ಬುಧವಾರ, ಜನವರಿ 19, 2022
25 °C
2019–20ನೇ ಸಾಲಿನಲ್ಲಿ ಕನ್ನಡ ವಿಶ್ವವಿದ್ಯಾಲಯದ ವಿವಿಧ ಖಾತೆಗಳಲ್ಲಿತ್ತು ₹70.62 ಕೋಟಿ

ಕೋಟಿ ಕೋಟಿ ಹಣವಿದ್ದರೂಅನುದಾನಕ್ಕೆ ಕುಂಟು ನೆಪ

ಶಶಿಕಾಂತ ಎಸ್. ಶೆಂಬೆಳ್ಳಿ Updated:

ಅಕ್ಷರ ಗಾತ್ರ : | |

Prajavani

ಹೊಸಪೇಟೆ (ವಿಜಯನಗರ): ಇಲ್ಲಿನ ಹಂಪಿ ಕನ್ನಡ ವಿಶ್ವವಿದ್ಯಾಲಯದ ವಿವಿಧ ಖಾತೆಗಳಲ್ಲಿ ಕೋಟ್ಯಂತರ ರೂಪಾಯಿ ಇದ್ದರೂ ಅನುದಾನವೇ ಬಿಡುಗಡೆಯಾಗುತ್ತಿಲ್ಲ ಎಂದು ಅಲ್ಲಿನ ಆಡಳಿತ ಕುಂಟು ನೆಪ ಹಾಗೂ ಸುಳ್ಳು ಹೇಳುತ್ತಿದೆ ಎಂಬ ಆರೋಪ ಕೇಳಿ ಬಂದಿದೆ.

‘ಈ ಹಿಂದಿನ ಕುಲಪತಿ ಮಲ್ಲಿಕಾ ಘಂಟಿ ಅವರು ನಿರ್ಗಮಿಸುವ ವೇಳೆ ವಿಶ್ವವಿದ್ಯಾಲಯದಲ್ಲಿ ಹಣವೇ ಇರಲಿಲ್ಲ. ಸರ್ಕಾರದಿಂದ ಸಮರ್ಪಕವಾಗಿ ಅನುದಾನ ಬಿಡುಗಡೆಯಾಗುತ್ತಿಲ್ಲ. ಅಲ್ಪಸ್ವಲ್ಪ ಹಣ ಬಂದರೂ ಅದು ಸಿಬ್ಬಂದಿಯ ವೇತನಕ್ಕೆ ಖರ್ಚಾಗುತ್ತಿದೆ. ವಿದ್ಯುತ್‌ ಬಿಲ್‌ ಕೂಡ ಭರಿಸಲು ಸಾಧ್ಯವಾಗುತ್ತಿಲ್ಲ. ತಾತ್ಕಾಲಿಕ ನೌಕರರಿಗೂ ವೇತನ ಪಾವತಿಸಲು ಸಮಸ್ಯೆ ಆಗುತ್ತಿದೆ. ವಿಶ್ವವಿದ್ಯಾಲಯ ಅನುದಾನದ ಕೊರತೆಯಿಂದ ಬಳಲುತ್ತಿದೆ’ ಎಂದು ಹಾಲಿ ಕುಲಪತಿ ಪ್ರೊ.ಸ.ಚಿ. ರಮೇಶ ಹಲವು ಸಂದರ್ಭಗಳಲ್ಲಿ ಹೇಳಿದ್ದಾರೆ. ಇತ್ತೀಚೆಗೆ ನಡೆಸಿದ ಸುದ್ದಿಗೋಷ್ಠಿಯಲ್ಲಿ ಈ ವಿಷಯ ಪುನರಾವರ್ತನೆ ಮಾಡಿದ್ದರು.

ಆದರೆ, 2019–20ನೇ ಸಾಲಿನ ಆರ್ಥಿಕ ವರ್ಷದ ಲೆಕ್ಕಪತ್ರ ನೋಡಿದರೆ ಅವರು ಎಲ್ಲರ ದಿಕ್ಕು ತಪ್ಪಿಸುತ್ತಿದ್ದಾರೆ ಎನ್ನುವುದು ಗೊತ್ತಾಗುತ್ತದೆ.

2019ರ ಏಪ್ರಿಲ್‌ 1ರಿಂದ 2020ನೇ ಸಾಲಿನ ಮಾರ್ಚ್‌ 31ರ ಅವಧಿಯಲ್ಲಿ ವಿಶ್ವವಿದ್ಯಾಲಯದ ವಿವಿಧ ಖಾತೆಗಳಲ್ಲಿ ಜಮೆಯಾದ ಹಣ ಹಾಗೂ ಖರ್ಚಿನ ಮಾಹಿತಿ ‘ಪ್ರಜಾವಾಣಿ’ಗೆ ಲಭ್ಯವಾಗಿದೆ.

2019–20ನೇ ಸಾಲಿನ ಆರ್ಥಿಕ ವರ್ಷದಲ್ಲಿ ವಿಶ್ವವಿದ್ಯಾಲಯದ ವಿವಿಧ ಖಾತೆಗಳಲ್ಲಿ ₹20.82 ಕೋಟಿ ಹಣ ಉಳಿದಿತ್ತು. 2020ರ ಮಾರ್ಚ್‌ನಲ್ಲಿ ವಿವಿಧ ಖಾತೆಗಳಿಗೆ ₹50.80 ಕೋಟಿ ಹಣ ಸ್ವೀಕೃತವಾಗಿದೆ. ಎರಡೂ ಸೇರಿದರೆ ಒಟ್ಟು ₹70.62 ಕೋಟಿ ಆಗುತ್ತದೆ. ಇದರಲ್ಲಿ ₹49.74 ಕೋಟಿ ಪಾವತಿಯಾಗಿದ್ದು, ₹21.88 ಕೋಟಿ ಉಳಿದಿತ್ತು. ಆದರೆ, ₹49.74 ಕೋಟಿಯಲ್ಲಿ ₹30 ಕೋಟಿ ವೇತನ, ಪಿಂಚಣಿ ಸೇರಿದಂತೆ ಇತರೆ ಯೋಜನೆಗಳಿಗೆ ಖರ್ಚು ಮಾಡಲಾಗಿದೆ. ಅದರಲ್ಲಿ ಮಿಕ್ಕುಳಿದ ಹಣ ಯಾವುದಕ್ಕೆಲ್ಲ ವೆಚ್ಚವಾಗಿದೆ ಎನ್ನುವುದು ಅನುಮಾನಕ್ಕೆ ಎಡೆ ಮಾಡಿಕೊಟ್ಟಿದೆ.

‘ಅನುದಾನದ ನೆಪವೊಡ್ಡಿ ವಿಶ್ವವಿದ್ಯಾಲಯದಲ್ಲಿ ಕೆಲಸ ನಿರ್ವಹಿಸುತ್ತಿರುವ ತಾತ್ಕಾಲಿಕ, ಕಾಯಂ ನೌಕರರಿಗೆ ಸಕಾಲಕ್ಕೆ ವೇತನ ಪಾವತಿಸುತ್ತಿಲ್ಲ. ಪಿಂಚಣಿ ಬಿಡುಗಡೆಗೂ ಹಿಂದೇಟು ಹಾಕುತ್ತಿದ್ದಾರೆ. ಕೋಟ್ಯಂತರ ರೂಪಾಯಿ ವಿಶ್ವವಿದ್ಯಾಲಯದ ವಿವಿಧ ಖಾತೆಗಳಲ್ಲಿದ್ದರೂ ಸುಳ್ಳು ಹೇಳುತ್ತಿರುವುದು ಶೋಭೆ ತರುವಂಥದ್ದಲ್ಲ. ಈ ಬಗ್ಗೆ ಸಮಗ್ರ ತನಿಖೆ ನಡೆಸಬೇಕು’ ಎಂದು ಸಾಮಾಜಿಕ ಕಾರ್ಯಕರ್ತ ಸೋಮಶೇಖರ್‌ ಬಣ್ಣದಮನೆ ಒತ್ತಾಯಿಸಿದ್ದಾರೆ.

ಈ ಹಿನ್ನೆಲೆಯಲ್ಲಿಯೇ ಇತ್ತೀಚೆಗೆ ಅಧ್ಯಾಪಕರು ಹಾಗೂ ಬೋಧಕೇತರ ನೌಕರರ ಸಂಘವು ಧರಣಿ ನಡೆಸಿ, ವಿಶ್ವವಿದ್ಯಾಲಯದ ಆರ್ಥಿಕ ಸ್ಥಿತಿಗತಿ ಕುರಿತು ಶ್ವೇತ ಪತ್ರ ಹೊರಡಿಸುವಂತೆ ಆಗ್ರಹಿಸಿತ್ತು.

/ಬಾಕ್ಸ್‌/

₹2.33 ಕೋಟಿ ವಸೂಲಿಯ ಅಸಲಿಯತ್ತು ಹೀಗಿದೆ:

‘ಮಲ್ಲಿಕಾ ಘಂಟಿ ಅವಧಿಯ (2018–19ನೇ ಸಾಲಿನಲ್ಲಿ) ₹2.33 ಕೋಟಿ ಬಾಕಿ ವಸೂಲಾತಿಗೆ ಲೆಕ್ಕಪತ್ರ ಇಲಾಖೆ ಸೂಚಿಸಿದೆ’ ಎಂದು ಕುಲಪತಿ ಪ್ರೊ. ಸ.ಚಿ. ರಮೇಶ ಇತ್ತೀಚೆಗೆ ತಿಳಿಸಿದ್ದರು. ಆದರೆ, ಲೆಕ್ಕಪತ್ರ ಇಲಾಖೆಯು ವಸೂಲಾತಿಗೆ ಸೂಚಿಸಿರುವ ಹೆಚ್ಚಿನ ಮೊತ್ತದ ಹಣ ವಿಶ್ವವಿದ್ಯಾಲಯದ ಶೈಕ್ಷಣಿಕ ಚಟುವಟಿಕೆಗಳಿಗೆ ಸಂಬಂಧಿಸಿದ್ದಾಗಿದೆ ಹೊರತು ವೈಯಕ್ತಿಕವಾದುದ್ದಲ್ಲ. ಈ ಕುರಿತ ದಾಖಲೆಗಳು ‘ಪ್ರಜಾವಾಣಿ’ಗೆ ಲಭ್ಯವಾಗಿವೆ.

₹2.33 ಕೋಟಿಯಲ್ಲಿ ₹98.11 ಲಕ್ಷ ದೂರಶಿಕ್ಷಣ ವಿದ್ಯಾರ್ಥಿಗಳ ಪ್ರವೇಶಾತಿ, ಪರೀಕ್ಷಾ ಶುಲ್ಕದ ಬಾಕಿ ಮೊತ್ತ, ಅಧ್ಯಯನಾಂಗವು ₹4.98 ಲಕ್ಷ ಪರೀಕ್ಷಾ ಶುಲ್ಕ, ₹1.17 ಲಕ್ಷ ಪ್ರವೇಶ ಶುಲ್ಕ ಉಳಿಸಿಕೊಂಡಿದೆ. ₹4.82 ಲಕ್ಷ ಅರ್ಧ ವೇತನ ರಜೆ ನಿವೃತ್ತಿ ಸಂದರ್ಭದಲ್ಲಿ ಗಳಿಕೆ ರಜೆಯಾಗಿ ಪರಿವರ್ತಿಸಿ ನಗದೀಕರಣ ಮಾಡಿಕೊಳ್ಳುವ ಸೌಲಭ್ಯದ ಹಣ, ₹38.38 ಲಕ್ಷ ವಿವಿಧ ಉದ್ದೇಶಗಳಿಗೆ ನೀಡಿರುವ ಮುಂಗಡ ಹೊಂದಾಣಿಕೆ ಆಗದೇ ಇರುವುದು, ₹9.25 ಲಕ್ಷ ವಿಶ್ವವಿದ್ಯಾಲಯದ ಅಧೀನದಲ್ಲಿ ಬರುವ ಅಧ್ಯಯನ ಕೇಂದ್ರ ಹಾಗೂ ಸಮನ್ವಯ ಘಟಕಗಳಲ್ಲಿ ಪ್ರವೇಶ ಪಡೆದ ವಿದ್ಯಾರ್ಥಿಗಳಿಂದ ಪಡೆಯಬೇಕಾದ ಶುಲ್ಕ, ₹2.19 ಲಕ್ಷ ಮಾನ್ಯತೆ ಕೇಂದ್ರಗಳ ನವೀಕರಣ ಶುಲ್ಕ ವಸೂಲಾತಿ, ₹68 ಸಾವಿರ ಅಖಿಲ ಕರ್ನಾಟಕ 15ನೇ ಹಸ್ತಪ್ರತಿ ಸಮ್ಮೇಳನದಲ್ಲಿ ಮಾಡಲಾದ ವೆಚ್ಚದಲ್ಲಿ ಕಂಡುಬಂದ ನ್ಯೂನತೆಗಳು.

ನೂತನ ಪಿಂಚಣಿ ಪದ್ಧತಿಗೆ ಸೇರಿದ ₹16.16 ಸಾವಿರ, ₹23 ಸಾವಿರ ಜಮೆ ಮಾಡಿದ ಚೆಕ್‌ಗಳು ಬ್ಯಾಂಕಿಗೆ ಜಮೆ ಆಗದೇ ಇರುವ ಶಿಷ್ಯವೇತನ, ₹70 ಸಾವಿರ ಬೆಳ್ಳಿ ಹಬ್ಬ ಆಚರಣೆಗೆ ಬೆಳ್ಳಿ ಭವನ ಕಟ್ಟಡ ಕಾಮಗಾರಿಯ ಟೆಂಡರ್‌ ಪ್ರಕ್ರಿಯೆ, ₹55.19 ಸಾವಿರ ದೂರಶಿಕ್ಷಣ ವಿದ್ಯಾರ್ಥಿಗಳ ಶಿಷ್ಯವೇತನ, ₹23 ಸಾವಿರ ವಿಶ್ವವಿದ್ಯಾಲಯದ ಶುಲ್ಕವನ್ನು ಹೊಂದಾಣಿಕೆ ಮಾಡಿಕೊಳ್ಳದೆ ವಿದ್ಯಾರ್ಥಿಗಳಿಗೆ ಹೆಚ್ಚುವರಿ ಶಿಷ್ಯವೇತನ ಬಿಡುಗಡೆ ಮಾಡಿರುವುದು, ₹58 ಸಾವಿರ ವೃಷಭೇಂದ್ರ ಶಿಕ್ಷಣ ಸಂಸ್ಥೆ ಆರೋಗ್ಯ ಕೇಂದ್ರದಿಂದ ಕಡಿಮೆ ಪ್ರವೇಶ ಶುಲ್ಕ ವಸೂಲಿ ಮಾಡಿರುವುದು, ₹27 ಸಾವಿರ ನಿವೃತ್ತಿ ಹೊಂದಿದ ನೌಕರರ ಪುನರ್‌ ನೇಮಕ ಮತ್ತು ಸರ್ಕಾರಿ ನೌಕರರು ನಿವೃತ್ತಿ ನಂತರ ಸೇವಾ ಅವಧಿ ವಿಸ್ತರಿಸುವುದು, ₹4 ಸಾವಿರ ಬಾದಾಮಿ ಕೇಂದ್ರದಲ್ಲಿ ವಾರ್ಷಿಕ ಪರೀಕ್ಷೆ ಶುಲ್ಕದಲ್ಲಿ ಇರುವ ಮೊತ್ತವನ್ನು ವಸೂಲಿ ಮಾಡುವುದನ್ನು ಲೆಕ್ಕಪತ್ರ ಇಲಾಖೆ ಉಲ್ಲೇಖಿಸಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು