ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹುಬ್ಬಳ್ಳಿ–ತಿರುಪತಿ ರೈಲಿನ ಗತಿ ಹೆಚ್ಚಳಕ್ಕೆ ಆಗ್ರಹ

ಕೊಲ್ಲಾಪುರ–ಹೈದರಾಬಾದ್‌ ರೈಲು ಪುನರಾರಂಭಕ್ಕೆ ಒತ್ತಾಯ
Last Updated 18 ಅಕ್ಟೋಬರ್ 2022, 12:21 IST
ಅಕ್ಷರ ಗಾತ್ರ

ಹೊಸಪೇಟೆ (ವಿಜಯನಗರ): ಮೂರು ವರ್ಷಗಳ ನಂತರ ಪುನರಾರಂಭಗೊಂಡಿರುವ ಹುಬ್ಬಳ್ಳಿ–ತಿರುಪತಿ (ಗಾಡಿ ಸಂಖ್ಯೆ 07657/58 ಪ್ರಯಾಣಿಕರ ರೈಲಿನ ವೇಗವನ್ನು ಹೆಚ್ಚಿಸುವಂತೆ ಆಗ್ರಹಿಸಿ ವಿಜಯನಗರ ರೈಲ್ವೆ ಅಭಿವೃದ್ಧಿ ಕ್ರಿಯಾ ಸಮಿತಿ ಕಾರ್ಯಕರ್ತರು ಮಂಗಳವಾರ ನಗರದ ರೈಲು ನಿಲ್ದಾಣದ ಎದುರು ಪ್ರತಿಭಟನೆ ನಡೆಸಿದರು.

ರೈಲು ನಿಲ್ದಾಣದ ಪರಿಶೀಲನೆಗೆ ಬಂದಿದ್ದ ನೈರುತ್ಯ ರೈಲ್ವೆ ವಲಯದ ಪ್ರಧಾನ ವ್ಯವಸ್ಥಾಪಕರಿಗೆ ಮನವಿ ಪತ್ರ ಸಲ್ಲಿಸಿದರು. ಹುಬ್ಬಳ್ಳಿ–ತಿರುಪತಿ ರೈಲು ಈ ಹಿಂದೆ ಹೊಸಪೇಟೆ–ಹುಬ್ಬಳ್ಳಿ ನಡುವಿನ ಸಂಚಾರಕ್ಕೆ ಮೂರು ಗಂಟೆ ಸಮಯ ತೆಗೆದುಕೊಳ್ಳುತ್ತಿತ್ತು. ಈಗ ಐದು ಗಂಟೆ ಸಮಯ ತೆಗೆದುಕೊಳ್ಳುತ್ತಿದೆ. ಅದೇ ರೀತಿ ಬಳ್ಳಾರಿ–ಹೊಸಪೇಟೆ ನಡುವಿನ 55 ಕಿ.ಮೀ ಸಂಚಾರಕ್ಕೆ ರೈಲು ಎರಡೂವರೆ ಗಂಟೆಯಲ್ಲಿ ಸಂಚರಿಸುತ್ತಿದೆ. ರೈಲಿಗೆ ಎಕ್ಸ್‌ಪ್ರೆಸ್‌ ಎಂದು ಫಲಕ ಹಾಕಿ ಪ್ಯಾಸೆಂಜರ್‌ ರೈಲಿಗಿಂತ ನಿಧಾನವಾಗಿ ಸಂಚರಿಸುತ್ತಿರುವುದು ದುರದೃಷ್ಟಕರ ಎಂದು ಮನವಿಯಲ್ಲಿ ತಿಳಿಸಿದರು.

ಹುಬ್ಬಳ್ಳಿ–ಬೆಂಗಳೂರು ನಡುವೆ 150 ಕಿ.ಮೀ ವೇಗದ ‘ವಂದೇ ಭಾರತ್‌’ ಎಕ್ಸ್‌ಪ್ರೆಸ್‌ ರೈಲು ಓಡಿಸಲು ನಿರ್ಧರಿಸಲಾಗಿದೆ. ಮತ್ತೊಂದೆಡೆ ಹುಬ್ಬಳ್ಳಿ–ತಿರುಪತಿ ರೈಲು ನಿಧಾನದಲ್ಲಿ ಅತ್ಯಂತ ನಿಧಾನವಾಗಿ ಸಂಚರಿಸುತ್ತಿದೆ. ಇದನ್ನು ಕೂಡಲೇ ಸರಿಪಡಿಸಿ, ಪ್ರಯಾಣಿಕರಿಗೆ ಆಗುತ್ತಿರುವ ತೊಂದರೆ ಸರಿಪಡಿಸಬೇಕು. ಕೊಲ್ಲಾಪುರ–ಹೈದರಾಬಾದ್‌ ನಡುವೆ ಈ ಹಿಂದೆ ಸಂಚರಿಸುತ್ತಿದ್ದ ರೈಲನ್ನು ಪುನರಾರಂಭಿಸಬೇಕು ಎಂದು ಆಗ್ರಹಿಸಿದರು.

ವಿಜಯಪುರ–ಯಶವಂತಪುರ ರೈಲಿನ ಸಮಯ ಪರಿಷ್ಕರಿಸಬೇಕು. ಸೊಲ್ಲಾಪುರ–ಗದಗ–ವಾಡಿ ರೈಲನ್ನು ಹೊಸಪೇಟೆ ವರೆಗೆ ವಿಸ್ತರಿಸಬೇಕು. ಬೆಳಗಿನ ಸಮಯದಲ್ಲಿ ಹುಬ್ಬಳ್ಳಿ ಕಡೆಗೆ ಸಂಚರಿಸುವ ಹಂಪಿ ಎಕ್ಸ್‌ಪ್ರೆಸ್‌, ಅಮರಾವತಿ ಎಕ್ಸ್‌ಪ್ರೆಸ್‌ ರೈಲುಗಳಲ್ಲಿ ಸಾಮಾನ್ಯ ದರ್ಜೆಯ ಟಿಕೆಟ್‌ ಖರೀದಿಸಿ ಸ್ಲೀಪರ್‌ ಕೋಚ್‌ಗಳಲ್ಲಿ ಪ್ರಯಾಣಿಸಲು ಅವಕಾಶ ಕಲ್ಪಿಸಬೇಕು. ಈ ಹಿಂದೆ ಈ ಸೌಲಭ್ಯ ಇತ್ತು. ಕೋವಿಡ್‌ ಅವಧಿಯಲ್ಲಿ ತೆಗೆದು ಹಾಕಲಾಗಿತ್ತು. ಅದನ್ನು ಮರು ಆರಂಭಿಸಿದರೆ ದಿನನಿತ್ಯ ಓಡಾಡುವ ಸಾವಿರಾರು ಜನರಿಗೆ ಅನುಕೂಲವಾಗಲಿದೆ ಎಂದು ತಿಳಿಸಿದರು. ಸಮಿತಿಯ ಅಧ್ಯಕ್ಷ ವೈ. ಯಮುನೇಶ್‌, ಕಾರ್ಯದರ್ಶಿ ಕೆ. ಮಹೇಶ್‌ ಇತರರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT