ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಂಪಿ ಉತ್ಸವಕ್ಕೆ ಹಣ ಮೀಸಲಿಟ್ಟರೆ ಚಂದಾ ಕೇಳುವುದು ತಪ್ಪುತ್ತದೆ: ಆನಂದ್‌ ಸಿಂಗ್‌

₹10 ಕೋಟಿ ಹಂಪಿ ಉತ್ಸವಕ್ಕೆ ಮೀಸಲಿಡಲು ರಾಜ್ಯ ಸರ್ಕಾರಕ್ಕೆ ಮನವಿ
Last Updated 3 ನವೆಂಬರ್ 2021, 8:44 IST
ಅಕ್ಷರ ಗಾತ್ರ

ಹೊಸಪೇಟೆ (ವಿಜಯನಗರ): ‘ಹಂಪಿ ಉತ್ಸವಕ್ಕೆ ರಾಜ್ಯ ಸರ್ಕಾರ ಪ್ರತಿ ವರ್ಷ ಹಣ ಮೀಸಲಿಟ್ಟರೆ ಚಂದಾ ಕೇಳುವುದು ತಪ್ಪುತ್ತದೆ. ನಿರ್ದಿಷ್ಟ ಪ್ರಮಾಣದ ಹಣವಿದ್ದರೆ ಧೈರ್ಯದಿಂದ ಕಾರ್ಯಕ್ರಮ ಕೂಡ ಸಂಘಟಿಸಬಹುದು’ ಎಂದು ಪ್ರವಾಸೋದ್ಯಮ, ಪರಿಸರ ಮತ್ತು ಜೀವಿಶಾಸ್ತ್ರ ಸಚಿವ ಆನಂದ್‌ ಸಿಂಗ್‌ ಹೇಳಿದರು.

‘ಮೈಸೂರು ದಸರಾದಂತೆ ಪ್ರತಿ ವರ್ಷ ಹಂಪಿ ಉತ್ಸವ ನಡೆಯಬೇಕು. ಅದಕ್ಕಾಗಿ ಸರ್ಕಾರ ಪ್ರತಿವರ್ಷ ₹10 ಕೋಟಿ ತೆಗೆದಿರಿಸಬೇಕು. ಈ ಕುರಿತ ಪ್ರಸ್ತಾವವನ್ನು ಹಣಕಾಸು ಇಲಾಖೆಗೆ ಕಳಿಸಲಾಗಿದೆ. ನ. 8ರಂದು ನಡೆಯಲಿರುವ ಸಚಿವ ಸಂಪುಟ ಸಭೆಯಲ್ಲಿ ಈ ವಿಷಯ ಚರ್ಚೆಗೆ ಬರಲಿದೆ. ಅಲ್ಲಿ ಒಪ್ಪಿಗೆ ಸಿಗುವ ಭರವಸೆ ಇದೆ’ ಎಂದು ಬುಧವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

‘ಒಂದುವೇಳೆ ಸರ್ಕಾರ ಹಂಪಿ ಉತ್ಸವಕ್ಕೆ ಹಣ ಮೀಸಲಿಟ್ಟರೆ ಸಾರ್ವಜನಿಕರಿಂದ ಚಂದಾ ಕೇಳುವುದು ತಪ್ಪುತ್ತದೆ. ಕಲಾವಿದರಿಗೆ ಹಣ ಕೊಡಬಹುದು. ಯೋಜನಾಬದ್ಧವಾಗಿ ಕಾರ್ಯಕ್ರಮ ಸಂಘಟಿಸಬಹುದು. ಹಣವೇ ಇಲ್ಲದಿದ್ದರೆ ಕಾರ್ಯಕ್ರಮ ಸಂಘಟಿಸಲು ಆಗುವುದಿಲ್ಲ’ ಎಂದರು.

‘ನ. 3ರಿಂದ 5ರ ವರೆಗೆ ಹಂಪಿ ಉತ್ಸವ ಮಾಡಬೇಕಿತ್ತು. ಆದರೆ, ಸಾಧ್ಯವಾಗಿಲ್ಲ. ಬರುವ ವರ್ಷ ಬಹಳ ವ್ಯವಸ್ಥಿತವಾಗಿ ಹಮ್ಮಿಕೊಳ್ಳಲಾಗುವುದು. ಇತ್ತೀಚೆಗಷ್ಟೇ ವಿಜಯನಗರ ಜಿಲ್ಲಾ ಉದ್ಘಾಟನಾ ಸಮಾರಂಭ ಮುಗಿದಿದೆ. ಈಗ ಪುನಃ ತರಾತುರಿಯಲ್ಲಿ ಹಂಪಿ ಉತ್ಸವ ಮಾಡಲು ಆಗುವುದಿಲ್ಲ. ದಸರಾ ಸಂದರ್ಭದಲ್ಲಿ ಹಂಪಿ ಉತ್ಸವ ಆಚರಿಸಬೇಕಾ? ಅಥವಾ ಈ ಹಿಂದಿನಂತೆ ನ. 3ರಿಂದ 5ರ ವರೆಗೆ ಆಚರಿಸಬೇಕಾ? ಎನ್ನುವುದರ ಬಗ್ಗೆ ಸಾರ್ವಜನಿಕರ ಅಭಿಪ್ರಾಯ ಪಡೆಯಲಾಗುವುದು. ಬಳಿಕ ನಿರ್ದಿಷ್ಟ ದಿನಾಂಕ ನಿಗದಿಪಡಿಸಲಾಗುವುದು. ಪ್ರತಿ ವರ್ಷ ಅದೇ ದಿನ ತಪ್ಪದೇ ಉತ್ಸವ ನಡೆಸಲಾಗುವುದು’ ಎಂದು ತಿಳಿಸಿದರು.

5ಕ್ಕೆ ಹಂಪಿಯಲ್ಲಿ ವಿಶೇಷ ಪೂಜೆ:

‘ಕೇದಾರನಾಥ ದೇವಸ್ಥಾನ ಜೀರ್ಣೊದ್ಧಾರಗೊಳಿಸಿದ ನಂತರ ಅಲ್ಲಿ ನ. 5ರಂದು ಪ್ರಧಾನಿ ನರೇಂದ್ರ ಮೋದಿಯವರು ವಿಶೇಷ ಪೂಜೆ ನೆರವೇರಿಸುವರು. ಆ ದಿನ ಹಂಪಿ ಸೇರಿದಂತೆ ರಾಜ್ಯ ಒಂಬತ್ತು ಪ್ರಮುಖ ಶಿವ ದೇವಾಲಯಗಳಲ್ಲಿ ಪೂಜೆ ನಡೆಯಲಿದೆ’ ಎಂದು ಸಚಿವ ಆನಂದ್‌ ಸಿಂಗ್‌ ಹೇಳಿದರು.

‘ಬೆಳಿಗ್ಗೆ 8ಕ್ಕೆ ಹಂಪಿಯಲ್ಲಿ ವೇದಿಕೆ ಕಾರ್ಯಕ್ರಮ ಜರುಗಲಿದೆ. ಹಂಪಿ ವಿದ್ಯಾರಣ್ಯ ಭಾರತಿ ಸ್ವಾಮೀಜಿ ಅವರು ಕೇದಾರನಾಥದ ಮಹತ್ವ ತಿಳಿಸುವರು. ದೇವಸ್ಥಾನದ ಆವರಣದಲ್ಲಿ ಬಿಜೆಪಿ ಮಹಿಳಾ ಮೋರ್ಚಾ ಕಾರ್ಯಕರ್ತೆಯರು ರಂಗೋಲಿ ಬಿಡಿಸುವರು. ವಿರೂಪಾಕ್ಷೇಶ್ವರನಿಗೆ ವಿಶೇಷ ಪೂಜೆ ನಡೆಯುವುದು. ಹಬ್ಬದ ರೀತಿಯಲ್ಲಿ ಕಾರ್ಯಕ್ರಮ ಆಚರಿಸಲಾಗುವುದು. ಕೇದಾರನಾಥದಲ್ಲಿ ನಡೆಯುವ ಕಾರ್ಯಕ್ರಮದ ನೇರ ಪ್ರಸಾರಕ್ಕೆ ಎಲ್‌ಇಡಿ ಪರದೆ ವ್ಯವಸ್ಥೆ ಮಾಡಲಾಗುವುದು. ಸಾರ್ವಜನಿಕರು ಕಾರ್ಯಕ್ರಮ ವೀಕ್ಷಿಸಬಹುದು’ ಎಂದು ಮಾಹಿತಿ ನೀಡಿದರು.

ಬಿಜೆಪಿ ಜಿಲ್ಲಾ ಕಾರ್ಯದರ್ಶಿ ಡಾ. ರಮೇಶ ನಾಯ್ಕ, ಮಹಿಳಾ ಮೋರ್ಚಾ ಜಿಲ್ಲಾ ಅಧ್ಯಕ್ಷೆ ಕವಿತಾ ಈಶ್ವರ್‌ ಸಿಂಗ್‌, ಹಿಂದುಳಿದ ವರ್ಗಗಳ ಮೋರ್ಚಾ ಜಿಲ್ಲಾ ಅಧ್ಯಕ್ಷ ಅಯ್ಯಾಳಿ ತಿಮ್ಮಪ್ಪ, ಮಂಡಲ ಅಧ್ಯಕ್ಷ ಬಸವರಾಜ ನಾಲತ್ವಾಡ, ಪ್ರಧಾನ ಕಾರ್ಯದರ್ಶಿಗಳಾದ ಜೀವರತ್ನಂ, ಶಂಕರ್ ಮೇಟಿ, ಮುಖಂಡರಾದ ಶಶಿಧರ್‌ ಸ್ವಾಮಿ, ಸಾಲಿ ಸಿದ್ದಯ್ಯ ಸ್ವಾಮಿ, ಬಿ.ಎಲ್‌. ಸತ್ಯನಾರಾಯಣ ಇದ್ದರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT