ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಮೋದಿಯಿಂದ ರಾಮರಾಜ್ಯವಲ್ಲ, ಬಡರಾಜ್ಯ‘

ತೈಲ, ಅಗತ್ಯ ವಸ್ತುಗಳ ಬೆಲೆ ಏರಿಕೆ ಖಂಡಿಸಿ ವಿವಿಧ ಸಂಘಟನೆಗಳ ಪ್ರತಿಭಟನೆ
Last Updated 14 ಜೂನ್ 2021, 12:52 IST
ಅಕ್ಷರ ಗಾತ್ರ

ಹೊಸಪೇಟೆ (ವಿಜಯನಗರ): ಸತತವಾಗಿ ಏರುತ್ತಿರುವ ತೈಲ ದರ, ಅಗತ್ಯ ವಸ್ತುಗಳ ಬೆಲೆ ಹೆಚ್ಚಳ ವಿರೋಧಿಸಿ ಬ್ಲಾಕ್‌ ಕಾಂಗ್ರೆಸ್‌ ಸಮಿತಿ, ಫೆಡರೇಶನ್‌ ಆಫ್‌ ಕರ್ನಾಟಕ ಆಟೊ ರಿಕ್ಷಾ ಡ್ರೈವರ್ಸ್‌ ಯೂನಿಯನ್‌, ಸಿಐಟಿಯು, ಡಿವೈಎಫ್ಐ ಕಾರ್ಯಕರ್ತರು ಸೋಮವಾರ ನಗರದ ಉದ್ಯೋಗ ಪೆಟ್ರೋಲ್‌ ಬಂಕ್‌ ಬಳಿ ಪ್ರತ್ಯೇಕವಾಗಿ ಪ್ರತಿಭಟನೆ ನಡೆಸಿದರು.

ಪೆಟ್ರೋಲ್‌ 100 ನಾಟೌಟ್‌, ಕೇಂದ್ರ ಸರ್ಕಾರಕ್ಕೆ ಧಿಕ್ಕಾರ ಎಂಬ ಬರಹ ಹೊಂದಿದ ಭಿತ್ತಿ ಪತ್ರಗಳನ್ನು ಪ್ರದರ್ಶಿಸಿ, ಘೋಷಣೆ ಕೂಗಿದರು.

ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಮೊಹಮ್ಮದ್ ಇಮಾಮ್ ನಿಯಾಜಿ ಮಾತನಾಡಿ, ‘ಕೇಂದ್ರ ಸರ್ಕಾರದ ಅವೈಜ್ಞಾನಿಕ ನೀತಿಯಿಂದ ಸತತವಾಗಿ ಪೆಟ್ರೋಲ್‌, ಡೀಸೆಲ್‌ ಬೆಲೆ ಏರಿಕೆಯಾಗುತ್ತಿದೆ. ರಾಮರಾಜ್ಯ ಮಾಡುತ್ತೇನೆ ಎಂದು ಅಧಿಕಾರಕ್ಕೆ ಬಂದ ನರೇಂದ್ರ ಮೋದಿ ಭಾರತವನ್ನು ಬಡರಾಜ್ಯವಾಗಿ ಮಾಡಿದ್ದಾರೆ’ ಎಂದು ಟೀಕಿಸಿದರು.

‘ನೆರೆಯ ಪಾಕಿಸ್ತಾನ, ಶ್ರೀಲಂಕಾ, ಅಫ್ಘಾನಿಸ್ತಾನ, ಬಾಂಗ್ಲಾದೇಶ, ನೇಪಾಳಕ್ಕಿಂತಲೂ ನಮ್ಮ ದೇಶದಲ್ಲಿ ಪೆಟ್ರೋಲ್‌, ಡೀಸೆಲ್‌ ದರ ಹೆಚ್ಚಾಗಿದೆ. ಈಗಾಗಲೇ ಅನೇಕ ರಾಜ್ಯಗಳಲ್ಲಿ ಎರಡರ ಬೆಲೆ ಪ್ರತಿ ಲೀಟರ್‌ಗೆ ನೂರರ ಗಡಿ ದಾಟಿದೆ. ಆಹಾರ ಧಾನ್ಯಗಳ ವಸ್ತು ಕೂಡ ಬಹಳ ಹೆಚ್ಚಾಗಿದೆ. ದೇಶದ ಅಭಿವೃದ್ಧಿ ಕುಂಠಿತಗೊಂಡಿದೆ’ ಎಂದರು.

‘ಕೋವಿಡ್‌ ಸಂಕಷ್ಟದಲ್ಲೂ ವ್ಯಾಪಕ ಭ್ರಷ್ಟಾಚಾರ ನಡೆಸಲಾಗುತ್ತಿದೆ. ಪ್ರಧಾನಮಂತ್ರಿ ಕೇರ್ಸ್‌ ಫಂಡ್‌ಗೆ ಬಂದ ಸಾವಿರಾರು ಕೋಟಿ ರೂಪಾಯಿಯ ಲೆಕ್ಕ ಕೊಡುತ್ತಿಲ್ಲ. ಕೋವಿಡ್‌ ಸರಿಯಾಗಿ ನಿಭಾಯಿಸದ ಕಾರಣ ಮೂರು ಲಕ್ಷಕ್ಕೂ ಅಧಿಕ ಜನ ಸಾವನ್ನಪ್ಪಿದ್ದಾರೆ. ಅಗತ್ಯ ವಸ್ತುಗಳ ಬೆಲೆ ಏರಿರುವುದರಿಂದ ಬಡವರು, ಮಧ್ಯಮ ವರ್ಗದವರು ಬಹಳ ಸಂಕಷ್ಟಕ್ಕೆ ಒಳಗಾಗಿದ್ದಾರೆ. ಆದರೆ, ಇದೇ ವೇಳೆ, ಅಂಬಾನಿ, ಅದಾನಿಯವರ ಆಸ್ತಿ ದಿನೇ ದಿನೇ ಹೆಚ್ಚಾಗುತ್ತಲೇ ಇದೆ’ ಎಂದು ಹೇಳಿದರು.

‘ಕೋವಿಡ್‌ ಲಾಕ್‌ಡೌನ್‌ನಿಂದ ಜನಸಾಮಾನ್ಯರು ಕೆಲಸವಿಲ್ಲದೆ ಸಂಕಷ್ಟ ಎದುರಿಸುತ್ತಿದ್ದಾರೆ. ಖರ್ಚಿಗೆ ಹಣವಿಲ್ಲದೆ ಕಂಗಾಲಾಗಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ನೆರವಿಗೆ ಬರಬೇಕಾದ ಸರ್ಕಾರ ಪೆಟ್ರೋಲ್‌, ಡೀಸೆಲ್‌, ಗ್ಯಾಸ್‌ ಸಿಲಿಂಡರ್‌, ಅಗತ್ಯ ವಸ್ತುಗಳ ಬೆಲೆ ಏರಿಸಿ ಬರೆ ಎಳೆಯುತ್ತಿದೆ. ಕೂಡಲೇ ಬೆಲೆ ಇಳಿಕೆ ಮಾಡದಿದ್ದಲ್ಲಿ ನಿರಂತರವಾಗಿ ಹೋರಾಟ ನಡೆಸಲಾಗುವುದು’ ಎಂದು ಎಚ್ಚರಿಕೆ ನೀಡಿದರು.

ಮುಖಂಡರಾದ ವಿ. ಸೋಮಪ್ಪ, ಗುಜ್ಜಲ್‌ ನಾಗರಾಜ, ಗುಜ್ಜಲ್ ರಘು, ತೇಜಪ್ಪ, ವೆಂಕಟರಮಣ, ಹಾನಗಲ್ ವೆಂಕೋಬಣ ರಾಮನಗೌಡ, ಚಿದಾನಂದಪ್ಪ, ರೌಫ್, ನಿಂಬಗಲ್ ರಾಮಕೃಷ್ಣ, ಯಂಕಪ್ಪ, ಗೌಸ್, ವಿನಯ್ ಶೆಟ್ಟರ್‌, ರಫೀಕ್, ಭರತ್, ಆಯೆಷಾ, ವೆಂಕಟಲಕ್ಷ್ಮಿ, ಬಾಷಾ, ಬುಡೆನ್, ಬಸವನಗೌಡ ಮೇಟಿ, ತಿಮ್ಮಪ್ಪ ಯಾದವ್, ಅಬುಲ್ ಕಲಾಂ, ದಾದಾಪೀರ್ ವಿಜಯ್ ಕುಮಾರ್, ಶ್ರೀನಿವಾಸ್, ಲಿಯಾಕತ್, ತಾಜುದ್ದೀನ್, ಅಲಿಂ ಬಾಷ, ನಾಗರಾಜ್ ಇದ್ದರು.

ಸಿಐಟಿಯು, ಡ್ರೈವರ್ಸ್‌ ಯೂನಿಯನ್‌, ಡಿವೈಎಫ್‌ಐ:

ಎಡ ಸಂಘಟನೆಗಳ ಕಾರ್ಯಕರ್ತರು ಪ್ರತ್ಯೇಕವಾಗಿ ಪ್ರತಿಭಟನೆ ನಡೆಸಿ, ಕೇಂದ್ರ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು. ಸಿಐಟಿಯು ಮುಖಂಡ ಭಾಸ್ಕರ್‌ ರೆಡ್ಡಿ ಮಾತನಾಡಿ, ‘ಕೋವಿಡ್‌ನಿಂದ ಜನ ಕೆಲಸ ಕಳೆದುಕೊಂಡಿದ್ದಾರೆ. ಖರ್ಚಿಗೆ ಕೈಯಲ್ಲಿ ನಗದು ಹಣವಿಲ್ಲದೆ ಪರದಾಟ ನಡೆಸುತ್ತಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ತೈಲ ದರ, ಅಗತ್ಯ ವಸ್ತುಗಳ ಬೆಲೆ ಹೆಚ್ಚಿಸಿ ಸರ್ಕಾರ ಏನು ಸಾಧಿಸಲು ಹೊರಟಿದೆ ಗೊತ್ತಾಗುತ್ತಿಲ್ಲ. ಇಂತಹ ಜನವಿರೋಧಿ ಸರ್ಕಾರ ಎಂದೂ ನೋಡಿಲ್ಲ’ ಎಂದು ಟೀಕಿಸಿದರು.

ಮುಖಂಡರಾದ ಕೆ.ಎಂ. ಸಂತೋಷ್‌ ಕುಮಾರ್‌, ಬಿಸಾಟಿ ಮಹೇಶ್‌, ಎನ್‌. ಯಲ್ಲಾಲಿಂಗ, ರಮೇಶ, ಗೋಪಾಲ, ಬಿ.ಎಸ್‌. ಯಮುನಪ್ಪ, ಎಸ್‌. ಅನಂತಶಯನ, ಜಿ. ಸಿದ್ದಲಿಂಗೇಶ್‌, ಹುಸೇನ್‌ ಸಾಬ್‌, ಟಿ. ಚಂದ್ರಶೇಖರ್‌, ಸುಭಾಷ್‌, ಕಲ್ಯಾಣಯ್ಯ, ಕಿನ್ನಾಳ ಹನುಮಂತ, ಅಶೋಕ, ರಾಮಣ್ಣ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT