ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶುದ್ಧ ಕುಡಿವ ನೀರಿಗೆ ಕಾಂಗ್ರೆಸ್‌ ಪ್ರತಿಭಟನೆ

ಕಲುಷಿತ ನೀರು ಸೇವಿಸಿ ಮಹಿಳೆ ಸಾವು; ₹10 ಲಕ್ಷ ಪರಿಹಾರಕ್ಕೆ ಆಗ್ರಹ
Last Updated 23 ಜನವರಿ 2023, 12:35 IST
ಅಕ್ಷರ ಗಾತ್ರ

ಹೊಸಪೇಟೆ (ವಿಜಯನಗರ): ನಗರದ ರಾಣಿಪೇಟೆಯಲ್ಲಿ ಕಲುಷಿತ ನೀರು ಸೇವಿಸಿ ಮಹಿಳೆಯೊಬ್ಬರು ಸಾವನ್ನಪ್ಪಿ, ಹಲವರು ಅಸ್ವಸ್ಥಗೊಂಡಿರುವುದನ್ನು ವಿರೋಧಿಸಿ ಜಿಲ್ಲಾ ಯುವ ಕಾಂಗ್ರೆಸ್‌ ಕಾರ್ಯಕರ್ತರು ಸೋಮವಾರ ನಗರದಲ್ಲಿ ಪ್ರತಿಭಟನೆ ನಡೆಸಿದರು.

ನಗರದ ಡಾ. ಪುನೀತ್‌ ರಾಜಕುಮಾರ್‌ ವೃತ್ತದಲ್ಲಿ ಸೇರಿದ ಮುಖಂಡರು, ಕಾರ್ಯಕರ್ತರು ಖಾಲಿ ಕೊಡಗಳೊಂದಿಗೆ ಘೋಷಣೆ ಕೂಗುತ್ತ ನಗರಸಭೆ ಕಚೇರಿ ವರೆಗೆ ಪ್ರತಿಭಟನಾ ರ್‍ಯಾಲಿ ನಡೆಸಿದರು. ನಗರದಲ್ಲಿ ಸಾರ್ವಜನಿಕರಿಗೆ ಶುದ್ಧ ಕುಡಿಯುವ ನೀರು ಪೂರೈಸಲು ತುರ್ತಾಗಿ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.

ನಂತರ ಜಿಲ್ಲಾಧಿಕಾರಿ ಟಿ. ವೆಂಕಟೇಶ್‌ ಅವರ ಹೆಸರಿಗೆ ಬರೆದ ಮನವಿ ಪತ್ರವನ್ನು ನಗರಸಭೆ ಪೌರಾಯುಕ್ತರಿಗೆ ಸಲ್ಲಿಸಿದರು. ಕಲುಷಿತ ನೀರು ಸೇವಿಸಿ ಮೃತಪಟ್ಟ ಮಹಿಳೆ ಕುಟುಂಬಕ್ಕೆ ನಗರಸಭೆ ₹10 ಲಕ್ಷ ಪರಿಹಾರ ಒದಗಿಸಬೇಕು. ಅಸ್ವಸ್ಥರಿಗೆ ತಲಾ ₹2 ಲಕ್ಷ ಪರಿಹಾರ ನೀಡಬೇಕು. ಮಹಿಳೆ ಸಾವನ್ನಪ್ಪಿದ ಘಟನೆ ಬಗ್ಗೆ ತನಿಖೆ ನಡೆಸಬೇಕು. ಎಲ್ಲಾ ವಾರ್ಡ್‌ಗಳಲ್ಲಿ 24X7 ಹಳೆ ಪೈಪ್‌ಗಳನ್ನು ತೆಗೆದು ಹೊಸದಾಗಿ ಅಳವಡಿಸಬೇಕು ಎಂದು ಆಗ್ರಹಿಸಿದರು.

ನಗರದ 35 ವಾರ್ಡ್‌ಗಳ ಪೈಕಿ 20 ವಾರ್ಡುಗಳಲ್ಲಿ ಟ್ಯಾಂಕರ್‌ ಮೂಲಕ ಕುಡಿಯುವ ನೀರು ಪೂರೈಸುತ್ತಿರುವುದು ಖಂಡನಾರ್ಹ. ನಗರದ ಹಲವು ವಾರ್ಡ್‌ಗಳ ನೀರಿನ ಮಾದರಿ ಸಂಗ್ರಹಿಸಿ, ಪರೀಕ್ಷಿಸಲಾಗಿದ್ದು ಅದು ಕುಡಿಯಲು ಯೋಗ್ಯವಲ್ಲ ಎಂದು ಗೊತ್ತಾಗಿದೆ. ಇದಕ್ಕೆ ನಿರ್ಲಕ್ಷ್ಯ ವಹಿಸಿದ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.

ಮುಖಂಡ ರಾಜಶೇಖರ್‌ ಹಿಟ್ನಾಳ್‌ ಮಾತನಾಡಿ, ಜನರಿಂದ ತೆರಿಗೆ ಪಡೆದು ಅವರಿಗೆ ಶುದ್ಧ ಕುಡಿಯುವ ನೀರು ಕೊಡಲಾಗದ ಪರಿಸ್ಥಿತಿ ಇದೆ. ಜನರಿಗೆ ಶುದ್ಧ ನೀರು ಸಿಗುತ್ತಿಲ್ಲ. ಆದರೆ, ಅವರು ತಮ್ಮ ಮನೆಗೆ ಆರು ಇಂಚಿನ ನೀರಿನ ಪೈಪ್‌ ಹಾಕಿಸಿಕೊಂಡಿದ್ದಾರೆ. ಅದಕ್ಕೆ ಪೌರಾಯುಕ್ತರು ಉತ್ತರ ಕೊಡಬೇಕು. ಅವರೊಬ್ಬರೇ ತೆರಿಗೆ ಕಟ್ಟುವುದಿಲ್ಲ. ಜನರೂ ತೆರಿಗೆ ಕಟ್ಟುತ್ತಾರೆ. ಅಮೃತ ಯೋಜನೆ, ಡಿಎಂಎಫ್‌, ನಗರೋತ್ಥಾನ ಯೋಜನೆಗಳಿಂದ ಸಾವಿರಾರು ಕೋಟಿ ಅನುದಾನ ಬರುತ್ತಿದ್ದರೂ ನೀರಿಲ್ಲ, ಒಳಚರಂಡಿ ಇಲ್ಲ, ಮನೆಗಳಿಲ್ಲ. 15 ವರ್ಷಗಳಲ್ಲಿ ಇವರ ಸಾಧನೆ ಏನು? ತಪ್ಪು ಆಗಿದೆ ಎಂದು ಹೇಳಿದ್ದಾರೆ. ಕೆಲಸ ಮಾಡಲಾಗದಿದ್ದರೆ ರಾಜೀನಾಮೆ ಕೊಟ್ಟು ಮನೆಗೆ ಹೋಗಬೇಕು ಎಂದರು.

ಬೇರೆ ನಗರಗಳಲ್ಲಿ ನಗರಸಭೆಯವರು ಶುದ್ಧ ಕುಡಿಯುವ ನೀರಿನ ಘಟಕಗಳನ್ನು ಹಾಕಿದ್ದಾರೆ. ಆದರೆ, ನಗರದಲ್ಲಿ ಒಂದೇ ಒಂದು ಇಲ್ಲ. ಖಾಸಗಿಯವರ ಬಳಿ ₹10 ಪಡೆದು 25 ಲೀಟರ್‌ ನೀರು ಬಡವರು ಖರೀದಿಸುತ್ತಿದ್ದಾರೆ. ನಗರಸಭೆಯವರು ಕುಡಿಯುವ ನೀರಿನ ಘಟಕಗಳನ್ನು ಸ್ಥಾಪಿಸಿ ₹2ಕ್ಕೆ 25 ಲೀಟರ್ ನೀರು ಕೊಡಬೇಕು ಎಂದು ಹೇಳಿದರು.

ಇನ್ನೊಬ್ಬ ಮುಖಂಡ ದೀಪಕ್‌ ಸಿಂಗ್‌ ಮಾತನಾಡಿ, ಚುನಾವಣೆ ಸಂದರ್ಭದಲ್ಲಿ ನೀರಿನ ಟ್ಯಾಂಕರ್‌ ಬಿಟ್ಟು ಪ್ರಚಾರ ಪಡೆಯುವುದಲ್ಲ. ಜನರಿಗೆ ಸದಾ ನೀರು ಕೊಡಬೇಕು. ಸಾರ್ವಜನಿಕರ ತೆರಿಗೆ ಹಣ ಯಾವ ರೀತಿ ಅವರಿಗಾಗಿ ಬಳಕೆಯಾಗಬೇಕೋ ಅದೇ ರೀತಿ ಬಳಕೆ ಆಗಬೇಕು. ಆದರೆ, ಆ ಕೆಲಸ ಆಗುತ್ತಿಲ್ಲ ಎಂದು ಹೇಳಿದರು.

ಯುವ ಕಾಂಗ್ರೆಸ್‌ ಜಿಲ್ಲಾಧ್ಯಕ್ಷ ಸಿದ್ದು ಹಳ್ಳೇಗೌಡ, ರಾಜ್ಯ ಘಟಕದ ಉಪಾಧ್ಯಕ್ಷ ಸಿರಿಲ್‌ ಪ್ರಭು, ರಾಜ್ಯ ಕಾರ್ಯದರ್ಶಿ ಅನಂತಕುಮಾರ, ಜಂಟಿ ಕಾರ್ಯದರ್ಶಿಗಳಾದ ಗಣೇಶ, ಆಜಾದ್‌, ಹೊಸಪೇಟೆ ಬ್ಲಾಕ್‌ ಸಮಿತಿ ಅಧ್ಯಕ್ಷ ಭರತ್‌ ಕುಮಾರ್‌ ಸಿ.ಆರ್., ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ವಿನಾಯಕ ಶೆಟ್ಟರ್‌, ಸಾಮಾಜಿಕ ಜಾಲತಾಣ ಕಲಬುರಗಿ ವಿಭಾಗದ ಸಂಚಾಲಕ ನಿಂಬಗಲ್‌ ರಾಮಕೃಷ್ಣ, ಮಹಿಳಾ ಘಟಕದ ತಾಲ್ಲೂಕು ಅಧ್ಯಕ್ಷೆ ಯೋಗಲಕ್ಷ್ಮಿ, ನಗರಸಭೆ ಸದಸ್ಯರಾದ ಕೆ. ಮಹೇಶ್‌, ಗೌಸ್‌, ಶೇಖರ್‌, ವಿಜಯನಗರ ಜಿಲ್ಲಾ ಪ್ರಚಾರ ಸಮಿತಿ ಅಧ್ಯಕ್ಷ ಇಮಾಮ್‌ ನಿಯಾಜಿ, ಮುಖಂಡರಾದ ದೀಪಕ್‌ ಸಿಂಗ್‌, ಎಚ್‌.ಜಿ. ವಿರೂಪಾಕ್ಷಿ, ಸೈಯದ್‌ ಮಹಮ್ಮದ್‌, ಕುಬೇರ್‌ ದಲ್ಲಾಳಿ, ಜೀಶಾನ್‌, ಪ್ರದೀಪ್‌ ಮತ್ತಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT