ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೊಸಪೇಟೆಲಿ ಅನಧಿಕೃತ ವೃತ್ತ, ಪುತ್ಥಳಿ ನಿರ್ಮಾಣಕ್ಕೆ ನಗರಸಭೆ ಹೊಣೆಯಲ್ಲವಂತೆ- ಟೀಕೆ

Last Updated 1 ಏಪ್ರಿಲ್ 2023, 12:51 IST
ಅಕ್ಷರ ಗಾತ್ರ

ಹೊಸಪೇಟೆ (ವಿಜಯನಗರ): ‘ಹೊಸಪೇಟೆ ನಗರದ ವಿವಿಧ ಪ್ರಮುಖ ರಸ್ತೆಗಳಲ್ಲಿ ಅನಧಿಕೃತವಾಗಿ ವೃತ್ತ ಹಾಗೂ ಪುತ್ಥಳಿ ನಿರ್ಮಾಣ ಮಾಡಲಾಗುತ್ತಿದ್ದು, ನಗರಸಭೆ ಇದಕ್ಕೆ ಹೊಣೆಯಾಗಿರುವುದಿಲ್ಲ’

ಇದು ಹೊಸಪೇಟೆ ನಗರಸಭೆ ಪೌರಾಯುಕ್ತ ಮನೋಹರ್‌ ನಾಗರಾಜ ಅವರು ಶುಕ್ರವಾರ ಇಂತಹದ್ದೊಂದು ವಿಚಿತ್ರ ಪ್ರಕಟಣೆ ಹೊರಡಿಸಿದ್ದಾರೆ.

ಇಷ್ಟೇ ಅಲ್ಲ, ಇನ್ನು ಒಂದು ಹೆಜ್ಜೆ ಮುಂದೆ ಹೋಗಿ, ‘ನಗರದ ನಗರಾಭಿವೃದ್ಧಿ ಪ್ರಾಧಿಕಾರ (ಹುಡಾ) ರಸ್ತೆ, ಸಿದ್ಧಿಪ್ರಿಯ ಕಲ್ಯಾಣ ಮಂಟಪ ರಸ್ತೆ ಹಾಗೂ ಎ.ಪಿ.ಎಂ.ಸಿ. ಮಾರುಕಟ್ಟೆ ಸೇರಿದಂತೆ ಇತರೆ ಪ್ರದೇಶಗಳಲ್ಲಿ ಅನಧಿಕೃತವಾಗಿ ವೃತ್ತ ಹಾಗೂ ಪುತ್ಥಳಿ ನಿರ್ಮಿಸಲಾಗುತ್ತಿದೆ. ಈ ಪುತ್ಥಳಿಗಳಿಗೆ ಸಾರ್ವಜನಿಕರಿಂದ, ದುಷ್ಕರ್ಮಿಗಳಿಂದ ಯಾವುದೇ ಅನಾಹುತ ಉಂಟಾದಲ್ಲಿ ನಗರಸಭೆ ಹೊಣೆಯಾಗಿರುವುದಿಲ್ಲ’ ಎಂದೂ ತಿಳಿಸಿದ್ದಾರೆ.

ನಗರದ ಯಾವುದೇ ಭಾಗದಲ್ಲಿ ಏನೇ ಅಭಿವೃದ್ಧಿ ಕಾರ್ಯ ಕೈಗೊಳ್ಳಬೇಕಾದರೆ, ವೃತ್ತ ನಿರ್ಮಿಸಬೇಕಾದರೆ, ಪ್ರತಿಮೆ ಪ್ರತಿಷ್ಠಾಪಿಸಬೇಕಾದರೆ ಅಥವಾ ಕನಿಷ್ಠ ಬಂಟಿಂಗ್ಸ್‌, ಬ್ಯಾನರ್‌ ಹಾಗೂ ಫ್ಲೆಕ್ಸ್‌ ಅಳವಡಿಸಬೇಕಾದರೆ ನಗರಸಭೆಯ ಅನುಮತಿ ಪಡೆಯುವುದು ಕಡ್ಡಾಯ. ಕಾನೂನು ಕೂಡ ಇದನ್ನೇ ಹೇಳುತ್ತದೆ. ಒಂದು ವೇಳೆ ಯಾರಾದರೂ ಅಕ್ರಮ, ಅನಧಿಕೃತವಾಗಿ ಕಟ್ಟಡ ಅಥವಾ ರಸ್ತೆಯ ಮಧ್ಯದಲ್ಲಿ ವೃತ್ತ ನಿರ್ಮಿಸಿ, ಅದರೊಳಗೆ ಪ್ರತಿಮೆ ಪ್ರತಿಷ್ಠಾಪಿಸಲು ಪ್ರಯತ್ನಿಸಿದರೆ ಅದನ್ನು ತಡೆಯಬೇಕಾದ ಜವಾಬ್ದಾರಿ ನಗರಸಭೆಯ ಮೇಲಿದೆ. ಆದರೆ, ಪೌರಾಯುಕ್ತರು, ಇದಕ್ಕೆ ತದ್ವಿರುದ್ಧವಾಗಿ ಹೇಳಿದ್ದಾರೆ.

ಹಾಗಿದ್ದರೆ ನಗರಸಭೆಗೆ ನಗರದಲ್ಲಿ ನಡೆಯುತ್ತಿರುವ ನಿರ್ಮಾಣ ಚಟುವಟಿಕೆಗಳ ಮೇಲೆ ನಿಯಂತ್ರಣ ಇಲ್ಲವೆ ಎಂಬ ಪ್ರಶ್ನೆ ಉದ್ಭವಿಸುತ್ತದೆ. ಇಷ್ಟೇ ಅಲ್ಲ, ಯಾರು ಬೇಕಾದರೂ ಅವರ ಮನಸ್ಸಿಗೆ ತೋಚಿದ ಸ್ಥಳದಲ್ಲಿ ರಸ್ತೆಯ ನಡು ಭಾಗದಲ್ಲಿ ವೃತ್ತ, ಪ್ರತಿಮೆ ಪ್ರತಿಷ್ಠಾಪಿಸಬಹುದೆ ಎಂಬ ಪ್ರಶ್ನೆ ಮೂಡುತ್ತದೆ.

‘ಚುನಾವಣೆ ಹಿನ್ನೆಲೆಯಲ್ಲಿ ಮತಗಳನ್ನು ಸೆಳೆಯಲು ನಗರದ ಹಲವೆಡೆ ರಾತ್ರೋರಾತ್ರಿ ಪ್ರತಿಮೆಗಳನ್ನು ತಂದು ಕೂರಿಸಲಾಗಿದೆ. ಸಂಬಂಧಿಸಿದ ಸಮುದಾಯಗಳ ಗಮನಕ್ಕೆ ತಾರದೆ ಪ್ರತಿಮೆ ಪ್ರತಿಷ್ಠಾಪಿಸಲಾಗಿದೆ. ಕೆಲವು ಪ್ರತಿಮೆಗಳ ನಿರ್ಮಾಣಕ್ಕೆ ಯಾವುದೇ ಒಪ್ಪಿಗೆ ಪಡೆದಿಲ್ಲ. ಚುನಾವಣೆ ನೀತಿ ಸಂಹಿತೆ ನಡುವೆಯೂ ಭರದಿಂದ ಕಾಮಗಾರಿಗಳು ನಡೆಯುತ್ತಿದೆ. ನಗರಸಭೆ ಅದನ್ನು ತಡೆಯುತ್ತಿಲ್ಲವೆಂದರೆ ಪ್ರಭಾವಿಗಳ ಒತ್ತಡಕ್ಕೆ ಮಣಿದಿದೆ ಎಂದರ್ಥ’ ಎಂದು ವಿಜಯನಗರ ಜಿಲ್ಲಾ ಬಾಬಾ ಸಾಹೇಬ್‌ ಡಾ.ಬಿ.ಆರ್‌.ಅಂಬೇಡ್ಕರ್‌ ಸಂಘದ ಪ್ರಧಾನ ಕಾರ್ಯದರ್ಶಿ ಸೋಮಶೇಖರ್‌ ಬಣ್ಣದಮನೆ ಆರೋಪಿಸಿದ್ದಾರೆ.

ಈ ಕುರಿತು ಜಿಲ್ಲಾಧಿಕಾರಿ ಟಿ.ವೆಂಕಟೇಶ್‌ ಅವರನ್ನು ‘ಪ್ರಜಾವಾಣಿ’ ಸಂಪರ್ಕಿಸಿದಾಗ, ‘ನಗರಸಭೆ ಹೊರಡಿಸಿರುವ ಪ್ರಕಟಣೆ ಏನೆಂಬುದು ಗೊತ್ತಿಲ್ಲ. ಒಂದು ವೇಳೆ ತಾನು ನಗರದಲ್ಲಿ ನಡೆಯುವ ನಿರ್ಮಾಣ ಕೆಲಸಕ್ಕೆ ಹೊಣೆಯಿಲ್ಲ ಎಂದು ಹೇಳಿದರೆ ಅದು ತಪ್ಪು. ಈ ಕುರಿತು ನಗರಸಭೆ ಅಧಿಕಾರಿಗಳೊಂದಿಗೆ ಮಾತನಾಡಿ ಸರಿಪಡಿಸುವ ಕೆಲಸ ಮಾಡುವೆ’ ಎಂದು ಹೇಳಿದರು.

/ಬಾಕ್ಸ್‌/

ಆದೇಶಕ್ಕೆ ಸಾರ್ವಜನಿಕರಿಂದ ಟೀಕೆ

ಅನೇಕ ದಿನಗಳಿಂದ ನಗರದ ವಿವಿಧ ಭಾಗಗಳಲ್ಲಿ ವೃತ್ತ ನಿರ್ಮಿಸುವ ಕಾಮಗಾರಿ ಆರಂಭಗೊಂಡಿವೆ. ಕೆಲ ದಿನಗಳ ಹಿಂದೆ ಸಿದ್ಧಿಪ್ರಿಯ ಕಲ್ಯಾಣ ಮಂಟಪದ ಬಳಿ ಬಸವೇಶ್ವರರ ಪ್ರತಿಮೆ ನಿರ್ಮಾಣಕ್ಕೆ ಚಾಲನೆ ನೀಡಲಾಗಿದೆ. ಎರಡು ದಿನಗಳ ಹಿಂದೆ ಹುಡಾ ಕಚೇರಿ ಬಳಿ ಬಾಬುಜಗಜೀವನ್‌ ರಾಂ ಅವರ ಪ್ರತಿಮೆ ಪ್ರತಿಷ್ಠಾಪಿಸಿ ಆಗಿದೆ. ಇಷ್ಟು ದಿನಗಳವರೆಗೆ ಅದರ ಬಗ್ಗೆ ಏನನ್ನೂ ಹೇಳದ ನಗರಸಭೆ, ಈಗ ಚುನಾವಣೆ ಮಾದರಿ ನೀತಿ ಸಂಹಿತೆ ಜಾರಿಗೆ ಬಂದ ನಂತರ ಅದರ ಬಗ್ಗೆ ಸ್ಪಷ್ಟನೆ ಕೊಟ್ಟಿದ್ದು ಏಕೆ ಎಂಬ ಅನುಮಾನ ಮೂಡಿದೆ. ಚುನಾವಣೆ ಘೋಷಣೆಗೂ ಮುಂಚೆ ನಗರಸಭೆ ಹಾಗೂ ಅದರ ಅಧಿಕಾರಿಗಳು ಪ್ರಭಾವಿಗಳ ಒತ್ತಡಕ್ಕೆ ಮಣಿದು ಕೆಲಸ ಮಾಡುತ್ತಿದ್ದರೆ ಎಂಬ ಪ್ರಶ್ನೆ ಎಂತಹವರಿಗೂ ಕಾಡುತ್ತದೆ.

ಪ್ರತಿಮೆಗಳ ನಿರ್ಮಾಣ ಹಾಗೂ ಅದರಿಂದ ಆಗುವ ಅನಾಹುತಗಳಿಗೆ ನಗರಸಭೆ ಪೌರಾಯುಕ್ತರು ಹೊಣೆ ಇಲ್ಲ ಎಂದು ತಿಳಿಸಿದ್ದಾರೆ. ಹಾಗಿದ್ದರೆ ನಗರಸಭೆಯ ಜವಾಬ್ದಾರಿ ಏನು? ತಾನೇ ಗೊಂದಲಕ್ಕೆ ಅವಕಾಶ ಕಲ್ಪಿಸಿ, ಈಗ ಅದೇ ಗೊಂದಲ ಸೃಷ್ಟಿಸುತ್ತಿರುವುದಕ್ಕೆ ಸಾರ್ವಜನಿಕ ವಲಯದಲ್ಲಿ ತೀವ್ರ ಟೀಕೆ ವ್ಯಕ್ತವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT