ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೊಸಪೇಟೆಯಲ್ಲಿ ಹೊಳೆಯಂತೆ ಹರಿದ ಮಳೆ ನೀರು

ಎರಡು ಗಂಟೆ ಭಾರಿ ಮಳೆ; ಮನೆಗೆ ನುಗ್ಗಿದ ನೀರು, ಠಾಣೆ, ಹುಡಾ ಕಚೇರಿಗೂ ನೀರು
Last Updated 16 ಅಕ್ಟೋಬರ್ 2022, 13:27 IST
ಅಕ್ಷರ ಗಾತ್ರ

ಹೊಸಪೇಟೆ (ವಿಜಯನಗರ): ಭಾನುವಾರ ಸುರಿದ ಭಾರಿ ಮಳೆಗೆ ನಗರದಲ್ಲಿ ನೀರು ಹೊಳೆಯಂತೆ ಹರಿದಿದ್ದು, ಜನ ತೀವ್ರ ಸಮಸ್ಯೆ ಎದುರಿಸಿದರು.

ಚಿತ್ತವಾಡ್ಗಿ ಪೊಲೀಸ್‌ ಠಾಣೆ, ಅದರ ಸಮೀಪದ ನಗರಾಭಿವೃದ್ಧಿ ಪ್ರಾಧಿಕಾರದ ಕಚೇರಿ ಸಂಪೂರ್ಣ ಜಲಾವೃತವಾಗಿದ್ದು, ಎರಡೂ ಕಚೇರಿಗಳು ಜಲದಿಗ್ಬಂಧನಕ್ಕೆ ಒಳಗಾಗಿವೆ. ಎಸ್‌.ಆರ್‌. ನಗರ, ಚಿತ್ತವಾಡ್ಗಿ, ಇಂದಿರಾ ನಗರ, ಶಾಂತಿ ನಗರ, ಸಿದ್ದಲಿಂಗಪ್ಪ ಚೌಕಿ, ಚಪ್ಪರದಹಳ್ಳಿಯಲ್ಲಿ ಅನೇಕ ಮನೆಗಳಿಗೆ ನೀರು ನುಗ್ಗಿರುವುದರಿಂದ ಜನ ತೀವ್ರ ತೊಂದರೆ ಅನುಭವಿಸಿದರು. ಸಿದ್ದಲಿಂಗಪ್ಪ ಚೌಕಿ, ಇಂದಿರಾ ನಗರದಲ್ಲಿ ಅಗ್ನಿಶಾಮಕ ದಳದವರು ಬಂದು ನೀರು ಹೊರ ಹಾಕಿದರು. ಜನ ಬಿಂದಿಗೆಗಳಲ್ಲಿ ನೀರು ತುಂಬಿ ಹೊರ ಚೆಲ್ಲಿದರು. ಸಿಡಿಲಿಗೆ ಸಿದ್ದಲಿಂಗಪ್ಪ ಚೌಕಿಯಲ್ಲಿ ಜಾಲಿ ಮರವೊಂದು ಎರಡು ಹೊಳಾಗಿದೆ. ಕಂಬವೊಂದು ನೆಲಕ್ಕುರುಳಿದೆ. ಪಟೇಲ್‌ ನಗರದ ಮೂರನೇ ಅಡ್ಡರಸ್ತೆಯಲ್ಲಿ ಬುಡಸಮೇತ ಮರವೊಂದು ನೆಲಕ್ಕುರುಳಿದ್ದರಿಂದ ಸಂಚಾರ ಸ್ಥಗಿತಗೊಂಡಿತ್ತು. ನಗರದ ಬಾಲಕಿಯರ ಶಾಲೆ ಹಿಂಭಾಗದ ಗೋಡೆ ಕೂಡ ಕುಸಿದು ಬಿದ್ದಿದೆ.

ಕಾಲೇಜು ರಸ್ತೆ, ಪಟೇಲ್‌ ನಗರ, ರಾಣಿಪೇಟೆ, ಹಂಪಿ ರಸ್ತೆಯಲ್ಲಿ ಮೊಳಕಾಲುದ್ದದ ವರೆಗೆ ಮಳೆ ನೀರು ಹರಿಯಿತು. ಅಲ್ಲಿದ್ದ ವಾಹನಗಳೆಲ್ಲ ಜಲಾವೃತವಾಗಿದ್ದವು. ವಾಹನಗಳ ಸಂಚಾರ ಸ್ಥಗಿತಗೊಂಡಿತು. ಮಧ್ಯಾಹ್ನ 3ರಿಂದ 5ರ ವರೆಗೆ ಎಡೆಬಿಡದೆ ಗುಡುಗು ಸಹಿತ ಭಾರಿ ಮಳೆಯಾಯಿತು. ಹಲವು ದಿನಗಳಿಂದ ಜಿಲ್ಲೆಯಾದ್ಯಂತ ಮಳೆಯಾಗುತ್ತಿದ್ದು, ಶನಿವಾರ ಸ್ವಲ್ಪ ಬಿಡುವು ಕೊಟ್ಟಿತ್ತು. ಆದರೆ, ಭಾನುವಾರ ಬೆಳಿಗ್ಗೆಯಿಂದ ಮೋಡ ಕವಿದ ವಾತಾವರಣ ಇತ್ತು. ಮಧ್ಯಾಹ್ನ ಏಕಾಏಕಿ ಮಳೆ ಶುರುವಾಗಿ ಆರ್ಭಟಿಸಿತು. ಜಿಲ್ಲೆಯ ಹೂವಿನಹಡಗಲಿ, ಕೊಟ್ಟೂರಿನಲ್ಲಿ ಉತ್ತಮ ಮಳೆಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT