ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾರಿ ಮಳೆಗೆ ಹೊಸಪೇಟೆಯಲ್ಲಿ ಅವಾಂತರ: ಕರಗಿದ ಗಣಪ, ಮನೆಗಳಿಗೆ ನುಗ್ಗಿದ ನೀರು

Last Updated 30 ಆಗಸ್ಟ್ 2022, 10:35 IST
ಅಕ್ಷರ ಗಾತ್ರ

ಹೊಸಪೇಟೆ: ಮಂಗಳವಾರ ಬೆಳಂಬೆಳಿಗ್ಗೆ ಸುರಿದ ಭಾರಿ ಮಳೆಗೆ ನಗರ ಸೇರಿದಂತೆ ತಾಲ್ಲೂಕಿನ ಹಲವೆಡೆ ಹೆಚ್ಚಿನ ಹಾನಿಯಾಗಿದೆ.

ನಗರದ ಬಸವ ಕಾಲುವೆ ಬಳಿ, ಇಂದಿರಾ ನಗರ, ಚಪ್ಪರದಹಳ್ಳಿಯಲ್ಲಿ ಅನೇಕ ಮನೆಗಳಿಗೆ ಮಳೆ ನೀರು ನುಗ್ಗಿದ್ದರಿಂದ ಒಳಗಿದ್ದ ವಸ್ತುಗಳೆಲ್ಲ ಹಾಳಾಗಿವೆ. ಬಸವ ಕಾಲುವೆ ಬಳಿ ಚತುರ್ಥಿಗೆ ಮಾರಾಟಕ್ಕೆ ತಯಾರಿಸಿ ಇಡಲಾಗಿದ್ದ ಗಣಪನ ಮೂರ್ತಿಗಳ ಪೈಕಿ 200ಕ್ಕೂ ಹೆಚ್ಚು ಹಾಳಾಗಿವೆ.

ಮೂರ್ತಿಗಳು ಭಾರಿ ಮಳೆಗೆ ಕರಗಿ ಹೋಗಿದ್ದು, ವಿಕಾರಗೊಂಡಿವೆ. ಬಣ್ಣ ಅಳಿಸಿ ಹೋಗಿದೆ. ಮನೆಗಳಿಗೆಲ್ಲ ಕೊಳಚೆ ನೀರು ನುಗ್ಗಿದ್ದರಿಂದ ದುರ್ನಾತ ಹರಡಿದೆ. ಮಹಿಳೆಯರು, ಮಕ್ಕಳು ಸೇರಿದಂತೆ ಮನೆಯ ಸದಸ್ಯರೆಲ್ಲ ಮಳೆ ನೀರು ಹೊರಗೆ ಹಾಕುತ್ತಿರುವ ದೃಶ್ಯ ಕಂಡು ಬಂತು.

ಇನ್ನು, ನಗರದ ಹುಡಾ ಕಚೇರಿ ಎದುರು ಹೊಳೆಯಂತೆ ನೀರು ಹರಿಯಿತು. ಅಲ್ಲಿನ ಮನೆಗಳಿಗೆಲ್ಲ ನೀರು ನುಗ್ಗಿದ್ದರಿಂದ ಸ್ಥಳೀಯರು ತೀವ್ರ ತೊಂದರೆ ಅನುಭವಿಸಿದರು. ಚಪ್ಪರದಹಳ್ಳಿಯಲ್ಲೂ ಇದೇ ರೀತಿಯ ಪರಿಸ್ಥಿತಿ. ಮನೆ ಮಂದಿಯೆಲ್ಲ ತಟ್ಟೆ, ಡಬ್ಬಿಗಳ ಮೂಲಕ ಮನೆಯಿಂದ ನೀರು ಹೊರ ಹಾಕಿದರು.

ಆರನೇ ವಾರ್ಡ್‌ ವ್ಯಾಪ್ತಿಗೆ ಬರುವ ಥಿಯೋಸಫಿಕಲ್‌ ಕಾಲೇಜು, ಅಲ್ಲಿನ ಬಡಾವಣೆಯಲ್ಲಿ ಹೊಳೆಯಂತೆ ನೀರು ಹರಿಯಿತು. ವಾಹನಗಳೆಲ್ಲ ನೀರಿನಲ್ಲಿ ಮುಳುಗಿ ಹೋಗಿದ್ದವು. ವಿಷಯ ತಿಳಿದು ನಗರಸಭೆ ಪೌರಾಯುಕ್ತ ಮನೋಹರ್ ಅವರು ಅಧಿಕಾರಿ, ಸಿಬ್ಬಂದಿ ವರ್ಗದೊಂದಿಗೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ತಾಲ್ಲೂಕಿನ ಮರಿಯಮ್ಮನಹಳ್ಳಿಯಲ್ಲಿ ಅತ್ಯಧಿಕ 13 ಸೆಂ.ಮೀ ಮಳೆಯಾಗಿದೆ. ಕಳೆದ ಐದು ವರ್ಷಗಳಲ್ಲಿಯೇ ಅತಿ ಹೆಚ್ಚು ಮಳೆಯಾಗಿದೆ.ಬ್ಯಾಲಕುಂದಿ-ಗರಗ ಗ್ರಾಮ ಸಂಪರ್ಕ ಕಡಿತಗೊಂಡಿದೆ. ರಭಸದಿಂದ ಹರಿಯುತ್ತಿರುವ ನೀರಿನಲ್ಲೇ ಜನ ಓಡಾಡಿದರು. ನಾಗಲಾಪುರ ಗ್ರಾಮದಲ್ಲಿ ಹಳ್ಳದ ನೀರು ಗ್ರಾಮಕ್ಕೆ‌ ನುಗ್ಗಿದ್ದರಿಂದ ಗ್ರಾಮಸ್ಥರು ಬೆಳಕು ಹರಿಯುತ್ತಿದ್ದಂತೆ ಸಮಸ್ಯೆ ಎದುರಿಸಿದರು. ತುಂಗಭದ್ರಾ ಜಲಾಶಯದಿಂದ ನದಿಗೆ ಅಪಾರ ಪ್ರಮಾಣದಲ್ಲಿ ನೀರು ಹರಿಸಿದ್ದರಿಂದ ಹಂಪಿ ವಿಜಯ ವಿಠಲ ದೇವಸ್ಥಾನಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಜಲಾವೃತವಾಗಿ, ಸಂಪರ್ಕ ಕಡಿತಗೊಂಡಿದೆ. ಸ್ಮಾರಕಗಳ ಪರಿಸರ, ಸುತ್ತಮುತ್ತ ಅಪಾರ ಪ್ರಮಾಣದ ನೀರು ಸಂಗ್ರಹಗೊಂಡಿದೆ.

ತಾಲ್ಲೂಕಿನ ಹಂಪಿ, ಕಮಲಾಪುರ, ಹೊಸೂರು, ಕಡ್ಡಿರಾಂಪುರ ಸೇರಿದಂತೆ ಹಲವೆಡೆ ಉತ್ತಮ ಮಳೆಯಾಗಿದೆ. ಬೆಳಿಗ್ಗೆ ಐದು ಗಂಟೆಗೆ ಆರಂಭಗೊಂಡ ಮಳೆ ಎಂಟು ಗಂಟೆಯವರೆಗೆ ಎಡೆಬಿಡದೇ ಸುರಿದಿದೆ.

ಜಿಲ್ಲೆಯ ಹರಪನಹಳ್ಳಿ ತಾಲ್ಲೂಕಿನ ಸತ್ತೂರು ಗೊಲ್ಲರಹಟ್ಟಿಯಲ್ಲಿ 3, ಕಂಚಿಕೆರೆಯಲ್ಲಿ 2, ಸಿಂಗ್ರಿಹಳ್ಳಿ, ಸಿಂಗ್ರಿಹಳ್ಳಿ ದೊಡ್ಡ ತಾಂಡಾದಲ್ಲಿ ತಲಾ ಒಂದು ಮನೆಯ ಗೋಡೆ ಕುಸಿದು ಬಿದ್ದಿದೆ. ಸಿಂಗ್ರಿಹಳ್ಳಿಯಲ್ಲಿ ಹಳ್ಳದ ನೀರು ಗ್ರಾಮಕ್ಕೆ ನುಗ್ಗಿ 20 ಮನೆಗಳಿಗೆ ನುಗ್ಗಿದೆ. ಗ್ರಾಮದ ಶಾಲೆಯೂ ಜಲಾವೃತವಾಗಿದೆ.

ನಾಗತಿಕಟ್ಟೆ-ಗೌಳೇರಹಟ್ಟಿ, ಬೇವಿನಹಳ್ಳಿ-ಉಚ್ಚಂಗಿದುರ್ಗ, ಉಚ್ಚಂಗಿದುರ್ಗ-ಅರಸೀಕೆರೆ ರಸ್ತೆ ಸಂಪರ್ಕ ಕಡಿತಗೊಂಡಿದೆ.

ಹಗರಿಬೊಮ್ಮನಹಳ್ಳಿ ತಾಲ್ಲೂಕಿನಲ್ಲಿ ಐದು ಮನೆಗಳಿಗೆ ಹಾನಿಯಾಗಿದೆ. ಜಿಲ್ಲೆಯ ಕೂಡ್ಲಿಗಿಯಲ್ಲೂ ಒಂದು ಮನೆಗೆ ಹಾನಿಯಾಗಿದೆ. ಜಿಲ್ಲೆಯ ಕೊಟ್ಟೂರು, ಹೂವಿನಹಡಗಲಿಯಲ್ಲೂ ಮಳೆಯಾಗಿದೆ. ಭಾರಿ ಮಳೆಗೆ ಅನೇಕ ಕೆರೆಗಳಿಗೆ ಕೋಡಿ ಬಿದ್ದಿದೆ. ಹಳ್ಳ, ಕೊಳ್ಳಗಳು ತುಂಬಿ ಹರಿದಿವೆ.

ಮುನ್ನೆಚ್ಚರಿಕೆ ಕ್ರಮವಾಗಿ ಜಿಲ್ಲೆಯ ಎಲ್ಲ ಶಾಲೆಗಳಿಗೆ ರಜೆ ಘೋಷಿಸಿ ಜಿಲ್ಲಾಧಿಕಾರಿ ಅನಿರುದ್ಧ್ ಶ್ರವಣ್ ಪಿ. ಆದೇಶ ಹೊರಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT