ಸೋಮವಾರ, ಜುಲೈ 4, 2022
21 °C
ಗಿರಿಯಾಪುರದ ಗ್ರಾಮ ವಾಸ್ತವ್ಯದಲ್ಲಿ ಜಿಲ್ಲಾಧಿಕಾರಿಯಿಂದ ಅಧಿಕಾರಿಗಳ ತರಾಟೆ

ಅಕ್ಷರಸ್ಥರನ್ನೇ ಸತಾಯಿಸ್ತೀರಿ, ಜನರ ಪಾಡೇನು?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಗಿರಿಯಾಪುರ (ಹೂವಿನಹಡಗಲಿ): ‘ಅಕ್ಷರಸ್ಥರು, ಎಲ್ಲ ತಿಳಿದವರನ್ನೇ ಸತಾಯಿಸ್ತೀರಿ. ಓದು, ಬರಹ ಗೊತ್ತಿಲ್ಲದ ಜನ ಸಾಮಾನ್ಯರ ಪಾಡೇನು?’

ಹೀಗೆಂದು ಪ್ರಶ್ನಿಸಿದ ಜಿಲ್ಲಾಧಿಕಾರಿ ಅನಿರುದ್ಧ್ ಶ್ರವಣ್ ಪಿ. ಅವರು ಗ್ರಾಮ ಲೆಕ್ಕಾಧಿಕಾರಿಗಳಾದ ಕರೀಶ್‌, ಅಶೋಕ್‌, ಕಂದಾಯ ಇನ್‌ಸ್ಪೆಕ್ಟರ್‌ ಮೊಹಮ್ಮದ್‌ ಅಲಿ ಅವರನ್ನು ತರಾಟೆಗೆ ತೆಗೆದುಕೊಂಡರು.

ತಾಲ್ಲೂಕಿನ ಗಿರಿಯಾಪುರದಲ್ಲಿ ಆಯೋಜಿಸಿದ್ದ ‘ಜಿಲ್ಲಾಧಿಕಾರಿ ನಡೆ ಹಳ್ಳಿ ಕಡೆ’ ಕಾರ್ಯಕ್ರಮದಲ್ಲಿ ಕಂದಾಯ ಇಲಾಖೆಗೆ ಸಂಬಂಧಿಸಿದ ಪಹಣಿ ತಿದ್ದುಪಡಿ, ಹಕ್ಕು ಬದಲಾವಣೆ, ಕೆರೆ ಒತ್ತುವರಿ, ಸರ್ವೇ ಕಾರ್ಯಕ್ಕೆ ಸಂಬಂಧಿಸಿದ ಕಡತಗಳು ಹತ್ತಾರು ವರ್ಷ ಕಳೆದರೂ ವಿಲೇವಾರಿಯಾಗಿಲ್ಲ. ಅಧಿಕಾರಿಗಳು ಅನಗತ್ಯವಾಗಿ ಅಲೆದಾಡಿಸುತ್ತಿದ್ದಾರೆ ಎಂದು ಜನರು ದೂರಿದರು.

‘ಜನರು ಅರ್ಜಿ ಸಲ್ಲಿಸಿ ಎಂಟತ್ತು ವರ್ಷ ಕಾಯಬೇಕೆ? ಕೆಲಸ ಆಗುವುದಾದರೆ ಮಾಡಿಕೊಡಿ, ಕಾನೂನಿನ ಚೌಕಟ್ಟಿನಲ್ಲಿ ಮಾಡಿಕೊಡಲು ಆಗದಿದ್ದರೆ ಹಿಂಬರಹ ಕೊಡಿ. ಅವರು ಮೇಲ್ಮನವಿ ಸಲ್ಲಿಸುತ್ತಾರೆ. ಈ ರೀತಿ ಜನರನ್ನು ಅಲೆದಾಡಿಸುವುದು ಸರಿಯಲ್ಲ’ ಎಂದು ಕತ್ತೆಬೆನ್ನೂರಿನ ರೈತ ರಾಮಪ್ಪ ಜಮೀನಿನ ಹಕ್ಕು ಬದಲಾವಣೆ ವಿಳಂಬವಾಗಿರುವುದನ್ನು ಉಲ್ಲೇಖಿಸಿ ಡಿ.ಸಿ ತರಾಟೆಗೆ ತೆಗೆದುಕೊಂಡರು.

‘ಹೂವಿನಹಡಗಲಿ ಇತಿಹಾಸ ವೈಶಿಷ್ಟ್ಯವಾಗಿದೆ. ಇಲ್ಲಿನ ವಿವಿಧ ಇಲಾಖಾ ವರದಿಗಳು ಜಿಲ್ಲಾಡಳಿತಕ್ಕೆ ಸಕಾಲದಲ್ಲಿ ತಲುಪುತ್ತಿಲ್ಲ. ತಹಶೀಲ್ದಾರ್, ಉಪ ತಹಶೀಲ್ದಾರರು ಹಳ್ಳಿಗಳನ್ನು ಸುತ್ತಬೇಕು. ಕಡತಗಳನ್ನು ತ್ವರಿತವಾಗಿ ವಿಲೇಗೊಳಿಸಬೇಕು. ನಿಮ್ಮ ಆಡಳಿತ ವ್ಯವಸ್ಥೆ ಸುಧಾರಣೆ ಆಗದಿದ್ದರೆ ಶಿಸ್ತುಕ್ರಮಕ್ಕೆ ಗುರಿಯಾಗುತ್ತೀರಿ’ ಎಂದು ಎಚ್ಚರಿಸಿದರು.

ವಸತಿ, ನಿವೇಶನಕ್ಕೆ ಸಂಬಂಧಿಸಿದ ಅರ್ಜಿಗಳನ್ನು ಸ್ವೀಕರಿಸಿದ ಅವರು, ಆಶ್ರಯ ಪ್ಲಾಟ್ ಗಾಗಿ ಖಾಸಗಿಯವರು ಜಮೀನು ಕೊಡುವುದಿದ್ದರೆ ಪ್ರಸ್ತಾವ ಸಲ್ಲಿಸಿ ಎಂದು ಸೂಚಿಸಿದರು.

ಗ್ರಾಮದ ಆಂಜನೇಯ ಸ್ವಾಮಿ ದೇಗುಲಕ್ಕೆ ತೆರಳಿ ದರ್ಶನ ಪಡೆದ ಡಿ.ಸಿ, ಗ್ರಾಮದಲ್ಲಿ ಒಂದು ಸುತ್ತು ಪ್ರದಕ್ಷಿಣೆ ಹಾಕಿದರು. ಸಮಚಿತ್ತದಿಂದ ಸಮಸ್ಯೆ ಆಲಿಸಿದರು. ಗ್ರಾಮ ಪಂಚಾಯಿತಿ ಅಧ್ಯಕ್ಷ ಹಾವನೂರ ನೀಲಪ್ಪ, ತಹಶೀಲ್ದಾರ್ ಎಂ.ಪ್ರತಿಭಾ, ತಾಲ್ಲೂಕು ಪಂಚಾಯಿತಿ ಇ.ಒ ವಿಜಯಕುಮಾರ್ ಬೆಣ್ಣಿ, ಕೃಷಿ ಇಲಾಖೆ ಜಂಟಿ ನಿರ್ದೇಶಕ ಶರಣಪ್ಪ ಮುದಗಲ್, ಡಿಡಿಪಿಐ ಜಿ.ಕೊಟ್ರೇಶ, ಜಿಲ್ಲಾ ಆರೋಗ್ಯಾಧಿಕಾರಿ ಶಂಕರ ನಾಯ್ಕ ಇದ್ದರು.

ಹಕ್ಕುಪತ್ರ ತಿದ್ದುಪಡಿಗೆ 15 ದಿನಗಳ ಗಡುವು: ‘ಗಿರಿಯಾಪುರ ಮಠದಲ್ಲಿರುವ ಆಶ್ರಯ ಕಾಲೊನಿಯಲ್ಲಿ ಶಾಲೆಗೆ ಮೀಸಲಿಟ್ಟ ಜಾಗದಲ್ಲಿ ನಿವೇಶನ ರಚಿಸಿ ಹಂಚಿದ್ದಾರೆ. ನಿವೇಶನಗಳ ಜಾಗ ಶಾಲೆಗೆ ಸೇರಿದ್ದಾಗಿದೆ. ಹಿಂದೆ ಅಧಿಕಾರಿಗಳು ಮಾಡಿದ ತಪ್ಪಿಗೆ ನಾವು ತೊಂದರೆ ಅನುಭವಿಸುವಂತಾಗಿದೆ’ ಎಂದು ಗ್ರಾಮಸ್ಥರು ಗಮನ ಸೆಳೆದಾಗ, ಉಪ ತಹಶೀಲ್ದಾರ್ ಮತ್ತು ಭೂಮಾಪನ ಇಲಾಖೆಯ ಸಹಾಯಕ ನಿರ್ದೇಶಕರು ಸ್ಥಳಕ್ಕೆ ಭೇಟಿ ನೀಡಿ, ಮನೆ ಕಟ್ಟಿಕೊಂಡಿರುವ ಜನರಿಗೆ ತೊಂದರೆ ಆಗದ ರೀತಿಯಲ್ಲಿ ನಕ್ಷೆ ಬದಲಿಸಿ, 15 ದಿನದೊಳಗೆ ಸಮಸ್ಯೆ ಬಗೆಹರಿಸಿಕೊಡಬೇಕು ಎಂದು ಡಿ.ಸಿ. ಸೂಚಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು