ಹೊಸಪೇಟೆ (ವಿಜಯನಗರ): ಹಂಪಿಯ ಹಜಾರರಾಮ ದೇವಸ್ಥಾನದ ಉತ್ತರ ಭಾಗದಲ್ಲಿ ನಡೆಯುತ್ತಿರುವ ಉತ್ಖನನ ವೇಳೆ ಎರಡು ಆಳ್ವಾರ್ ಮೂರ್ತಿಗಳ ಭಗ್ನ ಅವಶೇಷಗಳು ಪತ್ತೆಯಾಗಿವೆ.

‘ಹಂಪಿಯಲ್ಲಿ ಇದುವರೆಗೆ ನಡೆದ ಉತ್ಖನನ ವೇಳೆ ಆಳ್ವಾರ್ ಪ್ರತಿಮೆಗಳು ಸಿಕ್ಕಿದ ನಿದರ್ಶನ ಇಲ್ಲ. ಇದೀಗ ಆಳ್ವಾರ್ ಪ್ರತಿಮೆಗಳ ಅವಶೇಷಗಳು ವಿಜಯನಗರ ಕಾಲದ ಇತಿಹಾಸದತ್ತ ಹೊಸ ಬೆಳಕು ಚೆಲ್ಲಲು ಸಹಕಾರಿ ಆಗುವ ಸಾಧ್ಯತೆ ಇದೆ, ಸಾಮಾನ್ಯವಾಗಿ ವಿಷ್ಣು ದೇವಾಲಯಗಳಲ್ಲಿ 12ರಿಂದ 13 ಆಳ್ವಾರ್ ಪ್ರತಿಮೆಗಳನ್ನು ಸ್ಥಾಪಿಸಲಾಗಿರುತ್ತದೆ, ಇನ್ನಷ್ಟು ಪ್ರತಿಮೆಗಳ ಅವಶೇಷಗಳು ಸಿಗುತ್ತವೆಯೋ, ಇಲ್ಲವೋ ಎಂಬುದನ್ನು ಈಗಲೇ ಹೇಳಲಾಗದು’ ಎಂದು ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಯ (ಎಎಸ್ಐ) ಅಧೀಕ್ಷಕ ಕೆ.ರಾಮಕೃಷ್ಣ ರೆಡ್ಡಿ ‘ಪ್ರಜಾವಾಣಿ’ಗೆ ತಿಳಿಸಿದರು.

ಕ್ರಿ.ಶ.1565ರಲ್ಲಿ ನಡೆದ ತಾಳಿಕೋಟೆಯ ರಕ್ಕಸತಂಗಡಿಯಲ್ಲಿ ನಡೆದ ಯುದ್ಧದ ಬಳಿಕ ಬಹುಮನಿ ಸುಲ್ತಾನರ ಆಕ್ರಮಣಕ್ಕೆ ತುತ್ತಾದ ಹಂಪಿಯಲ್ಲಿ ಸಾವಿರಾರು ವಿಗ್ರಹಗಳು, ದೇವರ ಮೂರ್ತಿಗಳನ್ನು ಭಗ್ನ ಮಾಡಲಾಗಿತ್ತು. ಮುಖ್ಯವಾಗಿ ವೈಷ್ಣವ ದೇವಾಲಯಗಳೇ ದಾಳಿಯ ಪ್ರಮುಖ ಗುರಿಗಳಾಗಿದ್ದವು, ಈ ಹಿಂದೆ ಅನೇಕ ಭಗ್ನ ಮೂರ್ತಿಗಳು ಸಿಕ್ಕಿದ್ದರೂ ಆಳ್ವಾರರ ಮೂರ್ತಿಗಳು ಸಿಕ್ಕಿದ್ದು ಇದೇ ಮೊದಲು ಎಂದು ಅವರು ತಿಳಿಸಿದರು.

ಹಂಪಿಯಲ್ಲೂ ಆಳ್ವಾರರ ಪ್ರತಿಮೆ ಸಿಕ್ಕಿರುವುದನ್ನು ಗಮನಿಸಿದರೆ, ಇಲ್ಲಿನ ವೈಷ್ಣವ ದೇವಾಲಯಗಳು ತಮಿಳುನಾಡಿನಿಂದ ಪ್ರಭಾವಿತವಾಗಿದ್ದುದು ಕಾಣಿಸುತ್ತದೆ. ಇಲ್ಲಿ ದೊರೆಯುವ ವಿಗ್ರಹಗಳು, ಭಗ್ನ ಅವಶೇಷಗಳು ವಿಜಯನಗರ ಕಾಲದ ವೈಭವಕ್ಕೆ ಸಾಕ್ಷಿ ಹೇಳುತ್ತಿವೆ ಎಂದು ರಾಜ್ಯ ಪ್ರವಾಸಿ ಮಾರ್ಗದರ್ಶಿಗಳ ಸಂಘದ ಪ್ರಧಾನ ಕಾರ್ಯದರ್ಶಿ ವಿರೂಪಾಕ್ಷಿ ವಿ.ಹಂಪಿ ತಿಳಿಸಿದರು.

ಯಾರು ಆಳ್ವಾರರು: ದಕ್ಷಿಣ ಭಾರತದಲ್ಲಿ ಅದರಲ್ಲೂ ಮುಖ್ಯವಾಗಿ ತಮಿಳುನಾಡಿನಲ್ಲಿ ವೈಷ್ಣವ ಧರ್ಮ ಮತ್ತು ವಿಷ್ಣು ಭಕ್ತಿಯನ್ನು ಪ್ರಸಾರ ಮಾಡಿದ 12 ಮಂದಿ ಮಹಾನ್ ಸಂತರನ್ನು ಆಳ್ವಾರರು ಎಂದು ಕರೆಯಲಾಗುತ್ತದೆ. ಇವರ ಭಕ್ತಿ ಮತ್ತು ಸಾಹಿತ್ಯದ ನೆನಪಿಗಾಗಿ ಅನೇಕ ದೇವಾಲಯಗಳಲ್ಲಿ ಇವರ ಪ್ರತಿಮೆಗಳನ್ನು ಪ್ರತಿಷ್ಠಾಪಿಸಲಾಗಿದೆ.

ವಿಜಯನಗರದ ಅರಸರು, ವಿಶೇಷವಾಗಿ ತುಳುವ ವಂಶದ ಕೃಷ್ಣದೇವರಾಯ ಮತ್ತು ಅಚ್ಯುತರಾಯರ ಕಾಲದಲ್ಲಿ ಶ್ರೀವೈಷ್ಣವ ಧರ್ಮಕ್ಕೆ ಹೆಚ್ಚಿನ ರಾಜಾಶ್ರಯ ಸಿಕ್ಕಿತು. ಹಂಪಿಯ ಪ್ರಮುಖ ವಿಷ್ಣು ದೇವಾಲಯಗಳಾದ ವಿಜಯ ವಿಠ್ಠಲ, ಕೃಷ್ಣ ದೇವಾಲಯ, ಅಚ್ಯತರಾಯ, ಹಜಾರರಾಮ ದೇವಸ್ಥಾನಗಳಲ್ಲಿ ಆಳ್ವಾರರ ಪ್ರತಿಮೆಗಳನ್ನು ಪ್ರತಿಷ್ಠಾಪಿಸಿ, ಅವರಿಗೆ ನಿತ್ಯ ಪೂಜೆ ಮತ್ತು ಉತ್ಸವಗಳನ್ನು ನಡೆಸಲಾಗುತ್ತಿತ್ತು ಎಂದು ಇತಿಹಾಸದ ಪುಟಗಳು ಹೇಳುತ್ತಿವೆ.

ಕಂಬ, ಉಬ್ಬುಶಿಲ್ಪಗಳಲ್ಲಿ ಮಾತ್ರ ಕಂಡಿದ್ದರು ಆಳ್ವಾರರು

ಹಂಪಿಯ ಹಲವು ಶಾಸನಗಳಲ್ಲಿ ಆಳ್ವಾರರ ಮೂರ್ತಿಗಳಿಗೆ ನೈವೇದ್ಯ ಅರ್ಪಿಸಲು, ದೀಪ ಹಚ್ಚಲು ಮತ್ತು ವಿಶೇಷ ಉತ್ಸವಗಳನ್ನು ನಡೆಸಲು ರಾಜರು ಹಾಗೂ ಶ್ರೀಮಂತರು ನೀಡಿದ ದಾನ-ದತ್ತಿಗಳ ಉಲ್ಲೇಖವಿದೆ. ಆದರೆ ಹಜಾರರಾಮ ದೇವಸ್ಥಾನದಲ್ಲಿ ಆಳ್ವಾರರ ಸ್ವತಂತ್ರ ಮೂರ್ತಿಗಳು ಇದ್ದವೇ ಎಂಬ ಬಗ್ಗೆ ಇದುವರೆಗೆ ಮಾಹಿತಿ ಇರಲಿಲ್ಲ. ಕಂಬಗಳು ಮತ್ತು ಗೋಡೆಗಳ ಮೇಲಿರುವ ಉಬ್ಬುಶಿಲ್ಪಗಳು ಮಾತ್ರ ಆಳ್ವಾರರನ್ನು ನೆನಪಿಸುವ ಕುರುಹುಗಳಾಗಿದ್ದವು.

ಇಲ್ಲಿ ಕಪ್ಪು ಶಿಲೆಯ ಹೊಳಪಿನ ನಾಲ್ಕು ಕಂಬಗಳಿದ್ದು, ಅದರಲ್ಲಿ ವಿಷ್ಣುವಿನ ದಶಾವತಾರಗಳು ಮತ್ತು ಪ್ರಮುಖ ವೈಷ್ಣವ ಭಕ್ತರ ಶಿಲ್ಪಗಳನ್ನು ಕೆತ್ತಲಾಗಿದೆ. ಈ ಕಂಬಗಳ ವಿವಿಧ ಹಂತಗಳಲ್ಲಿ ಕೈಮುಗಿದು ನಿಂತಿರುವ ಆಳ್ವಾರರ ಸೂಕ್ಷ್ಮ ಉಬ್ಬುಶಿಲ್ಪಗಳಿವೆ. ದೇವಾಲಯದ ಗೋಡೆಗಳ ಮೇಲೆ ವಿಜಯನಗರದ ಅರಸರು ಕೆತ್ತಿಸಿರುವ ಕೆಲವು ಶಾಸನಗಳು ತಮಿಳು ಭಾಷೆಯಲ್ಲಿವೆ. ತಾಳಿಕೋಟೆ ಯುದ್ಧದ ನಂತರ ನಡೆದ ಧ್ವಂಸದ ಸಂದರ್ಭದಲ್ಲಿ ಹಜಾರರಾಮ ದೇವಾಲಯದಲ್ಲಿದ್ದ ಆಳ್ವಾರರ ಲೋಹದ ಮತ್ತು ಕಲ್ಲಿನ ಸ್ವತಂತ್ರ ಮೂರ್ತಿಗಳನ್ನು ನಾಶಪಡಿಸಲಾಯಿತು ಅಥವಾ ಲೂಟಿ ಮಾಡಲಾಗಿತ್ತು. ಅವುಗಳನ್ನು ಮಣ್ಣಿನೊಳಗೆ ಹೂಳಲಾಗಿತ್ತು ಎಂಬುದು ಇದೀಗ ನಡೆದ ಉತ್ಖನನದ ಮೂಲಕ ಗೊತ್ತಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.