ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಂಪಿ: ಬಣ್ಣದ ಬೆಳಕಿನಲ್ಲಿ ಮಿಂದೆದ್ದ ಸ್ಮಾರಕಗಳು

Last Updated 1 ನವೆಂಬರ್ 2022, 16:02 IST
ಅಕ್ಷರ ಗಾತ್ರ

ಹೊಸಪೇಟೆ (ವಿಜಯನಗರ): ಹಂಪಿ ಧ್ವನಿ ಮತ್ತು ಬೆಳಕು (ಬೈ ನೈಟ್‌) ಕಾರ್ಯಕ್ರಮಕ್ಕೆ ಮಂಗಳವಾರ ರಾತ್ರಿ ಹಂಪಿಯ ಎದುರು ಬಸವಣ್ಣ ಮಂಟಪ ಸ್ಮಾರಕದ ಬಳಿ ಚಾಲನೆ ನೀಡಲಾಯಿತು.

19 ನಿಮಿಷ ನಡೆದ ಧ್ವನಿ–ಬೆಳಕಿನಲ್ಲಿ ಪಂಪಾ–ವಿರೂಪಾಕ್ಷೇಶ್ವರ ಕ್ಷೇತ್ರದ ಮಹತ್ವ, ಸುಗ್ರೀವ–ವಾಲಿ ಯುದ್ಧ, ಪಂಪಾ ಸರೋವರದ ಮಹತ್ವ ವಿವರಿಸಲಾಯಿತು. ಇನ್ನೊಂದು ಭಾಗ ವಿಜಯ ವಿಠಲ ದೇವಸ್ಥಾನದ ಬಳಿ ನಡೆಯಿತು. ವಿಜಯನಗರ ಸಾಮ್ರಾಜ್ಯ ಹುಟ್ಟು, ಅದರ ಇತಿಹಾಸದ ಮೇಲೆ ಬೆಳಕು ಚೆಲ್ಲಲಾಯಿತು.

ವಿದೇಶಿಗರು, ಹೊರರಾಜ್ಯದವರು ಈ ಸಂದರ್ಭಕ್ಕೆ ಸಾಕ್ಷಿಯಾದರು. 20 ಪ್ರಮುಖ ಸ್ಮಾರಕಗಳಿಗೆ ವಿದ್ಯುತ್‌ ದೀಪಗಳ ಅಲಂಕಾರ ಮಾಡಿದ್ದರಿಂದ ಇಡೀ ಹಂಪಿ ಪರಿಸರ ಮದುವೆ ಮನೆಯಂತೆ ಕಂಗೊಳಿಸಿತು.

ಇದಕ್ಕೂ ಮುನ್ನ ಕಾರ್ಯಕ್ರಮ ಉದ್ಘಾಟಿಸಿದ ಜಿಲ್ಲಾ ಉಸ್ತುವಾರಿ ಸಚಿವೆ ಶಶಿಕಲಾ ಅಣ್ಣಾಸಾಹೇಬ್‌ ಜೊಲ್ಲೆ, ಹಂಪಿ ಬೈ ನೈಟ್‌ ನೋಡುತ್ತಿದ್ದರೆ ಯಾವುದೋ ಬೇರೆ ಲೋಕಕ್ಕೆ ಹೋದಂತಾಗುತ್ತದೆ. ನೆಲದ ಇತಿಹಾಸ 19 ನಿಮಿಷಗಳಲ್ಲಿ ತೋರಿಸುವ ಪ್ರಯತ್ನ ಮಾಡಿದ್ದಾರೆ. ನಾಟಕ, ಸಿನಿಮಾ ನೋಡುತ್ತೇವೆ. ಆದರೆ, ಧ್ವನಿ ಬೆಳಕಿನಲ್ಲಿ ನೋಡುವುದು ವಿಶೇಷ. ಮಕ್ಕಳು ನೋಟದ ಮೂಲಕ ನೋಡಿ ಕಲಿಯಬಹುದು. ಇದು ಹೆಮ್ಮೆ ಪಡುವ ವಿಷಯ ಎಂದು ಹೇಳಿದರು.

ಸದ್ಯ ಈ ಕಾರ್ಯಕ್ರಮ ವಾರಾಂತ್ಯಕ್ಕೆ ನಡೆಸಲಾಗುವುದು. ಶೀಘ್ರದಲ್ಲೇ ಟಿಕೆಟ್‌ ದರ ನಿಗದಿಪಡಿಸಲಾಗುವುದು. 20 ಸ್ಮಾರಕಗಳಿಗೆ ವಿದ್ಯುತ್‌ ದೀಪಗಳ ಅಲಂಕಾರ ಮಾಡಲಾಗಿದೆ. ಎರಡು ಸ್ಮಾರಕಗಳ ಬಳಿ ಧ್ವನಿ ಮತ್ತು ಬೆಳಕು ಕಾರ್ಯಕ್ರಮ ನಡೆಯುತ್ತದೆ ಎಂದರು.
ಪ್ರವಾಸೋದ್ಯಮ ಸಚಿವ ಆನಂದ್‌ ಸಿಂಗ್‌ ಮಾತನಾಡಿ, 2010ರಿಂದ ಈ ಯೋಜನೆ ಜಾರಿಗೆ ತರುವುದರ ಬಗ್ಗೆ ಚಿಂತನೆ ನಡೆದಿತ್ತು. ಈಗ ಅನುಷ್ಠಾನಕ್ಕೆ ಬರುತ್ತಿದೆ. ಇದಕ್ಕೆ ಬೇಕಾದ ಅಗತ್ಯ ಅನುದಾನ ಒದಗಿಸಲಾಗುವುದು. ಆದರೆ, ಸಾರ್ವಜನಿಕರು ಪರಿಕರಗಳನ್ನು ಹಾಳುಗೆಡವಬಾರದು. ಇನ್ನು, ಮಂಗಗಳ ಕಾಟ ಹೆಚ್ಚಿದ್ದು, ಅವುಗಳು ತಂತಿ, ವಿದ್ಯುದ್ದೀಪಗಳು ಹಾಳು ಮಾಡುತ್ತಿವೆ. ಅದನ್ನು ತಡೆಯುವುದು ಹೇಗೆ ಎಂಬ ಚರ್ಚೆ ನಡೆಯುತ್ತಿದೆ. ಬರುವ ದಿನಗಳಲ್ಲಿ ಇನ್ನಷ್ಟು ಉತ್ತಮ ಗುಣಮಟ್ಟದ ಕಾರ್ಯಕ್ರಮ ನೀಡಲು ವ್ಯವಸ್ಥೆ ಮಾಡಲಾಗುವುದು ಎಂದು ಹೇಳಿದರು.

ಇನ್ನೋವೇಟಿವ್‌ ಲೈಟಿಂಗ್‌ ಸಂಸ್ಥೆಯ ಟಿ.ಎಸ್‌. ನಾಗಾಭರಣ, ಕೃಷ್ಣಕುಮಾರ, ಜಿಲ್ಲಾಧಿಕಾರಿ ಅನಿರುದ್ಧ್‌ ಶ್ರವಣ್‌ ಪಿ., ಎಸ್ಪಿ ಡಾ. ಅರುಣ್‌ ಕೆ., ಉಪವಿಭಾಗಾಧಿಕಾರಿ ಸಿದ್ದರಾಮೇಶ್ವರ, ತಹಶೀಲ್ದಾರ್‌ ವಿಶ್ವಜೀತ್‌ ಮೆಹ್ತಾ, ಡಿವೈಎಸ್ಪಿ ವಿಶ್ವನಾಥರಾವ್‌ ಕುಲಕರ್ಣಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT