ಸೋಮವಾರ, ಆಗಸ್ಟ್ 8, 2022
24 °C
ಹಂಪಿ ಟಾಸ್ಕ್‌ ಫೋರ್ಸ್‌, ವಿಜಯನಗರ ಸಂಸ್ಕೃತಿ ಸೇನೆಯಿಂದ ವಿಶಿಷ್ಟ ಕಾರ್ಯ

ಹೊಸಪೇಟೆ: ಜನರಲ್ಲಿ ಜಾಗೃತಿ, ಪ್ರಾಣಿಗಳಿಗೆ ಆಹಾರ

ಶಶಿಕಾಂತ ಎಸ್‌. ಶೆಂಬೆಳ್ಳಿ Updated:

ಅಕ್ಷರ ಗಾತ್ರ : | |

Prajavani

ಹೊಸಪೇಟೆ (ವಿಜಯನಗರ): ಕೋವಿಡ್‌ ಸಂಕಷ್ಟದಲ್ಲಿ ಪ್ರಾಣಿಗಳ ಹಸಿವು ನೀಗಿಸಿ, ಜನರಲ್ಲಿ ಕೊರೊನಾ ಸಾಂಕ್ರಾಮಿಕ ಕುರಿತು ಅರಿವು ಮೂಡಿಸುವ ಮಹತ್ವದ ಕೆಲಸವನ್ನು ಇಲ್ಲಿನ ಹಂಪಿ ಟಾಸ್ಕ್‌ಫೋರ್ಸ್‌ ವಾಟ್ಸ್‌ ಆ್ಯಪ್‌ ಗ್ರೂಪ್‌, ವಿಜಯನಗರ ಸ್ಮಾರಕ ಸಂಸ್ಕೃತಿ ಸಂರಕ್ಷಣಾ ಸೇನೆ ಸದಸ್ಯರು ಮಾಡುತ್ತಿದ್ದಾರೆ.

ಕೋವಿಡ್‌ನಿಂದ ಹಂಪಿಯಲ್ಲಿ ಎಲ್ಲ ರೀತಿಯ ಚಟುವಟಿಕೆಗಳು ಸ್ಥಗಿತಗೊಂಡ ನಂತರ ಅಲ್ಲಿರುವ ಮಂಗಗಳು, ಬೀದಿ ನಾಯಿಗಳು ಮತ್ತು ಬಿಡಾಡಿ ದನಗಳಿಗೆ ನಿತ್ಯ ಬಿಸ್ಕತ್‌, ಮೇವು, ಹಣ್ಣು ಹಂಪಲು ಕೊಟ್ಟು ಅವುಗಳ ಹಸಿವು ನೀಗಿಸುತ್ತಿದ್ದಾರೆ. ಸತತ 53 ದಿನಗಳಿಂದ ಈ ಕಾರ್ಯ ನಿರಂತರವಾಗಿ ಮಾಡುತ್ತಿದ್ದಾರೆ. ಮೊದಲ ಅಲೆ ಕಾಣಿಸಿಕೊಂಡಾಗ ಸತತ 180 ದಿನ ಈ ಸೇವೆ ಮಾಡಿದ್ದರು.

ಸಮಾಜದ ದುರ್ಬಲ ವರ್ಗದವರಿಗೆ ₹750 ಮೊತ್ತದ ದಿನಸಿ ಕಿಟ್‌ಗಳನ್ನು ವಿತರಿಸಿದ್ದಾರೆ. ತಾಲ್ಲೂಕಿನ ಕಮಲಾಪುರ, ಹಂಪಿ ಸುತ್ತಮುತ್ತಲಿನ ಸರ್ಕಾರಿ ಕಚೇರಿಗಳ ಕಾಂಪೌಂಡ್‌ ಮೇಲೆ ಕೊರೊನಾಗೆ ಸಂಬಂಧಿಸಿದ ಗೋಡೆ ಬರಹಗಳನ್ನು ಬಿಡಿಸಿ, ಸಾರ್ವಜನಿಕರಲ್ಲಿ ಅರಿವು ಮೂಡಿಸಲು ಮುಂದಾಗಿದ್ದಾರೆ.

ಹಂಪಿಯ ರಂಜು ಆರ್ಟ್ಸ್‌ ಸದಸ್ಯರಿಗೆ ಎರಡೂ ಸಂಘಟನೆಗಳಿಂದ ಬಣ್ಣ ಒದಗಿಸಲಾಗುತ್ತಿದ್ದು, ಮೂವರು ಕಲಾವಿದರು ಉಚಿತವಾಗಿ ಗೋಡೆ ಬರಹ ಬಿಡಿಸುತ್ತಿದ್ದಾರೆ. ಕಮಲಾಪುರದ ಮಾರುಕಟ್ಟೆ, ಯಾತ್ರಿ ನಿವಾಸ, ಪೊಲೀಸ್‌ ಠಾಣೆ, ಸರ್ಕಾರಿ ಆಸ್ಪತ್ರೆ, ಹಂಪಿ ವಿಶ್ವ ಪಾರಂಪರಿಕ ಪ್ರದೇಶ ನಿರ್ವಹಣಾ ಪ್ರಾಧಿಕಾರದ ಕಚೇರಿ ಗೋಡೆಗಳ ಮೇಲೆ ಕೊರೊನಾ ಜಾಗೃತಿ ಬರಹಗಳು ಈಗ ಎಲ್ಲರ ಗಮನ ಸೆಳೆಯುತ್ತಿವೆ.

ಅಂದ ಹಾಗೆ, ಟಾಸ್ಕ್‌ಫೋರ್ಸ್‌ನಲ್ಲಿ ಭಾರತೀಯ ಪುರಾತತ್ವ ಸರ್ವೇಕ್ಷಣ ಇಲಾಖೆ, ಪೊಲೀಸ್‌ ಇಲಾಖೆ, ಆರೋಗ್ಯ ಇಲಾಖೆ, ಅರಣ್ಯ ಇಲಾಖೆ, ಪ್ರಾಧಿಕಾರದಲ್ಲಿ ಕೆಲಸ ನಿರ್ವಹಿಸುತ್ತಿರುವ ಅಧಿಕಾರಿಗಳು, ಸಿಬ್ಬಂದಿ ಸೇರಿದ್ದಾರೆ. ಇನ್ನು, ವಿಜಯನಗರ ಸ್ಮಾರಕ ಸಂಸ್ಕೃತಿ ಸಂರಕ್ಷಣ ಸೇನೆಯಲ್ಲಿ ಸ್ಥಳೀಯ ಯುವಕರು, ಸ್ಮಾರಕಪ್ರಿಯರು ಇದ್ದಾರೆ. ಈ ಎರಡೂ ಸಂಘಟನೆಗಳ ಸದಸ್ಯರು ವೈಯಕ್ತಿಕವಾಗಿ ಅವರೇ ಕೈಲಾದಷ್ಟು ಹಣ ಹಾಕಿ, ಈ ಸೇವೆ ಮಾಡುತ್ತಿರುವುದು ವಿಶೇಷ.

ಇವರ ಸಮಾಜಮುಖಿ ಕೆಲಸವನ್ನು ನೋಡಿ ಅನೇಕ ಸಂಘ ಸಂಸ್ಥೆಗಳು, ದಾನಿಗಳು ಮುಂದೆ ಬಂದು, ಇವರೊಂದಿಗೆ ಕೈಜೋಡಿಸಿರುವುದು ವಿಶೇಷ. ‘ಕೋವಿಡ್‌ನಿಂದ ಹಂಪಿಯಲ್ಲಿನ ಮಂಗ, ಬಿಡಾಡಿ ದನ, ಬೀದಿ ನಾಯಿಗಳಿಗೆ ಆಹಾರ ಸಿಗುತ್ತಿಲ್ಲ. ಅವುಗಳಿಗೂ ಮನುಷ್ಯರಂತೆ ಬದುಕುವ ಹಕ್ಕಿದೆ. ಇಂತಹ ಕಷ್ಟಕಾಲದಲ್ಲಿ ಮನುಷ್ಯರಾಗಿ ಸಹಾಯ ಮಾಡುವುದು ಎಲ್ಲರ ಕರ್ತವ್ಯ. ಸಮಾನ ಮನಸ್ಕರು ಸೇರಿಕೊಂಡು, ಗ್ರುಪ್‌ ರಚಿಸಿ ಈ ಕೆಲಸ ಮಾಡಲಾಗುತ್ತಿದೆ. ಸಾರ್ವಜನಿಕರಿಂದಲೂ ಬೆಂಬಲ ಸಿಗುತ್ತಿದೆ’ ಎಂದು ಟಾಸ್ಕ್‌ಫೋರ್ಸ್‌ನ ಎಸ್‌.ಎಸ್‌. ರಾಚಯ್ಯ, ಸೇನೆ ಅಧ್ಯಕ್ಷ ವಿಶ್ವನಾಥ ಮಾಳಗಿ ತಿಳಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು