ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೇಂದ್ರದ ವಿರುದ್ಧ ಸೆ. 6ರಂದು ಪ್ರತಿಭಟನೆಗೆ ರೈತ ಸಂಘ ನಿರ್ಧಾರ

ವಿದ್ಯುತ್‌ ಕ್ಷೇತ್ರದ ಖಾಸಗೀಕರಣದಿಂದ 24 ಲಕ್ಷ ಪಂಪ್‌ಸೆಟ್‌ಗಳಿಗೆ ಮೀಟರ್‌
Last Updated 30 ಆಗಸ್ಟ್ 2022, 14:19 IST
ಅಕ್ಷರ ಗಾತ್ರ

ಹೊಸಪೇಟೆ: ‘ವಿದ್ಯುತ್‌ ಕ್ಷೇತ್ರದ ಖಾಸಗೀಕರಣದಿಂದ ರಾಜ್ಯದ 24 ಲಕ್ಷ ಪಂಪ್‌ಸೆಟ್‌ಗಳಿಗೆ ಮೀಟರ್‌ ಅಳವಡಿಸಬೇಕಾಗುತ್ತದೆ. ಈಗಾಗಲೇ ಸಂಕಷ್ಟದಲ್ಲಿರುವ ರೈತರನ್ನು ಮತ್ತಷ್ಟು ಸಂಕಷ್ಟಕ್ಕೆ ದೂಡುವ ಹುನ್ನಾರ ಇದರಲ್ಲಿದ್ದು, ಇದರ ವಿರುದ್ಧ ಸೆ. 6ರಂದು ನಗರದಲ್ಲಿ ಜಿಲ್ಲಾಮಟ್ಟದ ಹೋರಾಟ ನಡೆಸಲು ನಿರ್ಧರಿಸಲಾಗಿದೆ’ ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಪ್ರಧಾನ ಕಾರ್ಯದರ್ಶಿ ಜೆ. ಕಾರ್ತಿಕ್‌ ತಿಳಿಸಿದರು.

ಖಾಸಗೀಕರಣದ ವಿರುದ್ಧ ರಾಜ್ಯದ ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ ಪ್ರತಿಭಟನೆ ನಡೆಸಲಾಗುವುದು. ಸೆ. 12ರಂದು ಬೆಂಗಳೂರಿನಲ್ಲಿ ದೊಡ್ಡ ಮಟ್ಟದ ಹೋರಾಟ ಮಾಡಲಾಗುವುದು. ಕೃಷಿ ಕಾಯ್ದೆ ಹಿಂಪಡೆಯುವವರೆಗೆ ಯಾವ ರೀತಿಯ ಹೋರಾಟ ನಡೆಸಲಾಗಿತ್ತೋ ಅದೇ ರೀತಿ ಈ ಹೋರಾಟ ಕೂಡ ನಡೆಯಲಿದೆ ಎಂದು ಮಂಗಳವಾರ ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಹೇಳಿದರು.

ರೈತರ ಪಂಪ್‌ಸೆಟ್‌ಗಳಿಗೆ ಮೀಟರ್‌ ಅಳವಡಿಸಿದರೆ ರೈತರು ಉಳಿಯುವುದಿಲ್ಲ. ಬೆಳೆದ ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ ಸಿಗದ ಕಾರಣ ರೈತರು ತೀವ್ರ ಸಮಸ್ಯೆ ಎದುರಿಸುತ್ತಿದ್ದಾರೆ. ರಸಗೊಬ್ಬರ, ಕೃಷಿ ಪರಿಕರಗಳ ಮೇಲೆ ಜಿ.ಎಸ್‌.ಟಿ. ಹಾಕಿರುವುದರಿಂದ ಅವುಗಳ ಬೆಲೆ ಭಾರಿ ಹೆಚ್ಚಳವಾಗಿದೆ. ಕೇಂದ್ರ ಸರ್ಕಾರ ಸತತವಾಗಿ ರೈತ ವಿರೋಧಿ ನೀತಿಗಳನ್ನು ಜಾರಿಗೆ ತರುತ್ತಿದೆ.
ಇನ್ನೊಂದೆಡೆ ಕಾರ್ಪೊರೇಟ್‌ನವರ ದೊಡ್ಡ ಮೊತ್ತದ ಸಾಲ ಮನ್ನಾ ಮಾಡಿ, ಅವರಿಗೆ ಎಲ್ಲ ರೀತಿಯ ಅನುಕೂಲ ಮಾಡಿಕೊಡುತ್ತಿದೆ ಎಂದು ಆರೋಪಿಸಿದರು.

ರೈತರಿಗೆ ಎಥೆನಾಲ್‌ ಘಟಕ ಆರಂಭಿಸಲು ಸರ್ಕಾರ ಎಲ್ಲ ರೀತಿಯ ನೆರವು ಕೊಡಬೇಕು. ಸರ್ಕಾರ ಗೋಶಾಲೆ ಆರಂಭಿಸುವುದರ ಬದಲು ರೈತರಿಗೆ ಗೋಮಾಳ ನಡೆಸುವುದಕ್ಕಾಗಿ ಸಬ್ಸಿಡಿ ನೀಡಬೇಕು. ಐದರಿಂದ ಹತ್ತು ಎಕರೆ ಜಮೀನು ಹೊಂದಿರುವ ರೈತರಿಗೆ ಸೋಲಾರ್‌ ಘಟಕ ಆರಂಭಿಸಲು ಅವಕಾಶ ಮಾಡಿಕೊಡಬೇಕು. ಅನ್ನ ಕೊಡುವ ಅನ್ನದಾತನ ಬದುಕು ಹಸನುಗೊಳಿಸಬೇಕು. ಕಾರ್ಪೊರೇಟ್‌ ಕುಳಗಳನ್ನು ಅಭಿವೃದ್ಧಿ ಪಡಿಸುವುದಲ್ಲ ಎಂದು ಹೇಳಿದರು.

ಈ ವರ್ಷ ಗುದ್ದಲಿ ಪೂಜೆ, ಮುಂದಿನ ವರ್ಷ ಕಾರ್ಖಾನೆ’
‘ಪ್ರವಾಸೋದ್ಯಮ ಸಚಿವ ಆನಂದ್‌ ಸಿಂಗ್‌ ಅವರು ಇದುವರೆಗೆ ಸುಮ್ಮನಿದ್ದು ಈಗ ಚುನಾವಣೆ ಸಮೀಪಿಸುತ್ತಿರುವುದರಿಂದ ‘ಹಂಪಿ ಶುಗರ್ಸ್‌’ ಹೆಸರಿನ ಸಕ್ಕರೆ ಕಾರ್ಖಾನೆಗೆ ಗುದ್ದಲಿ ಪೂಜೆ ನೆರವೇರಿಸಲಾಗುವುದು ಎಂದು ಹೇಳಿದ್ದಾರೆ. ಅದು ಗುದ್ದಲಿ ಪೂಜೆಗೆ ಸೀಮಿತವಾಗಿರಲಿದ್ದು, ಐದು ವರ್ಷ ಕಳೆದ ನಂತರ ಚುನಾವಣೆ ಸಮೀಪಿಸಿದಾಗ ಕಾರ್ಖಾನೆ ಆರಂಭಿಸುತ್ತಾರೆ. ಅವರಿಗೆ ನಿಜವಾಗಿಯೂ ಇಚ್ಛಾಶಕ್ತಿಯಿದ್ದರೆ ಬರುವ ವಿಧಾನಸಭೆ ಚುನಾವಣೆಯೊಳಗೆ ಸಕ್ಕರೆ ಕಾರ್ಖಾನೆ ಆರಂಭಿಸಬೇಕು’ ಎಂದು ರೈತ ಸಂಘದ ಜಿಲ್ಲಾ ಸಂಚಾಲಕ ಆರ್.ಆರ್‌. ತಾಯಪ್ಪ ಆಗ್ರಹಿಸಿದರು.

‘ಈಗ ಚುನಾವಣೆ ಬರುತ್ತಿರುವುದರಿಂದ ಸಚಿವರು ರೈತರ ಕಣ್ಣೊರೆಸುವ ತಂತ್ರ ಅನುಸರಿಸುತ್ತಿದ್ದಾರೆ. ಐ.ಎಸ್‌.ಆರ್‌. ಕಾರ್ಖಾನೆ ಬಂದ್‌ ಆಗಿ ಐದಾರೂ ವರ್ಷಗಳಾಗುತ್ತಿವೆ. ಇಷ್ಟು ದಿನ ಸುಮ್ಮನಿದ್ದವರೂ ಈಗೇಕೇ ಅದರ ಬಗ್ಗೆ ಮಾತಾಡುತ್ತಿದ್ದಾರೆ’ ಎಂದು ಪ್ರಶ್ನಿಸಿದರು.

ಸಂಘದ ಜಿಲ್ಲಾ ಸಂಚಾಲಕರಾದ ಸಣ್ಣಕ್ಕಿ ರುದ್ರಪ್ಪ, ಟಿ. ನಾಗರಾಜ್‌, ತಾಲ್ಲೂಕು ಘಟಕದ ಅಧ್ಯಕ್ಷ ಎಚ್‌.ಜಿ. ಮಲ್ಲಿಕಾರ್ಜುನ, ಗೌರವ ಅಧ್ಯಕ್ಷ ತಾಯಪ್ಪ, ಉಪಾಧ್ಯಕ್ಷ ಹೇಮರೆಡ್ಡಿ, ತಾಲ್ಲೂಕು ಪ್ರಧಾನ ಕಾರ್ಯದರ್ಶಿ ಮಹಾಂತೇಶ್‌ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT