ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೊಸಪೇಟೆ: ನೋಡ ಬನ್ನಿ ‘ಮಸಾಲ ಗಣಪ’

Last Updated 28 ಆಗಸ್ಟ್ 2022, 11:09 IST
ಅಕ್ಷರ ಗಾತ್ರ

ಹೊಸಪೇಟೆ (ವಿಜಯನಗರ): ‘ಮಸಾಲ ಗಣಪ’. ಇದು ಯಾರದ್ದೋ ಹೆಸರಲ್ಲ. ಗಣೇಶ ಚತುರ್ಥಿಗೆ ಪ್ರತಿಷ್ಠಾಪಿಸಲು ಮಸಾಲ ಪದಾರ್ಥಗಳಿಂದಲೇ ತಯಾರಿಸಿರುವ ವಿಘ್ನ ನಿವಾರಕನ ಮೂರ್ತಿ.

ಇದನ್ನು ಕೇಳಿದ ಯಾರಾದರೂ ಹುಬ್ಬೇರಿಸುವುದು ಸಹಜ. ಆದರೆ, ಇದು ಸತ್ಯ. ನಗರದ ಕಲಾವಿದ ಬಿ. ಕೃಷ್ಣರಾಜು ಹಾಗೂ ಎಂ.ಜೆ. ನಗರದ ಸ್ಥಳೀಯ 16ಕ್ಕೂ ಹೆಚ್ಚು ಜನ ಮಕ್ಕಳು, ಯುವಕರು ಸೇರಿಕೊಂಡು ‘ಮಸಾಲ ಗಣೇಶ’ನ ಮಾಡಿದ್ದಾರೆ. ಈಗ ಅದು ಎಲ್ಲರ ಆಕರ್ಷಣೆಯ ಕೇಂದ್ರವಾಗಿದೆ. ವಾಯುಪುತ್ರ ಯುವಕ ಸಂಘದವರು ಇದನ್ನು ಎಂ.ಜೆ. ನಗರದಲ್ಲಿ ಪ್ರತಿಷ್ಠಾಪಿಸುವರು.

ಒಟ್ಟು ಎಂಟೂವರೆ ಅಡಿ ಎತ್ತರವಿರುವ ಗಣಪನ ಮೂರ್ತಿಯನ್ನು ಮಣ್ಣಿನಿಂದ ಮಾಡಲಾಗಿದೆ. ಗಣೇಶನ ಪ್ರತಿಯೊಂದು ಭಾಗವನ್ನು ಮಸಾಲ ಪದಾರ್ಥಗಳಿಂದ ಅಲಂಕರಿಸಿರುವುದು ವಿಶೇಷ. ಒಟ್ಟು ₹45 ಸಾವಿರ ವೆಚ್ಚವಾಗಿದ್ದು, ಇದರಲ್ಲಿ ₹25 ಸಾವಿರಕ್ಕೂ ಹೆಚ್ಚು ಮಸಾಲೆ ಪದಾರ್ಥಗಳಿಗೆ ಖರ್ಚಾಗಿದೆ.

ಒಣಮೆಣಸಿನಕಾಯಿ, ಬೆಳ್ಳುಳ್ಳಿ, ಸೋಂಪು, ಮೆಂತೆಕಾಳು, ಜೀರಿಗೆ, ಕರಿಮೆಣಸು, ಕುಸುಬಿ ಬೀಜ, ಕೊತ್ತಂಬರಿ ಕಾಳು, ಜಾ ಪತ್ರೆ, ಲವಂಗ, ಯಾಲಕ್ಕಿ, ಕಸ್ತೂರಿ ಮೆಂತೆ, ಗಸಗಸೆಯಿಂದ ಗಣಪನ ಕಿರೀಟವನ್ನು ಅಲಂಕರಿಸಿದ್ದಾರೆ. ಇನ್ನು, ಖಾರದಪುಡಿ, ಜೀರಿಗೆ ಪುಡಿಯಿಂದ ಚಕ್ರಕ್ಕೆ ಬಣ್ಣ ಬಳಿದಿದ್ದಾರೆ. ಅಂಚಿಗೆ ಸೋಯಾಬಿನ್‌ ಕಾಳುಗಳು, ಕಪ್ಪು ಯಾಲಕ್ಕಿ, ಬಿಳಿ ಯಾಲಕ್ಕಿ, ಶೇಂಗಾ ಬೀಜ ಉಪಯೋಗಿಸಿದ್ದಾರೆ. ಮೈಬಣ್ಣಕ್ಕೆ ಬಿಳಿ ಸಾಸಿವೆ, ಲುಂಗಿಗೆ ಕರಿ ಸಾಸಿವೆ, ಖಡ್ಗಕ್ಕೆ ಚಕ್ಕಿ, ಪುಲಾವ್‌ಗೆ ಬಳಸುವ ಎಲೆಗಳಿಂದ ಸೊಂಡಿಲಿಗೆ ಆಕಾರ ಕೊಟ್ಟಿದ್ದಾರೆ. ಹೀಗೆ ಪ್ರತಿಯೊಂದು ಭಾಗಕ್ಕೂ ಒಂದೊಂದು ಪದಾರ್ಥ ಬಳಸಿರುವುದು ವಿಶೇಷ. ಅಂದಹಾಗೆ, ಈ ನಯಾ ನಾಜೂಕಿನ ಕೆಲಸಕ್ಕೆ ಕೃಷ್ಣರಾಜು ಹಾಗೂ ಅವರ ಸಂಗಡಿಗರು 20ಕ್ಕೂ ಹೆಚ್ಚು ದಿನಗಳನ್ನು ತೆಗೆದುಕೊಂಡಿದ್ದಾರೆ.

ಕೃಷ್ಣರಾಜು ಅವರು ಕಳೆದ 26 ವರ್ಷಗಳಿಂದ ಒಂದಿಲ್ಲೊಂದು ಬಗೆಯ ಗಣಪನ ಮೂರ್ತಿಗಳನ್ನು ತಯಾರಿಸುತ್ತಿದ್ದಾರೆ. ಈ ಹಿಂದೆ ಅವರು ಅಕ್ಕಿ, ಗೋಧಿ, ರಂಗೋಲಿ, ಬೆಂಕಿ ಕಡ್ಡಿ, ಅರಿಶಿಣ ಕುಂಕುಮ, ಮರಳು, ವಿಭೂತಿ ಉಪಯೋಗಿಸಿ ಬೆನಕನ ಮೂರ್ತಿಗಳನ್ನು ಮಾಡಿದ್ದಾರೆ. ಪ್ರತಿವರ್ಷ ಇವರು ತಯಾರಿಸುವ ಮೂರ್ತಿಗಳಿಗೆ ಪ್ರಶಸ್ತಿ ಬರುತ್ತಿದೆ. ಸ್ಥಳೀಯ ಮಕ್ಕಳು, ಯುವಕರು ಬಿಡುವಿದ್ದಾಗ ಬಂದು ಇವರ ಕೆಲಸಕ್ಕೆ ನೆರವಾಗುತ್ತಾರೆ. ಗಣಪನನ್ನು ಪ್ರತಿಷ್ಠಾಪಿಸುವ ಮಂಡಳಿಯಿಂದ ನಯಾ ಪೈಸೆ ಹಣ ತೆಗೆದುಕೊಳ್ಳುವುದಿಲ್ಲ. ಇದನ್ನವರು ದೇವರ ಸೇವೆಯಿಂದ ಭಾವಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT