ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಂಜನಾದ್ರಿ ಬಗ್ಗೆ ಸರ್ಕಾರ ಮೌನವೇಕೆ: ಉಗ್ರಪ್ಪ ಪ್ರಶ್ನೆ

ತಿರುಪತಿ ದೇವಸ್ಥಾನ ಮಂಡಳಿ ವಾದಕ್ಕೆ ಪ್ರತಿಕ್ರಿಯಿಸಲು ಮಾಜಿ ಸಂಸದ ವಿ.ಎಸ್‌. ಉಗ್ರಪ್ಪ ಆಗ್ರಹ
Last Updated 7 ಫೆಬ್ರುವರಿ 2022, 10:07 IST
ಅಕ್ಷರ ಗಾತ್ರ

ಹೊಸಪೇಟೆ (ವಿಜಯನಗರ): ‘ಆಂಜನೇಯ ಹುಟ್ಟಿದ್ದು ಅಂಜನಾದ್ರಿಯಲ್ಲಿ ಅಲ್ಲ, ತಿರು‍ಪತಿಯಲ್ಲಿ ಎಂದು ತಿರುಮಲ ತಿರುಪತಿ ದೇವಸ್ಥಾನ ಮಂಡಳಿ (ಟಿಟಿಡಿ) ಹೇಳಿದೆ. ಆದರೆ, ಸದಾ ರಾಮನ ಜಪ ಮಾಡುವ ಬಿಜೆಪಿಯ ರಾಜ್ಯ ಸರ್ಕಾರ ಅದರ ಬಗ್ಗೆ ಮೌನ ವಹಿಸಿರುವುದೇಕೇ’ ಎಂದು ಮಾಜಿ ಸಂಸದ ವಿ.ಎಸ್‌. ಉಗ್ರಪ್ಪ ಪ್ರಶ್ನಿಸಿದರು.

ಅಂಜನಾದ್ರಿ ನಮ್ಮ ಸ್ವಾಭಿಮಾನದ ಪ್ರತೀಕ. ರಾಮಾಯಣದಲ್ಲಿ ಕಿಷ್ಕಿಂಧೆ ಸೇರಿದಂತೆ ಇಲ್ಲಿನ ಹಲವು ಸ್ಥಳಗಳ ಉಲ್ಲೇಖ ಇದೆ. ಅಂಜನಾದ್ರಿಗೆ ಹೋಗಿ ಅನೇಕ ಭಕ್ತರು ನಿತ್ಯ ಪೂಜೆ ಮಾಡುತ್ತಾರೆ. ದೀಕ್ಷೆ ತೆಗೆದುಕೊಳ್ಳುತ್ತಾರೆ. ಜನರೊಂದಿಗೆ ಭಾವನಾತ್ಮಕವಾಗಿ ಬೆಸೆದುಕೊಂಡಿದೆ. ಹೀಗಿರುವಾಗ ಅಂಜನಾದ್ರಿ ಆಂಜನೇಯನ ಜನ್ಮಸ್ಥಳವಲ್ಲ ಎಂದು ಟಿಟಿಡಿ ಹೇಳಿದೆ. ಇದರ ಬಗ್ಗೆ ರಾಜ್ಯ ಸರ್ಕಾರ, ಧಾರ್ಮಿಕ ದತ್ತಿ ಇಲಾಖೆ, ಸ್ಥಳೀಯ ಶಾಸಕರು, ಸಂಸದರು ಅದರ ಬಗ್ಗೆ ಪ್ರತಿಕ್ರಿಯಿಸಬೇಕಿತ್ತು. ಆದರೆ, ಮೌನ ವಹಿಸಿರುವುದೇಕೇ? ಧಾರ್ಮಿಕ ದತ್ತಿ ಇಲಾಖೆ ನಿರ್ಜೀವವಾಗಿದೆಯೇ?’ ಎಂದು ಸೋಮವಾರ ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಕೇಳಿದರು.

ಟಿಟಿಡಿ ಮಂಡಿಸಿರುವ ವಾದ ಸತ್ಯವೋ ಅಸತ್ಯವೋ ಜನರಿಗೆ ರಾಜ್ಯ ಸರ್ಕಾರ ತಿಳಿಸಬೇಕು. ನಿಷ್ಕ್ರಿಯರಾಗಿರುವುದೇಕೇ? ಟಿಟಿಡಿ ಹೇಳಿಕೆಯಿಂದ ಆಂಜನೇಯನ ಭಕ್ತರ ಭಾವನೆಗಳಿಗೆ ಧಕ್ಕೆಯಾಗಿದೆ. ಸರ್ಕಾರ ಅವರ ಕ್ಷಮೆಯಾಚಿಸಬೇಕು. ರಾಮಾಯಣದಲ್ಲಿ ಉಲ್ಲೇಖವಾಗಿರುವ ಸ್ಥಳಗಳಿಗೆ ರಕ್ಷಣೆ ಒದಗಿಸಬೇಕು. ಅಂಜನಾದ್ರಿ ಅಭಿವೃದ್ಧಿಗೆ ಹೆಚ್ಚಿನ ಒತ್ತು ಕೊಡಬೇಕು. ಹಂಪಿಯಲ್ಲಿ ಪುರಾತತ್ವ ಇಲಾಖೆಗೆ ಪ್ರತಿ ವರ್ಷ ₹12ರಿಂದ ₹13 ಕೋಟಿ ಆದಾಯ ಪ್ರವೇಶ ಶುಲ್ಕದಿಂದಲೇ ಸಂಗ್ರಹವಾಗುತ್ತಿದೆ. ಆದರೆ, ಮೂಲಸೌಕರ್ಯ ಕಲ್ಪಿಸಿಲ್ಲ. ಈ ಹಿಂದೆ ನಾನು ಸಂಸದನಿದ್ದಾಗ ₹3 ಕೋಟಿ ಅನುದಾನ ನೀಡಿದ್ದೆ. ಅದು ಏನಾಗಿದೆಯೋ ಗೊತ್ತಿಲ್ಲ ಎಂದರು.

ಯಾರ್‍ಯಾರಿಗೋ ದೇವಸ್ಥಾನಗಳನ್ನು ಕೊಡುವುದು ಸರಿಯಲ್ಲ. ರಾಜ್ಯದಲ್ಲಿ 36,000 ಮುಜರಾಯಿ ದೇವಸ್ಥಾನಗಳಿವೆ. ಖಾಸಗಿಯವರಿಗೆ ಕೊಡುವುದು ನಾಚಿಕೆಗೇಡಿನ ಸಂಗತಿ. ರಾಮನ ಹೆಸರೇಳಿಕೊಂಡು ರಾಜಕೀಯ ಮಾಡುವುದಲ್ಲ. ಆತನ ಆದರ್ಶವನ್ನು ಬಿಜೆಪಿಯವರು ಪಾಲಿಸಬೇಕು ಎಂದು ಅವರು ಹೇಳಿದರು.

ನಿರುದ್ಯೋಗ, ಬಡತನ, ರೈತರ ಸಮಸ್ಯೆ, ಆರೋಗ್ಯ, ಶಿಕ್ಷಣದ ಬಗ್ಗೆ ಕೇಂದ್ರದ ಬಜೆಟ್‌ನಲ್ಲಿ ಮಹತ್ವ ನೀಡಿಲ್ಲ. ಮತ್ತೊಂದೆಡೆ ರಾಜ್ಯ ಸರ್ಕಾರ ಸಂಪುಟ ಪುನರ್‌ ರಚನೆಯ ಗೊಂದಲದಲ್ಲಿ ಮುಳುಗಿದೆ. ಅಭಿವೃದ್ಧಿ ವಿಚಾರಗಳತ್ತ ಗಮನಹರಿಸುತ್ತಿಲ್ಲ ಎಂದು ಅವರು ಆರೋಪಿಸಿದರು.

ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ವಿನಾಯಕ ಶೆಟ್ಟರ್‌, ಮುಖಂಡರಾದ ಮೊಹಮ್ಮದ್ ಇಮಾಮ್‌ ನಿಯಾಜಿ, ಖಾಜಾ ಹುಸೇನ್‌ ನಿಯಾಜಿ, ರಾಮಚಂದ್ರಗೌಡ, ಗುಜ್ಜಲ್‌ ನಾಗರಾಜ, ವೀರಭದ್ರ ನಾಯಕ, ಖಾರದಪುಡಿ ಮಹೇಶ, ಸೋಮಶೇಖರ್‌ ಬಣ್ಣದಮನೆ ಇದ್ದರು.

‘ಸಮವಸ್ತ್ರಕ್ಕೆ ರಾಷ್ಟ್ರೀಯ ನೀತಿ ರೂಪಿಸಲಿ’

‘ಶಾಲಾ ಕಾಲೇಜುಗಳ ಶುಲ್ಕ, ಸಿಲೆಬಸ್‌, ಸಮವಸ್ತ್ರ ಕುರಿತು ಕೇಂದ್ರ ಸರ್ಕಾರ ರಾಷ್ಟ್ರೀಯ ನೀತಿ ರೂಪಿಸಬೇಕು. ಸಮವಸ್ತ್ರ ಗೊಂದಲದ ಕುರಿತು ವಿವಿಧ ರಾಜ್ಯಗಳ ನ್ಯಾಯಾಲಯಗಳ ತೀರ್ಪು ಆಧರಿಸಿ ಸೂಕ್ತ ಕ್ರಮ ಜರುಗಿಸಬೇಕು’ ಎಂದು ಮಾಜಿಸಂಸದ ವಿ.ಎಸ್‌. ಉಗ್ರಪ್ಪ, ಹಿಜಾಬ್‌–ಕೇಸರಿ ಶಾಲಿನ ವಿವಾದ ಕುರಿತ ಪ್ರಶ್ನೆಗೆ ಪ್ರತಿಕ್ರಿಯಿಸಿದರು.

ನಮ್ಮದು ಧರ್ಮ ನಿರಪೇಕ್ಷತಾ ಸಿದ್ಧಾಂತ. ಧರ್ಮದ ಹೆಸರಿನಲ್ಲಿ ಮಕ್ಕಳನ್ನು ಸಂಕುಚಿತಗೊಳಿಸುವುದು ಬೇಡ. ಹಿಂದೆ ನಿಂತು ಮಕ್ಕಳನ್ನು ಪ್ರಚೋದಿಸುವುದು ಬೇಡ. ಮಕ್ಕಳನ್ನು ಒಡೆದಾಳುವುದು ಸರಿಯಾದ ಕ್ರಮವಲ್ಲ ಎಂದು ಹೇಳಿದರು.

ರಾಷ್ಟ್ರೀಯ ಯೋಜನೆಗಳೆಂದು ಘೋಷಿಸಿ: ‘ರಾಜ್ಯದ ಜಲಾಶಯಗಳ ನೀರನ್ನೇ ರಾಜ್ಯ ಸರ್ಕಾರ ಸಮರ್ಪಕವಾಗಿ ಬಳಸಿಕೊಳ್ಳುತ್ತಿಲ್ಲ. ಆದರೆ, ಕೇಂದ್ರ ಸರ್ಕಾರ ಯಾರೊಂದಿಗೂ ಚರ್ಚಿಸದೇ ನದಿ ಜೋಡಣೆ ಯೋಜನೆ ಘೋಷಿಸಿದೆ. ತುಂಗಭದ್ರಾ ಜಲಾಶಯದಲ್ಲಿ 33 ಟಿಎಂಸಿ ಹೂಳು ತೆಗೆಸಲು ಮುಂದಾಗಬೇಕು. ಅದರ ಹೆಚ್ಚುವರಿ ನೀರಿನ ಸಂಗ್ರಹಕ್ಕೆ ಸಮನಾಂತರ ಜಲಾಶಯ ನಿರ್ಮಿಸಬೇಕು. ಸಚಿವರಾದ ಬಿ. ಶ್ರೀರಾಮುಲು, ಆನಂದ್‌ ಸಿಂಗ್‌, ಸಂಸದ ವೈ.ದೇವೇಂದ್ರಪ್ಪನವರು ಕೇಂದ್ರ ಸರ್ಕಾರಕ್ಕೆ ವಿಷಯ ಮನದಟ್ಟು ಮಾಡಿಕೊಟ್ಟು ಈ ಎರಡನ್ನೂ ರಾಷ್ಟ್ರೀಯ ಯೋಜನೆಗಳೆಂದು ಘೋಷಿಸಲು ಒತ್ತಡ ಹಾಕಬೇಕು’ ಎಂದು ಆಗ್ರಹಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT