ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೊಸಪೇಟೆ ಪ್ರವಾಸೋದ್ಯಮದ ತೊಟ್ಟಿಲು

ಹೊಸ ಹೊಸ ಉದ್ಯೋಗಾವಕಾಶಗಳ ಸಾಧ್ಯತೆಗೆ ದೃಷ್ಟಿ ಹರಿಸಬೇಕಿದೆ ಜಿಲ್ಲಾಡಳಿತ
Last Updated 27 ಸೆಪ್ಟೆಂಬರ್ 2022, 6:19 IST
ಅಕ್ಷರ ಗಾತ್ರ

ಹೊಸಪೇಟೆ (ವಿಜಯನಗರ): ವಿಶ್ವ ಪಾರಂಪರಿಕ ತಾಣ ಹಂಪಿಯಿಂದ ಜಗತ್ತಿನ ಪ್ರವಾಸೋದ್ಯಮ ನಕ್ಷೆಯಲ್ಲಿ ಹೊಸಪೇಟೆಗೆ ವಿಶೇಷ ಸ್ಥಾನವಿದೆ. ಆದರೆ, ಪ್ರವಾಸೋದ್ಯಮ ಬೆಳವಣಿಗೆಯ ದೃಷ್ಟಿಕೋನದಿಂದ ನೋಡಿದರೆ ನಿರಾಸೆಯೇ ಹೆಚ್ಚಿಗೆ ಕಾಣುತ್ತದೆ.

ವಿಜಯನಗರ ಜಿಲ್ಲೆಯ ಹೊಸಪೇಟೆಯೆಂದರೆ ತಕ್ಷಣವೇ ನೆನಪಾಗುವುದು ಹಂಪಿ. ಅದರ ಜಗತ್‌ಪ್ರಸಿದ್ಧಿಯಿಂದ ಇದು ಸಹಜವೂ ಹೌದು. ಆದರೆ, ಹೊಸಪೇಟೆ ತಾಲ್ಲೂಕಿನಲ್ಲಿ ಅನೇಕ ಪ್ರವಾಸಿ ತಾಣಗಳಿದ್ದು, ಅವುಗಳನ್ನು ಅಭಿವೃದ್ಧಿ ಪಡಿಸಿದರೆ ಪ್ರವಾಸೋದ್ಯಮ ಚಟುವಟಿಕೆಗಳು ಇನ್ನಷ್ಟು ಚುರುಕುಗೊಳ್ಳಬಹುದು. ಆದರೆ, ಇಚ್ಛಾಶಕ್ತಿಯ ಕೊರತೆ ಎದ್ದು ಕಾಣುತ್ತದೆ.

ವಿಶ್ವಪ್ರಸಿದ್ಧ ಹಂಪಿಗೆ ದಿನನಿತ್ಯ ದೇಶ–ವಿದೇಶಗಳಿಂದ ಪ್ರವಾಸಿಗರು ಬರುತ್ತಾರೆ. ಇದರಿಂದಾಗಿ ಹೋಟೆಲ್‌ ಉದ್ಯಮ ಸಾಕಷ್ಟು ಬೆಳೆದಿದೆ. ಹೆಚ್ಚಿನ ಉದ್ಯೋಗ ಸೃಷ್ಟಿಗೆ ಅದು ಕಾರಣವಾಗಿದೆ. ಇನ್ನುಳಿದಂತೆ ಟ್ಯಾಕ್ಸಿ ವಾಹನ ಚಾಲಕರು, ಗೈಡ್‌ಗಳು, ಭದ್ರತಾ ಸಿಬ್ಬಂದಿ ಹುದ್ದೆಗಳು ಸೃಜನೆಯಾಗಿವೆ. ಆದರೆ, ಈ ಸಂಖ್ಯೆ ಹೇಳಿಕೊಳ್ಳುವಂತಿಲ್ಲ. ಹಂಪಿ ವಾಸ್ತುಶಿಲ್ಪ, ನೇಕಾರಿಕೆ, ಉಡುಗೆ ತೊಡುಗೆ, ಭಕ್ಷ್ಯ, ಗುಡಿ ಕೈಗಾರಿಕೆಗಳಿಗೆ ಪೂರಕ ವಾತಾವರಣ ಸೃಷ್ಟಿಸಿ ಅಗತ್ಯ ಮೂಲಸೌಕರ್ಯ ಕಲ್ಪಿಸಿದರೆ ಇನ್ನಷ್ಟು ಉದ್ಯೋಗಾವಕಾಶ ಸೃಷ್ಟಿಸಬಹುದು. ಆದರೆ, ಪ್ರಭುತ್ವ ಆ ಕಡೆಗೆ ಹೆಚ್ಚು ಒಲವು ತೋರಿಲ್ಲ.

ಹಂಪಿ–ಬಾದಾಮಿ–ಐಹೊಳೆ–ಪಟ್ಟದಕಲ್ಲು ಒಳಗೊಂಡ ಸರ್ಕ್ಯುಟ್‌ ಮಾಡುವ ಉದ್ದೇಶ ರಾಜ್ಯ ಸರ್ಕಾರಕ್ಕಿದೆ. ಇದರ ಬಗ್ಗೆ ಹಲವು ವರ್ಷಗಳಿಂದ ಚರ್ಚೆಯಾಗುತ್ತಿದೆ. ಆದರೆ, ಸೂಕ್ತ ಯೋಜನೆ ಸಿದ್ಧಗೊಂಡಿಲ್ಲ. ಅನುಷ್ಠಾನ ಯಾವಾಗ ಎನ್ನುವುದು ಯಕ್ಷ ಪ್ರಶ್ನೆ. ಆದರೆ, ಹೊಸಪೇಟೆ ಸುತ್ತಮುತ್ತ ಅನೇಕ ಪ್ರವಾಸಿ ತಾಣಗಳಿದ್ದು, ಅವುಗಳನ್ನು ಒಳಗೊಂಡ ಸರ್ಕ್ಯುಟ್‌ ಮಾಡಿದರೆ ಪ್ರವಾಸೋದ್ಯಮ ಚಟುವಟಿಕೆಗಳಿಗೆ ಇನ್ನಷ್ಟು ಉತ್ತೇಜನ ಸಿಗಬಹುದು.

ಹೊಸಪೇಟೆಗೆ ಬಂದವರು ಸಾಮಾನ್ಯವಾಗಿ ಹಂಪಿ, ಅನಂತರ ತುಂಗಭದ್ರಾ ಜಲಾಶಯ ಕಣ್ತುಂಬಿಕೊಂಡು ಹೋಗುತ್ತಾರೆ. ತುಂಗಭದ್ರಾ ಹಿನ್ನೀರಿನ ಗುಂಡಾ ಸಸ್ಯ ಉದ್ಯಾನ, ಕಮಲಾಪುರ ಸಮೀಪದ ಅಟಲ್‌ ಬಿಹಾರಿ ವಾಜಪೇಯಿ ಜೈವಿಕ ಉದ್ಯಾನ, ಕರಡಿ ಧಾಮ, ಜೋಳದರಾಶಿ ಗುಡ್ಡ, ನೀರು ನಾಯಿ ಸಂರಕ್ಷಿತ ಪ್ರದೇಶವಿದೆ. ಪ್ಯಾಕೇಜ್‌ ಮಾದರಿಯಲ್ಲಿ ಎಲ್ಲ ಸ್ಥಳಗಳಿಗೆ ಪ್ರವಾಸಿಗರು ಭೇಟಿಕೊಡಲು ವ್ಯವಸ್ಥೆ ಮಾಡಬೇಕು. ಬೇಸಿಗೆಯಲ್ಲಿ ಅತಿ ಹೆಚ್ಚು ಬಿಸಿಲು ಇರುವುದರಿಂದ ಹವಾನಿಯಂತ್ರಿತ ಬಸ್‌ಗಳ ಸೇವೆ ಆರಂಭಿಸಬೇಕು.

ಗುಂಡಾ ಸಸ್ಯ ಉದ್ಯಾನ, ಕಮಲಾಪುರ ಕೆರೆಯಲ್ಲಿ ದೋಣಿ ವಿಹಾರಕ್ಕೆ ಹೆಚ್ಚಿನ ಸಾಧ್ಯತೆಗಳಿವೆ. ನೀರುನಾಯಿಗಳ ವೀಕ್ಷಣೆಗೆ ಪ್ರಶಸ್ತ್ಯವಾದ ಸ್ಥಳ ಗುರುತಿಸಬೇಕು. ಜೋಳದರಾಶಿ ಗುಡ್ಡದಿಂದ ಸುತ್ತಮುತ್ತಲಿನ ಪರಿಸರ ಕಣ್ತುಂಬಿಕೊಳ್ಳಲು ವ್ಯವಸ್ಥೆ ಮಾಡಬೇಕು. ಹೀಗೆ ಮಾಡಿದರೆ ಎಲ್ಲ ಸ್ಥಳಗಳಿಗೆ ಹೆಚ್ಚಿನ ಮಹತ್ವ ಬರುತ್ತದೆ. ಮೇಲಿಂದ ಮೇಲೆ ಪ್ರವಾಸಿಗರು ಬಂದು ಹೋಗುತ್ತ ಹೋದರೆ ಸಹಜವಾಗಿಯೇ ಸ್ಥಳೀಯವಾಗಿ ಚಟುವಟಿಕೆಗಳು ಹೆಚ್ಚಾಗುತ್ತವೆ. ಉದ್ಯೋಗ ಸೃಷ್ಟಿಗೂ ಕಾರಣವಾಗುತ್ತದೆ. ಸ್ವಸಹಾಯ ಸಂಘದವರು ತಯಾರಿಸುವ ಗುಡಿ ಕೈಗಾರಿಕೆಗಳನ್ನು ಉತ್ತೇಜಿಸಿ ಅವರ ವಸ್ತುಗಳ ಮಾರಾಟಕ್ಕೆ ಎಲ್ಲ ಪ್ರವಾಸಿ ತಾಣಗಳಲ್ಲಿ ವ್ಯವಸ್ಥೆ ಮಾಡಿಕೊಟ್ಟರೆ ಸಂಪೂರ್ಣ ಚಹರೆಯೇ ಬದಲಾಗಬಹುದು. ಕೆಲಸವಿಲ್ಲದ ಅನೇಕ ಕೈಗಳಿಗೆ ಇದರ ಮುಖೇನ ಕೆಲಸ ಕೊಡಬಹುದು. ಪ್ರವಾಸೋದ್ಯಮ ದಿನದ ಸಂದರ್ಭದಲ್ಲಿ ಇದರತ್ತ ಗಂಭೀರ ಚಿಂತನೆ ಅಗತ್ಯ ಎನ್ನುವುದು ಸಾರ್ವಜನಿಕರ ಪ್ರತಿಪಾದನೆ.

ಕಣ್ಮನ ಸೆಳೆಯುತ್ತಿರುವ ಪುಷ್ಕರಣಿಗಳು

ಈ ವರ್ಷ ಉತ್ತಮ ಮಳೆಯಾಗಿರುವುದರಿಂದ ಹಂಪಿ ಪರಿಸರದಲ್ಲಿರುವ ಬಹುತೇಕ ಪುಷ್ಕರಣಿಗಳು ತುಂಬಿದ್ದು, ಈಗ ಎಲ್ಲರ ಕಣ್ಮನ ಸೆಳೆಯುತ್ತಿವೆ. ಆಕರ್ಷಣೀಯ ಸ್ಥಳಗಳಾಗಿವೆ. ಅದರಲ್ಲೂ ಹವ್ಯಾಸಿ ಛಾಯಾಗ್ರಾಹಕರನ್ನು ಸೆಳೆಯುತ್ತಿವೆ.

ವಿರೂಪಾಕ್ಷೇಶ್ವರ ದೇವಸ್ಥಾನ ಸಮೀಪದ ಮನ್ಮಥ ಹೊಂಡ, ಮಹಾನವಮಿ ದಿಬ್ಬ ಬಳಿಯ ಕರೆಕಲ್ಲಿನ ಪುಷ್ಕರಣಿ, ವಿಜಯ ವಿಠಲ ದೇಗುಲ ರಸ್ತೆಯ ಪುಷ್ಕರಣಿ ಸೇರಿದಂತೆ ಇತರೆ ಸಣ್ಣಪುಟ್ಟ ಪುಷ್ಕರಣಿಗಳೆಲ್ಲ ತುಂಬಿದ್ದು, ಅವುಗಳು ಜೀವ ಬಂದಂತಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT