ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಜೆಪಿ ಮುಖಂಡರ ಭಾವಚಿತ್ರಗಳ ಮೇಲೆ ಮೊಟ್ಟೆ ಒಡೆದು, ಸಗಣಿ ಹಾಕಿ ಪ್ರತಿಭಟನೆ

Last Updated 19 ಆಗಸ್ಟ್ 2022, 10:07 IST
ಅಕ್ಷರ ಗಾತ್ರ

ಹೊಸಪೇಟೆ (ವಿಜಯನಗರ): ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯನವರ ಕಾರಿನ ಮೇಲೆ ಮೊಟ್ಟೆ ಎಸೆದಿರುವ ಕ್ರಮವನ್ನು ಖಂಡಿಸಿ ಜಿಲ್ಲಾ ಕಾಂಗ್ರೆಸ್‌ ಕಾರ್ಯಕರ್ತರು ಶುಕ್ರವಾರ ನಗರದಲ್ಲಿ ಪ್ರತಿಭಟನೆ ನಡೆಸಿದರು.

ನಗರದ ಡಾ.ಬಿ.ಆರ್‌. ಅಂಬೇಡ್ಕರ್‌ ವೃತ್ತದಲ್ಲಿ ಸೇರಿದ ನೂರಾರು ಕಾರ್ಯಕರ್ತರು, ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್‌ಕುಮಾರ್‌ ಕಟೀಲ್‌, ಸಂಸದ ಪ್ರತಾಪ ಸಿಂಹ, ಶಾಸಕ ಕೆ.ಎಸ್‌. ಈಶ್ವರಪ್ಪ, ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಭಾವಚಿತ್ರವಿದ್ದ ಪೋಸ್ಟರ್‌ ನೆಲದ ಮೇಲೆ ಹಾಕಿ, ಅದರ ಮೇಲೆ ಮೊಟ್ಟೆಗಳನ್ನು ಒಡೆದು, ಸಗಣಿ ಹಾಕಿ, ಧಿಕ್ಕಾರ ಎಂದು ಘೋಷಣೆ ಕೂಗುವುದರ ಮೂಲಕ ಪ್ರತಿಭಟನಾ ರ್‍ಯಾಲಿಗೆ ಚಾಲನೆ ನೀಡಿದರು. ಕಾಲೇಜು ರಸ್ತೆ ಮೂಲಕ ಜಿಲ್ಲಾಧಿಕಾರಿ ಕಚೇರಿ ವರೆಗೆ ರ್‍ಯಾಲಿ ನಡೆಸಿದ ಕಾರ್ಯಕರ್ತರು, ಅನಂತರ ಮುಖ್ಯಮಂತ್ರಿಗೆ ಬರೆದ ಮನವಿ ಪತ್ರವನ್ನು ಹೆಚ್ಚುವರಿ ಜಿಲ್ಲಾಧಿಕಾರಿ ಎನ್‌. ಮಹೇಶಬಾಬು ಅವರಿಗೆ ಸಲ್ಲಿಸಿದರು.

ಶಾಸಕ ಎಲ್‌.ಬಿ.ಪಿ. ಭೀಮಾ ನಾಯ್ಕ ಮಾತನಾಡಿ, ಸಿದ್ದರಾಮಯ್ಯನವರು ಹುಲಿ ಇದ್ದಂತೆ ಅವರನ್ನು ಬಿಜೆಪಿ ಕೆಣಕಿ ಕಷ್ಟ ಮೈಮೇಲೆ ಎಳೆದುಕೊಂಡಿದೆ. ಇತ್ತೀಚೆಗೆ ದಾವಣಗೆರೆಯಲ್ಲಿ ನಡೆದ ಸಿದ್ದರಾಮೋತ್ಸವದ ಯಶಸ್ಸಿನಿಂದ ಬಿಜೆಪಿ ಹತಾಶೆಯಾಗಿದೆ. ಅದಕ್ಕಾಗಿಯೇ ಮೊಟ್ಟೆ ಎಸೆದು ದುಷ್ಕೃತ್ಯ ಎಸಗಿದೆ. ಒಂದುವೇಳೆ ಸಿದ್ದರಾಮಯ್ಯನವರು ಕರೆ ಕೊಟ್ಟರೆ ಮುಖ್ಯಮಂತ್ರಿ, ಸಚಿವರುಗಳು ರಾಜ್ಯದಲ್ಲಿ ಓಡಾಡಲು ಕಷ್ಟವಾಗುತ್ತದೆ. ನಮ್ಮ ಕಾರ್ಯಕರ್ತರಿಗೂ ಎಲ್ಲ ರೀತಿಯ ಸಾಮರ್ಥ್ಯ ಇದೆ ಎಂದು ಎಚ್ಚರಿಸಿದರು.

ಸಿದ್ದರಾಮಯ್ಯನವರು ಈ ರಾಜ್ಯದಲ್ಲಿ ಜವಾಬ್ದಾರಿ ಸ್ಥಾನದಲ್ಲಿದ್ದಾರೆ. ಅಂಥವರಿಗೆ ರಕ್ಷಣೆ ಕೊಡಲು ಸಾಧ್ಯವಿಲ್ಲ ಎಂದಾದರೆ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಕುಸಿದಿದೆ ಎಂದರ್ಥ. ಕೆಲ ಸಮಾಜಘಾತುಕ ಶಕ್ತಿಗಳು ಸಿದ್ದರಾಮಯ್ಯನವರು ಕಾರಿನ ಮೇಲೆ ಮೊಟ್ಟೆ ಎಸೆದಿವೆ. ಕೂಡಲೇ ಅವರನ್ನು ಬಂಧಿಸಬೇಕು. ಕೊಡಗು ಜಿಲ್ಲೆಯ ಎಸ್ಪಿಯವರನ್ನು ಕೂಡಲೇ ಅಮಾನತುಗೊಳಿಸಬೇಕು ಎಂದು ಹಕ್ಕೊತ್ತಾಯ ಮಾಡಿದರು.

ಆ. 26ಕ್ಕೆ ಕಾಂಗ್ರೆಸ್‌ ಪಕ್ಷದಿಂದ ‘ಕೊಡಗು ಚಲೋ’ ಕಾರ್ಯಕ್ರಮ ಹಮ್ಮಿಕೊಂಡಿದ್ದೇವೆ. ಸಿದ್ದರಾಮಯ್ಯನವರು ಹಾಗೂ ಕಾಂಗ್ರೆಸ್‌ ಪಕ್ಷದ ಶಕ್ತಿ ಏನೆಂಬುದು ತೋರಿಸುತ್ತೇವೆ. ಕೆ.ಎಸ್‌. ಈಶ್ವರಪ್ಪ ಅವರಿಗೆ ಬುದ್ಧಿಭ್ರಮಣೆಯಾಗಿದ್ದು, ಏನೇನೋ ಮಾತನಾಡುತ್ತಾರೆ. ಅವರು ಸಿದ್ದರಾಮಯ್ಯನವರ ಕಾಲು ಧೂಳಿಗೂ ಸಮನಲ್ಲ. ಇನ್ನು, ಸಿ.ಟಿ. ರವಿಯವರು ಚಿಕ್ಕಮಗಳೂರಿನಲ್ಲಿ ‘ಲೂಟಿ ರವಿ’ ಎಂದೇ ಖ್ಯಾತಿ ಗಳಿಸಿದ್ದಾರೆ. ಅವರು ತೋಚಿದೆಲ್ಲ ಮಾತನಾಡುವುದರ ಬದಲು ಬಾಯಿಗೆ ಬೀಗ ಹಾಕಿಕೊಂಡು ಇರಬೇಕು ಎಂದರು.

ಕಾಂಗ್ರೆಸ್‌ ಬಳ್ಳಾರಿ ನಗರ ಜಿಲಾ ಅಧ್ಯಕ್ಷ ಜಿ.ಎಸ್.ಮೊಹಮ್ಮದ್ ರಫೀಕ್, ಗ್ರಾಮೀಣ ಜಿಲ್ಲಾ ಅಧ್ಯಕ್ಷ ಬಿ.ವಿ ಶಿವಯೋಗಿ, ಶಾಸಕ ಜೆ.ಎನ್.ಗಣೇಶ್, ಮುಖಂಡರಾದ ಗುಜ್ಜಲ ನಾಗರಾಜ್, ಗುಜ್ಜಲ ರಘು, ಹೆಗ್ಡಾಳ್ ರಾಮಣ್ಣ, ಕುರಿ ಶಿವಮೂರ್ತಿ, ರಾಜಶೇಖರ್ ಹಿಟ್ನಾಳ, ಚಂದ್ರಶೇಖರಯ್ಯ, ನಿಂಬಗಲ್ ರಾಮಕೃಷ್ಣ, ಮೊಹಮ್ಮದ್‌ ಇಮಾಮ್ ನಿಯಾಜಿ, ಮಹಿಳಾ ಘಟಕದ ಅಧ್ಯಕ್ಷೆ ಆಶಾಲತಾ ಸೋಮಪ್ಪ, ಕೆ.ಎಂ.ಹಾಲಪ್ಪ, ಎ.ಮಾನಯ್ಯ, ಹರ್ಷವರ್ಧನ್, ಬೇಲೂರು ಅಂಜಪ್ಪ, ಪ್ರೇಮ್ ಕುಮಾರ್, ದಾರುಕೇಶ್ ಹೊಸಳ್ಳಿ, ಗುರುಸಿದ್ದನ ಗೌಡ ಇತರರಿದ್ದರು.

ಸಿಪಿಐ ಅಮಾನತುಗೊಳಿಸಲು ಆಗ್ರಹ
‘ಹಗರಿಬೊಮ್ಮನಹಳ್ಳಿ ಸಿಪಿಐ ಮಂಜುನಾಥ ಅವರು, ಆ. 15ರಂದು ಹಮ್ಮಿಕೊಂಡಿದ್ದ 1.5 ಕಿ.ಮೀ ತಿರಂಗಾ ಧ್ವಜದ ಮೆರವಣಿಗೆಗೆ ವಿನಾಕಾರಣ ಅಡ್ಡಿಪಡಿಸಿದ್ದಾರೆ. ಮೆರವಣಿಗೆಯಲ್ಲಿ ಪಾಲ್ಗೊಳ್ಳಲು ಬಂದಿದ್ದವರನ್ನು ವಾಪಸ್‌ ಕಳಿಸಿದ್ದಾರೆ. ಮಧ್ಯಾಹ್ನ ಬೇಗ ಕಾರ್ಯಕ್ರಮ ಮುಗಿಸಲು ಒತ್ತಡ ಹಾಕಿದ್ದಾರೆ. ಬಿಜೆಪಿ ಮುಖಂಡರ ಅಣತಿಯಂತೆ ನಡೆದುಕೊಂಡು ಬಿಜೆಪಿಯ ಏಜೆಂಟ್‌ನಂತೆ ಕೆಲಸ ಮಾಡುತ್ತಿರುವ ಅವರನ್ನು ಕೂಡಲೇ ಅಮಾನತುಗೊಳಿಸಬೇಕು’ ಎಂದು ಶಾಸಕ ಎಲ್‌.ಬಿ.ಪಿ. ಭೀಮಾ ನಾಯ್ಕ ಆಗ್ರಹಿಸಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಎಲ್ಲೆಡೆ ತ್ರಿವರ್ಣ ಧ್ವಜದ ಮೆರವಣಿಗೆ ಮಾಡಲಾಗಿದೆ. ಹಗರಿಬೊಮ್ಮನಹಳ್ಳಿಯಲ್ಲಿ ಬೇರೆ ಕಾನೂನು ಇದೆಯೇ? ಒಂದುಪಕ್ಷದ ಪರವಾಗಿ ಕೆಲಸ ಮಾಡುತ್ತಿರುವ ಅವರ ವಿರುದ್ಧ ಕ್ರಮ ಜರುಗಿಸಬೇಕೆಂದು ಎಸ್ಪಿಯವರಿಗೆ ಲಿಖಿತ ರೂಪದಲ್ಲಿ ದೂರು ಕೊಡುವೆ’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT