ಹೊಸಪೇಟೆ: ಹಂಪಿಯಲ್ಲಿ ಧ್ವನಿ ಬೆಳಕಿನ ವೈಭವಕ್ಕೆ ಕ್ಷಣಗಣನೆ

ಹೊಸಪೇಟೆ (ವಿಜಯನಗರ): ತನ್ನ ವಿಶಿಷ್ಟ ವಾಸ್ತುಶಿಲ್ಪದ ಮೂಲಕ ಜಗತ್ತಿನ ಗಮನ ಸೆಳೆದಿರುವ ವಿಶ್ವಪ್ರಸಿದ್ಧ ಹಂಪಿ ಈಗ ‘ಹಂಪಿ ಉತ್ಸವ’ದ ಮೂಲಕ ಎಲ್ಲರ ಚಿತ್ತ ತನ್ನತ್ತ ಸೆಳೆದಿದೆ.
ಜ. 27ರಿಂದ 29ರ ವರೆಗೆ ಮೂರು ದಿನ ಉತ್ಸವ ನಡೆಯಲಿದ್ದು, ಧ್ವನಿ ಮತ್ತು ಬೆಳಕಿನ ವೈಭವದಲ್ಲಿ ಮಿಂದೇಳಲು ಹಂಪಿ ಸಜ್ಜುಗೊಂಡಿದೆ. ವಿಜಯನಗರ ಸಾಮ್ರಾಜ್ಯದ ವೈಭವ, ದೇಶದ ಕಲೆ, ಸಂಸ್ಕೃತಿ, ಅದರ ಹಿರಿಮೆ, ವಿವಿಧತೆ ಉತ್ಸವದಲ್ಲಿ ಅನಾವರಣಗೊಳ್ಳಲಿದೆ. ಸ್ಥಳೀಯರು ಸೇರಿದಂತೆ ಸ್ಯಾಂಡಲ್‌ವುಡ್, ಬಾಲಿವುಡ್ ಕಲಾವಿದರು ದೇಶದ ಶ್ರೀಮಂತ ಸಂಸ್ಕೃತಿಯನ್ನು ಪರಿಚಯಿಸುವುದರ ಜೊತೆಗೆ ಜನರನ್ನು ಮನರಂಜಿಸುವ ಕೆಲಸ ಮಾಡಲಿದ್ದಾರೆ. ಇಷ್ಟೇ ಅಲ್ಲ, ಅಕ್ಷರ ಜ್ಞಾನವನ್ನು ಶ್ರೀಮಂತಗೊಳಿಸಿದ ಲೇಖಕರು ತಮ್ಮ ಮಾತುಗಳ ಮೂಲಕ ದೇಶದ ಇತಿಹಾಸ, ವರ್ತಮಾನ ಹಾಗೂ ಭವಿತವ್ಯದ ಮೇಲೆ ಬೆಳಕು ಚೆಲ್ಲುವರು. ಇನ್ನು, ಕವಿಗಳಿಂದ ಕವನ ಧಾರೆಯೂ ಹರಿಯಲಿದೆ. ಶಿಲ್ಪ ಹಾಗೂ ಚಿತ್ರ ಕಲಾವಿದರ ಕೈಗಳಿಂದ ಅತ್ಯುತ್ತಮ ಕಲಾಕೃತಿಗಳು ಮೂಡಿಬರಲಿವೆ. ಮರಳಿನಲ್ಲೂ ಕಲೆ ಅನಾವರಣಗೊಳ್ಳಲಿದೆ.
ಇನ್ನು, ಜಗಜಟ್ಟಿಗಳು ಕುಸ್ತಿ ಅಖಾಡದಲ್ಲಿ ತಮ್ಮ ಪೈಲ್ವಾನ್‌ಗಿರಿ ಪ್ರದರ್ಶಿಸಿದರೆ, ಬಂಡೆಗಲ್ಲುಗಳನ್ನು ಹತ್ತುವುದರ ಮೂಲಕ ಯುವಕ/ಯುವತಿಯರು ಸಾಹಸ ಪ್ರದರ್ಶಿಸುವರು. ಇಷ್ಟೇ ಅಲ್ಲ, ಐತಿಹಾಸಿಕ ಕಮಲಾಪುರ ಕೆರೆ ಜಲ ಕ್ರೀಡೆಗೆ ಸಿದ್ಧಗೊಂಡಿದ್ದು, ತೆಪ್ಪ ಓಟದ ಸ್ಪರ್ಧೆ ನೋಡಲು ಜನ ಕಾತುರರಾಗಿದ್ದಾರೆ. ಕೃಷಿ, ಕರಕುಶಲ ಹಾಗೂ ಫಲಪುಷ್ಪ ಪ್ರದರ್ಶನಕ್ಕೆ ಸಿದ್ಧತೆ ಪೂರ್ಣಗೊಂಡಿದ್ದು, ಅದು ಬೇರೊಂದು ಲೋಕಕ್ಕೆ ಕೊಂಡೊಯ್ಯಲಿದೆ.
3ಡಿ ವೇದಿಕೆ: ಹಂಪಿ ಎಂದರೆ ಹೆಚ್ಚಾಗಿ ಕಲ್ಲಿನ ರಥ, ವಿರೂಪಾಕ್ಷೇಶ್ವರ ದೇವಸ್ಥಾನದ ಗೋಪುರಕ್ಕೆ ಹೆಚ್ಚಿನ ಆದ್ಯತೆ ನೀಡುತ್ತ ಬರಲಾಗಿದೆ. ಆದರೆ, ಈ ಸಲದ ಉತ್ಸವದಲ್ಲಿ ಮುಖ್ಯ ವೇದಿಕೆಯಲ್ಲಿ ಹೇಮಕೂಟ ಪರ್ವತಕ್ಕೆ ಆದ್ಯತೆ ಕೊಟ್ಟಿರುವುದು ವಿಶೇಷ. ಫೈಬರ್‌ನಿಂದ ನಿರ್ಮಿಸಿದ 3ಡಿ ವೇದಿಕೆ, ಥೇಟ್ ಹೇಮಕೂಟವನ್ನು ನಾಚಿಸುವಂತಿದೆ. ಕಳೆದೊಂದು ವಾರದಿಂದ ಮುಖ್ಯ ವೇದಿಕೆ ನಿರ್ಮಾಣ ಕಾರ್ಯ ನಡೆಯುತ್ತಿದ್ದು, ಈಗ ಉತ್ಸವಕ್ಕೆ ಸಜ್ಜುಗೊಂಡಿದೆ. ಇದೇ ವೇದಿಕೆಯಲ್ಲಿ ಜ. 27ರಂದು ಸಂಜೆ 6ಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಉತ್ಸವಕ್ಕೆ ವಿದ್ಯುಕ್ತ ಚಾಲನೆ ನೀಡುವರು. ಅದಾದ ಬಳಿಕ ಇನ್ನುಳಿದ ಮೂರು ವೇದಿಕೆಗಳಲ್ಲಿ ಸಾಂಸ್ಕೃತಿಕ ಕಲರವ ಆರಂಭವಾಗಲಿದೆ.
ಮೈಸೂರು ದಸರಾ ಮಾದರಿ ದೀಪಾಲಂಕಾರ: ಹೊಸಪೇಟೆ ನಗರ ಹಾಗೂ ಹಂಪಿಗೆ ಹೋಗುವ ಮಾರ್ಗದಲ್ಲಿ ಈ ಸಲ ಮೈಸೂರು ದಸರಾ ಮಾದರಿಯಲ್ಲಿ ವಿದ್ಯುತ್ ದೀಪಗಳ ಅಲಂಕಾರ ಮಾಡಿರುವುದು ವಿಶೇಷ. ನಗರದ ಕಾಲೇಜು ರಸ್ತೆ, ಸ್ಟೇಶನ್ ರಸ್ತೆ, ಟಿ.ಬಿ. ಡ್ಯಾಂ ರಸ್ತೆ, ವರ್ತುಲ ರಸ್ತೆ, ಪ್ರಮುಖ ವೃತ್ತಗಳನ್ನು ದೀಪಗಳಿಂದ ಅಲಂಕರಿಸಲಾಗಿದ್ದು, ಇಡೀ ನಗರ ಮದುವೆ ಮನೆಯಂತೆ ಕಂಗೊಳಿಸುತ್ತಿದೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.