ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹರಾಜಿಗೂ ಮೊದಲೇ ಮರಕ್ಕೆ ಕೊಡಲಿ

ನೂರಾರು ವರ್ಷ ಹಳೆಯ ಮರಗಳ ಹನನ; ಪರಿಸರ ಪ್ರೇಮಿಗಳ ಟೀಕೆ
Last Updated 3 ಮೇ 2021, 13:35 IST
ಅಕ್ಷರ ಗಾತ್ರ

ಹೊಸಪೇಟೆ (ವಿಜಯನಗರ): ಹರಾಜಿನ ಅವಧಿಗೂ ಮೊದಲೇ ಇಲ್ಲಿನ ಮುನ್ಸಿಪಲ್‌ ಮೈದಾನದಲ್ಲಿನ ನೂರಾರು ವರ್ಷ ಹಳೆಯ ಮರಗಳನ್ನು ಕಡಿಯಲಾಗಿದೆ.

ನಗರದ ಮುನ್ಸಿಪಲ್‌ ಮೈದಾನದಲ್ಲಿನ ಮರಗಳನ್ನು ತೆರವುಗೊಳಿಸುವುದು ಅವಶ್ಯಕವಾಗಿರುವುದರಿಂದ ಮೇ 6ರಂದು ಬೆಳಿಗ್ಗೆ 11ಕ್ಕೆ ಬಹಿರಂಗ ಹರಾಜು ನಡೆಯಲಿದೆ. ಆಸಕ್ತರು ಅದಕ್ಕೂ ಮುನ್ನ ಮರಗಳನ್ನು ಪರಿಶೀಲಿಸಿ, ಹರಾಜಿನಲ್ಲಿ ಪಾಲ್ಗೊಳ್ಳಬಹುದು ಎಂದು ನಗರಸಭೆಯು ಪತ್ರಿಕೆಗಳಲ್ಲಿ ಜಾಹೀರಾತು ನೀಡಿತ್ತು. ಆದರೆ, ಹರಾಜಿಗೂ ಮೂರು ದಿನಗಳ ಮೊದಲೇ ಮರಗಳಿಗೆ ಸ್ವತಃ ನಗರಸಭೆಯೇ ಕೊಡಲಿ ಏಟು ನೀಡಿದ್ದು, ಮರಗಳು ನೆಲಕ್ಕುರುಳಿವೆ.

ಮುನ್ಸಿಪಲ್‌ ಮೈದಾನದ ಬ್ಯಾಸ್ಕೆಟ್‌ಬಾಲ್‌ ಅಂಕಣಕ್ಕೆ ಹೊಂದಿಕೊಂಡಂತೆ ಇದ್ದ ಬೃಹತ್‌ ಆಲದ ಮರ, ಬೇವಿನ ಮರಗಳನ್ನು ಕಡಿಯಲಾಗಿದೆ. ಮೈದಾನದಲ್ಲಿ ಆಟವಾಡಿ ದಣಿದವರು ಈ ಮರಗಳ ಅಡಿ ಕುಳಿತುಕೊಂಡು ವಿಶ್ರಾಂತಿ ಪಡೆದುಕೊಳ್ಳುತ್ತಿದ್ದರು. ಈಗ ಎರಡೂ ಮರ ಕಡಿದಿರುವುದರಿಂದ ಇಡೀ ಮೈದಾನ ಬಿಕೋ ಎನ್ನುತ್ತಿದೆ.

ಕೋವಿಡ್‌ ಲಾಕ್‌ಡೌನ್‌ ನಡುವೆ ನೂರಾರು ವರ್ಷ ಹಳೆಯ ಮರಗಳೆರಡನ್ನೂ ಕಡಿದಿರುವುದಕ್ಕೆ ಪರಿಸರ ಪ್ರೇಮಿಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆ ನಡೆಯುತ್ತಿದ್ದು, ನಗರಸಭೆಯ ಕ್ರಮಕ್ಕೆ ವ್ಯಾಪಕ ಟೀಕೆ ವ್ಯಕ್ತವಾಗಿದೆ.

‘ಸಾರ್ವಜನಿಕರು ಆಮ್ಲಜನಕದ ಕೊರತೆಯಿಂದ ನರಳಾಡಿ ಸಾಯುತ್ತಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಮರಗಳನ್ನು ಕಡಿಯುವ ಅಗತ್ಯವಾದರೂ ಏನಿತ್ತು? ಮೈದಾನದಲ್ಲಿ ಎರಡೇ ಮರಗಳಿದ್ದರೂ ಅದರಿಂದ ಸಾಕಷ್ಟು ನೆರಳು ಇರುತ್ತಿತ್ತು. ಕೋವಿಡ್‌ ಲಾಕ್‌ಡೌನ್‌ ನಡುವೆ ಜನರನ್ನು ಕತ್ತಲಲ್ಲಿಟ್ಟು ಮರಗಳನ್ನು ಕಡಿದಿರುವುದು ಎಷ್ಟು ಸರಿ?’ ಎಂದು ರಾಮಕೃಷ್ಣ, ವೆಂಕಟೇಶ, ಪವನ್‌ ಕುಮಾರ್‌ ಸೇರಿದಂತೆ ಹಲವರು ಪ್ರಶ್ನಿಸಿದ್ದಾರೆ.

ಈ ಸಂಬಂಧ ನಗರಸಭೆ ಪೌರಾಯುಕ್ತ ಮನ್ಸೂರ್‌ ಅಲಿ ಅವರನ್ನು ‘ಪ್ರಜಾವಾಣಿ’ ಸಂಪರ್ಕಿಸಿದಾಗ, ‘ಮುನ್ಸಿಪಲ್‌ ಮೈದಾನ ಮತ್ತು ತಾಲ್ಲೂಕು ಕ್ರೀಡಾಂಗಣವನ್ನು ಒಟ್ಟಿಗೆ ಸೇರಿಸಿ ಒಂದೇ ಮೈದಾನವಾಗಿ ಅಭಿವೃದ್ಧಿ ಪಡಿಸಲಾಗುತ್ತಿದೆ. ಎಲ್ಲಕ್ಕಿಂತ ಮುಖ್ಯವಾಗಿ ಎರಡೂ ಮರಗಳು ಬೀಳುವ ಸ್ಥಿತಿಗೆ ಬಂದಿದ್ದವು. ಶಾಲಾ, ಕಾಲೇಜಿನ ವಿದ್ಯಾರ್ಥಿಗಳು ಅಲ್ಲಿ ಓಡಾಡುತ್ತಿರುತ್ತಾರೆ. ಮಕ್ಕಳ ಹಿತದೃಷ್ಟಿಯಿಂದ ಅವುಗಳನ್ನು ಕಡಿಯಲಾಗಿದೆ’ ಎಂದು ತಿಳಿಸಿದ್ದಾರೆ.

‘ಮೇ 6ರಂದು ಹರಾಜಿನ ಕುರಿತು ಜಾಹೀರಾತು ಕೊಟ್ಟಿದ್ದು ನಿಜ. ಬೇರೆಯವರಿಗೆ ಮರಗಳನ್ನು ಕೊಡುವುದರ ಬದಲು ನಾವೇ ಕಡಿದರಾಯಿತು ಎಂದು ನಿರ್ಧರಿಸಿ ಮರಗಳನ್ನು ಕಡಿಯಲಾಗಿದೆ. ಅದೇ ದಿನ ಮರಗಳ ತುಂಡುಗಳನ್ನು ಹರಾಜಿನಲ್ಲಿ ಮಾರಾಟ ಮಾಡಲಾಗುವುದು’ ಎಂದು ಪ್ರತಿಕ್ರಿಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT