ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒತ್ತುವರಿಗೆ ಕ್ಲೀನ್‌ಚಿಟ್ ಸಿಕ್ಕಿಲ್ಲ: ಆನಂದ್‌ ಸಿಂಗ್ ಸುಳ್ಳುಗಾರ ಎಂದ ಅಬ್ದುಲ್

Last Updated 8 ಸೆಪ್ಟೆಂಬರ್ 2022, 11:22 IST
ಅಕ್ಷರ ಗಾತ್ರ

ಹೊಸಪೇಟೆ (ವಿಜಯನಗರ): ‘ಪ್ರವಾಸೋದ್ಯಮ ಸಚಿವ ಆನಂದ್‌ ಸಿಂಗ್‌ ಸುಳ್ಳುಗಾರ. ಅವರು ಸರ್ಕಾರಿ ಜಾಗ ಒತ್ತುವರಿ ಮಾಡಿಕೊಂಡು ಬಂಗ್ಲೆ ನಿರ್ಮಿಸಿದ್ದಕ್ಕೆ ಲೋಕಾಯುಕ್ತ ಕ್ಲೀನ್‌ ಚಿಟ್‌ ನೀಡಿಲ್ಲ. ಅವರು ಜನರಿಗೆ ತಪ್ಪು ಮಾಹಿತಿ ಕೊಟ್ಟಿದ್ದಾರೆ’ ಎಂದು ನಗರಸಭೆ 6ನೇ ವಾರ್ಡ್‌ ಸದಸ್ಯ ಅಬ್ದುಲ್‌ ಖದೀರ್‌ ಗಂಭೀರ ಆರೋಪ ಮಾಡಿದರು.

ಸರ್ವೇ ನಂಬರ್‌ 82/1, 82/2, 82/3 ಜಾಗ ಸರ್ಕಾರಕ್ಕೆ ಸೇರಿದೆ. ಅಲ್ಲಿ ಯಾರೂ ಮನೆ ಕಟ್ಟಲು ಆಗುವುದಿಲ್ಲ. ಅಲ್ಲಿ ಯಾವುದೇ ಕಟ್ಟಡವಿಲ್ಲ ಎಂದು ಲೋಕಾಯುಕ್ತ ಹೇಳಿರುವುದು ಸರಿಯಾಗಿಯೇ ಇದೆ. ಆದರೆ, ಸರ್ವೇ ನಂಬರ್‌ 63, 67ಬಿ2ನಲ್ಲಿ ಸಚಿವ ಆನಂದ್‌ ಸಿಂಗ್‌ ಅವರು ಸರ್ಕಾರಿ ಜಾಗ ಒತ್ತುವರಿ ಮಾಡಿ ಬಂಗ್ಲೆ ಕಟ್ಟಿದ್ದಕ್ಕೆ ಕ್ಲೀನ್‌ ಚಿಟ್‌ ಕೊಟ್ಟಿಲ್ಲ. ಆದರೆ, ಸಚಿವರು ಹಾಲಿಗೆ ನೀರು ಬೆರೆಸಿ ಎಲ್ಲ ಹಾಲು ಎಂದು ಸುಳ್ಳು ಹೇಳುತ್ತಿದ್ದಾರೆ ಎಂದು ಗುರುವಾರ ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ದಾಖಲೆಗಳನ್ನು ಬಿಡುಗಡೆಗೊಳಿಸಿ ಆರೋಪಿಸಿದರು.

ಸರ್ವೇ ನಂಬರ್‌ 63ರಲ್ಲಿ ಸಣ್ಣ ಕಾಲುವೆಗೆ ಸೇರಿದ 0.30 ಸೇಂಟ್ಸ್‌ ಜಾಗ ಸಚಿವರು ಒತ್ತುವರಿ ಮಾಡಿಕೊಂಡು ಅದರ ಮೇಲೆ ಬಂಗ್ಲೆಯ ಕಾಂಪೌಂಡ್‌, ಉದ್ಯಾನವನ ನಿರ್ಮಿಸಿದ್ದಾರೆ. ಸರ್ವೇ ನಂಬರ್‌ 67ಬಿ2 ಕರ್ನಾಟಕ ಒಳಚರಂಡಿ ಯೋಜನೆಗೆ ಸೇರಿದ 5 ಸೇಂಟ್ಸ್‌ ಜಾಗ ಅತಿಕ್ರಮಿಸಿ ಸಚಿವರು ಬಂಗ್ಲೆ ನಿರ್ಮಿಸಿದ್ದಾರೆ. ಹೀಗಿರುವಾಗ ಜವಾಬ್ದಾರಿ ಸ್ಥಾನದಲ್ಲಿರುವವರು ಸುಳ್ಳು ಮಾಹಿತಿ ಕೊಡಬಾರದು ಎಂದು ಹೇಳಿದರು.

ಸರ್ವೇ ನಂಬರ್‌ 63, 82/1, 82/2, 82/3 ಸರ್ಕಾರಕ್ಕೆ ಸೇರಿದ ಜಾಗವನ್ನು ಸುರಕ್ಷಾ ಎಂಟರ್‌ಪ್ರೈಸೆಸ್‌ ಮತ್ತು ಪ್ರಭಾವಿಗಳು ಸೇರಿಕೊಂಡು ಒತ್ತುವರಿ ಮಾಡಿದ್ದಾರೆ ಎಂದು ಆರ್‌.ಟಿ.ಐ ಕಾರ್ಯಕರ್ತ ಶ್ರೀಧರ್‌ ದೂರು ಸಲ್ಲಿಸಿದ್ದರು. ಆದರೆ, ಯಾವುದೇ ಒತ್ತುವರಿ ಆಗಿಲ್ಲ ಎಂದು ಲೋಕಾಯುಕ್ತ ಕ್ಲೀನ್‌ ಚಿಟ್‌ ಕೊಟ್ಟಿದೆ ಹೊರತು ಸಚಿವರು ಸರ್ವೇ ನಂಬರ್‌ 63, 67ಬಿ2ನಲ್ಲಿ ಸರ್ಕಾರಿ ಜಾಗ ಒತ್ತುವರಿ ಮಾಡಿಲ್ಲ ಎಂದು ಎಲ್ಲಿಯೂ ತಿಳಿಸಿಲ್ಲ. ಸುರಕ್ಷಾ ಎಂಟರ್‌ಪ್ರೈಸೆಸ್‌ನವರಿಗೆ ಕೊಟ್ಟಿರುವ ಕ್ಲೀನ್‌ ಚಿಟ್‌ ತನಗೂ ಕೊಟ್ಟಿದ್ದಾರೆ ಎಂಬಂತೆ ಬಿಂಬಿಸಿಕೊಳ್ಳುತ್ತಿದ್ದಾರೆ. ಅದೆಲ್ಲ ಸುಳ್ಳು. ನ್ಯಾಯ ಸಿಗುವವರೆಗೆ ನಾನು ಕಾನೂನು ಹೋರಾಟ ನಡೆಸುತ್ತೇನೆ ಎಂದು ತಿಳಿಸಿದರು.

ಸುರಕ್ಷಾ ಎಂಟರ್‌ಪ್ರೈಸೆಸ್‌ನವರು ಒಳಚರಂಡಿ ಮೇಲೆ ಲೇಔಟ್‌ ನಿರ್ಮಿಸಿದ್ದಾರೆ. ನೀರು ಸಹಜವಾಗಿ ಹರಿದು ಹೋಗಲು ‘ಎಸ್ಕೇಪ್‌ ಗೇಟ್‌‘ ಇದೆ. ಅದರ ಮೇಲೆ ಕಾಂಪೌಂಡ್‌ ನಿರ್ಮಿಸಿ, ಚರಂಡಿ ಮಾರ್ಗ ಬೇರೆ ಕಡೆ ತಿರುಗಿಸಿರುವುದರಿಂದ ಆರನೇ ವಾರ್ಡ್‌ನಲ್ಲಿ ಮಳೆ ಬಂದಾಗಲೆಲ್ಲಾ ಸಮಸ್ಯೆಯಾಗುತ್ತಿದೆ. ಮನೆಗಳಿಗೆ ನೀರು ನುಗ್ಗಿ ಜನರಿಗೆ ಬಹಳ ತೊಂದರೆಯಾಗುತ್ತಿದೆ ಎಂದು ಹೇಳಿದರು.

ಸಚಿವರು ಸರ್ಕಾರಿ ಜಾಗ ಒತ್ತುವರಿ ಮಾಡಿ ಬಂಗ್ಲೆ ನಿರ್ಮಿಸಿಕೊಂಡಿದ್ದಕ್ಕೆ ಅವರ ವಿರುದ್ಧ ಜಿಲ್ಲಾಧಿಕಾರಿಗೆ ದೂರು ಕೊಟ್ಟಿದ್ದೆ. ಅದು ವಿವಿಧ ಇಲಾಖೆಗಳಿಗೆ ಸಂಬಂಧಿಸಿದ ಜಾಗ. ಸಮಿತಿ ರಚಿಸಿ ತನಿಖೆ ನಡೆಸುತ್ತೇನೆ ಎಂದು ಜಿಲ್ಲಾಧಿಕಾರಿ ಹೇಳಿದ್ದರು. ಆದರೆ, ವರ್ಷ ಕಳೆಯುತ್ತ ಬಂದರೂ ಅವರು ಯಾವುದೇ ಕ್ರಮ ಕೈಗೊಂಡಿಲ್ಲ. ಪ್ರಭಾವಿಗಳು ಹೇಳಿದರೆ ತಕ್ಷಣವೇ ಕೆಲಸ ಮಾಡುತ್ತಾರೆ. ನನ್ನಂಥ ಸಾಮಾನ್ಯರು ಹೇಳಿದರೆ ತನಿಖೆ ಮಾಡುವುದಿಲ್ಲ. ಪೊಲೀಸ್‌ ಠಾಣೆಗೆ ಹೋದರೆ ಸಿವಿಲ್‌ ವಿಷಯವಾಗಿರುವುದರಿಂದ ನ್ಯಾಯಾಲಯಕ್ಕೆ ಹೋಗುವಂತೆ ಹೇಳುತ್ತಾರೆ ಎಂದು ಆರೋಪಿಸಿದರು.

ಸಚಿವ ಆನಂದ್‌ ಸಿಂಗ್‌ ‘ಅಲಿಬಾಬಾ ಚಾಲೀಸ್‌ ಚೋರ್‌’ ಎಂದು ಹೇಳಿದ್ದಾರೆ. ಅವರೇ ನಿಜವಾದ ಅಲಿಬಾಬಾ. ಸುಳ್ಳು ಸಂಘದ ಅಧ್ಯಕ್ಷರೂ ಅವರೇ. ನಾವು ಭೂಗಳ್ಳರ ಗ್ಯಾಂಗ್‌ನಲ್ಲೂ ಇಲ್ಲ, ಲೀಡರ್‌ ಕೂಡ ಅಲ್ಲ. ಬೇರೆಯವರ ವಿರುದ್ಧ ಆರೋಪ ಮಾಡುವುದಕ್ಕೂ ಮೊದಲು ಅವರು ಏನೆಂಬುದು ನೋಡಿಕೊಳ್ಳಬೇಕು. ನನಗೂ ನಗರಸಭೆ ಮಾಜಿ ಸದಸ್ಯ ಡಿ.ವೇಣುಗೋಪಾಲ್‌ಗೂ ಯಾವುದೇ ಸಂಬಂಧವಿಲ್ಲ. ಅವರು ವರ್ಷದ ಹಿಂದೆಯಷ್ಟೇ ಪರಿಚಯವಾಗಿದ್ದಾರೆ. ಅವರು ನನ್ನನ್ನು ಬಳಸಿಕೊಳ್ಳುವ ಪ್ರಶ್ನೆಯೇ ಉದ್ಭವಿಸುವುದಿಲ್ಲ ಎಂದರು.

ಖಾಜಾ ಮೊಯಿನುದ್ದೀನ್‌ ಸುದ್ದಿಗೋಷ್ಠಿಯಲ್ಲಿ ಇದ್ದರು.

‘ನನ್ನ ಮಾತು ಸುಳ್ಳಾದರೆ ರಾಜೀನಾಮೆ ಕೊಡುವೆ’
‘ಸರ್ವೇ ನಂಬರ್‌ 63ರಲ್ಲಿ ಸಣ್ಣ ಕಾಲುವೆಗೆ ಸೇರಿದ 0.30 ಸೇಂಟ್ಸ್‌, ಸರ್ವೇ ನಂಬರ್‌ 67ಬಿ2 ಕರ್ನಾಟಕ ಒಳಚರಂಡಿ ಯೋಜನೆಗೆ ಸೇರಿದ 5 ಸೇಂಟ್ಸ್‌ ಜಾಗ ಒತ್ತುವರಿ ಮಾಡಿಕೊಂಡು ಸಚಿವ ಆನಂದ್‌ ಸಿಂಗ್‌ ಬಂಗ್ಲೆ ನಿರ್ಮಿಸಿದ್ದಾರೆ. ಈ ಬಗ್ಗೆ ಜಿಲ್ಲಾಧಿಕಾರಿಗಳು, ಸರ್ವೇಯರ್‌ಗಳು ನನ್ನ ಹಾಗೂ ಆನಂದ್‌ ಸಿಂಗ್‌ ಸಮ್ಮುಖದಲ್ಲಿ ಜಾಗ ಹದ್ದು ಬಸ್ತು ಮಾಡಲಿ. ಒಂದುವೇಳೆ ಸಚಿವರಿಂದ ಸರ್ಕಾರಿ ಜಾಗ ಒತ್ತುವರಿಯಾಗಿಲ್ಲ ಎಂದು ಗೊತ್ತಾದರೆ ನಾನು ನನ್ನ ನಗರಸಭೆ ಸದಸ್ಯ ಸ್ಥಾನಕ್ಕೆ ರಾಜೀನಾಮೆ ಕೊಡುತ್ತೇನೆ. ಒಂದುವೇಳೆ ಆನಂದ್‌ ಸಿಂಗ್‌ ಅವರಿಂದ ಜಾಗ ಒತ್ತುವರಿಯಾಗಿದ್ದರೆ ಅವರು ಅವರ ಸ್ಥಾನಕ್ಕೆ ರಾಜೀನಾಮೆ ಕೊಡಬೇಕು’ ಎಂದು ಅಬ್ದುಲ್‌ ಖದೀರ್‌ ಸವಾಲು ಹಾಕಿದರು.

‘ಜಮೀನು ಒತ್ತುವರಿ, ನಂತರ ನೋಂದಣಿ ರದ್ದು’
‘ಸರ್ವೇ ನಂಬರ್‌ 81/ಬಿ1ನಲ್ಲಿ ಸಂತೋಷ್‌ ಸಿಂಗ್‌ ಎಂಬುವರು 0.50 ಸೇಂಟ್ಸ್‌ ಸರ್ಕಾರಿ ಜಾಗ ಒತ್ತುವರಿ ಮಾಡಿಕೊಂಡಿದ್ದರು. ಇದರ ಬಗ್ಗೆ ನಾನು ಒಬ್ಬ ಜವಾಬ್ದಾರಿಯುತ ಸದಸ್ಯನಾಗಿ ನಗರಸಭೆ ಸಾಮಾನ್ಯ ಸಭೆಯಲ್ಲಿ ಧ್ವನಿ ಎತ್ತಿದ್ದೆ. ಅದಾದ ನಂತರ ಸಂತೋಷ್‌ ಸಿಂಗ್‌ ಸಿಕ್ಕಿ ಬೀಳುವ ಭಯದಲ್ಲಿ ಜಾಗದ ನೋಂದಣಿ ರದ್ದುಪಡಿಸಿಕೊಂಡಿದ್ದಾರೆ. ಈಗ ಆ ಜಾಗ ಪುನಃ ಸರ್ಕಾರದ ಸುಪರ್ದಿಗೆ ಬಂದಿದೆ. ಈಗ ಅವರೇ ಕಳ್ಳತನ ಮಾಡಿರುವುದು ಒಪ್ಪಿಕೊಂಡಿದ್ದು, ಅವರ ವಿರುದ್ಧ ಪ್ರಕರಣ ದಾಖಲಿಸಿ ಕಾನೂನು ಕ್ರಮ ಕೈಗೊಳ್ಳಬೇಕು’ ಎಂದು ಅಬ್ದುಲ್‌ ಖದೀರ್‌ ಆಗ್ರಹಿಸಿದರು.

*
ಸಚಿವ ಆನಂದ್‌ ಸಿಂಗ್‌ ಸಾಕಷ್ಟು ಅಕ್ರಮ ಎಸಗಿದ್ದಾರೆ. ಅವುಗಳನ್ನು ಹಂತ ಹಂತವಾಗಿ ಬಯಲಿಗೆ ತರುತ್ತೇನೆ.
–ಅಬ್ದುಲ್‌ ಖದೀರ್‌, ನಗರಸಭೆ ಸದಸ್ಯ, 6ನೇ ವಾರ್ಡ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT