ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲಾಕ್‌ಡೌನ್: ಭಾನುವಾರ ರಾತ್ರಿಯೇ ಎಪಿಎಂಸಿಗೆ ಲಗ್ಗೆ; ಮಾರುಕಟ್ಟೆಯಲ್ಲಿ ಜನಜಂಗುಳಿ

ಅಂತರ ಮರೀಚಿಕೆ
Last Updated 31 ಮೇ 2021, 8:52 IST
ಅಕ್ಷರ ಗಾತ್ರ

ಹೊಸಪೇಟೆ (ವಿಜಯನಗರ): ಐದು ದಿನಗಳ ಸಂಪೂರ್ಣ ಲಾಕ್‌ಡೌನ್‌ ನಂತರ ಸೋಮವಾರ ಅಗತ್ಯ ವಸ್ತುಗಳ ಖರೀದಿಗೆ ಕಾಲಾವಕಾಶ ಕಲ್ಪಿಸಿದ್ದರಿಂದ ನಗರದಲ್ಲೆಡೆ ಭಾರಿ ಜನಜಂಗುಳಿ ಕಂಡು ಬಂತು.

ನಗರದ ದೀಪಾಯನ ಶಾಲೆ, ತಾಲ್ಲೂಕು ಕ್ರೀಡಾಂಗಣ, ಸೋಗಿ ಮಾರುಕಟ್ಟೆ, ಎಪಿಎಂಸಿ, ಟಿ.ಬಿ. ಡ್ಯಾಂ ರಸ್ತೆಯಲ್ಲಿ ತರಕಾರಿ, ಹಣ್ಣು ಖರೀದಿಗೆ ಜನ ಮುಗಿಬಿದ್ದರು. ಕಾಲೇಜು ರಸ್ತೆ, ಮೇನ್‌ ಬಜಾರ್‌, ರಾಣಿಪೇಟೆಯಲ್ಲಿ ದಿನಸಿ ಖರೀದಿಗೆ ಮಳಿಗೆಗಳ ಎದುರು ಉದ್ದನೆಯ ಸಾಲು ಕಂಡು ಬಂತು. ಬಹುತೇಕರು ಮಾಸ್ಕ್‌ ಧರಿಸಿಕೊಂಡಿದ್ದರು. ಆದರೆ, ಅಂತರ ಕಾಯ್ದುಕೊಳ್ಳದೆ ವ್ಯವಹರಿಸಿದರು.

ಜಿಲ್ಲಾಡಳಿತವು ಜೂನ್‌ 7ರ ವರೆಗೆ ಲಾಕ್‌ಡೌನ್‌ ವಿಸ್ತರಿಸಿದೆ. ಆದರೆ, ಅಗತ್ಯ ವಸ್ತುಗಳ ಖರೀದಿಗೆ ಸೋಮವಾರ, ಮಂಗಳವಾರ (ಜೂ.1) ಬೆಳಿಗ್ಗೆ ಆರರಿಂದ ಮಧ್ಯಾಹ್ನ 12ರ ವರೆಗೆ ಸಡಿಲಿಕೆ ನೀಡಿದೆ. ಈ ವಿಷಯ ತಿಳಿದು ಸಗಟು ವ್ಯಾಪಾರಿಗಳು ಭಾನುವಾರ ರಾತ್ರಿಯೇ ಎಪಿಎಂಸಿಯಲ್ಲಿ ತರಕಾರಿ, ಹಣ್ಣು ಮಾರಾಟ ಮಾಡಿದರು.

ಕತ್ತಲಲ್ಲಿಯೇ ವಿವಿಧ ಕಡೆಗಳಿಂದ ಬಂದಿದ್ದ ವ್ಯಾಪಾರಿಗಳು ತರಕಾರಿ, ಖರೀದಿಸಿ ವಾಹನಗಳಲ್ಲಿ ಕೊಂಡೊಯ್ದರು. ಅಪಾರ್ಟ್‌ಮೆಂಟ್‌, ಬಹುಮಹಡಿ ಕಟ್ಟಡಗಳಲ್ಲಿ ವಾಸಿಸುವವರು ಸಗಟಿನಲ್ಲಿ ತರಕಾರಿ ಖರೀದಿಸಿ, ನಂತರ ಹಂಚಿಕೊಂಡರು. ಸಾರ್ವಜನಿಕರು ಸಹ ಹೆಚ್ಚಿನ ಸಂಖ್ಯೆಯಲ್ಲಿ ಬಂದದ್ದರಿಂದ ಜನಜಾತ್ರೆ ಇತ್ತು. ಆಟೊ, ಎತ್ತಿನ ಬಂಡಿ, ಲಾರಿಗಳ ಓಡಾಟ ಸಾಮಾನ್ಯವಾಗಿತ್ತು.

ಜಿಲ್ಲಾಡಳಿತವು ಹಣ್ಣು, ತರಕಾರಿಗಳ ಬೆಲೆ ನಿಗದಿಪಡಿಸಿ ಆದೇಶ ಹೊರಡಿಸಿದೆ. ಆದರೆ, ವ್ಯಾಪಾರಿಗಳನ್ನು ಅದಕ್ಕೆ ಕವಡೆ ಕಾಸಿನ ಕಿಮ್ಮತ್ತು ಕೊಡುತ್ತಿಲ್ಲ. ಹಣ್ಣು, ತರಕಾರಿ ಹೆಚ್ಚಿನ ಬೆಲೆಗೆ ಮಾರಾಟ ಮಾಡಿದರು. ಕೆಲವು ಕಡೆ ಸಾರ್ವಜನಿಕರು, ವ್ಯಾಪಾರಿಗಳನ್ನು ಈ ಕುರಿತು ಪ್ರಶ್ನಿಸಿದರು. ‘ನಮಗೆ ಹೆಚ್ಚಿನ ಬೆಲೆಗೆ ಮಾರಾಟ ಮಾಡಿದ್ದಾರೆ. ನಿಮಗೆ ಕಮ್ಮಿ ಬೆಲೆಗೆ ಕೊಟ್ಟರೆ ನಮಗೆ ನಷ್ಟವಾಗುತ್ತದೆ’ ಎಂದು ಸಬೂಬು ನೀಡಿದರು. ಮೊದಲೇ ಜನದಟ್ಟಣೆ ಇದ್ದದ್ದರಿಂದ ಹೆಚ್ಚಿನವರು ಚೌಕಾಸಿ ಮಾಡದೆ ವ್ಯಾಪಾರಿಗಳು ಹೇಳಿದ ಬೆಲೆಗೆ ತರಕಾರಿ, ಹಣ್ಣು ಖರೀದಿಸಿ ಕೊಂಡೊಯ್ದರು.

ಜನ ಗುಂಪು ಸೇರದಂತೆ ತಡೆಯಲು ಬೆಳಿಗ್ಗೆಯಿಂದಲೇ ಪೊಲೀಸರು ಎಲ್ಲೆಡೆ ಗಸ್ತು ತಿರುಗಿದರು. ಪೊಲೀಸರು ಬರುತ್ತಿದ್ದಂತೆ ಅಂತರ ಕಾಯ್ದುಕೊಂಡು ವ್ಯವಹರಿಸುತ್ತಿದ್ದ ಜನ, ಅವರು ಅಲ್ಲಿಂದ ಹೋಗುತ್ತಿದ್ದಂತೆ ಪುನಃ ಗುಂಪಾಗಿ ನಿಂತು ಖರೀದಿಯಲ್ಲಿ ತೊಡಗುತ್ತಿದ್ದರು.

ಮಧ್ಯಾಹ್ನ ಮತ್ತೆ ಸ್ತಬ್ಧ:ಐದು ದಿನಗಳ ನಂತರ ಸೋಮವಾರ ಬೆಳಿಗ್ಗೆಯಿಂದ ಮಧ್ಯಾಹ್ನದ ವರೆಗೆ ನಗರದ ಎಲ್ಲ ರಸ್ತೆಗಳಲ್ಲಿ ಜನರ ಓಡಾಟ ಹೆಚ್ಚಿತ್ತು. ಆದರೆ, ಮಧ್ಯಾಹ್ನ 12 ಗಂಟೆಯ ನಂತರ ಈ ಹಿಂದಿನಂತೆ ನಗರ ಸಂಪೂರ್ಣ ಸ್ತಬ್ಧಗೊಂಡಿತು.

ಕೆಲವರು ಬೆಳಿಗ್ಗೆಯೇ ಅಗತ್ಯ ವಸ್ತು ಖರೀದಿಸಿ ಬೇಗ ಮನೆ ತಲುಪಿದರು. ತಡವಾಗಿ ಬಂದವರು 11.45ರ ವರೆಗೆ ಖರೀದಿಸಿ, ತರಾತುರಿಯಲ್ಲಿ ಮನೆಗಳತ್ತ ನಿರ್ಗಮಿಸಿದರು. 12 ಗಂಟೆ ಸಮೀಪಿಸುತ್ತಿದ್ದಂತೆ ಪೊಲೀಸರು ಎಲ್ಲೆಡೆ ಓಡಾಡಿ ಮಳಿಗೆಗಳನ್ನು ಮುಚ್ಚಿಸಿದರು. ಹೊರಗೆ ಓಡಾಡುತ್ತಿದ್ದ ಜನರಿಗೆ ಎಚ್ಚರಿಕೆ ಕೊಟ್ಟು ಕಳುಹಿಸಿದರು. ಇದರಿಂದಾಗಿ ರಸ್ತೆಗಳೆಲ್ಲ ನಿರ್ಜನವಾಗಿದ್ದವು. ಎಲ್ಲೆಡೆ ಮೌನ ಆವರಿಸಿಕೊಂಡಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT