ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿಷ್ಟಾಚಾರ ಉಲ್ಲಂಘನೆ, ಫೋರ್ಜರಿ ಬಗ್ಗೆ ಜಿಲ್ಲಾಧಿಕಾರಿ ಸ್ಪಷ್ಟನೆಗೆ ಆಗ್ರಹ 

ಸರ್ಕಾರಿ ಅಧಿಕಾರಿಯಿಂದ ಒಬ್ಬರ ವೈಭವೀಕರಣಕ್ಕೆ ಕೆಲಸ ಸಲ್ಲದು
Last Updated 19 ಆಗಸ್ಟ್ 2022, 10:43 IST
ಅಕ್ಷರ ಗಾತ್ರ

ಹೊಸಪೇಟೆ (ವಿಜಯನಗರ): ‘ಪಿ.ಕೆ.ಹಳ್ಳಿಯಲ್ಲಿ ಇತ್ತೀಚೆಗೆ ನಡೆದ ವಲಯ ಮಟ್ಟದ ಕ್ರೀಡಾಕೂಟದ ಪ್ರಶಸ್ತಿ ಪತ್ರದಲ್ಲಿ ಪ್ರವಾಸೋದ್ಯಮ ಸಚಿವ ಆನಂದ್‌ ಸಿಂಗ್‌ ಮಗನ ಭಾವಚಿತ್ರ ಪ್ರಕಟಿಸಿ ಶಿಷ್ಟಾಚಾರ ಉಲ್ಲಂಘಿಸಲಾಗಿದೆ. ನೋಟಿಸ್‌ ಕೊಟ್ಟು ಕೈ ತೊಳೆದುಕೊಂಡರೆ ಆಗಲ್ಲ. ಅದರ ಬಗ್ಗೆ ಜಿಲ್ಲಾಧಿಕಾರಿ ಸ್ಪಷ್ಟನೆ ನೀಡಬೇಕು. ಕ್ಷೇತ್ರ ಶಿಕ್ಷಣಾಧಿಕಾರಿ ಸೇರಿದಂತೆ ಇತರೆ ಅಧಿಕಾರಿಗಳ ಸಹಿ ಕೂಡ ಇದೆ. ಇದು ಪೋರ್ಜರಿಗೆ ಸಂಬಂಧಿಸಿದ್ದು, ಅದರ ಬಗ್ಗೆ ಡಿ.ಸಿ. ಸ್ಪಷ್ಟಪಡಿಸಬೇಕು’ ಎಂದು ಮಾಜಿ ಶಾಸಕರೂ ಆದ ಕೆ.ಪಿ.ಸಿ.ಸಿ ಪ್ರಧಾನ ಕಾರ್ಯದರ್ಶಿ ಸಿರಾಜ್‌ ಶೇಕ್‌ ಆಗ್ರಹಿಸಿದರು.

ವಿಜಯನಗರ ಜಿಲ್ಲೆಯಲ್ಲಿ ಶಿಷ್ಟಾಚಾರಕ್ಕೆ ಸಂಬಂಧಿಸಿದ ಸಂಪೂರ್ಣ ಜವಾಬ್ದಾರಿ ಜಿಲ್ಲಾಧಿಕಾರಿ ಮೇಲಿದೆ. ಸಚಿವರ ಮಗನ ಭಾವಚಿತ್ರ ಪ್ರಕಟಿಸಿದ್ದಕ್ಕೆ ಸಂಬಂಧಿಸಿ ಕಾರಣ ಕೇಳಿ ನೋಟಿಸ್‌ ಕೊಟ್ಟು ಸಮಜಾಯಿಷಿ ಪಡೆಯಲಾಗಿದೆ. ಆದರೆ, ಅದರಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಸಹಿ ಕೂಡ ಇದೆ. ಇದು ನೇರಾನೇರ 420 (ಎ) ಜಾಮೀನು ರಹಿತ ಕೇಸ್‌ ಆಗುತ್ತದೆ. ಹಾಗಾಗಿ ಸಂಬಂಧಿಸಿದವರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು ಎಂದು ಶುಕ್ರವಾರ ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಒತ್ತಾಯಿಸಿದರು.

ಸರ್ಕಾರಿ ಸೇವೆಯಲ್ಲಿರುವವರು ಕಾನೂನಿನ ಚೌಕಟ್ಟಿನಲ್ಲಿ ಕೆಲಸ ಮಾಡಬೇಕು. ಒಬ್ಬರ ವೈಭವೀಕರಿಸುವ ಕೆಲಸ ಮಾಡಬಾರದು. ಅಧಿಕಾರಿಗಳಿಗೆ ವಿಷಯ ಗೊತ್ತಿದ್ದೂ ಪ್ರಶಸ್ತಿ ಪತ್ರದ ಮೇಲೆ ಸಹಿ ಮಾಡಿದರೆ ಅಥವಾ ಬೇರೆಯವರು ಫೋರ್ಜರಿ ಮಾಡಿದ್ದರೆ ಎನ್ನುವುದನ್ನು ಜಿಲ್ಲಾಧಿಕಾರಿ ತಿಳಿಸಬೇಕು ಎಂದರು.

ತಾಲ್ಲೂಕಿನ ಕೊಂಡನಾಯಕನಹಳ್ಳಿ ಶಾಲೆಯ ಮುಖ್ಯಶಿಕ್ಷಕ ಹಾಗೂ ಎಸ್‌.ಡಿ.ಎಂ.ಸಿ.ಯ ಎಲ್ಲ ಸದಸ್ಯರ ಮನವಿ ಮೇರೆಗೆ ಶಾಲೆಯ ಐದು ನೂರು ಮಕ್ಕಳಿಗೆ ಬೆಲ್ಟ್‌, ಟೈ ಹಾಗೂ ಐ.ಡಿ. ಕಾರ್ಡ್‌ಗಳನ್ನು ನನ್ನ ಸ್ವಂತ ಹಣದಲ್ಲಿ ಮಾಡಿಕೊಟ್ಟಿರುವೆ. ಎಲ್ಲೂ ಕೂಡ ನನ್ನ ಹೆಸರಾಗಲಿ, ಚಿತ್ರವಾಗಲಿ ಬಳಸಿಲ್ಲ. ಆದರೆ, ಅವುಗಳನ್ನು ಮಕ್ಕಳಿಗೆ ವಿತರಿಸದಂತೆ ಕ್ಷೇತ್ರ ಶಿಕ್ಷಣಾಧಿಕಾರಿ ಸೂಚಿಸಿದ್ದಾರೆ. ಸಚಿವರ ಜತೆಗಿರುವ ಅಧಿಕಾರಿಗಳು ಈ ಕೆಲಸ ಮಾಡಿಸಿದ್ದಾರೆ ಎಂದು ಗೊತ್ತಾಗಿದೆ. ಇದೇ ವೇಳೆ ಸಚಿವ ಆನಂದ್‌ ಸಿಂಗ್‌ ಅವರ ಮಗನ ಭಾವಚಿತ್ರವಿರುವ ನೋಟ್‌ಬುಕ್‌ಗಳನ್ನು ಎಲ್ಲ ಶಾಲಾ, ಕಾಲೇಜುಗಳಲ್ಲಿ ವಿತರಿಸಲಾಗುತ್ತಿದೆ. ಇದರ ಬಗ್ಗೆಯೂ ಜಿಲ್ಲಾಧಿಕಾರಿ ಸ್ಪಷ್ಟನೆ ನೀಡಬೇಕು. ಅದಕ್ಕಿರುವ ಮಾನದಂಡ ಸ್ಪಷ್ಟಪಡಿಸಬೇಕು ಎಂದು ಆಗ್ರಹಿಸಿದರು.

ಜಿಲ್ಲಾಧಿಕಾರಿಯವರು ಕೊಡುವ ಉತ್ತರ, ಸ್ಪಷ್ಟನೆ ನೋಡಿಕೊಂಡು ನಾನು ಮುಂದುವರೆಯುತ್ತೇನೆ. ಅವರ ವಿರುದ್ಧ ಹೋರಾಟಕ್ಕೂ ಹಿಂಜರಿಯುವುದಿಲ್ಲ. ನಾನು ಕೂಡ ಈ ಹಿಂದೆ ಶಾಸಕನಿದ್ದಾಗ ಶಿಷ್ಟಾಚಾರ ಸಮಿತಿಯಲ್ಲಿ ಕೆಲಸ ಮಾಡಿದ್ದೇನೆ. ನನಗೂ ಎಲ್ಲ ಗೊತ್ತು. ಆದರೆ, ಇಬ್ಬಗೆಯ ನೀತಿ ಅನುಸರಿಸುತ್ತಿರುವುದು ಸರಿಯಲ್ಲ. ಅನಗತ್ಯ ಕಿರುಕುಳ ಕೊಡುತ್ತಿರುವುದು ಖಂಡನಾರ್ಹ ಎಂದರು.

21ರಿಂದ ಜನಜಾಗೃತಿ ಅಭಿಯಾನ:‘ಪ್ರಶ್ನಿಸು ವಿಜಯನಗರ’ ಎಂಬ ಘೋಷವಾಕ್ಯದೊಂದಿಗೆ ನಗರದ ಎಲ್ಲ 35 ವಾರ್ಡ್‌ಗಳಲ್ಲಿ ಕಾಂಗ್ರೆಸ್‌ ಪಕ್ಷದಿಂದ ಜನಜಾಗೃತಿ ಅಭಿಯಾನ ನಡೆಸಲು ನಿರ್ಧರಿಸಲಾಗಿದೆ. ಕೇಂದ್ರ ಹಾಗೂ ರಾಜ್ಯ ಸರ್ಕಾರದ ವೈಫಲ್ಯಗಳನ್ನು ಜನರಿಗೆ ಮನವರಿಕೆ ಮಾಡಲಾಗುತ್ತದೆ. ವಿಜಯನಗರ ಕ್ಷೇತ್ರದ ಸಮಸ್ಯೆಗಳ ಕುರಿತಾಗಿಯೂ ಅವರ ಅಭಿಪ್ರಾಯ ಸಂಗ್ರಹಿಸಲಾಗುವುದು. ಆ. 21ರಂದು ಬೆಳಿಗ್ಗೆ 9ಕ್ಕೆ ನಗರದ ವಡಕರಾಯ ದೇವಸ್ಥಾನದಲ್ಲಿ ಪೂಜೆ ನೆರವೇರಿಸಿ, 16ನೇ ವಾರ್ಡಿನ ಚಲುವಾದಿಕೇರಿಯಲ್ಲಿ ಕಾರ್ಯಕ್ರಮ ಆಯೋಜಿಸಲಾಗುವುದು. ನಂತರ ಇತರೆ ವಾರ್ಡ್‌ಗಳಲ್ಲಿ ನಡೆಸಲಾಗುವುದು ಎಂದರು.
ಐ.ಎಸ್‌.ಆರ್‌. ಸಕ್ಕರೆ ಕಾರ್ಖಾನೆ ಬಂದ್‌ ಆಗಿರುವುದರಿಂದ ಕಬ್ಬು ಬೆಳೆಗಾರರು ತೀವ್ರ ಸಮಸ್ಯೆ ಎದುರಿಸುತ್ತಿದ್ದಾರೆ. ಕಬ್ಬು ಬೆಳೆಯುವ ತಾಲ್ಲೂಕಿನ 18 ಪ್ರಮುಖ ಗ್ರಾಮಗಳಲ್ಲಿ ವಾರಕ್ಕೆ ಒಂದು ದಿನ ಬೈಠಕ್‌ ನಡೆಸಿ, ಹೊಸ ಕಾರ್ಖಾನೆ ಯಾವ ರೀತಿ ಆರಂಭಿಸಬಹುದು ಎನ್ನುವುದರ ಬಗ್ಗೆ ಚರ್ಚಿಸಲಾಗುವುದು ಎಂದು ಹೇಳಿದರು. ಮುಖಂಡರಾದ ಹಾಲಪ್ಪ, ತಮ್ಮನ್ನೆಳಪ್ಪ, ಕೃಷ್ಣ ಇದ್ದರು.

ಆನಂದ್‌ ಸಿಂಗ್‌ ಕಾಂಗ್ರೆಸ್‌ಸೇರ್ಪಡೆಗೆ ವಿರೋಧ
‘ಸಚಿವ ಆನಂದ್‌ ಸಿಂಗ್‌ ಅವರು ಕಾಂಗ್ರೆಸ್‌ ಸೇರಲು ಪ್ರಯತ್ನಿಸುತ್ತಿದ್ದಾರೆ ಎನ್ನುವ ವಿಷಯ ನನ್ನ ಗಮನಕ್ಕೆ ಬಂದಿಲ್ಲ. ಒಂದುವೇಳೆ ಅವರು ಪಕ್ಷ ಸೇರ್ಪಡೆಗೆ ಮುಂದಾದರೆ ಅದನ್ನು ವಿರೋಧಿಸುತ್ತೇನೆ. ಈಗಾಗಲೇ ಸಿದ್ದರಾಮಯ್ಯನವರು ಏನೇ ಆಗಲಿ ಪಕ್ಷ ತೊರೆದ 17 ಜನರನ್ನು ಪುನಃ ಪಕ್ಷಕ್ಕೆ ಸೇರಿಸಿಕೊಳ್ಳುವುದಿಲ್ಲ ಎಂದು ಹೇಳಿದ್ದಾರೆ. ಹಾಗಾಗಿ ಆನಂದ್‌ ಸಿಂಗ್‌ ಕಾಂಗ್ರೆಸ್‌ ಪಕ್ಷ ಸೇರುವ ಪ್ರಶ್ನೆಯೇ ಇಲ್ಲ’ ಎಂದು ಮಾಜಿಶಾಸಕ ಸಿರಾಜ್‌ ಶೇಕ್‌ ಹೇಳಿದರು.

ಮಾಜಿಶಾಸಕ ಎಚ್‌.ಆರ್‌. ಗವಿಯಪ್ಪ ಅವರ ಬೈಸಿಕಲ್‌ಗೆ ಸ್ಟ್ಯಾಂಡ್‌ ಇಲ್ಲ. ಅವರಲ್ಲಿ ದೃಢ ನಿರ್ಧಾರ ಇಲ್ಲ. ಆದರೆ, ಪಕ್ಷ ಗವಿಯಪ್ಪ ಸೇರಿದಂತೆ ಯಾರಿಗೂ ಟಿಕೆಟ್‌ ಕೊಟ್ಟರೂ ಅವರ ಗೆಲುವಿಗೆ ಶ್ರಮಿಸುತ್ತೇನೆ. ನಾನು ಸೇರಿದಂತೆ ಐದಾರೂ ಜನ ಆಕಾಂಕ್ಷಿಗಳು ವಿಜಯನಗರ ಕ್ಷೇತ್ರದಲ್ಲಿದ್ದೇವೆ. ಆದರೆ, ಕಾಂಗ್ರೆಸ್‌ ಪಕ್ಷದೊಳಗೆ ಮೀರ್‌ ಸಾದಿಕ್‌, ಮಲ್ಲಪ್ಪ ಶೆಟ್ಟರ್‌ ಅಂಥವರು ಇರುವವರೆಗೆ ಕಾಂಗ್ರೆಸ್‌ ಗೆಲ್ಲಲ್ಲ. ಅಂಥವರನ್ನು ಪಕ್ಷದಿಂದ ಹೊರಗಿಡಲು ವರಿಷ್ಠರಿಗೆ ತಿಳಿಸಲಾಗಿದೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT