೊಂದಲ ಸೃಷ್ಟಿ, ಇನ್ನೆರಡು ವರ್ಷ ಯಡಿಯೂರಪ್ಪ ಸಿಎಂ: ರಾಜೂಗೌಡ

Last Updated 20 ಜುಲೈ 2021, 10:18 IST
ಅಕ್ಷರ ಗಾತ್ರ

ಹೊಸಪೇಟೆ (ವಿಜಯನಗರ): ‘ಬಿಜೆಪಿಯ ಕೆಲ ಶಾಸಕರ ಹೇಳಿಕೆಗಳಿಂದ ನಾಯಕತ್ವದ ವಿಷಯವಾಗಿ ಗೊಂದಲ ಸೃಷ್ಟಿಯಾಗಿದೆ ಹೊರತು ಪಕ್ಷದ ಚೌಕಟ್ಟಿನಲ್ಲಿ ಈ ಬಗ್ಗೆ ಯಾವುದೇ ಚರ್ಚೆಯಾಗಿಲ್ಲ. ಇನ್ನೂ ಎರಡು ವರ್ಷ ಬಿ.ಎಸ್‌. ಯಡಿಯೂರಪ್ಪನವರೇ ಸಿ.ಎಂ ಆಗಿರ್ತಾರೆ’ ಎಂದು ಶಾಸಕ ರಾಜೂಗೌಡ ತಿಳಿಸಿದರು.

‘ಒಂದುವೇಳೆ ಮುಖ್ಯಮಂತ್ರಿ ಬದಲಾವಣೆ ಮಾಡಬೇಕಾದರೆ ಅದರ ಬಗ್ಗೆ ಪಕ್ಷದ ಹೈಕಮಾಂಡ್‌ ತೀರ್ಮಾನ ತೆಗೆದುಕೊಳ್ಳುತ್ತದೆ. ಹೈಕಮಾಂಡ್‌ ರಾಜೀನಾಮೆ ಕೊಡು ಎಂದರೆ ನಾನೇ ಕೊಡುತ್ತೇನೆ ಎಂದು ಸ್ವತಃ ಯಡಿಯೂರಪ್ಪನವರು ಹೇಳಿದ್ದಾರೆ. ನಾಯಕತ್ವ ಬದಲಾವಣೆಯ ವಿಷಯ ಮಾಧ್ಯಮಗಳಲ್ಲಿ ಮಾತ್ರ ಚರ್ಚೆಯಾಗುತ್ತಿದೆ. ಪಕ್ಷದ ವೇದಿಕೆಯಲ್ಲಿ ಚರ್ಚೆಯಾಗಿಲ್ಲ’ ಎಂದು ಮಂಗಳವಾರ ನಗರದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಆನಂದ್‌ ಸಿಂಗ್‌ ಅವರನ್ನು ಭೇಟಿಯಾದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು.

‘ಜುಲೈ 26ಕ್ಕೆ ನಮ್ಮ ಪಕ್ಷ ರಾಜ್ಯದಲ್ಲಿ ಅಧಿಕಾರಕ್ಕೆ ಬಂದು ಎರಡು ವರ್ಷಗಳಾಗುತ್ತವೆ. ಹಿಂದಿನ ದಿನ ಮುಖ್ಯಮಂತ್ರಿ ಶಾಸಕರಿಗೆ ಔತಣಕೂಟ ಕರೆದಿದ್ದಾರೆ. ಅದಕ್ಕೆ ವಿಶೇಷ ಅರ್ಥ ಕಲ್ಪಿಸುವ ಅಗತ್ಯವಿಲ್ಲ. ಇನ್ನೆರಡು ವರ್ಷ ನಮ್ಮ ಸರ್ಕಾರ ಸುಭದ್ರವಾಗಿರುತ್ತದೆ. ಅನ್ಯ ಪಕ್ಷಗಳಿಂದ ನಮ್ಮ ಪಕ್ಷಕ್ಕೆ ಬಂದು ಶಾಸಕರಾದವರು ಅವರ ವೈಯಕ್ತಿಕ ವಿಚಾರಗಳಿಗೆ ಸಂಬಂಧಿಸಿದಂತೆ ಸಭೆ ನಡೆಸಿರಬಹುದು. ಅಲ್ಲಿ ಏನು ಚರ್ಚೆಗಳಾಗಿವೆ ನನಗೆ ಗೊತ್ತಿಲ್ಲ. ನಮ್ಮ ಹೈಕಮಾಂಡ್‌ ಬಹಳ ಬಲಿಷ್ಠವಾಗಿದೆ. ಎಲ್ಲ ನಿರ್ಧಾರ ವರಿಷ್ಠರು ತೆಗೆದುಕೊಳ್ಳುತ್ತಾರೆ’ ಎಂದು ಹೇಳಿದರು.

‘ಯಾರಾದರೂ ಶಾಸಕರು ನವದೆಹಲಿಗೆ ಹೋದರೆ ನಾಯಕತ್ವ ಬದಲಾವಣೆ ಆಗುತ್ತದೆ ಎಂದು ಹೇಳುವುದು ಸರಿಯಲ್ಲ. ನಿತ್ಯ ನೂರು ಜನ ಹೋಗಿ ಬರುತ್ತಾರೆ. ಅವರವರ ವೈಯಕ್ತಿಕ ಕೆಲಸಗಳಿಗೆ ಹೋಗುತ್ತಿರುತ್ತಾರೆ. ಇತ್ತೀಚೆಗೆ ದೆಹಲಿಗೆ ಹೋಗಿ ಬರುವುದು ಒಂದು ಟ್ರೆಂಡ್‌ ಆಗಿದೆ. ಕನಿಷ್ಠ ಪಕ್ಷ ಮಾಧ್ಯಮಗಳಲ್ಲಾದರೂ ಕಾಣಿಸಿಕೊಳ್ಳಬಹುದು ಎಂಬ ಆಸೆಯಿಂದ ಕೆಲವರು ಹೀಗೆ ಮಾಡುತ್ತಿರಬಹುದು. ದೆಹಲಿಗೆ ಹೋಗುವುದರಲ್ಲಿ ಯಾವುದೇ ವಿಶೇಷ ಇಲ್ಲ. ಕ್ಷೇತ್ರದಲ್ಲಿಯೇ ಇದ್ದುಕೊಂಡು ಕೆಲಸ ಮಾಡಿದರೂ ಅಂತಹವರ ಬಗ್ಗೆ ಮಾಧ್ಯಮಗಳಲ್ಲಿ ತೋರಿಸುವುದಿಲ್ಲ’ ಎಂದು ಮಾಧ್ಯಮದವರನ್ನೇ ಕುಟುಕಿದರು.

‘ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್‌ ಕುಮಾರ್‌ ಕಟೀಲ್‌ ಅವರ ಧ್ವನಿಯಲ್ಲಿ ವೈರಲ್‌ ಆಗಿರುವ ಆಡಿಯೊಗೆ ಹೆಚ್ಚಿನ ಮಹತ್ವ ಕೊಡುವ ಅಗತ್ಯ ಇಲ್ಲ. ಸ್ವತಃ ಕಟೀಲ್‌ ಅವರೇ ಆ ಆಡಿಯೊ ನನ್ನದಲ್ಲ ಎಂದು ಹೇಳಿದ್ದಾರೆ. ಅದರ ಬಗ್ಗೆ ತನಿಖೆಯೂ ನಡೆಯುತ್ತಿದೆ. ಈಗ ಸಾಕಷ್ಟು ಜನ ಬೇರೊಬ್ಬರ ವಾಯ್ಸ್ ಡಬ್‌ ಮಾಡುತ್ತಾರೆ’ ಎಂದರು.

‘ಕಾಂಗ್ರೆಸ್‌ ಮುಖಂಡರಾದ ಶಾಮನೂರು ಶಿವಶಂಕರಪ್ಪ, ಎಂ.ಬಿ. ಪಾಟೀಲ ಅವರು, ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿಯಾಗಿ ಮುಂದುವರೆಸಬೇಕೆಂದು ಕೊಟ್ಟಿರುವ ಹೇಳಿಕೆಯನ್ನು ನಾನು ಸ್ವಾಗತಿಸುತ್ತೇನೆ’ ಎಂದು ಪ್ರತಿಕ್ರಿಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT