ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಳ್ಳಾರಿ | ಬಾಳೆ ಬೆಳೆಗಾರರ ಬದುಕಲ್ಲಿ ‘ಬಿರುಗಾಳಿ’

ಮಳೆ, ಗಾಳಿಗೆ ಹೊಸಪೇಟೆಯೊಂದರಲ್ಲೇ ಸಾವಿರ ಎಕರೆಗೂ ಅಧಿಕ ಬಾಳೆ ಹಾನಿ
ಅಕ್ಷರ ಗಾತ್ರ

ಹೊಸಪೇಟೆ (ವಿಜಯನಗರ): ರಾತ್ರಿ ಕಳೆದು ಹಗಲು ಆಗುವುದರೊಳಗೆ ಬಾಳೆ, ಪೊಪ್ಪಾಯ ಬೆಳೆಗಾರರ ಬದುಕಲ್ಲಿ ದೊಡ್ಡ ಅಲ್ಲೊಲ್ಲ ಕಲ್ಲೋಲ ಉಂಟಾಗಿದೆ. ಅಕಾಲಿಕ ಮಳೆ ರೈತರ ಕನಸು ನುಚ್ಚು ನೂರು ಮಾಡಿದೆ.

ಬಿರುಗಾಳಿ ಮಳೆಗೆ ಜಿಲ್ಲೆಯಲ್ಲಿ ಬಾಳೆ ಬೆಳೆ, ಪಪ್ಪಾಯ ಬಹುತೇಕ ಹಾಳಾಗಿದ್ದು, ಬೆಳೆಗಾರರು ಅತಂತ್ರರಾಗುವಂತೆ ಮಾಡಿದೆ. ಇನ್ನೆರಡು ತಿಂಗಳು ಕಳೆದರೆ ಫಸಲು ಮಾರುಕಟ್ಟೆಗೆ ಸಾಗಿಸಿ, ಕೈತುಂಬ ಹಣ ಗಳಿಸಿ, ಸಾಲದ ಭಾರದಿಂದ ಮುಕ್ತಿ ಪಡೆಯಲು ರೈತರು ಯೋಜಿಸಿದ್ದರು. ಆದರೆ, ಭಾನುವಾರ ಸಂಜೆ ಹಾಗೂ ರಾತ್ರಿಯ ಬಿರುಗಾಳಿ ಮಳೆ ಅವರ ಎಲ್ಲ ಲೆಕ್ಕಾಚಾರ ತಲೆ ಕೆಳಗಾಗುವಂತೆ ಮಾಡಿದೆ.

ತೋಟಗಾರಿಕೆ ಇಲಾಖೆಯ ಮಾಹಿತಿ ಪ್ರಕಾರ, ಹೊಸಪೇಟೆ ತಾಲ್ಲೂಕುವೊಂದರಲ್ಲೇ 13 ಸಾವಿರ ಎಕರೆ ಪ್ರದೇಶದಲ್ಲಿ ಬಾಳೆ ಬೆಳೆಯಲಾಗುತ್ತದೆ. ಸಕ್ಕರೆ ಕಾರ್ಖಾನೆ ಮುಚ್ಚಿರುವುದರಿಂದ ಕಬ್ಬು ಬೆಳೆಗಾರರು ಕೂಡ ಬಾಳೆಯತ್ತ ಮುಖ ಮಾಡಿರುವುದರಿಂದ ಈ ಸಂಖ್ಯೆ ಮತ್ತಷ್ಟು ಹೆಚ್ಚಾಗಿದೆ.

ಒಂದು ಅಂದಾಜಿನ ಪ್ರಕಾರ, ಸದ್ಯ ಸಾವಿರ ಎಕರೆಗೂ ಅಧಿಕ ಪ್ರದೇಶದಲ್ಲಿ ಬೆಳೆದ ಬಾಳೆ ಸಂಪೂರ್ಣ ನೆಲಕ್ಕಚ್ಚಿದೆ. ದೊಡ್ಡ ದೊಡ್ಡ ಬಾಳೆಗೊನೆಗಳೊಂದಿಗೆ ಗಿಡಗಳು ನೆಲಕ್ಕೆ ಬಿದ್ದಿವೆ. ತೋಟಗಾರಿಕೆ ಇಲಾಖೆ ಸೋಮವಾರವಷ್ಟೇ ಸಮೀಕ್ಷೆ ಕಾರ್ಯ ಆರಂಭಿಸಿದ್ದು, ಪೂರ್ಣಗೊಂಡ ನಂತರ ನಿಖರ ಮಾಹಿತಿ ಲಭ್ಯವಾಗಲಿದೆ.

ಬಿರುಗಾಳಿ ಮಳೆಗೆ ತಾಲ್ಲೂಕಿನ ಚಿತ್ತವಾಡ್ಗಿ, ಕರೇಕಲ್ಲು ಮಾಗಾಣಿ, ಇಪ್ಪಿತ್ತೇರಿ ಮಾಗಾಣಿ, ಬಸವನದುರ್ಗ, ಹೊಸೂರು, 88 ಮುದ್ಲಾಪುರ, ನಾಗಲಾಪುರದಲ್ಲಿ ಅತಿ ಹೆಚ್ಚು ಹಾನಿಯಾಗಿದೆ. ಅನೇಕ ರೈತರು ಎಂದಿನಂತೆ ಸೋಮವಾರ ಬೆಳಿಗ್ಗೆ ಅವರ ಗದ್ದೆಗಳಿಗೆ ನೀರು ಹರಿಸಲು ಹೋಗಿದ್ದರು. ಆದರೆ, ಬಿರುಗಾಳಿಗೆ ಬಾಳೆ ಗಿಡಗಳು ಮುರಿದು ಬಿದ್ದಿರುವುದನ್ನು ನೋಡಿ ಅಕ್ಷರಶಃ ಕುಸಿದು ಬಿದ್ದಿದ್ದಾರೆ.

‘ಭತ್ತದ ಬೆಲೆ ಕುಸಿದಿದೆ. ಸಕ್ಕರೆ ಕಾರ್ಖಾನೆ ಮುಚ್ಚಿರುವುದರಿಂದ ಈ ವರ್ಷ ಬಾಳೆ ಬೆಳೆದಿದ್ದೆ. ಅಂದುಕೊಂಡಂತೆ ಫಸಲು ಕೂಡ ಉತ್ತಮವಾಗಿ ಬಂದಿತ್ತು. ಇನ್ನೆರಡು ತಿಂಗಳಾದರೆ ಬಾಳೆ ಮಾರುಕಟ್ಟೆಗೆ ಹೋಗುತ್ತಿತ್ತು. ಅಷ್ಟರೊಳಗೆ ಬಿರುಗಾಳಿ, ಮಳೆ ಎಲ್ಲ ಹಾಳು ಮಾಡಿದೆ. ಒಂದೂವರೆ ಲಕ್ಷ ಸಾಲ ಮಾಡಿ ಬೆಳೆ ಬೆಳೆದಿದ್ದೆ. ಈಗ ಅದನ್ನು ತೀರಿಸುವ ಸ್ಥಿತಿಯಲ್ಲೂ ಇಲ್ಲ’ ಎಂದು ಬಸವನದುರ್ಗದ ರೈತ ರುದ್ರಪ್ಪ ಅಸಹಾಯಕತೆ ವ್ಯಕ್ತಪಡಿಸಿದರು.

‘ಬಿರುಗಾಳೆ ಮಳೆಗೆ ತೋಟದಲ್ಲಿ ಏನೂ ಉಳಿದಿಲ್ಲ. ಎಲ್ಲ ಬಾಳೆಗಿಡಗಳು ನೆಲಕ್ಕೊರಗಿವೆ. ಕಷ್ಟಪಟ್ಟು ಬೆಳೆಸಿದ ಬೆಳೆಯಲ್ಲ ಕೆಲವೇ ಗಂಟೆಗಳಲ್ಲಿ ಹಾಳಾಗಿದೆ. ಜಿಲ್ಲಾಡಳಿತ ತ್ವರಿತ ಗತಿಯಲ್ಲಿ ಸಮೀಕ್ಷೆ ನಡೆಸಿ ಪರಿಹಾರ ನೀಡಬೇಕು’ ಎಂದು 88 ಮುದ್ಲಾಪುರದ ಎಂ. ದೊಡ್ಡಯ್ಯ ಸ್ವಾಮಿ ಆಗ್ರಹಿಸಿದರು.

ಪೂರಕ ಮಾಹಿತಿ: ಎಸ್‌.ಎಂ. ಗುರುಪ್ರಸಾದ್‌, ವಿಶ್ವನಾಥ ಡಿ., ಸಿ. ಶಿವಾನಂದ, ಎ.ಎಂ. ಸೋಮಶೇಖರಯ್ಯ, ಕೆ. ಸೋಮಶೇಖರ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT