ಶನಿವಾರ, ಜನವರಿ 28, 2023
14 °C
ಹಂಪಿ ಉತ್ಸವಕ್ಕೆ ಸಿದ್ಧತೆ ಪೂರ್ಣ

ಅನಾರೋಗ್ಯದಿಂದ ವಿಜಯನಗರಕ್ಕೆ ಬರಲಾಗಲಿಲ್ಲ: ಜಿಲ್ಲಾ ಉಸ್ತುವಾರಿ ಸಚಿವೆ ಶಶಿಕಲಾ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹೊಸಪೇಟೆ (ವಿಜಯನಗರ): ‘ಹಂಪಿ ಉತ್ಸವ’ಕ್ಕೆ ಇನ್ನೆರೆಡು ದಿನಗಳಿರುವಾಗ ಜಿಲ್ಲಾ ಉಸ್ತುವಾರಿ ಸಚಿವೆ ಶಶಿಕಲಾ ಅಣ್ಣಾಸಾಹೇಬ್‌ ಜೊಲ್ಲೆ ಅವರು ಬುಧವಾರ ಹಂಪಿಗೆ ಭೇಟಿ ನೀಡಿ ಉತ್ಸವದ ಸಿದ್ಧತೆ ಪರಿಶೀಲಿಸಿದರು.

ತಿಂಗಳಿಗೂ ಹೆಚ್ಚು ಅವಧಿಯಿಂದ ಸಚಿವರು ಜಿಲ್ಲೆಗೆ ಬಂದಿರಲಿಲ್ಲ. ಅದಕ್ಕೆ ತೀವ್ರ ಟೀಕೆ ವ್ಯಕ್ತವಾದ ಬೆನ್ನಲ್ಲೇ ಸಚಿವರು ಬುಧವಾರ ಭೇಟಿ ನೀಡಿ ಹಂಪಿ ಪರಿಸರದಲ್ಲಿ ವಿವಿಧ ಕಾರ್ಯಕ್ರಮಗಳಿಗೆ ನಡೆಯುತ್ತಿರುವ ಸಿದ್ಧತೆಗಳನ್ನು ವೀಕ್ಷಿಸಿದರು. 

ಬಳಿಕ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಅನಾರೋಗ್ಯದ ಸಮಸ್ಯೆಯಿಂದ ಹಂಪಿ ಉತ್ಸವದ ಸಿದ್ಧತೆ ಪರಿಶೀಲನೆಗೆ ಬಂದಿರಲಿಲ್ಲ. ವೈದ್ಯರು ಎಲ್ಲಿಗೂ ಓಡಾಡಬಾರದು. ಮಾತನಾಡಬಾರದು ಎಂದು ತಿಳಿಸಿದ್ದರು. ಹೀಗಾಗಿ ಬರಲು ಸಾಧ್ಯವಾಗಿರಲಿಲ್ಲ. ಆದರೆ, ಕಾಲಕಾಲಕ್ಕೆ ಜಿಲ್ಲಾಧಿಕಾರಿಗಳಿಂದ ಉತ್ಸವದ ಸಿದ್ಧತೆಗೆ ಸಂಬಂಧಿಸಿ ಮಾಹಿತಿ ಪಡೆದು, ಸಲಹೆ ಸೂಚನೆಗಳನ್ನು ಕೊಡುತ್ತಿದ್ದೆ. ಜವಾಬ್ದಾರಿಯಿಂದ ಹಾಗೂ ವ್ಯವಸ್ಥಿತವಾಗಿ ನನ್ನ ಕೆಲಸ ನಿರ್ವಹಿಸಿದ್ದೇನೆ. ಬೇರೆ ಬೇರೆ ಕಾರ್ಯಕ್ರಮಗಳಿಂದಾಗಿ ಹಂಪಿ ಉತ್ಸವ ದಿನಾಂಕ ನಿಗದಿಪಡಿಸುವುದು ಸ್ವಲ್ಪ ತಡವಾಯಿತು ಎಂದು ಸಚಿವರು ತಿಳಿಸಿದರು.

ಉತ್ಸವಕ್ಕೆ ಸಂಬಂಧಿಸಿದಂತೆ ಈಗಾಗಲೇ ಎಲ್ಲಾ ಸಿದ್ಧತೆಗಳು ಪೂರ್ಣಗೊಂಡಿವೆ. ಜ.27ರಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಂಪಿ ಉತ್ಸವ ಉದ್ಘಾಟಿಸುವರು. ಗಾಯತ್ರಿ ಪೀಠದ ಮುಖ್ಯ ವೇದಿಕೆಯನ್ನು ಹೇಮಕೂಟ ಪರ್ವತದ ಮಾದರಿಯಲ್ಲಿ ಸಿದ್ಧಗೊಳಿಸಲಾಗಿದೆ. ಸುಮಾರು 50 ಸಾವಿರಕ್ಕೂ ಹೆಚ್ಚು ಜನರ ವೀಕ್ಷಣೆಗೆ ಅನುಕೂಲವಾಗುವಂತೆ ಆಸನ ವ್ಯವಸ್ಥೆ ಮಾಡಲಾಗಿದೆ. ಉತ್ಸವದಲ್ಲಿ 6 ಸಾವಿರ ಕಲಾವಿದರು ಕಾರ್ಯಕ್ರಮ ನಡೆಸಿಕೊಡುವರು. ಇದರಲ್ಲಿ ಸ್ಯಾಂಡಲ್‌ವುಡ್‌, ಬಾಲಿವುಡ್‌ ಕಲಾವಿದರು ಸೇರಿದ್ದಾರೆ. ಸ್ಥಳೀಯ ಕಲಾವಿದರಿಗೆ ಹೆಚ್ಚಿನ ಆದ್ಯತೆ ಕೊಡಲಾಗಿದೆ ಎಂದರು.

ಗಾಯತ್ರಿ ಪೀಠದ ಜೊತೆಗೆ ಇನ್ನೂ ಮೂರು ವೇದಿಕೆಗಳಲ್ಲಿ ಕಾರ್ಯಕ್ರಮಗಳು ನಡೆಯಲಿವೆ. ಉತ್ಸವದ ಅಂಗವಾಗಿ ಆಹಾರ ಮೇಳ, ಚಿತ್ರಕಲಾ ಶಿಬಿರ, ಫಲ ಪುಷ್ಪ ಪ್ರದರ್ಶನ, ಮರಳು ಶಿಲ್ಪಕಲಾ ಪ್ರದರ್ಶನ, ಸಾಹಸ ಕ್ರೀಡೆ ಹಾಗೂ ಧ್ವನಿ ಮತ್ತು ಬೆಳಕು ಸೇರಿದಂತೆ ಇತರೆ ಕಾರ್ಯಕ್ರಮಗಳು ಜರುಗಲಿವೆ ಎಂದು ವಿವರಿಸಿದರು.

ಜಿಲ್ಲಾಧಿಕಾರಿ ಟಿ.ವೆಂಕಟೇಶ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶ್ರೀಹರಿ ಬಾಬು ಬಿ.ಎಲ್‌., ಉಪವಿಭಾಗಾಧಿಕಾರಿ ಸಿದ್ದರಾಮೇಶ್ವರ, ತಹಶೀಲ್ದಾರ್‌ ವಿಶ್ವಜೀತ್‌ ಮೆಹ್ತಾ ಇದ್ದರು.

ಕಲುಷಿತ ನೀರಿಗೆ ಮಹಿಳೆ ಸಾವು: ಕಾರಣರಾದವರ ವಿರುದ್ಧ ಕ್ರಮ

ಹೊಸಪೇಟೆಯ ರಾಣಿಪೇಟೆಯಲ್ಲಿ ಕಲುಷಿತ ನೀರು ಸೇವಿಸಿ ಮಹಿಳೆಯೊಬ್ಬರು ಮೃತಪಟ್ಟು, ಹಲವರು ಅಸ್ವಸ್ಥರಾದ ಘಟನೆಗೆ ಸಂಬಂಧಿಸಿದಂತೆ ಅದಕ್ಕೆ‌ ಕಾರಣರಾದವರ ವಿರುದ್ಧ ಕ್ರಮ ಜರುಗಿಸಲಾಗುವುದು ಎಂದು ಸಚಿವೆ ಶಶಿಕಲಾ ಅಣ್ಣಾಸಾಹೇಬ್ ಜೊಲ್ಲೆ ತಿಳಿಸಿದರು.

ಮೃತ ಮಹಿಳೆಯ ಮನೆಗೆ ನಾಳೆ ಭೇಟಿ ನೀಡುವೆ. ಕಲುಷಿತ ನೀರಿಗೆ ಸಂಬಂಧಿಸಿದಂತೆ ಅಧಿಕಾರಿಗಳ ಸಭೆ ನಡೆಸಿ ಅದನ್ನು ಸರಿಪಡಿಸಲು ಕ್ರಮ ಜರುಗಿಸಲಾಗುವುದು ಎಂದರು.

‘ಭಿನ್ನಾಭಿಪ್ರಾಯವಿಲ್ಲ’

‘ನನ್ನ ಹಾಗೂ ಪ್ರವಾಸೋದ್ಯಮ‌ ಸಚಿವ ಆನಂದ್ ಸಿಂಗ್ ಅವರು ನಡುವೆ ಯಾವುದೇ ಭಿನ್ನಾಭಿಪ್ರಾಯವಿಲ್ಲ. ಪ್ರತಿಯೊಂದು ವಿಚಾರದಲ್ಲಿ ಚರ್ಚಿಸಿ ಮುಂದುವರೆಯುತ್ತಿದ್ದೇವೆ. ಇಬ್ಬರು ಸೇರಿಕೊಂಡು ಯಶಸ್ವಿಯಾಗಿ ಉತ್ಸವ ಸಂಘಟಿಸಲು ಶ್ರಮಿಸುತ್ತಿದ್ದೇವೆ’ ಎಂದು ಪ್ರಶ್ನೆಗೆ ಪ್ರತಿಕ್ರಿಯಿಸಿದರು.

‘ಬಿಡಿಸಿಸಿ ನೇಮಕಾತಿಯಲ್ಲಿ ಅಕ್ರಮ ನಡೆದಿಲ್ಲ’

‘ಬಳ್ಳಾರಿ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕಿನಲ್ಲಿ (ಬಿಡಿಸಿಸಿ) 58 ಹುದ್ದೆಗಳ ನೇಮಕಾತಿಯಲ್ಲಿ ಅಕ್ರಮ ನಡೆದಿಲ್ಲ. ನಾನೇ ಎಲ್ಲವನ್ನೂ ಖುದ್ದಾಗಿ ಪರಿಶೀಲಿಸಿರುವೆ. ನಿಯಮದ ಪ್ರಕಾರ ನೇಮಕಾತಿ ಪ್ರಕ್ರಿಯೆ ನಡೆದಿದೆ. ಯಾರಿಗೂ ಅನ್ಯಾಯವಾಗಿಲ್ಲ. ನ್ಯಾಯಯುತವಾಗಿ ನೇಮಕಾತಿ ನಡೆದಿದೆ. 58 ಹುದ್ದೆಗಳಿಗೆ 6 ಸಾವಿರ ಅರ್ಜಿಗಳು ಬಂದಿದ್ದವು. ಕೆಲವರು ಈ ರೀತಿಯ ಆರೋಪ ಮಾಡಿರಬಹುದು. ಒಂದುವೇಳೆ ಯಾರಾದರೂ ನಮ್ಮ ಸಿಬ್ಬಂದಿ ಹಣ ಕೇಳಿದರೆ ಅವರ ವಿರುದ್ಧ ಕ್ರಮ ಜರುಗಿಸಲಾಗುವುದು’ ಎಂದು ಪ್ರವಾಸೋದ್ಯಮ ಸಚಿವ ಆನಂದ್‌ ಸಿಂಗ್‌ ಪ್ರಶ್ನೆಗೆ ಪ್ರತಿಕ್ರಿಯಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು