ಹಗರಿಬೊಮ್ಮನಹಳ್ಳಿ: ಅಂಗವಿಕಲರ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಮಂಗಳವಾರ ಅಂಗವಿಕಲರ ಹಾಗೂ ಪಾಲಕರ ಒಕ್ಕೂಟದ ನೇತೃತ್ವದಲ್ಲಿ ನೂರಾರು ಜನ ಅಂಗವಿಕಲರು ಪಟ್ಟಣದ ಬಸವೇಶ್ವರ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು.
ಒಕ್ಕೂಟದ ರಾಜ್ಯ ಘಟಕದ ಪ್ರಧಾನಕಾರ್ಯದರ್ಶಿ ರಂಗಪ್ಪ ದಾಸರ್ ಮಾತನಾಡಿ, ‘ಅಂಗವಿಕಲರ ಬದುಕು ವರ್ಷದಿಂದ ವರ್ಷಕ್ಕೆ ಬಿಗಡಾಯಿಸುತ್ತಿದೆ. ಜೀವನ ವೆಚ್ಚದ ನಿರಂತರ ಏರಿಕೆ, ಜೀವನವಶ್ಯಕ ವಸ್ತುಗಳು ಮಾತ್ರವಲ್ಲದೆ ವಿಶೇಷ ಅಗತ್ಯಗಳಾದ ಫಿಸಿಯೊಥೆರಪಿ ಗಂಟೆಗೆ ₹1 ಸಾವಿರಕ್ಕೆ ಏರಿದೆ. ಅಗತ್ಯ ಔಷಧಗಳ ಬೆಲೆ ಗಗನಕ್ಕೇರಿದೆ. ಆದಾಯ ಇಲ್ಲದ ಅಂಗವಿಕಲರು ಅವನ್ನೆಲ್ಲ ಭರಿಸಲು ಸಾಧ್ಯವಿಲ್ಲ’ ಎಂದರು.
‘ಕೇಂದ್ರ ಸರ್ಕಾರದಿಂದ ಮಾಸಾಶನ ಕೇವಲ ₹300 ನೀಡಲಾಗುತ್ತಿದೆ. ಅಂಗವಿಕಲರನ್ನು ದಿವ್ಯಾಂಗರೆಂದು ಕರೆಯುವ ಸರ್ಕಾರಕ್ಕೆ ಸಣ್ಣ ಮೊತ್ತ ನೀಡಲು ನಾಚಿಕೆ ಆಗುವುದಿಲ್ಲವೆ’ ಎಂದು ಪ್ರಶ್ನಿಸಿದರು.
ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಅಂಗವಿಕಲರಿಗೆ ₹10ಸಾವಿರ ಮಾಸಾಶನ ನೀಡಬೇಕು. ಜತೆಗೆ ಎಂಆರ್‌ಡಬ್ಲ್ಯೂ , ವಿಆರ್‌ಡಬ್ಲ್ಯೂ , ಯುಆರ್‌ಡಬ್ಲ್ಯೂ ವೇತನ ಏರಿಕೆ ಮಾಡಬೇಕು. ಅಂಗವಿಕಲರ ಅಭಿವೃದ್ಧಿಗಾಗಿ ಶಾಸಕರು, ಸಂಸದರ ನಿಧಿಯಿಂದ ₹10ಲಕ್ಷ ಮೀಸಲಿಡಬೇಕೆನ್ನುವ ನಿರ್ಧಾರವನ್ನು ಜಾರಿಗೆ ತರಬೇಕು. ಸ್ಥಳೀಯ ಸಂಸ್ಥೆಗಳ ಬಜೆಟ್‍ನಲ್ಲಿ ಶೇ 5ರಷ್ಟು ವೆಚ್ಚಮಾಡಿ, ಅಂಗವಿಕಲರ ಹಕ್ಕುಗಳ ವಿಶೇಷ ಕಾಯಿದೆಯನ್ನು ಜಾರಿಗೆ ತರಬೇಕು’ ಎಂದು ಆಗ್ರಹಿಸಿದರು.
ಒಕ್ಕೂಟದ ತಾಲ್ಲೂಕು ಘಟಕದ ಅಧ್ಯಕ್ಷೆ ಬಿ.ರೇಣುಕಾ ಮಾತನಾಡಿ, ‘ನರೇಗಾ ಯೋಜನೆಯನ್ನು ಅಂಗವಿಕಲರಿಗೆ ಸಮರ್ಪಕವಾಗಿ ಬಳಕೆ ಮಾಡಬೇಕು. ತಪ್ಪಿದಲ್ಲಿ ಗ್ರಾಮ ಪಂಚಾಯ್ತಿಗಳನ್ನೇ ಹೊಣೆಗಾರರನ್ನಾಗಿ ಮಾಡಬೇಕು. ಪ್ರತ್ಯೇಕ ಗುರುತಿನ ಚೀಟಿ ನೀಡದ ಪಿಡಿಒಗಳ ವಿರುದ್ಧ ಅಗತ್ಯ ಕ್ರಮ ತೆಗೆದುಕೊಳ್ಳಬೇಕು. ಅಂಗವಿಕಲರನ್ನು ವಿವಾಹ ಆಗುವವರಿಗೆ ಪ್ರೋತ್ಸಾಹ ಧನ ನೀಡಬೇಕು. ನಿವೇಶನ, ಮನೆ, ಅಂತ್ಯೋದಯ ಅನ್ನಯೋಜನೆ ಕಾರ್ಡ್‍ಗಳನ್ನು ವಿತರಿಸಬೇಕು’ ಎಂದರು.
ಜನವಾದಿ ಮಹಿಳಾ ಸಂಘಟನೆಯ ಸರ್ದಾರ ಹುಲಿಗೆಮ್ಮ, ಡಿ.ಕಲೀಲ್ ಭಾಷ, ಪಿ.ಚಾಂದ್‍ಬೀ, ಬಿ.ಗಂಗಮ್ಮ, ಜವಳಿ ಕೊಟ್ರೇಶಪ್ಪ, ಕೆ.ಹುಲುಗಪ್ಪ, ಸೋಗಿ ಬಸವರಾಜ, ಮಾರುತಿ, ನಾಗರಾಜ ಇದ್ದರು. ಗ್ರೇಟ್-2 ತಹಶೀಲ್ದಾರ್ ಶಿವಕುಮಾರ ಗೌಡ ಅವರಿಗೆ ಮನವಿ ಸಲ್ಲಿಸಿದರು.