ಬುಧವಾರ, ಡಿಸೆಂಬರ್ 7, 2022
23 °C
ಸಚಿವ ಆನಂದ್‌ ಸಿಂಗ್‌ ವಿರುದ್ಧ ಎಎಪಿ ಅಧ್ಯಕ್ಷ ಪೃಥ್ವಿ ರೆಡ್ಡಿ ಗಂಭೀರ ಆರೋಪ

40 ಪರ್ಸೆಂಟ್‌ ಕಮಿಷನ್‌ ಪಡೆಯಲು ಬಿಡದಕ್ಕೆ ಡಿಸಿ, ಎಸ್ಪಿ ವರ್ಗಾ: ಪೃಥ್ವಿ ರೆಡ್ಡಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹೊಸಪೇಟೆ (ವಿಜಯನಗರ): ‘40 ಪರ್ಸೆಂಟ್‌ ಕಮಿಷನ್‌ ಪಡೆಯಲು ಬಿಡದಕ್ಕೆ ಜಿಲ್ಲಾಧಿಕಾರಿ ಅನಿರುದ್ಧ್‌ ಶ್ರವಣ್‌ ಪಿ., ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಅರುಣ್‌ ಕೆ. ಅವರನ್ನು ಪ್ರವಾಸೋದ್ಯಮ ಸಚಿವ ಆನಂದ್‌ ಸಿಂಗ್‌ ವರ್ಗಾವಣೆ ಮಾಡಿಸಿದ್ದಾರೆ’ ಎಂದು ‘ಆಮ್‌ ಆದ್ಮಿ’ ಪಕ್ಷದ (ಎಎಪಿ) ರಾಜ್ಯ ಘಟಕದ ಅಧ್ಯಕ್ಷ ಪೃಥ್ವಿ ರೆಡ್ಡಿ ಗಂಭೀರ ಆರೋಪ ಮಾಡಿದರು.

ನಗರದ ಸಂಡೂರು ರಸ್ತೆಯಲ್ಲಿ ಸೋಮವಾರ ಪಕ್ಷದ ಜಿಲ್ಲಾ ಕಚೇರಿ ಉದ್ಘಾಟಿಸಿದರ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಡಿಸಿ, ಎಸ್ಪಿ ಇಬ್ಬರೂ ಉತ್ತಮವಾಗಿ ಕೆಲಸ ಮಾಡುತ್ತಿದ್ದರು. ಅಂಥವರನ್ನು ಉಳಿಸಿಕೊಳ್ಳಬೇಕಿತ್ತು ಎಂದರು.

ಇಡೀ ದೇಶದಲ್ಲೇ ಅತಿ ಹೆಚ್ಚು ಆಸ್ತಿ ಹೊಂದಿರುವ ಶಾಸಕರ ಪಟ್ಟಿ ಮಾಡಿದರೆ ಅದರಲ್ಲಿ ಆನಂದ್‌ ಸಿಂಗ್‌ ಅವರ ಹೆಸರು ಟಾಪ್‌ ಟೆನ್‌ನಲ್ಲಿ ಬರುತ್ತದೆ. ಇವರು ಜನಸೇವೆ ಮಾಡ್ತಾ ಇದ್ದಾರಾ? ವ್ಯಾಪಾರ ನಡೆಸ್ತಾ ಇದ್ದಾರಾ? ಈ ಭಾಗದ ವಿದ್ಯಾವಂತರು ಹಾಗೂ ಅವಿದ್ಯಾವಂತರೆಲ್ಲ ಕೆಲಸ ಸಿಗದೇ ಬೇರೆ ಊರುಗಳಿಗೆ ವಲಸೆ ಹೋಗುತ್ತಿದ್ದಾರೆ. ನಾಲ್ಕು ಸಲ ಶಾಸಕರಾಗಿ ಗೆದ್ದಿರುವ ಅವರು ಈ ಭಾಗದಲ್ಲಿ ಯಾವುದಾದರೂ ಕೈಗಾರಿಕೆ ಆರಂಭಿಸಿದ್ದಾರಾ? ಯಾವುದಾದರೂ ಕಂಪನಿಗಳನ್ನು ತಂದಿದ್ದಾರಾ? ಸ್ಥಳೀಯರಿಗೆ ಉದ್ಯೋಗಗಳನ್ನು ಒದಗಿಸಿಕೊಟ್ಟಿದ್ದಾರಾ? ಎಂದು ಪ್ರಶ್ನೆ ಕೇಳಿದರು.

ಆನಂದ್‌ ಸಿಂಗ್‌ ಅವರನ್ನು ವಿಜಯನಗರ ಕ್ಷೇತ್ರದ ಜನ ನಾಲ್ಕು ಸಲ ಗೆಲ್ಲಿಸಿದ್ದಾರೆ. ಇಲ್ಲಿನ ಪರಿಸ್ಥಿತಿ ನೋಡಿದರೆ ಇಲ್ಲಿ ಪ್ರಜಾಪ್ರಭುತ್ವ ಇದೆಯಾ? ರಾಜ –ಮಹಾರಾಜರು ಆಯ್ಕೆ ಆಗುತ್ತಿದ್ದಾರಾ? ನಿಜಕ್ಕೂ ಈಗ ಯೋಚನೆ ಮಾಡುವ ಸಮಯ ಬಂದಿದೆ. ಅತಿವೃಷ್ಟಿಯಿಂದ ಹರಪನಹಳ್ಳಿ ಸೇರಿದಂತೆ ಜಿಲ್ಲೆಯ ರೈತರು ಸಂಕಷ್ಟಕ್ಕೆ ಒಳಗಾಗಿದ್ದಾರೆ. ಅವರಿಗೆ ಪರಿಹಾರ ಕೊಡಿಸುವ ಕೆಲಸ ಮಾಡಿಲ್ಲ. ಪ್ರವಾಸೋದ್ಯಮ ಸಚಿವರಾಗಿದ್ದರೂ ಹಂಪಿಯಲ್ಲಿ ಕುಡಿಯುವ ನೀರು ಸೇರಿದಂತೆ ಯಾವುದೇ ಮೂಲಸೌಕರ್ಯ ಇಲ್ಲ. ಇದು ನಿಮ್ಮ ವೈಫಲ್ಯವಲ್ಲವೇ? ಎಂದು ಪ್ರಶ್ನಿಸಿದರು.

ನಗರಸಭೆ ಚುನಾವಣೆಯಲ್ಲಿ ಎಎಪಿಯಿಂದ ಗೆದ್ದಿದ್ದ ಏಕಮಾತ್ರ ಅಭ್ಯರ್ಥಿಯನ್ನು ಆನಂದ್‌ ಸಿಂಗ್‌ ಖರೀದಿಸಿ, ಅವರ ಪಕ್ಷಕ್ಕೆ ಸೇರಿಸಿಕೊಂಡಿದ್ದಾರೆ. ಇದನ್ನು ಸವಾಲಾಗಿ ಸ್ವೀಕರಿಸಿ, ಬರುವ ಚುನಾವಣೆಯಲ್ಲಿ ಅವರನ್ನು ಸೋಲಿಸುತ್ತೇವೆ. ಹಣ, ತೋಳ್ಬಲದಿಂದ ರಾಜಕೀಯ ಮಾಡುವುದಿಲ್ಲ. ಜನರ ಬಲದಿಂದ ಎಎಪಿ ಕಟ್ಟುತ್ತೇವೆ. ನಿಮ್ಮ ಚಾರ್ಟರ್ಡ್‌ ಫ್ಲೈಟ್‌ನಲ್ಲಿ ಕರೆದೊಯ್ಯುವಂತೆ ವಿಜಯನಗರದ ಜನತೆ ಸಚಿವರಿಗೆ ಕೇಳುತ್ತಿಲ್ಲ. ಉತ್ತಮ ಆಸ್ಪತ್ರೆ, ಕುಡಿಯುವ ನೀರು ಕೇಳುತ್ತಿದ್ದಾರೆ. ಜನರ ತೆರಿಗೆ ಹಣ ಜನರಿಗಾಗಿ ಖರ್ಚು ಮಾಡಲು ಹಿಂದೇಟೇಕೆ? ಎಂದು ಕೇಳಿದರು.

ದೆಹಲಿ, ಪಂಜಾಬ್‌ನಲ್ಲಿ ಆದ ಬೆಳವಣಿಗೆ ನಂತರ ಜನರಿಗೆ ಎಎಪಿ ಬಗ್ಗೆ ಭರವಸೆ ಮೂಡಿದೆ. ನಮ್ಮ ಪಕ್ಷದಿಂದ ಶಾಸಕರಾದವರು ಬಹುತೇಕರು ಸಾಮಾನ್ಯರಲ್ಲಿ ಸಾಮಾನ್ಯರು. ಮೊದಲ ಸಲ ವಿಧಾನಸಭೆ ಪ್ರವೇಶಿಸಿದವರು. ಎರಡೂ ರಾಜ್ಯಗಳಲ್ಲಿ ಮಾದರಿ ಕೆಲಸ ಮಾಡುತ್ತಿದ್ದೇವೆ. ಬಿಜೆಪಿ, ಕಾಂಗ್ರೆಸ್‌ ಆಡಳಿತದಿಂದ ಜನ ಬೇಸತ್ತು ಹೋಗಿದ್ದಾರೆ. ಇವರ ಕಮಿಷನ್‌ ರಾಜಕಾರಣದಿಂದ ಸಿಟ್ಟಾಗಿದ್ದಾರೆ. ಬರುವ ದಿನಗಳಲ್ಲಿ ಎಎಪಿಗೆ ಉತ್ತಮ ಭವಿಷ್ಯವಿದೆ ಎಂದರು.

ಪಕ್ಷದ ಮುಖಂಡ ಶಂಕರ್‌ ದಾಸ್‌ ಮಾತನಾಡಿ, ನಾಲ್ಕು ಸಲ ಶಾಸಕರಾದರೂ ಆನಂದ್‌ ಸಿಂಗ್‌ ವಿಜಯನಗರ ಕ್ಷೇತ್ರಕ್ಕೆ ಏನೂ ಮಾಡಿಲ್ಲ. ಅದರಿಂದ ವಿಜಯನಗರ ಬಹಳ ಹಿಂದುಳಿದಿದೆ. ಏಳೆಂಟು ವರ್ಷಾಗಳಾದರೂ ಬೈಪಾಸ್‌ ಮುಗಿದಿಲ್ಲ. ಮೂಲಸೌಕರ್ಯ ಇಲ್ಲ. ಕೇಂದ್ರ, ರಾಜ್ಯದಲ್ಲಿ ನಿಮ್ಮದೇ ಸರ್ಕಾರವಿದ್ದರೂ ಕೆಲಸಗಳೇಕೆ ಆಗುತ್ತಿಲ್ಲ ಎಂದು ಪ್ರಶ್ನಿಸಿದರು.

ಪಕ್ಷದ ವಕೀಲರ ಘಟಕದ ಸಂಘಟನಾ ಕಾರ್ಯದರ್ಶಿ ರವಿಚಂದ್ರನ್‌, ಜಿಲ್ಲಾ ಅಧ್ಯಕ್ಷ ಜೆ.ಎನ್‌. ಕಾಳಿದಾಸ್‌, ವಿಜಯನಗರ–ಬಳ್ಳಾರಿ ವಿಭಾಗೀಯ ಅಧ್ಯಕ್ಷ ರುದ್ರಯ್ಯ ನವಲಿ ಹಿರೇಮಠ ಇದ್ದರು. ಸುದ್ದಿಗೋಷ್ಠಿಗೂ ಮುನ್ನ ನಗರದ ಹರಿಹರ ರಸ್ತೆಯಲ್ಲಿ ಪೃಥ್ವಿ ರೆಡ್ಡಿ ಅವರನ್ನು ಸ್ವಾಗತಿಸಿದ ಪಕ್ಷದ ಕಾರ್ಯಕರ್ತರು, ಅವರನ್ನು ಬೈಕ್‌ ರ್‍ಯಾಲಿಯಲ್ಲಿ ಪಕ್ಷದ ಕಚೇರಿಗೆ ಬರಮಾಡಿಕೊಂಡರು.

‘ಲೈಸೆನ್ಸ್‌ ಟು ಲೂಟ್‌’
‘ಜೇಮ್ಸ್‌ ಬಾಂಡ್‌ ಚಿತ್ರದಲ್ಲಿ ಜೇಮ್ಸ್‌ ಬಾಂಡ್‌ಗೆ ‘ಲೈಸೆನ್ಸ್‌ ಟು ಕಿಲ್’ ಎಂದು ಅನುಮತಿ ಕೊಡಲಾಗಿತ್ತು. ವಿಜಯನಗರದಲ್ಲಿ ಸಚಿವ ಆನಂದ್‌ ಸಿಂಗ್‌ ಅವರಿಗೆ ‘ಲೈಸೆನ್ಸ್‌ ಟು ಲೂಟ್‌’ ಅನುಮತಿ ಯಾರೂ ಕೊಟ್ಟಿಲ್ಲ. ಮುಂಬರುವ ಚುನಾವಣೆಯಲ್ಲಿ ಕಾಂಗ್ರೆಸ್‌ನಿಂದ ಸ್ಪರ್ಧಿಸ ಬಯಸುವ ಆಕಾಂಕ್ಷಿಗಳಿಂದ ಅರ್ಜಿ ಕರೆಯಲಾಗಿದೆ. ಅರ್ಜಿ ಹಾಕಿದವರಲ್ಲಿ ಆನಂದ್‌ ಸಿಂಗ್‌ ಕೂಡ ಒಬ್ಬರು. ವಿಜಯನಗರದಲ್ಲಿ ಜನ ಪಕ್ಷ ನೋಡಿ ಅಭ್ಯರ್ಥಿಯನ್ನು ಆಯ್ಕೆ ಮಾಡುತ್ತಾರೆ ಹೊರತು ನಿಮ್ಮನ್ನು ನೋಡಿ ಅಲ್ಲ ಎನ್ನುವುದು ಇದರಿಂದ ಖಚಿತಪಟ್ಟಿದೆ’ ಎಂದು ಪೃಥ್ವಿ ರೆಡ್ಡಿ ಹೇಳಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು