ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಫಲಿತಾಂಶ ಬಂದು ವರ್ಷ ಪೂರ್ಣ: ಅಂಕಪಟ್ಟಿ ಸಿಗದೇ ವಿದ್ಯಾರ್ಥಿಗಳು ಪೇಚಿಗೆ

ಉನ್ನತ ಶಿಕ್ಷಣ, ಹುದ್ದೆ ಗಿಟ್ಟಿಸಲು ಸಮಸ್ಯೆ
Last Updated 9 ಮಾರ್ಚ್ 2022, 19:30 IST
ಅಕ್ಷರ ಗಾತ್ರ

ಹೊಸಪೇಟೆ (ವಿಜಯನಗರ): ಬ್ಯಾಚುಲರ್ ಆಫ್‌ ವಿಶುವಲ್‌ ಆರ್ಟ್ಸ್‌ (ಬಿವಿಎ), ಸ್ಪೆಶಲೈಜೇಶನ್‌ ಆಫ್‌ ಡಿಪ್ಲೊಮಾ ಕೋರ್ಸ್‌ ಮುಗಿಸಿ ವರ್ಷ ಕಳೆದರೂ ಇದುವರೆಗೆ ವಿದ್ಯಾರ್ಥಿಗಳಿಗೆ ಅಂಕಪಟ್ಟಿ ಕೈಸೇರಿಲ್ಲ.

2020–21ನೇ ಸಾಲಿನ ಎರಡೂ ಕೋರ್ಸ್‌ಗಳ ಫಲಿತಾಂಶ ಬಂದು ವರ್ಷ ಕಳೆದಿದೆ. ಇಂದಲ್ಲ, ನಾಳೆ ಅಂಕಪಟ್ಟಿ ಕೈಸೇರಬಹುದು ಎಂಬ ವಿದ್ಯಾರ್ಥಿಗಳ ನಿರೀಕ್ಷೆ ಹುಸಿಯಾಗಿದೆ. ಅಂಕಪಟ್ಟಿ ಬರದೇ ಇರುವುದರಿಂದ ಉನ್ನತ ಶಿಕ್ಷಣ ಪಡೆಯಲು ತೊಡಕಾಗಿದೆ. ವಿವಿಧ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ತೊಂದರೆ ಅನುಭವಿಸುತ್ತಿದ್ದಾರೆ.

ಅಂದಹಾಗೆ, ಹಂಪಿ ಕನ್ನಡ ವಿಶ್ವವಿದ್ಯಾಲಯದ ವ್ಯಾಪ್ತಿಗೆ ರಾಜ್ಯದಲ್ಲಿ 45 ಪದವಿ, 14 ಡಿಪ್ಲೊಮಾ ಕಾಲೇಜುಗಳು ಬರುತ್ತವೆ. 2,000ಕ್ಕೂ ಅಧಿಕ ವಿದ್ಯಾರ್ಥಿಗಳು ತೇರ್ಗಡೆ ಹೊಂದಿದ್ದಾರೆ. ಈ ಪೈಕಿ ಕೆಲವರು ಉನ್ನತ ಶಿಕ್ಷಣದತ್ತ ಮುಖ ಮಾಡಿದರೆ, ಮತ್ತೆ ಕೆಲವರು ಉದ್ಯೋಗಕ್ಕಾಗಿ ಪ್ರಯತ್ನ ನಡೆಸಿದ್ದಾರೆ. ಆದರೆ, ಅಂಕಪಟ್ಟಿಯೇ ಕೈಸೇರದ ಕಾರಣ ಅವರಿಗೆ ದಿಕ್ಕು ತೋಚದಾಗಿದೆ.

ಈ ಹಿಂದೆ ವಿಶ್ವವಿದ್ಯಾಲಯವೇ ಅಂಕಪಟ್ಟಿಗಳನ್ನು ನೀಡುತ್ತಿತ್ತು. ಆದರೆ, ಕೆಲವು ವರ್ಷಗಳಿಂದ ಸರ್ಕಾರವು ಕಿಯೋನಿಕ್ಸ್‌, ನ್ಯಾಡ್ ಮೂಲಕ ಕೊಡುತ್ತಿದೆ. ವಿದ್ಯಾರ್ಥಿಗಳಿಗೆ ಆಗುತ್ತಿರುವ ಸಮಸ್ಯೆಯನ್ನು ವಿಶ್ವವಿದ್ಯಾಲಯವು ಸರ್ಕಾರದ ಗಮನಕ್ಕೆ ತಂದಿದೆ. ಇಷ್ಟೇ ಅಲ್ಲ, ಸಮಸ್ಯೆ ಗಮನಕ್ಕೆ ಬರುತ್ತಿದ್ದಂತೆ ವಿಶ್ವವಿದ್ಯಾಲಯವು ತುರ್ತು ಇರುವವರಿಗೆ ಪ್ರಾವಿಷನಲ್‌ ಅಂಕಪಟ್ಟಿ ಕೊಡುತ್ತಿದೆ. ಹಲವು ವಿದ್ಯಾರ್ಥಿಗಳು, ಕಲಾ ಕಾಲೇಜಿನ ಪ್ರಾಚಾರ್ಯರು ಇದನ್ನು ದೃಢಪಡಿಸಿದ್ದಾರೆ.

ಪ್ರಾವಿಷನಲ್‌ ಅಂಕಪಟ್ಟಿ ಮೂಲಕ ಉನ್ನತ ಶಿಕ್ಷಣಕ್ಕೆ ಪ್ರವೇಶ ಪಡೆಯಬಹುದು. ಆದರೆ, ಹುದ್ದೆಗಳಿಗೆ ಅರ್ಜಿ ಸಲ್ಲಿಸಿ, ಸಂದರ್ಶನಕ್ಕೆ ಹೋದಾಗ ಮೂಲ ಅಂಕಪಟ್ಟಿ ಕೇಳುತ್ತಿರುವುದರಿಂದ ಹಲವರು ಉದ್ಯೋಗದಿಂದ ವಂಚಿತರಾಗುತ್ತಿದ್ದಾರೆ.
‘ಖಾಸಗಿ ಸಂಸ್ಥೆಯಲ್ಲಿ ನೌಕರಿಗಾಗಿ ಅರ್ಜಿ ಸಲ್ಲಿಸಿದ್ದೆ. ಸಂದರ್ಶನಕ್ಕಾಗಿ ನನ್ನನ್ನು ಕರೆದಿದ್ದರು. ಆದರೆ, ಮೂಲ ಅಂಕಪಟ್ಟಿ ಇಲ್ಲ ಎಂದದ್ದಕ್ಕೆ ಅವರು ನನ್ನ ಪರಿಗಣಿಸಿಲ್ಲ. ಸರ್ಕಾರ ಈ ಹಿಂದಿನಂತೆ ವಿಶ್ವವಿದ್ಯಾಲಯದಿಂದಲೇ ಅಂಕಪಟ್ಟಿ ಕೊಡಿಸಬೇಕು.

ಇಲ್ಲವಾದರೆ ತುರ್ತಾಗಿ ಕಿಯೋನಿಕ್ಸ್‌ ಮೂಲಕ ಕೊಡಿಸುವ ಕೆಲಸ ಮಾಡಿಸಬೇಕು. ಈಗಾಗಲೇ ಫಲಿತಾಂಶ ಬಂದು ವರ್ಷ ಕಳೆದಿದೆ. ಇನ್ನೆಷ್ಟು ವರ್ಷ ಅಂಕಪಟ್ಟಿಗೆ ಕಾಯುವುದು’ ಎಂದು ಹೆಸರು ಹೇಳಲಿಚ್ಛಿಸದ ವಿದ್ಯಾರ್ಥಿನಿಯೊಬ್ಬರು ಪ್ರಶ್ನಿಸಿದರು.

‘ಕಿಯೋನಿಕ್ಸ್‌, ನ್ಯಾಡ್‌ನಿಂದ ಇನ್ನಷ್ಟೇ ಡಿಜಿಟಲ್‌ ಅಂಕಪಟ್ಟಿಗಳನ್ನು ವಿತರಿಸಬೇಕಿದೆ. ಯಾರಿಗಾದರೂ ತುರ್ತಾಗಿ ಬೇಕಿದ್ದರೆ ವಿಶ್ವವಿದ್ಯಾಲಯಕ್ಕೆ ಬಂದು ಉಚಿತವಾಗಿ ಪಡೆಯಬಹುದು. ಶಿಷ್ಯವೇತನ, ಉನ್ನತ ಶಿಕ್ಷಣಕ್ಕೆ ಪ್ರಾವಿಷನಲ್‌ ಅಂಕಪಟ್ಟಿ ಪರಿಗಣಿಸಲಾಗುತ್ತದೆ. ಆಧಾರ್‌ ಕಾರ್ಡ್‌, ಮೊಬೈಲ್‌ ನಂಬರ್‌, ಇಮೇಲ್‌ ಐ.ಡಿ. ಸೇರಿದಂತೆ ವಿದ್ಯಾರ್ಥಿಗಳ ಎಲ್ಲ ವಿವರ ದಾಖಲಿಸುತ್ತಿರುವುದರಿಂದ ವಿಳಂಬವಾಗಿದೆ ಎಂದು ಗೊತ್ತಾಗಿದ್ದು, ಇಷ್ಟರಲ್ಲೇ ಬರುವ ಸಾಧ್ಯತೆ ಇದೆ’ ಎಂದು ಕನ್ನಡ ವಿಶ್ವವಿದ್ಯಾಲಯದ ಚಿತ್ರಕಲಾ ವಿಭಾಗದ ಮುಖ್ಯಸ್ಥ ಶ್ರೀನಿವಾಸ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT