ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಳೆ ದರದಲ್ಲೇ ರಸಗೊಬ್ಬರ ಮಾರಾಟಕ್ಕೆ ಆಗ್ರಹ

Last Updated 3 ಮೇ 2021, 9:03 IST
ಅಕ್ಷರ ಗಾತ್ರ

ಹೊಸಪೇಟೆ (ವಿಜಯನಗರ): ‘ಈ ಸಲ ರಾಜ್ಯದಲ್ಲಿ ಮುಂಗಾರು ಉತ್ತಮವಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿರುವುದರಿಂದ ಸಕಾಲಕ್ಕೆ ಕೃಷಿ ಚಟುವಟಿಕೆ ಆರಂಭವಾಗಲಿದೆ. ಏಕಾಏಕಿ ರಸಗೊಬ್ಬರ ಬೆಲೆ ಏರಿಸಿರುವುದರಿಂದ ರೈತರಿಗೆ ತೊಂದರೆಯಾಗಲಿದ್ದು, ಹಿಂದಿನ ಹಳೆಯ ದರದಲ್ಲೇ ರಸಗೊಬ್ಬರ ಮಾರಾಟ ಮಾಡಿ ರೈತರ ನೆರವಿಗೆ ಬರಬೇಕು’ ಎಂದು ವಿಜಯನಗರ ನಾಗರಿಕ ವೇದಿಕೆ ಆಗ್ರಹಿಸಿದೆ.

ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ, ಜಿಲ್ಲಾ ಉಸ್ತುವಾರಿ ಸಚಿವ ಆನಂದ್‌ ಸಿಂಗ್‌ ಅವರ ಹೆಸರಿಗೆ ಬರೆದ ಮನವಿ ಪತ್ರವನ್ನು ಸೋಮವಾರ ನಗರದಲ್ಲಿ ಉಪವಿಭಾಗಾಧಿಕಾರಿ ಸಲ್ಲಿಸಿ ಒತ್ತಾಯಿಸಿದರು.

‘ಕಳೆದ ಸಾಲಿನ 11.55 ಲಕ್ಷ ಮೆಟ್ರಿಕ್ ಟನ್ ರಸಗೊಬ್ಬರ ದಾಸ್ತಾನು ಗೋದಾಮಿನಲ್ಲಿದೆ‌. ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಸೇರಿದಂತೆ 11 ಸಾವಿರ ರಸಗೊಬ್ಬರ ಮಳಿಗೆ ಮೂಲಕ ಹಳೇ ದರದಲ್ಲಿ ದಾಸ್ತಾನು ಪೂರೈಕೆ ಮಾಡಿ ರೈತರಿಗೆ ಅನುಕೂಲ ಮಾಡಿಕೊಡಲಾಗುತ್ತದೆ ಎಂದು ಕೃಷಿ ಆಯುಕ್ತರು ಪತ್ರಿಕಾ ಹೇಳಿಕೆ ನೀಡಿದ್ದರು. ಆದರೆ, ವಿಜಯನಗರ ಸೇರಿದಂತೆ ಸುತ್ತಮುತ್ತಲಿನ ತಾಲ್ಲೂಕು ಕೇಂದ್ರಗಳಲ್ಲಿ ಹೆಚ್ಚಿನ ಬೆಲೆಗೆ ರಸಗೊಬ್ಬರ ಮಾರಾಟ ಮಾಡಲಾಗುತ್ತಿದೆ’ ಎಂದು ಆರೋಪಿಸಿದರು.

‘ಕೇಂದ್ರ ಸರ್ಕಾರ 2022ರ ಒಳಗೆ ರೈತರ ಆದಾಯ ದ್ವಿಗುಣಗೊಳಿಸುವ ಮಾತುಗಳನ್ನು ಆಡುತ್ತಿದೆ. ಇನ್ನೊಂದೆಡೆ ರಸಗೊಬ್ಬರ ಬೆಲೆ ಏರಿಸಿ ಅವರ ಮೇಲೆ ಹೊರೆ ಹಾಕಿರುವುದು ಖಂಡನಾರ್ಹ. ಮೇ ಎರಡನೇ ವಾರದಿಂದ ರಾಜ್ಯದಲ್ಲಿ ಮುಂಗಾರು ಕೃಷಿ ಚಟುವಟಿಕೆಗಳು ಬಿರುಸಾಗಲಿವೆ. ಸರ್ಕಾರವು ಈ ಕೂಡಲೇ ಹಳೆ ದರದಲ್ಲೇ ರಸಗೊಬ್ಬರ ಪೂರೈಕೆಗೆ ಅಗತ್ಯ ತುರ್ತು ಕ್ರಮ ಕೈಗೊಳ್ಳಬೇಕು’ ಎಂದು ಆಗ್ರಹಿಸಿದರು.

ವೇದಿಕೆಯ ಅಧ್ಯಕ್ಷ ವೈ. ಯಮುನೇಶ, ಸಣ್ಣ ಮಾರೆಪ್ಪ, ಆಂಜನೇಯಲು, ಸುಭಾಷ್ ಚಂದ್ರ, ಕಂಪ್ಲಿ ನಾಗರಾಜ, ಕೆ.ಸುರೇಶ್, ಎಚ್.ತಿಪ್ಪೇಸ್ವಾಮಿ, ಆರ್.ರಮೇಶ್ ಗೌಡ, ರಾಘವೇಂದ್ರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT