ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೊಸಪೇಟೆ: ಸಂಚಾರ ನಿಲ್ಲಿಸಿರುವ ‘ಸಂಚಾರ’ ಗ್ರಂಥಾಲಯ

ಒಂದೂವರೆ ವರ್ಷದಿಂದ ದೂಳು ತಿನ್ನುತ್ತಿರುವ ₹35 ಲಕ್ಷದ ಅತ್ಯಾಧುನಿಕ ವಾಹನ
Last Updated 17 ನವೆಂಬರ್ 2021, 8:16 IST
ಅಕ್ಷರ ಗಾತ್ರ

ಹೊಸಪೇಟೆ (ವಿಜಯನಗರ): ಜನಸಾಮಾನ್ಯರಲ್ಲಿ ಪುಸ್ತಕ ಪ್ರೀತಿ ಬೆಳೆಸಲು ಇಲ್ಲಿನ ಹಂಪಿ ಕನ್ನಡ ವಿಶ್ವವಿದ್ಯಾಲಯವು ಸಿದ್ಧಪಡಿಸಿರುವ ಸಂಚಾರ ಪುಸ್ತಕ ಮಳಿಗೆ (ಮೊಬೈಲ್‌ ಲೈಬ್ರರಿ) ಒಂದೂವರೆ ವರ್ಷದಿಂದ ನಿಂತ ಜಾಗದಲ್ಲೇ ನಿಂತಿದೆ.

ವಿನೂತನ ರೀತಿಯಲ್ಲಿ ವಿನ್ಯಾಸಗೊಳಿಸಿದ ವಾಹನ ಹೋದ ವರ್ಷದ ಮಾರ್ಚ್‌ನಲ್ಲೇ ವಿಶ್ವವಿದ್ಯಾಲಯದ ಅಂಗಳಕ್ಕೆ ಬಂದಿತ್ತು. ಆದರೆ, ಇದುವರೆಗೆ ಒಮ್ಮೆಯೂ ಅದು ವಿಶ್ವವಿದ್ಯಾಲಯದ ಪರಿಸರ ಬಿಟ್ಟು ಹೊರಗೆ ಹೋಗಿಲ್ಲ. ವಿಶ್ವವಿದ್ಯಾಲಯದಲ್ಲೂ ಬಳಕೆಯಾಗುತ್ತಿಲ್ಲ. ಕನಿಷ್ಠ ಪಕ್ಷ ಅದಕ್ಕೆ ಶೆಡ್‌ ಕೂಡ ನಿರ್ಮಿಸಿಲ್ಲ. ಬಯಲಲ್ಲೇ ನಿಲ್ಲಿಸಿರುವುದರಿಂದ ಬಿಸಿಲು, ಮಳೆಗೆ ಬಣ್ಣ ಕಳೆದುಕೊಳ್ಳುತ್ತಿದೆ. ಅದರ ಮೇಲಿನ ಲ್ಯಾಮಿನೇಷನ್‌ ಕಿತ್ತು ಹೋಗಿದೆ. ದೂಳು ತಿನ್ನುತ್ತಿದೆ.

₹35 ಲಕ್ಷ ವೆಚ್ಚದಲ್ಲಿ ಈ ವಾಹನವನ್ನು ಬೆಂಗಳೂರಿನ ಕೆ.ಆರ್‌.ಪುರಂನಲ್ಲಿ ವಿಶೇಷ ರೀತಿಯಲ್ಲಿ ಸಿದ್ಧಪಡಿಸಲಾಗಿದೆ. ಇದರ ಸಂಪೂರ್ಣ ವೆಚ್ಚವನ್ನು ಎಂ.ಎಸ್‌.ಪಿ.ಎಲ್‌. ಬಲ್ದೋಟ ಸಮೂಹ ಸಂಸ್ಥೆ ಭರಿಸಿ, ವಿನ್ಯಾಸಗೊಳಿಸಿ ಅದನ್ನು ಕನ್ನಡ ವಿಶ್ವವಿದ್ಯಾಲಯಕ್ಕೆ ಹಸ್ತಾಂತರಿಸಿದೆ. ಆದರೆ, ಸುದೀರ್ಘ ಸಮಯ ಕಳೆದರೂ ವಿಶ್ವವಿದ್ಯಾಲಯ ಅದನ್ನು ಸಮರ್ಪಕವಾಗಿ ಬಳಸಿಕೊಳ್ಳುವ ಗೋಜಿಗೆ ಹೋಗಿಲ್ಲ.

ಈ ವಾಹನದಲ್ಲಿ ಅತ್ಯಾಧುನಿಕ ಕ್ಯಾಮೆರಾ, ಜಿ.ಪಿ.ಎಸ್‌. ವ್ಯವಸ್ಥೆ ಇದೆ. ವಿಶ್ವವಿದ್ಯಾಲಯದ ಘೋಷವಾಕ್ಯ, ನುಡಿಮುತ್ತುಗಳು, ಅದರ ಚಿಹ್ನೆ ಹಾಗೂ ವಿಶ್ವವಿದ್ಯಾಲಯದ ಬೃಹತ್‌ ಚಿತ್ರ ಹೊರಭಾಗದಲ್ಲಿದೆ. ಒಳಭಾಗದಲ್ಲಿ ವಿಶೇಷವಾಗಿ ರ್‍ಯಾಕ್‌ಗಳನ್ನು ಸಿದ್ಧಪಡಿಸಲಾಗಿದೆ. ಅದರೊಳಗೆ ಪುಸ್ತಕಗಳನ್ನು ಜೋಡಿಸಿ ಇಡಲು ವ್ಯವಸ್ಥೆ ಇದೆ. ಎರಡು ಕಡೆ ಮೆಟ್ಟಿಲುಗಳ ವ್ಯವಸ್ಥೆ ಇದ್ದು, ಸಾರ್ವಜನಿಕರು ಒಳಗೆ ಪ್ರವೇಶಿಸಿ ಪುಸ್ತಕಗಳನ್ನು ನೋಡಬಹುದು.

ಈ ಸಂಚಾರ ವಾಹನವನ್ನು ಗ್ರಾಮೀಣ ಪ್ರದೇಶಗಳಿಗೆ ತೆಗೆದುಕೊಂಡು ಹೋಗಿ ಅಲ್ಲಿ ಪುಸ್ತಕ ಪ್ರದರ್ಶನ ಮತ್ತು ಮಾರಾಟಕ್ಕೆ ವ್ಯವಸ್ಥೆ ಮಾಡಲು ನಿರ್ಧರಿಸಲಾಗಿತ್ತು. ಜತೆಗೆ ಸ್ಥಳೀಯ ಸಂಪನ್ಮೂಲ ವ್ಯಕ್ತಿಗಳನ್ನು ಆಹ್ವಾನಿಸಿ ವಿಶೇಷ ಉಪನ್ಯಾಸ ಮಾಲಿಕೆಗಳನ್ನು ಆಯೋಜಿಸಲು ಯೋಜನೆ ರೂಪಿಸಲಾಗಿತ್ತು. ಆದರೆ, ಅದು ಕಾರ್ಯರೂಪಕ್ಕೆ ಬಂದಿಲ್ಲ.

ರಾಜ್ಯದ ನಾನಾ ಭಾಗಗಳಲ್ಲಿ ನಡೆಯುವ ಕನ್ನಡ ಸಾಹಿತ್ಯ ಸಮ್ಮೇಳನ, ವಿಚಾರಗೋಷ್ಠಿ, ಪ್ರಮುಖ ಕಾರ್ಯಕ್ರಮಗಳಿಗೂ ಈ ಸಂಚಾರ ಮಳಿಗೆ ಕಳುಹಿಸಲು ಉದ್ದೇಶಿಸಲಾಗಿತ್ತು. ಕನ್ನಡ ವಿಶ್ವವಿದ್ಯಾಲಯದ ಪ್ರಸಾರಾಂಗ ಪ್ರಕಟಿಸಿರುವ ಎಲ್ಲ ಪುಸ್ತಕಗಳು ಇದರಲ್ಲಿ ಪ್ರದರ್ಶನ ಮತ್ತು ಮಾರಾಟ ಮಾಡಲು ತೀರ್ಮಾನಿಸಲಾಗಿತ್ತು. ಆದರೆ, ವಿಶ್ವವಿದ್ಯಾಲಯದಿಂದ ಹೊರಗೆ ಸಂಚರಿಸಿಲ್ಲ. ಉತ್ತಮ ಉದ್ದೇಶಕ್ಕಾಗಿ ಎಂಎಸ್‌ಪಿಎಲ್‌ ಬಲ್ದೋಟ ಸಮೂಹ ಸಂಸ್ಥೆ ಅಪಾರ ಹಣ ವೆಚ್ಚ ಮಾಡಿ ಈ ವಾಹನ ಕೊಡುಗೆ ರೂಪದಲ್ಲಿ ನೀಡಿದೆ. ಆದರೆ, ವಿಶ್ವವಿದ್ಯಾಲಯ ಅದನ್ನು ಸೂಕ್ತ ರೀತಿಯಲ್ಲಿ ಬಳಸಿಕೊಂಡಿಲ್ಲ.

‘ಸಂಚಾರ ಗ್ರಂಥಾಲಯದ ಆಶಯ ಈಡೇರಿಲ್ಲ. ವಿಶ್ವವಿದ್ಯಾಲಯದಲ್ಲಿ ನಿರ್ಜೀವ ಸ್ಮಾರಕವಾಗಿ ನಿಂತಿದೆ. ಖಾಸಗಿ ಸಂಸ್ಥೆಯವರು ಕೊಡುಗೆ ರೂಪದಲ್ಲಿ ಕೊಟ್ಟ ಈ ವಾಹನವನ್ನು ಸರಿಯಾಗಿ ಬಳಸಿಕೊಳ್ಳಲು ಆಗದಿದ್ದರೆ ಹೇಗೆ? ಈ ರೀತಿ ಮಾಡಿದರೆ ಮುಂದೆ ಯಾರಾದರೂ ಕೊಡುಗೆ ಕೊಡಲು ಮುಂದೆ ಬರುತ್ತಾರಾ? ವಿಶ್ವವಿದ್ಯಾಲಯದ ಹೆಸರಿಗೆ ಇದು ಕಪ್ಪು ಚುಕ್ಕೆಯಲ್ಲವೇ?’ ಎಂದು ಹೆಸರು ಹೇಳಲಿಚ್ಛಿಸದ ಸಂಶೋಧನಾ ವಿದ್ಯಾರ್ಥಿಗಳು ತಿಳಿಸಿದ್ದಾರೆ.

ಈ ಸಂಬಂಧ ಬಲ್ದೋಟ ವ್ಯವಸ್ಥಾಪಕ ನಿರ್ದೇಶಕ ನರೇಂದ್ರ ಕುಮಾರ ಬಲ್ದೋಟ ಅವರನ್ನು ಸಂಪರ್ಕಿಸಿದಾಗ ಮಾಹಿತಿಗೆ ಲಭ್ಯರಾಗಲಿಲ್ಲ. ಆದರೆ, ಅವರ ಕಚೇರಿಯ ಅಧಿಕಾರಿ ಪ್ರತಿಕ್ರಿಯಿಸಿ, ‘ಒಳ್ಳೆಯ ಉದ್ದೇಶಕ್ಕಾಗಿ ನೀಡಿರುವ ವಾಹನವನ್ನು ಸಮಪರ್ಕವಾಗಿ ಬಳಸಿಕೊಳ್ಳುತ್ತಿಲ್ಲ ಎನ್ನುವ ವಿಷಯ ತಿಳಿದು ನೋವಾಗಿದೆ. ಈ ಕುರಿತು ವಿಶ್ವವಿದ್ಯಾಲಯಕ್ಕೆ ಕಾರಣ ಕೇಳಲಾಗುವುದು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT