ಬುಧವಾರ, ಮೇ 25, 2022
31 °C

ಹೊಸಪೇಟೆ | ರಸ್ತೆ ಅಪಘಾತದಲ್ಲಿ ಸಾವು; ಸಿಆರ್‌ಪಿಎಫ್‌ ಯೋಧನ ಅಂತ್ಯಕ್ರಿಯೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

 ಸಿಆರ್‌ಪಿಎಫ್‌ ಯೋಧ ಎಸ್‌.ಆರ್‌. ಶ್ರೀನಿವಾಸ್‌ ಅವರ ಪಾರ್ಥಿವ ಶರೀರ

ಹೊಸಪೇಟೆ (ವಿಜಯನಗರ): ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ ಸಿಆರ್‌ಪಿಎಫ್‌ ಯೋಧ ಎಸ್‌.ಆರ್‌. ಶ್ರೀನಿವಾಸ್‌ ಅವರ ಅಂತ್ಯಕ್ರಿಯೆ ಸಕಲ ಸರ್ಕಾರಿ ಗೌರವಗಳೊಂದಿಗೆ ತಾಲ್ಲೂಕಿನ ಕಮಲಾಪುರ ಎಚ್‌.ಪಿ.ಸಿ.ಯಲ್ಲಿ ಮಂಗಳವಾರ ನೆರವೇರಿತು.

ನವದೆಹಲಿಯ ಸಿಆರ್‌ಪಿಎಫ್‌ ಕ್ಯಾಂಪಿನಲ್ಲಿ ಕೆಲಸ ನಿರ್ವಹಿಸುತ್ತಿದ್ದ ಶ್ರೀನಿವಾಸ್‌ ಅವರು ಮೇ 8ರಂದು ಬೈಕಿನಲ್ಲಿ ತೆರಳುತ್ತಿದ್ದಾಗ ಅಪಘಾತದಲ್ಲಿ ಸಾವನ್ನಪ್ಪಿದ್ದರು. ಮೃತರಿಗೆ ಪತ್ನಿ, ಇಬ್ಬರು ಗಂಡು ಮಕ್ಕಳಿದ್ದಾರೆ. 

ಸೋಮವಾರ ನವದೆಹಲಿಯಿಂದ ಬೆಂಗಳೂರಿಗೆ, ಮಂಗಳವಾರ ಬೆಳಿಗ್ಗೆ ಬೆಂಗಳೂರಿನಿಂದ ಕಮಲಾಪುರಕ್ಕೆ ಅವರ ಪಾರ್ಥೀವ ಶರೀರ ತರಲಾಗಿತ್ತು. ಕಮಲಾಪುರದ ಸತ್ಯಮ್ಮನ ಗುಡಿ ಬಳಿ ಅವರ ಪಾರ್ಥಿವ ಶರೀರ ಬರುತ್ತಿದ್ದಂತೆ, ಅಲ್ಲಿ ನೆರೆದಿದ್ದ ಸ್ಥಳೀಯರು, ‘ಭಾರತ್‌ ಮಾತಾಕೀ ಜೈ’, ‘ಶ್ರೀನಿವಾಸ್‌ ಅಮರ್‌ ರಹೇ’ ಎಂದು ಘೋಷಣೆಗಳನ್ನು ಹಾಕಿದರು. ಅಲ್ಲಿಂದ ಕಮಲಾಪುರದ ಎಚ್‌.ಪಿ.ಸಿ ವರೆಗೆ ಪಾರ್ಥೀವ ಶರೀರವನ್ನು ಮೆರವಣಿಗೆಯಲ್ಲಿ ತೆಗೆದುಕೊಂಡು ಹೋದರು.

ವಿಜಯನಗರ ಸ್ಮಾರಕ ಸಂಸ್ಕೃತಿ ಸಂರಕ್ಷಣಾ ಸೇನೆ, ಹಂಪಿ ಟಾಸ್ಕ್‌ಫೋರ್ಸ್‌, ಸಿಆರ್‌ಪಿಎಫ್‌ನ 16 ಜನ ಯೋಧರು, ವಿವಿಧ ರಾಜಕೀಯ ಪಕ್ಷಗಳ ಮುಖಂಡರು, ಕಾರ್ಯಕರ್ತರು ತ್ರಿವರ್ಣ ಧ್ವಜಗಳನ್ನು ಹಿಡಿದುಕೊಂಡು ಪಾಲ್ಗೊಂಡಿದ್ದರು. ಬಳಿಕ ಅಲ್ಲಿ ಸರ್ಕಾರಿ ಗೌರವಗಳೊಂದಿಗೆ ಅಂತ್ಯಕ್ರಿಯೆ ನೆರವೇರಿಸಲಾಯಿತು. 

ಉಪವಿಭಾಗಾಧಿಕಾರಿ ಸಿದ್ದರಾಮೇಶ್ವರ, ತಹಶೀಲ್ದಾರ್‌ ವಿಶ್ವಜೀತ್‌ ಮೆಹ್ತಾ, ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ನಾಗೇಶ್, ಅಧ್ಯಕ್ಷ ಸೈಯದ್ ಅಮಾನುಲ್ಲಾ, ಸದಸ್ಯರಾದ ಪಾಲಯ್ಯ, ಕಿಶೋರ್ ಕುಮಾರ್, ರವಿಕುಮಾರ್, ವೀರೇಶ್ ಕುಮಾರ್, ಅನ್ವರ್, ಖಾಜಾ ಹುಸೇನ್, ತಾಹಿರ್‌, ಅಜೇಯ್ ಕುಮಾರ್, ಹೇಮಗಿರಿ,  ತಿಪ್ಪೇಸ್ವಾಮಿ, ಲಿಂಗಪ್ಪ, ಮುಖಂಡರಾದ  ಧರ್ಮೇಂದ್ರ ಸಿಂಗ್‌, ರಾಜಶೇಖರ್‌ ಹಿಟ್ನಾಳ್‌, ವಿಶ್ವನಾಥ ಮಾಳಗಿ, ರಾಚಯ್ಯ, ಈರಣ್ಣ ಪೂಜಾರಿ, ನಿಂಬಗಲ್‌ ರಾಮಕೃಷ್ಣ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು