ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೊಸಪೇಟೆ| ಹಂಪಿ ಕನ್ನಡ ವಿಶ್ವವಿದ್ಯಾಲಯ: ಪೂರ್ಣಾವಧಿಗೆ ಹೊಸ ಕುಲಪತಿ ಅನುಮಾನ

ಕುಲಪತಿ ಆಯ್ಕೆಗೆ ಇನ್ನೊಂದೇ ದಿನ ಬಾಕಿ; ಅಸ್ತಿತ್ವಕ್ಕೆ ಬಾರದ ಶೋಧನಾ ಸಮಿತಿ
Last Updated 20 ಫೆಬ್ರುವರಿ 2023, 5:12 IST
ಅಕ್ಷರ ಗಾತ್ರ

ಹೊಸಪೇಟೆ (ವಿಜಯನಗರ): ಹಂಪಿ ಕನ್ನಡ ವಿಶ್ವವಿದ್ಯಾಲಯದ ಹಾಲಿ ಕುಲಪತಿ ಅಧಿಕಾರದ ಅವಧಿ (ಫೆ.21) ಕೊನೆಗೊಳ್ಳಲು ಇನ್ನೊಂದೇ ದಿನ ಬಾಕಿ ಉಳಿದಿದೆ. ಆದರೆ, ಇದುವರೆಗೆ ಶೋಧನಾ ಸಮಿತಿ ಅಸ್ತಿತ್ವಕ್ಕೆ ಬಂದಿಲ್ಲ.

ಇದರಿಂದಾಗಿ ಕನ್ನಡ ವಿಶ್ವವಿದ್ಯಾಲಯಕ್ಕೆ ಮೂರು ವರ್ಷ ಪೂರ್ಣಾವಧಿಗೆ ಕುಲಪತಿ ನೇಮಕಗೊಳ್ಳುವುದು ಸದ್ಯದ ಮಟ್ಟಿಗೆ ಅನುಮಾನ. ಕನ್ನಡ ವಿ.ವಿ.ಗೆ ಹೊಸ ಕುಲಪತಿ ಆಯ್ಕೆಗೆ 2023ರ ಜ.2ರಂದು ಉನ್ನತ ಶಿಕ್ಷಣ ಇಲಾಖೆಯು ಅಧಿಸೂಚನೆ ಹೊರಡಿಸಿ ಜ. 22ರ ವರೆಗೆ ಅರ್ಜಿಗಳನ್ನು ಸ್ವೀಕರಿಸಿತ್ತು. ಫೆ. 9ರಂದು 22 ಜನರ ಪಟ್ಟಿ ಇಲಾಖೆಯ ವೈಬ್‌ಸೈಟ್‌ನಲ್ಲಿ ಪ್ರಕಟಿಸಿತ್ತು. ಆಕ್ಷೇಪಣೆಗೆ ಫೆ. 15 ಕೊನೆ ದಿನವಾಗಿತ್ತು. ಇದರ ನಡುವೆ ಶೋಧನಾ ಸಮಿತಿ ಸಭೆ ಸೇರಿ ಮೂವರ ಹೆಸರನ್ನು ರಾಜ್ಯಪಾಲರಿಗೆ ಶಿಫಾರಸು ಮಾಡಬೇಕಿತ್ತು. ಆದರೆ, ಇದುವರೆಗೆ ಶೋಧನಾ ಸಮಿತಿ ರಚನೆಗೊಂಡಿಲ್ಲ.

ಉತ್ತರ ಪ್ರದೇಶದ ಮಹಾತ್ಮ ಗಾಂಧಿ ಚಿತ್ರಕೂಟ ಗ್ರಾಮೋದಯ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಎನ್‌.ಸಿ. ಗೌತಮ್‌, ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯದ ಕುಲಪತಿ ಸಿದ್ದು ಪಿ. ಅಲಗೂರು ಹಾಗೂ ಕರ್ನಾಟಕ ವಿ.ವಿ. ವಿಶ್ರಾಂತ ಕುಲಪತಿ ಪ್ರೊ.ಎಸ್‌.ಕೆ. ಸೈದಾಪುರ ಅವರ ಹೆಸರನ್ನು ಶೋಧನಾ ಸಮಿತಿಗೆ ನಾಮನಿರ್ದೇಶನ ಮಾಡಲಾಗಿದೆ. ಆದರೆ, ‘ಪ್ರಜಾವಾಣಿ’ಗೆ ಉನ್ನತ ಮೂಲಗಳಿಂದ ಸಿಕ್ಕಿರುವ ಮಾಹಿತಿ ಪ್ರಕಾರ, ಇದುವರೆಗೆ ಯಾರೊಬ್ಬರಿಗೂ ಸರ್ಕಾರದಿಂದ ಪತ್ರ ತಲುಪಿಲ್ಲ. ಸಭೆಯೂ ಸೇರಿಲ್ಲ. ಹೆಸರು ಹೇಳಲಿಚ್ಛಿಸದ ಸಮಿತಿಯ ಸದಸ್ಯರೊಬ್ಬರು ಕೂಡ ಈ ವಿಷಯ ಖಚಿತಪಡಿಸಿದ್ದಾರೆ.

ಮುಂದೇನಾಗಬಹುದು?:

ಕುಲಪತಿ ಹುದ್ದೆಗೆ ಅರ್ಜಿ ಸ್ವೀಕರಿಸಿದ ನಂತರ ಆ ಅರ್ಜಿಗಳನ್ನು ಶೋಧನಾ ಸಮಿತಿ ಪರಿಶೀಲಿಸುತ್ತದೆ. ಅದಕ್ಕಾಗಿ ಕನಿಷ್ಠ ಎರಡು ವಾರ ಸಮಯ ಬೇಕು. ಆದರೆ, ಇನ್ನೊಂದೆ ದಿನ ಬಾಕಿ ಉಳಿದರೂ ಸಮಿತಿ ರಚನೆಯಾಗಿಲ್ಲ. ಈಗ ರಾಜ್ಯಪಾಲರಿಗೆ ತಾತ್ಕಾಲಿಕವಾಗಿ ವಿಶ್ವವಿದ್ಯಾಲಯದ ಹಿರಿಯ ಪ್ರಾಧ್ಯಾಪಕರಿಗೆ ಜವಾಬ್ದಾರಿ ವಹಿಸುವುದು ಬಿಟ್ಟರೆ ಬೇರೆ ಆಯ್ಕೆಗಳಿಲ್ಲ.

ರಾಜ್ಯ ವಿಧಾನಸಭೆ ಚುನಾವಣೆಗೆ ನೀತಿ ಸಂಹಿತೆ ಘೋಷಣೆಯಾಗುವುದಕ್ಕಿಂತ ಮೊದಲು ಶೋಧನಾ ಸಮಿತಿ ಅಸ್ತಿತ್ವಕ್ಕೆ ಬಂದು, ಸಭೆ ಸೇರಿದರಷ್ಟೇ ಪೂರ್ಣಾವಧಿಗೆ ಕುಲಪತಿ ಹುದ್ದೆ ತುಂಬಲು ಅವಕಾಶಗಳಿವೆ. ಇಲ್ಲವಾದರೆ ಹಿರಿಯ ಪ್ರಾಧ್ಯಾಪಕರನ್ನೇ ತಾತ್ಕಾಲಿಕವಾಗಿ ಮುಂದುವರೆಸಬೇಕಾಗುತ್ತದೆ.

ಹೈಕೋರ್ಟ್‌ ನೋಟಿಸ್‌:

ಕುಲಪತಿ ಹುದ್ದೆಗೆ ಅರ್ಜಿ ಸಲ್ಲಿಸಿದವರಲ್ಲಿ ಹಾಲಿ ಕುಲಪತಿ ಪ್ರೊ.ಸ.ಚಿ. ರಮೇಶ ಕೂಡ ಸೇರಿದ್ದಾರೆ. ಒಬ್ಬ ವ್ಯಕ್ತಿ ಗರಿಷ್ಠ ಆರು ವರ್ಷ ಕುಲಪತಿಯಾಗಿ ಮುಂದುವರೆಯಬಹುದು. ಮೊದಲ ಸಲ ಮೂರು ವರ್ಷ ನೇಮಕಗೊಂಡವರು, ಮತ್ತೊಂದು ಅವಧಿಗೆ ಮರು ನೇಮಕಗೊಳ್ಳಬಹುದು. ಇಲ್ಲದಿದ್ದರೆ ಮೊದಲ ಅವಧಿ ಪೂರ್ಣಗೊಂಡ ನಂತರ ಒಂದು ವರ್ಷ ಮೀರದಂತೆ ಅವಧಿ ವಿಸ್ತರಿಸಬಹುದು. 2023ರ ಫೆ. 21ಕ್ಕೆ ರಮೇಶ ನಾಲ್ಕು ವರ್ಷ ಅವಧಿ ಪೂರೈಸಿದಂತಾಗುತ್ತದೆ. ರಮೇಶ ಅವರ ಮರು ನೇಮಕ ಮತ್ತು ಅವಧಿ ವಿಸ್ತರಣೆಗೆ ಅವಕಾಶಗಳಿಲ್ಲ. ಒಂದುವೇಳೆ ರಾಜ್ಯಪಾಲರು ಎರಡರಲ್ಲಿ ಯಾವುದಾದರೂ ಒಂದು ಮಾಡಿದರೂ ಸರ್ಕಾರವೇ ರಚಿಸಿದ ಹಂಪಿ ಕನ್ನಡ ವಿ.ವಿ. 1991ರ ಅಧಿನಿಯಮ ಉಲ್ಲಂಘಿಸಿದಂತಾಗುತ್ತದೆ.

ಈಗ ಇದೇ ವಿಷಯವನ್ನು ಮುಂದಿಟ್ಟುಕೊಂಡು ವಿ.ವಿ. ಆಡಳಿತ ಮಂಡಳಿ ಸದಸ್ಯರಾದ ಶರಣಗೌಡ ಸುಂಕೇಶ್ವರಹಾಳ ಹಾಗೂ ಬಸವರಾಜ ಕೊಪ್ಪರ ಅವರು ಧಾರವಾಡ ಸಂಚಾರಿ ಹೈಕೋರ್ಟ್‌ ಪೀಠದ ಮೊರೆ ಹೋಗಿದ್ದಾರೆ. ಇಷ್ಟೇ ಅಲ್ಲ, ರಮೇಶ ಅವರ ಅವಧಿಯಲ್ಲಿ ಸಾಕಷ್ಟು ಅಕ್ರಮಗಳು ನಡೆದಿದ್ದು, ಅದರ ಬಗ್ಗೆ ತನಿಖೆಗೂ ಒತ್ತಾಯಿಸಿದ್ದಾರೆ. ಈ ಕುರಿತು ಹೈಕೋರ್ಟ್‌ ಉನ್ನತ ಶಿಕ್ಷಣ ಇಲಾಖೆಯ ಕಾರ್ಯದರ್ಶಿ, ರಾಜ್ಯಪಾಲರ ಕಚೇರಿಯ ಕಾರ್ಯದರ್ಶಿ, ಕನ್ನಡ ವಿ.ವಿ. ಕುಲಪತಿ ಹಾಗೂ ಕುಲಸಚಿವರಿಗೆ ನೋಟಿಸ್‌ ಜಾರಿ ಮಾಡಿದೆ. ಈ ಬಗ್ಗೆ ಅಗತ್ಯ ಮಾಹಿತಿ ಸಲ್ಲಿಸಬೇಕೆಂದು ಕೋರ್ಟ್‌ ಸೂಚಿಸಿದೆ.

ತರಾತುರಿಯಲ್ಲಿ ಮುಂಬಡ್ತಿ ಆರೋಪ:

ಹಂಪಿ ಕನ್ನಡ ವಿಶ್ವವಿದ್ಯಾಲಯದ ಹಾಲಿ ಕುಲಪತಿ ಪ್ರೊ.ಸ.ಚಿ. ರಮೇಶ ಅವರ ಅವಧಿ ಫೆ. 21ರಂದು ಕೊನೆಗೊಳ್ಳಲಿದ್ದು, ವಿವಿಧ ವೃಂದಗಳ ಬೋಧಕೇತರ ಸಿಬ್ಬಂದಿಗೆ ತರಾತುರಿಯಲ್ಲಿ ಮುಂಬಡ್ತಿ ಕೊಡುತ್ತಿದ್ದಾರೆ ಎಂಬ ಆರೋಪಗಳು ಕೇಳಿ ಬಂದಿವೆ.

ಈ ಸಂಬಂಧ ವಿ.ವಿ. ಆಡಳಿತ ಮಂಡಳಿ ಸದಸ್ಯ ಶರಣಗೌಡ ಸುಂಕೇಶ್ವರಹಾಳ ಅವರು ರಾಜ್ಯಪಾಲ ಹಾಗೂ ಉನ್ನತ ಶಿಕ್ಷಣ ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿಗೆ ಪತ್ರ ಬರೆದಿದ್ದಾರೆ. ವಿ.ವಿ. ಬೋಧಕೇತರ ಸಿಬ್ಬಂದಿ ಸಹ ಕುಲಸಚಿವರಿಗೆ ದೂರು ಸಲ್ಲಿಸಿ, ಮುಂಬಡ್ತಿ ಪ್ರಕ್ರಿಯೆ ತಡೆ ಹಿಡಿಯಬೇಕೆಂದು ಕೋರಿದ್ದಾರೆ.

‘ಇದುವರೆಗೆ ವಿ.ವಿ. ವೆಬ್‌ಸೈಟಿನಲ್ಲಿ ಜೇಷ್ಠತಾ ಪಟ್ಟಿ ಪ್ರಕಟಿಸಿಲ್ಲ. ಅದಕ್ಕೆ ಆಕ್ಷೇಪಣೆ ಕರೆದ ನಂತರ ನಿಯಮಬದ್ಧವಾಗಿ ಜೇಷ್ಠತಾ ಪಟ್ಟಿ ಪ್ರಕಟಿಸಬೇಕು. ಅದ್ಯಾವುದೂ ಮಾಡದೇ ರಮೇಶ ಅವರು ತಮಗೆ ಬೇಕಾದವರಿಗೆ ಹಾಗೂ ಹಣ ಪಡೆದು ಮುಂಬಡ್ತಿ ಕೊಡುತ್ತಿದ್ದಾರೆ. ಇದನ್ನು ತಡೆಯಬೇಕು. ಇಲ್ಲವಾದರೆ ವಿ.ವಿ.ಯಲ್ಲಿ ಆಂತರಿಕ ಸಂಘರ್ಷಕ್ಕೆ ಎಡೆಮಾಡಿಕೊಟ್ಟಂತಾಗುತ್ತದೆ’ ಎಂದು ವಿ.ವಿ. ಹಿರಿಯ ಪ್ರಾಧ್ಯಾಪಕರೊಬ್ಬರು ಆತಂಕ ವ್ಯಕ್ತಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT