ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉನ್ನತ ಶಿಕ್ಷಣ ಸಚಿವರಿಗೆ ಕರೆ ಮಾಡಿದ ಆನಂದ್‌ ಸಿಂಗ್‌

ಕುಲಪತಿ ಮುಂದುವರೆಸದಂತೆ ಕನ್ನಡ ವಿ.ವಿ. ಸಿಬ್ಬಂದಿ ಮನವಿ
Last Updated 21 ಫೆಬ್ರುವರಿ 2022, 9:43 IST
ಅಕ್ಷರ ಗಾತ್ರ

ಹೊಸಪೇಟೆ (ವಿಜಯನಗರ): ಇಲ್ಲಿನ ಹಂಪಿ ಕನ್ನಡ ವಿಶ್ವವಿದ್ಯಾಲಯದ ಬೋಧಕ ಹಾಗೂ ಬೋಧಕೇತರ ನೌಕರರ ಸಂಘದವರು ಭಾನುವಾರ ನಗರದಲ್ಲಿ ಸಚಿವ ಆನಂದ್‌ ಸಿಂಗ್‌ ಅವರನ್ನು ಭೇಟಿಯಾಗಿ, ವಿಶ್ವವಿದ್ಯಾಲಯದ ಹಾಲಿ ಕುಲಪತಿ ಪ್ರೊ.ಸ.ಚಿ. ರಮೇಶ ಅವರ ಅಧಿಕಾರದ ಅವಧಿ ವಿಸ್ತರಿಸದಂತೆ ಸರ್ಕಾರಕ್ಕೆ ಮನವರಿಕೆ ಮಾಡಿಕೊಡಬೇಕೆಂದು ಮನವಿ ಮಾಡಿದರು.

ಮನವಿ ಸ್ವೀಕರಿಸಿದ ಆನಂದ್‌ ಸಿಂಗ್‌, ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್‌. ಅಶ್ವತ್ಥನಾರಾಯಣ ಅವರಿಗೆ ಕರೆ ಮಾಡಿದರು. ‘ಡಾಕ್ಟ್ರೇ, ಕನ್ನಡ ವಿಶ್ವವಿದ್ಯಾಲಯದವರು ಬಂದು ನನಗೆ ಮನವಿ ಪತ್ರ ಕೊಟ್ಟಿದ್ದಾರೆ. ಈಗಿನ ಕುಲಪತಿ ಅವರನ್ನು ಮುಂದುವರೆಸದಂತೆ ಮನವಿ ಮಾಡಿದ್ದಾರೆ. ಅದನ್ನು ಸ್ವಲ್ಪ ನೋಡಿ’ ಎಂದರು. ‘ನಿಮ್ಮ ಕೋರಿಕೆಯನ್ನು ಉನ್ನತ ಶಿಕ್ಷಣ ಸಚಿವರಿಗೆ ತಿಳಿಸಿದ್ದೇನೆ. ಅವರು ಸೂಕ್ತ ಕ್ರಮ ಕೈಗೊಳ್ಳುತ್ತಾರೆ’ ಎಂದು ಹೇಳಿದರು.

ಅಧ್ಯಾಪಕರ ಸಂಘದ ಅಧ್ಯಕ್ಷ ಪ್ರೊ. ವಾಸುದೇವ ಬಡಿಗೇರ್‌, ಬೊಧಕೇತರ ನೌಕರರ ಸಂಘದ ಅಧ್ಯಕ್ಷ ಶ್ರೀನಿವಾಸ ನೇತೃತ್ವದಲ್ಲಿ ವಿಶ್ವವಿದ್ಯಾಲಯದ ಸಿಬ್ಬಂದಿ, ಸಂಶೋಧನಾ ವಿದ್ಯಾರ್ಥಿಗಳು ಆನಂದ್‌ ಸಿಂಗ್‌ ಅವರಿಗೆ ಮನವಿ ಸಲ್ಲಿಸಿ, ಕುಲಪತಿ ರಮೇಶ ವಿರುದ್ಧ ಭ್ರಷ್ಟಾಚಾರದ ಆರೋಪಗಳಿವೆ. ಅವರ ಅವಧಿಯಲ್ಲಿ ಸಿಬ್ಬಂದಿ ಬಹಳ ತೊಂದರೆ ಅನುಭವಿಸಿದ್ದಾರೆ. ಅನೇಕರಿಗೆ ಏಳೆಂಟು ತಿಂಗಳಿಂದ ವೇತನ ಪಾವತಿಸಿಲ್ಲ. ವಿದ್ಯಾರ್ಥಿಗಳಿಗೆ ಫೆಲೋಶಿಪ್‌ ನೀಡಿಲ್ಲ. ಫೆ. 21ರಂದು ಅವರ ಅಧಿಕಾರದ ಅವಧಿ ಕೊನೆಗೊಳ್ಳಲಿದೆ. ಅವಧಿ ವಿಸ್ತರಣೆಗೆ ಬಹಳ ಲಾಬಿ ನಡೆಸಿದ್ದಾರೆ. ಅದನ್ನು ತಡೆಯಬೇಕು. ವಿಶ್ವವಿದ್ಯಾಲಯಕ್ಕೆ ಸೂಕ್ತ ವ್ಯಕ್ತಿಯನ್ನು ಕುಲಪತಿಯಾಗಿ ನೇಮಿಸಿ, ಶೈಕ್ಷಣಿಕ ವಾತಾವರಣ ನಿರ್ಮಿಸಬೇಕೆಂದು ಮನವಿ ಮಾಡಿದರು.

ಪ್ರಭಾರ ಕುಲಪತಿಯಾಗಿ ನೇಮಿಸಿ:
‘ಹಾಲಿ ಕುಲಪತಿ ಪ್ರೊ.ಸ.ಚಿ. ರಮೇಶ ಅವರ ಅಧಿಕಾರದ ಅವಧಿ ಮುಗಿದ ನಂತರ ಪೂರ್ಣಾವಧಿ ಕುಲಪತಿ ನೇಮಕಗೊಳ್ಳುವವರೆಗೆ ವಿಶ್ವವಿದ್ಯಾಲಯದ ಹಿರಿಯ ಪ್ರಾಧ್ಯಾಪಕನಾದ ನನ್ನನ್ನು ಪ್ರಭಾರ ಕುಲಪತಿಯಾಗಿ ನೇಮಿಸಬೇಕು. ಈ ಹಿಂದೆ ಮಲ್ಲಿಕಾ ಎಸ್‌. ಘಂಟಿಯವರು ಕುಲಪತಿಯಿದ್ದಾಗ ವಿದೇಶ ಪ್ರವಾಸಕ್ಕೆ ಹೋಗಿದ್ದಾಗ ನನಗೆ ಪ್ರಭಾರ ವಹಿಸಿದ್ದರು. ನಾನೇ ಹಿರಿಯ ಪ್ರಾಧ್ಯಾಪಕನಾಗಿರುವುದರಿಂದ ನನ್ನ ಹೆಸರು ಪರಿಗಣಿಸಬೇಕು’ ಎಂದು ಹಿರಿಯ ಪ್ರಾಧ್ಯಾಪಕ ಕೆ.ಎಂ. ಮೇತ್ರಿ ಅವರು ರಾಜ್ಯಪಾಲ, ಮುಖ್ಯಮಂತ್ರಿಗೆ ಪತ್ರ ಬರೆದು ಮನವಿ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT