ಕಾನಹೊಸಹಳ್ಳಿ: ಸಮ ಸಮಾಜವನ್ನು ನಿರ್ಮಿಸಲು 12ನೇ ಶತಮಾನದಲ್ಲಿ ಬಸವಣ್ಣನವರ ಜತೆಗೂಡಿ ಕಾಯಕ ಸೇವಾನಿಷ್ಠೆಯ ನಿಧಿಯಾಗಿದ್ದವರು ನಿಜಸುಖಿ ಹಡಪದ ಅಪ್ಪಣ್ಣ ಎಂದು ಉಪನ್ಯಾಸಕ ಕೊಟ್ಟೂರಿನ ಶಶಿಧರ ಉಬ್ಬಳಗಂಡಿ ಹೇಳಿದರು.
ಸಮೀಪದ ಹಾರಕಬಾವಿ ಗ್ರಾಮದ ಚೌಡೇಶ್ವರಿ ದೇವಸ್ಥಾನದ ಆವರಣದಲ್ಲಿ ಭಾನುವಾರ ಆಯೋಜಿಸಿದ್ದ ಹಡಪದ ಅಪ್ಪಣ್ಣನವರ 889ನೇ ಜಯಂತ್ಯುತ್ಸವ ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸ ನೀಡಿದರು.
‘ಜಾತಿಯಿಂದ ಶ್ರೇಷ್ಠನಾಗದ ಹಡಪದ ಅಪ್ಪಣ್ಣ ಅವರು ಅವರ ಸೇವಾನಿಷ್ಠೆಯಿಂದ ದೊಡ್ಡವರಾಗಿದ್ದಾರೆ. ದುರಂತ ಎಂದರೆ ಹಡಪದ ಅಪ್ಪಣ್ಣನವರು ಹೆಚ್ಚು ಪ್ರಚಲಿತಕ್ಕೆ ಬರಲಿಲ್ಲ’ ಎಂದರು.
ಕಾರ್ಯಕ್ರಮ ಉದ್ಘಾಟಿಸಿದ ಕೊಟ್ಟೂರು ಚಾನುಕೋಟಿ ಮಠದದ ಸಿದ್ದಲಿಂಗ ಶಿವಾಚಾರ್ಯ ಮಾತನಾಡಿ, ‘ಮೇಲು -ಕೀಳೆಂಬ ಅಸಮಾನತೆ ತಾಂಡವವಾಡುತ್ತಿದ್ದ ಸಮಾಜದಲ್ಲಿ 12ನೇ ಶತಮಾನದಲ್ಲಿ ಬಸವಣ್ಣನವರು ಕಟ್ಟಿದ ಅನುಭವ ಮಂಟಪದ ಮೂಲಕ ಸಮ ಸಮಾಜ ನಿರ್ಮಾಣಕ್ಕೆ ಶರಣರ ಬಳಗ ಪಣ ತೊಟ್ಟಿತ್ತು. ಇಂಥ ಅನುಭವ ಮಂಟಪದಲ್ಲಿದ್ದ ನಿಜಸುಖಿ ಶರಣ ಹಡಪದ ಅಪ್ಪಣ್ಣ ಅವರು ಬಸವಣ್ಣನವರ ಆಪ್ತ ಸಹಾಯಕರಾಗಿದ್ದರು’ ಎಂದರು.
‘ಹಡಪದ ಸಮುದಾಯವು ಸಾಮಾಜಿಕ, ಶೈಕ್ಷಣಿಕ, ಆರ್ಥಿಕವಾಗಿ ಅತ್ಯಂತ ಹಿಂದುಳಿದಿದ್ದು, ಸರಕಾರಗಳು ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಬೇಕು’ ಎಂದು ತಿಳಿಸಿದರು.
ಗೌರವಾಧ್ಯಕ್ಷ ಹಾಗೂ ಕೆಎಂಎಫ್ ನಿವೃತ್ತ ಅಧಿಕಾರಿ ಎಚ್.ಮರುಳಸಿದ್ದಪ್ಪ ಪ್ರಾಸ್ತಾವಿಕವಾಗಿ ಮಾತನಾಡಿದರು. ಹಾರಕಬಾವಿ ಮುಖಂಡರಾದ ಎಸ್.ಶೇಖರಪ್ಪ, ಹೊಸಪೇಟೆಯ ಶಿಕ್ಷಕ ಬಸವರಾಜ, ಕರೇಗೌಡ, ಎಸ್. ಕೊಟ್ರೇಶ್ ಮಾತನಾಡಿದರು. ಹಡಪದ ಸಮುದಾಯದ ತಾಲ್ಲೂಕು ಅಧ್ಯಕ್ಷ ಚೌಡಪ್ಪ ಅಧ್ಯಕ್ಷತೆ ವಹಿಸಿದ್ದರು.
ಗ್ರಾಮ ಪಂಚಾಯ್ತಿ ಅಧ್ಯಕ್ಷೆ ಎಸ್.ಬಸಮ್ಮ ಮಂಜುನಾಥ, ಸಮಾಜದ ಜಿಲ್ಲಾ ಘಟಕದ ಅಧ್ಯಕ್ಷ ಮಲ್ಲಪ್ಪ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಾಗಳಿ ಕೊಟ್ರೇಶ್, ಕೋಟೇಶ್, ಎಚ್.ಸಿದ್ದೇಶ್, ಸಮುದಾಯದ ಕಾನಹೊಸಹಳ್ಳಿ ನಂಬೆಜ್ಜ, ಹುಡೇಂ ನಾಗಣ್ಣ, ಶಾಂತವೀರಪ್ಪ, ಬಯಲು ತುಂಬರಗುದ್ದಿ ತಿಪ್ಪೇಸ್ವಾಮಿ, ಶರಣೇಶ್, ಗಂಗಮ್ಮ, ಇದ್ದರು.
ಕಾವ್ಯಾ, ಕೆ.ಎಂ.ವೀರೇಶ್ ನಿರ್ವಹಿಸಿದರು. ಕಾರ್ಯಕ್ರಮಕ್ಕೂ ಮುನ್ನ ಗ್ರಾಮದ ಪ್ರಮುಖ ಬೀದಿಗಳಲ್ಲಿ ಹಡಪದ ಅಪ್ಪಣ್ಣ ಅವರ ಭಾವಚಿತ್ರದ ಮೆರವಣಿಗೆ ನಡೆಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.