ಸೋಮವಾರ, 16 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಮೀನುಗಾರರಿಗಿದೆ ಸರ್ಕಾರಿ ಸೌಲಭ್ಯ, ಬಳಸಿ: ಸಚಿವ ಮಾಂಕಾಳ ವೈದ್ಯ

ನಾಲ್ಕು ಜಿಲ್ಲೆಗಳ ಪ್ರಗತಿ ಪರಿಶೀಲನೆ ಸಭೆಯಲ್ಲಿ ಸಚಿವ ಮಾಂಕಾಳ ವೈದ್ಯ ಸೂಚನೆ
Published : 24 ಆಗಸ್ಟ್ 2024, 15:28 IST
Last Updated : 24 ಆಗಸ್ಟ್ 2024, 15:28 IST
ಫಾಲೋ ಮಾಡಿ
Comments

ಹೊಸಪೇಟೆ: ಮೀನುಗಾರಿಕೆ ಇಲಾಖೆಯು ಯಾವಾಗಲೂ ಮೀನುಗಾರರ ಪರವಾಗಿದೆ. ಸರ್ಕಾರದಿಂದ ಶಿಷ್ಯವೇತನ ಸಹಿತ ಹಲವು ಸೌಲಭ್ಯಗಳನ್ನು ನೀಡಲಾಗುತ್ತಿದೆ. ಅದನ್ನು ಬಳಸಿಕೊಳ್ಳಬೇಕು ಎಂದು ಮೀನುಗಾರಿಕಾ ಸಚಿವ ಮಾಂಕಾಳ ವೈದ್ಯ ಸಲಹೆ ನೀಡಿದರು.

ಬಳ್ಳಾರಿ ವಲಯದ ವಿಜಯನಗರ, ಬಳ್ಳಾರಿ, ಕೊಪ್ಪಳ ಮತ್ತು ರಾಯಚೂರು ಜಿಲ್ಲೆಗಳ ಪ್ರಗತಿ ಪರಿಶೀಲನಾ ಸಭೆಯನ್ನು ಶನಿವಾರ ಇಲ್ಲಿ ನಡೆಸಿದ ಅವರು, 8ರಿಂದ 10ನೇ ತರಗತಿಯಲ್ಲಿ ಓದುವ ಮೀನುಗಾರರ ಮಕ್ಕಳಿಗೆ ₹ 2000, ಪಿಯು ವಿದ್ಯಾರ್ಥಿನಿಯರಿಗೆ ₹3 ಸಾವಿರ, ವಿದ್ಯಾರ್ಥಿಗಳಿಗೆ ₹2,500, ಎಲ್ ಎಲ್ ಬಿ ಸೇರಿದಂತೆ ಬೇರೆ ಬೇರೆ ಕೋರ್ಸ್ ಓದುವ ವಿದ್ಯಾರ್ಥಿಗಳಿಗೆ ₹7,500, ವಿದ್ಯಾರ್ಥಿನಿಯರಿಗೆ ₹8 ಸಾವಿರ. ಎಂಬಿಬಿಎಸ್ ಓದುವವರಿಗೆ ₹10,000 ಶಿಷ್ಯವೇತನ ನೀಡಲಾಗುತ್ತದೆ. ಐಎಎಸ್, ಐಪಿಎಸ್ ಓದಲು ಬಯಸುವ ವಿದ್ಯಾರ್ಥಿಗಳಿಗೆ ಉಚಿತ ಕೊಚಿಂಗ್ ಗೆ ವ್ಯವಸ್ಥೆ ಮಾಡಲಾಗುವುದು ಎಂದರು.

ರಾಜ್ಯದಲ್ಲಿ ಈ ಬಾರಿ ಮೀನುಗಾರರಿಗೆ 10 ಸಾವಿರ ವಸತಿ ಮಂಜೂರಿ ಮಾಡಲಾಗಿದೆ.‌ ಇದರಿಂದಾಗಿ ಸೂಕ್ತವಾದ ದಾಖಲಾತಿ ಒದಗಿಸುವ ಅರ್ಹ ಬಡ ಮೀನುಗಾರರಿಗೆ ವಸತಿ ವ್ಯವಸ್ಥೆಯಾಗಲಿದೆ ಎಂದು ತಿಳಿಸಿದರು.

ಮೂಲ ವೃತ್ತಿದಾರರು ಮತ್ತು ಹೊಸದಾಗಿ ಮೀನುಗಾರಿಕೆ ಮಾಡಲು ಬರುವವರ ಮಧ್ಯೆ ಉತ್ತಮ ರೀತಿಯ ಸಂಬಂಧ ಇರಬೇಕು. ಮೀನುಗಾರಿಕೆ ಬಗ್ಗೆ ಗೊತ್ತಿಲ್ಲದೇ ಇರುವವರು ಮಧ್ಯಪ್ರವೇಶಿಸಿ ತೊಂದರೆ ನೀಡಿದರೆ ಅದನ್ನು ಸಹಿಸಿಕೊಳ್ಳಬಾರದು ಎಂದು ಅವರು ತಿಳಿಸಿದರು.

ಶಾಸಕರಾದ ಎಚ್.ಆರ್.ಗವಿಯಪ್ಪ, ಜಿಲ್ಲಾಧಿಕಾರಿ ಎಂ.ಎಸ್.ದಿವಾಕರ್‌, ಮೀನುಗಾರಿಕೆ ಇಲಾಖೆ ನಿರ್ದೇಶಕ ದಿನೇಶ ಕಳ್ಳೇರ, ಜಂಟಿ ನಿರ್ದೇಶಕ ಷಡಕ್ಷರಿ, ಉಪ ನಿರ್ದೇಶಕರಾದ ಬಳ್ಳಾರಿಯ ಶಿವಣ್ಣ, ಸಿಂಧನೂರಿನ ಮಲ್ಲೇಶಿ, ರಾಯಚೂರಿನ ಬಸವನಗೌಡ, ಕೊಪ್ಪಳದ ಶ್ರೀನಿವಾಸ ಕುಲಕರ್ಣಿ, ಹಗರಿಬೊಮ್ಮನಹಳ್ಳಿಯ ರಿಯಾಜ್ ಅಹಮದ್, ಮುನಿರಾಬಾದನ ಕಣ್ಣಿ ಭಾಗ್ಯ ಇತರರು ಇದ್ದರು.

ಜಾಗ ನೀಡಿದರೆ ಕೂಡಲೇ ಕಚೇರಿ

‘ವಿಜಯನಗರ ಜಿಲ್ಲೆ ಹೇರಳವಾಗಿ ನೀರಿನ ಮೂಲ ಮತ್ತು ಸೌಕರ್ಯ ಇರುವ ಜಿಲ್ಲೆಯಾಗಿದೆ. ಬೃಹತ್ ತುಂಗಭದ್ರಾ ಡ್ಯಾಮಿದೆ. ಇಲ್ಲಿ ಮೀನುಗಾರರ ಸಂಖ್ಯೆ ಹೆಚ್ಚಿದೆ. ಸ್ವಂತ ಕಚೇರಿ ಇದ್ದಲ್ಲಿ ಕಚೇರಿ ಕಾರ್ಯಗಳಿಗೆ ಅನುಕೂಲವಾಗಲಿದೆ. ಜಿಲ್ಲಾಡಳಿತ ಜಾಗ ನೀಡಿದಲ್ಲಿ ಕೂಡಲೇ ಹೊಸ ಕಚೇರಿ ನಿರ್ಮಾಣಕ್ಕೆ ಅನುದಾನ ಬಿಡುಗಡೆ ಮಾಡಲಾಗುವುದು‘ ಎಂದು ಸಚಿವ ವೈದ್ಯ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT