‘ಅಕ್ಕಾ, ಸ್ವಲ್ಪ ಪರಿಮಳ ನೋಡಿ... ಇದು ಹಡಗಲಿ ಮಲ್ಲಿಗೆ!’

ದಾವಣಗೆರೆಯ ಹೂವಿನ ಮಾರುಕಟ್ಟೆಯಲ್ಲಿ ವ್ಯಾಪಾರಿಯೊಬ್ಬಳು ಕೈಯಲ್ಲಿ ಹಿಡಿದಿದ್ದ ಪುಟ್ಟ ಮಲ್ಲಿಗೆಯ ಹಾರವನ್ನು ಮಹಿಳೆಯೊಬ್ಬಳ ಕಡೆ ಚಾಚುತ್ತಾಳೆ. ಆಕೆ ಹಾರವನ್ನು ಮೂಗಿನ ಹತ್ತಿರ ತಂದು ಒಮ್ಮೆ ಪರಿಮಳ ಆಘ್ರಾಣಿಸುತ್ತಾಳೆ. ಕ್ಷಣಾರ್ಧದಲ್ಲೇ ಮುಖದಲ್ಲಿ ಮಂದಹಾಸ ಮೂಡುತ್ತದೆ. ‘ಇದು ನಿಜವಾಗಿಯೂ ಹಡಗಲಿ ಮಲ್ಲಿಗೇ... ಪರಿಮಳ ಹೇಳ್ತಿದೆ’ ಎಂದು ಹೇಳಿ ಇನ್ನೂ ಎರಡು ಹಾರಗಳನ್ನು ಖರೀದಿಸುತ್ತಾಳೆ.

ಹೂವಿನ ಮಾರುಕಟ್ಟೆಯಲ್ಲಿ ಹಡಗಲಿ ಮಲ್ಲಿಗೆಯನ್ನು ಜನ ಗುರುತಿಸುವುದು ಅದರ ಗಾತ್ರದಿಂದಲ್ಲ, ಬಣ್ಣದಿಂದಲ್ಲ—ಪರಿಮಳದಿಂದ. ಒಂದು ಸಣ್ಣ ಮೊಗ್ಗು ಸಾಕು; ಸುತ್ತಲಿನ ಗಾಳಿಯನ್ನೇ ಬದಲಿಸುವಷ್ಟು ಗಾಢವಾದ ಸುಗಂಧ. ಅದಕ್ಕಾಗಿಯೇ ‘ವಾಸನೆ ಮಲ್ಲಿಗೆ’ ಎಂಬ ಹೆಸರು ಈ ಹೂವಿಗೆ ಅಂಟಿಕೊಂಡಿದೆ.

ವಿಜಯನಗರ ಜಿಲ್ಲೆಯ ಹೂವಿನಹಡಗಲಿ ಭಾಗದಲ್ಲಿ ಬೆಳೆಯುವ ಈ ಮಲ್ಲಿಗೆ, ಕೇವಲ ಒಂದು ಹೂವಿನ ತಳಿಯಲ್ಲ. ಅದು ನೂರಾರು ಕುಟುಂಬಗಳ ಬದುಕು, ಮಹಿಳೆಯರ ಕೈಚಳಕ, ರೈತರ ನಂಬಿಕೆ ಮತ್ತು ಹಳ್ಳಿಗಳ ಆರ್ಥಿಕತೆಯ ಭಾಗವಾಗಿದೆ. ಬೆಳಗಿನ ಜಾವ ತೋಟಗಳಲ್ಲಿ ಮೊಗ್ಗು ಬಿಡಿಸುವ ಕೆಲಸ ಆರಂಭವಾದರೆ, ಮಧ್ಯಾಹ್ನಕ್ಕೆ ಮಾರುಕಟ್ಟೆ ಕಡೆಗೆ ತೆರಳುವ ವಾಹನಗಳಲ್ಲಿ ಹಡಗಲಿ ಮಲ್ಲಿಗೆಯ ಪರಿಮಳವೇ ತುಂಬಿರುತ್ತದೆ.

ಒಮ್ಮೆ ಹಡಗಲಿ ಪಟ್ಟಣದ ಸುತ್ತ ಸಾವಿರಾರು ಎಕರೆ ಪ್ರದೇಶದಲ್ಲಿ ಮಲ್ಲಿಗೆ ಬೆಳೆಯಲಾಗುತ್ತಿತ್ತು. ಇಂದಿಗೂ ತಿಪ್ಪಾಪುರ, ತಿಮ್ಲಾಪುರ, ಹಗರನೂರು, ಹನಕನಹಳ್ಳಿ, ದೇವಗೊಂಡನಹಳ್ಳಿ ಸೇರಿದಂತೆ 23ಕ್ಕೂ ಹೆಚ್ಚು ಹಳ್ಳಿಗಳಲ್ಲಿ ಮಲ್ಲಿಗೆ ಕೃಷಿ ಮುಂದುವರಿದಿದೆ. ಪ್ರತಿದಿನ ಇಲ್ಲಿ ಬಿಡಿಸುವ ಮೊಗ್ಗುಗಳು ದಾವಣಗೆರೆ, ಶಿವಮೊಗ್ಗ, ಹಾವೇರಿ, ಗದಗ ಸೇರಿದಂತೆ ಹಲವು ನಗರಗಳಿಗೆ ಸಾಗುತ್ತವೆ.

ಹಡಗಲಿ ಮಲ್ಲಿಗೆಯ ವೈಶಿಷ್ಟ್ಯ ಅದರ ಪರಿಮಳ ಮಾತ್ರವಲ್ಲ. ಈ ಹೂವು ಬೇಗ ಬಾಡುವುದಿಲ್ಲ. ಬಿಸಿಲಿಗೆ ಹೆಚ್ಚು ಒಡ್ಡದಿದ್ದರೆ ಒಂದೆರಡು ದಿನಗಳವರೆಗೆ ತನ್ನ ತಾಜಾತನ ಕಾಪಾಡಿಕೊಳ್ಳುತ್ತದೆ. ಶುಭ್ರ ಬಿಳಿ ಬಣ್ಣದ ಏಳು ದಳಗಳ ಈ ಮಲ್ಲಿಗೆ ನಕ್ಷತ್ರಾಕಾರದ ರೂಪ ಹೊಂದಿದೆ. ‘ಜಾಸ್ಮಿನಮ್ ಅಝೋರಿಕಮ್’ ಜಾತಿಗೆ ಸೇರಿದ ಈ ಹೂವು ಗಾತ್ರದಲ್ಲಿ ಚಿಕ್ಕದಾದರೂ ಮಾರುಕಟ್ಟೆಯಲ್ಲಿ ತನ್ನದೇ ಗುರುತು ಹೊಂದಿದೆ.

ಮದುವೆ, ಜಾತ್ರೆ, ಹಬ್ಬ—ಯಾವ ಸಂಭ್ರಮದಲ್ಲಾದರೂ ಹಡಗಲಿ ಮಲ್ಲಿಗೆಗೆ ಬೇಡಿಕೆ ಕಡಿಮೆಯಾಗುವುದಿಲ್ಲ. ಬಾಲಕಿಯರು ಜಡೆಗೆ ಮೊಗ್ಗು ಕಟ್ಟಿಕೊಳ್ಳುತ್ತಾರೆ. ಮದುವೆಗಳಲ್ಲಿ ಮಧುಮಕ್ಕಳಿಗಾಗಿ ವಿಶೇಷ ಹಾರಗಳನ್ನು ತಯಾರಿಸಲಾಗುತ್ತದೆ. ಮುಸ್ಲಿಂ ಸಮುದಾಯದ ಮದುವೆಗಳಲ್ಲಿ ವಧು-ವರರ ಅಲಂಕಾರಕ್ಕಾಗಿ ಬಳಸುವ ಶೇಹರಾ ಮತ್ತು ತುರಾಯಿಗಳಲ್ಲಿ ಹಡಗಲಿ ಮಲ್ಲಿಗೆಯದ್ದೇ ಮೇಲುಗೈ. ಅತ್ತರ್ ಮತ್ತು ಊದುಬತ್ತಿ ತಯಾರಿಕೆಯಲ್ಲಿ ಕೂಡ ಇದರ ಪರಿಮಳ ಬಳಸಲಾಗುತ್ತದೆ.

ಈ ಮಲ್ಲಿಗೆಯ ಸುತ್ತ ಒಂದು ಸಂಪೂರ್ಣ ಉದ್ಯೋಗ ವ್ಯವಸ್ಥೆಯೇ ರೂಪುಗೊಂಡಿತ್ತು. ತೋಟಗಳಲ್ಲಿ ಮೊಗ್ಗು ಬಿಡಿಸುವವರು, ಹೂ ಕಟ್ಟುವವರು, ಮಾರುಕಟ್ಟೆಗೆ ಸಾಗಿಸುವ ಎಲ್ಲರ ಬದುಕೂ ಇದರೊಂದಿಗೆ ಬೆಸೆದುಕೊಂಡಿತ್ತು. ಮಧ್ಯಾಹ್ನ ಹೊತ್ತಿಗೆ ಗೋಣಿ ಚೀಲಗಳಲ್ಲಿ ತುಂಬಿದ ಮೊಗ್ಗುಗಳನ್ನು ಬೈಕ್ಗಳಲ್ಲಿ ಹಡಗಲಿಗೆ ತಂದು, ದೊಡ್ಡ ಎಲೆಗಳಲ್ಲಿ ಸುತ್ತಿ ವಿವಿಧ ಮಾರುಕಟ್ಟೆಗಳಿಗೆ ಕಳಿಸುವ ದೃಶ್ಯ ಒಮ್ಮೆ ಸಾಮಾನ್ಯವಾಗಿತ್ತು.

ಆದರೆ ಈಗ ಆ ದೃಶ್ಯ ನಿಧಾನವಾಗಿ ಬದಲಾಗುತ್ತಿದೆ. ಕೂಲಿ ಕಾರ್ಮಿಕರ ಕೊರತೆಯಿಂದ ರೈತರು ಮಲ್ಲಿಗೆ ಕೃಷಿಯಿಂದ ಹಿಂದೆ ಸರಿಯುತ್ತಿದ್ದಾರೆ. ಮೊಗ್ಗು ಬಿಡಿಸಲು ಜನ ಸಿಗುವುದೇ ಕಷ್ಟವಾಗಿದೆ. ಸಿಕ್ಕರೂ ಅಧಿಕ ಕೂಲಿ ಕೊಡಬೇಕಾಗುತ್ತದೆ. ಕೆಲವೊಮ್ಮೆ ಮಾರುಕಟ್ಟೆಯಲ್ಲಿ ಬೆಲೆ ದಿಢೀರನೆ ಕುಸಿದರೆ, ಕೂಲಿ ವೆಚ್ಚವೂ ವಾಪಸ್ ಬಾರದ ಪರಿಸ್ಥಿತಿ ಎದುರಾಗುತ್ತದೆ.

ಹನಕನಹಳ್ಳಿಯ ಮಲ್ಲಿಗೆ ಬೆಳೆಗಾರ ರವೀಂದ್ರನಾಥ ರಡ್ಡಿ ಹೇಳುವ ಮಾತುಗಳು ಈ ಸಂಕಷ್ಟವನ್ನು ಸ್ಪಷ್ಟಪಡಿಸುತ್ತವೆ: ‘ಮಲ್ಲಿಗೆ ಬೆಳೆಸುವುದು ಸಮಸ್ಯೆಯಲ್ಲ. ಆದರೆ ಮೊಗ್ಗು ಕೀಳಲು ಜನ ಸಿಗುತ್ತಿಲ್ಲ. ಸೀಸನ್ ಇಲ್ಲದ ಸಮಯದಲ್ಲಿ ಕೂಲಿ ಹಣವೂ ಮರಳಿ ಬರುವುದಿಲ್ಲ. ಅದರಿಂದ ಜನ ಮಲ್ಲಿಗೆ ಬಿಟ್ಟು ಬೇರೆ ಬೆಳೆ ಕಡೆ ಹೋಗುತ್ತಿದ್ದಾರೆ.’

ಮಾರುಕಟ್ಟೆ ವ್ಯವಸ್ಥೆಯ ಸಮಸ್ಯೆಯೂ ರೈತರನ್ನು ಕಾಡುತ್ತಿದೆ. ಹಡಗಲಿಯಲ್ಲಿ ಸಮರ್ಪಕ ಹೂವಿನ ಮಾರುಕಟ್ಟೆ ಇಲ್ಲದ ಕಾರಣ ರೈತರು ದಲ್ಲಾಳಿಗಳ ಮೇಲೆ ಅವಲಂಬಿತರಾಗಿದ್ದಾರೆ. ಬೆಳೆದ ಹೂವನ್ನು ಬೇರೆ ನಗರಗಳಿಗೆ ಸಾಗಿಸುವ ವೆಚ್ಚವೂ ಹೆಚ್ಚಾಗಿದೆ. ಲಾಭದ ದೊಡ್ಡ ಭಾಗ ಮಧ್ಯವರ್ತಿಗಳ ಪಾಲಾಗುತ್ತದೆ.

ಆದರೂ ಹಡಗಲಿ ಮಲ್ಲಿಗೆಯ ಪರಿಮಳ ಇನ್ನೂ ಕಡಿಮೆಯಾಗಿಲ್ಲ. ಅದರ ಮಹತ್ವವೂ ಕ್ಷೀಣಿಸಿಲ್ಲ. 2006ರಲ್ಲಿ ಈ ಮಲ್ಲಿಗೆಗೆ ಜಿಐ ಟ್ಯಾಗ್ ದೊರೆತಿದ್ದು, ಅಂತರರಾಷ್ಟ್ರೀಯ ಮಟ್ಟದಲ್ಲಿ ಅದರ ವಿಶಿಷ್ಟತೆ ಮಾನ್ಯತೆ ಪಡೆದಿದೆ. ಭಾರತೀಯ ಅಂಚೆ ಇಲಾಖೆ ಕೂಡ ಹಡಗಲಿ ಮಲ್ಲಿಗೆಯ ಚಿತ್ರವಿರುವ ವಿಶೇಷ ಅಂಚೆ ಚೀಟಿ ಬಿಡುಗಡೆ ಮಾಡಿದೆ.

ಇಂದು ಮಾರುಕಟ್ಟೆಯಲ್ಲಿ ಯಾರಾದರೂ ‘ಹಡಗಲಿ ಮಲ್ಲಿಗೆ ಇದೆಯಾ?’ ಎಂದು ಕೇಳಿದರೆ, ಅದು ಕೇವಲ ಹೂವಿನ ಹುಡುಕಾಟವಲ್ಲ. ಒಂದು ಪ್ರದೇಶದ ಪರಂಪರೆ, ಪರಿಮಳ ಮತ್ತು ಬದುಕಿನ ನೆನಪಿನ ಹುಡುಕಾಟವೂ ಹೌದು. ಹಡಗಲಿ ಮಲ್ಲಿಗೆ ಇನ್ನೂ ಜನರ ಮನಸ್ಸಿನಲ್ಲಿ ಉಳಿದಿರುವುದು ಅದರ ಸುವಾಸನೆಯಿಂದ ಮಾತ್ರವಲ್ಲ–ಆ ಪರಿಮಳದ ಹಿಂದೆ ನಿಂತಿರುವ ನೂರಾರು ಬದುಕುಗಳಿಂದ.v

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260524-51-1877474482

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.