ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಜಯನಗರ ಜಿಲ್ಲೆಯ ಮೊದಲ ಡಿಸಿ, ಎಸ್ಪಿ ವರ್ಗಾವಣೆ

Last Updated 4 ನವೆಂಬರ್ 2022, 14:07 IST
ಅಕ್ಷರ ಗಾತ್ರ

ಹೊಸಪೇಟೆ (ವಿಜಯನಗರ): ನೂತನ ವಿಜಯನಗರ ಜಿಲ್ಲೆಯ ಮೊದಲ ಜಿಲ್ಲಾಧಿಕಾರಿ ಅನಿರುದ್ಧ್‌ ಶ್ರವಣ್‌ ಪಿ., ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಡಾ. ಅರುಣ್‌ ಕೆ. ಅವರನ್ನು ರಾಜ್ಯ ಸರ್ಕಾರ ಶುಕ್ರವಾರ ವರ್ಗಾವಣೆಗೊಳಿಸಿ ಆದೇಶ ಹೊರಡಿಸಿದೆ.

2021ರ ಫೆಬ್ರುವರಿ 8ರಂದು ವಿಜಯನಗರ ಹೊಸ ಜಿಲ್ಲೆಯಾಗಿ ಉದಯವಾಗಿತ್ತು. ಅದಾದ ನಂತರ ಅನಿರುದ್ಧ್‌ ಶ್ರವಣ್‌ ಅವರನ್ನು ಜಿಲ್ಲೆಯ ವಿಶೇಷ ಅಧಿಕಾರಿಯಾಗಿ ನೇಮಿಸಲಾಗಿತ್ತು. ಅದೇ ವರ್ಷ ಅಕ್ಟೋಬರ್‌ 2ರಂದು ವಿಜಯನಗರ ಜಿಲ್ಲಾ ಉದ್ಘಾಟನಾ ಸಮಾರಂಭ ಹಮ್ಮಿಕೊಳ್ಳಲಾಗಿತ್ತು. ಅದೇ ದಿನ ಅನಿರುದ್ಧ್‌ ಶ್ರವಣ್‌ ಪಿ. ಅವರು ಜಿಲ್ಲಾಧಿಕಾರಿಯಾಗಿ, ಡಾ. ಅರುಣ್‌ ಕೆ. ಅವರು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಯಾಗಿ ಅಧಿಕಾರ ಸ್ವೀಕರಿಸಿದ್ದರು. ಈಗ ಇಬ್ಬರಿಗೂ ಒಂದೇ ದಿನ ಎತ್ತಂಗಡಿ ಮಾಡಲಾಗಿದೆ. ಇಬ್ಬರಿಗೂ ಬೇರೆ ಸ್ಥಳ ತೋರಿಸಿಲ್ಲ.

ಪ್ರವಾಸೋದ್ಯಮ ಇಲಾಖೆಯ ನಿರ್ದೇಶಕ ಟಿ. ವೆಂಕಟೇಶ್‌ ಅವರನ್ನು ತಕ್ಷಣದಿಂದಲೇ ಜಾರಿಗೆ ಬರುವಂತೆ ವಿಜಯನಗರದ ಜಿಲ್ಲಾಧಿಕಾರಿಯಾಗಿ ನಿಯುಕ್ತಿಗೊಳಿಸಲಾಗಿದೆ. ಲೋಕಾಯುಕ್ತದಲ್ಲಿ ಎಸ್ಪಿಯಾಗಿದ್ದ ಶ್ರೀಹರಿ ಬಾಬು ಬಿ.ಎಲ್‌. ಅವರನ್ನು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಯಾಗಿ ಸರ್ಕಾರ ನಿಯೋಜಿಸಿ ಆದೇಶ ಹೊರಡಿಸಿದೆ.

ಜಿಲ್ಲೆ ಉದ್ಘಾಟನೆಗೊಂಡ ಒಂದು ವರ್ಷದೊಳಗೆ ಜಿಲ್ಲಾಧಿಕಾರಿ ಅನಿರುದ್ಧ್‌ ಶ್ರವಣ್‌ ಅವರು ಆಡಳಿತದಲ್ಲಿ ಸಾಕಷ್ಟು ಸುಧಾರಣೆ ತಂದಿದ್ದರು. ಕಡತಗಳ ವಿಲೇವಾರಿಯಲ್ಲಿ ವಿಜಯನಗರ ಜಿಲ್ಲೆ ಮೂರನೇ ಸ್ಥಾನಕ್ಕೆ ಬಂದಿತ್ತು. ಶಿಕ್ಷಣ, ಆರೋಗ್ಯ ಕ್ಷೇತ್ರಕ್ಕೆ ಹೆಚ್ಚಿನ ಒತ್ತು ಕೊಟ್ಟಿದ್ದರು. ಇನ್ನು, ಎಸ್ಪಿ ಡಾ. ಅರುಣ್‌ ಕೆ. ಅವರು ದಕ್ಷತೆಗೆ ಹೆಸರಾಗಿದ್ದರು. ಮಟ್ಕಾ, ಇಸ್ಪೀಟ್ ಸೇರಿದಂತೆ ಇತರೆ ಅಕ್ರಮ ಚಟುವಟಿಕೆಗಳಿಗೆ ಬ್ರೇಕ್‌ ಹಾಕಿದ್ದರು. ಪೊಲೀಸ್‌ ಇಲಾಖೆಯಲ್ಲಿ ದೊಡ್ಡ ಪ್ರಮಾಣದಲ್ಲಿ ವರ್ಗಾವಣೆ ಮಾಡಿದ್ದರು. ಗಣೇಶ ಉತ್ಸವದ ಸಂದರ್ಭದಲ್ಲಿ ರಾತ್ರಿ ಹತ್ತು ಗಂಟೆಯ ನಂತರ ಧ್ವನಿವರ್ಧಕ ಬಳಸುವುದಕ್ಕೆ ಅವಕಾಶ ಕೊಟ್ಟಿರಲಿಲ್ಲ. ಪರಿಶಿಷ್ಟ ಜಾತಿಗೆ ಸೇರಿದ ವ್ಯಕ್ತಿಗೆ ಕೊಲೆ ಬೆದರಿಕೆ ಹಾಕಿ, ಜಾತಿ ನಿಂದನೆ ಮಾಡಿದ ಆರೋಪಕ್ಕೆ ಸಂಬಂಧಿಸಿ ಪ್ರವಾಸೋದ್ಯಮ ಸಚಿವ ಆನಂದ್‌ ಸಿಂಗ್‌ ವಿರುದ್ಧ ಪ್ರಕರಣ ದಾಖಲಿಸಿದ್ದರು.

ಅಂದಿನಿಂದಲೇ ಡಾ. ಅರುಣ್‌ ಕೆ. ಅವರನ್ನು ವರ್ಗಾವಣೆಗೊಳಿಸುತ್ತಾರೆ ಎಂಬ ಪುಕ್ಕಾರು ಜಿಲ್ಲೆಯಾದ್ಯಂತ ಹರಡಿತ್ತು. ಈ ಹಿಂದೆ ಸ್ವತಃ ಪೊಲೀಸ್‌ ಇಲಾಖೆಯ ಕೆಲ ಅಧಿಕಾರಿಗಳೇ ಎಸ್ಪಿ ವರ್ಗಾವಣೆಗೆ ಲಾಬಿ ಕೂಡ ನಡೆಸಿದ್ದರು. ಅಂತಿಮವಾಗಿ ಈಗ ಇಬ್ಬರ ವರ್ಗಾವಣೆಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT