ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೊಸಪೇಟೆ | ಬಿಡಿಸಿಸಿ ನೇಮಕಾತಿ ಅಕ್ರಮ: ಸಚಿವ ಆನಂದ್‌ ಸಿಂಗ್‌ ರಾಜೀನಾಮೆಗೆ ಆಗ್ರಹ

58 ಹುದ್ದೆಗಳಿಗೆ ₹15 ಕೋಟಿ ಸಂಗ್ರಹದ ಆರೋಪ
Last Updated 8 ಫೆಬ್ರುವರಿ 2023, 10:54 IST
ಅಕ್ಷರ ಗಾತ್ರ

ಹೊಸಪೇಟೆ: ನಗರದ ಬಳ್ಳಾರಿ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕಿನ (ಬಿಡಿಸಿಸಿ) 58 ಹುದ್ದೆಗಳ ನೇಮಕಾತಿಯಲ್ಲಿ ನಡೆದಿದೆ ಎನ್ನಲಾದ ಅಕ್ರಮಕ್ಕೆ ಸಂಬಂಧಿಸಿದಂತೆ ಬ್ಯಾಂಕಿನ ಅಧ್ಯಕ್ಷ, ಪ್ರವಾಸೋದ್ಯಮ ಸಚಿವ ಆನಂದ್‌ ಸಿಂಗ್‌ ರಾಜೀನಾಮೆ ಕೊಡಬೇಕೆಂದು ಆಗ್ರಹಿಸಿ ಸಿಪಿಎಂ ಪಕ್ಷದವರು ಬುಧವಾರ ಬ್ಯಾಂಕ್‌ ಎದುರು ಪ್ರತಿಭಟನೆ ನಡೆಸಿದರು.

ನೂರು ವರ್ಷ ಪೂರೈಸಿರುವ ಬಿಡಿಸಿಸಿಯಲ್ಲಿ 58 ಹುದ್ದೆಗಳ ನೇಮಕಾತಿಯಲ್ಲಿ ಅಕ್ರಮ ನಡೆಸಿ ಭಾರಿ ಹಣಕಾಸಿನ ಅವ್ಯವಹಾರ ನಡೆದಿದೆ ಎಂದು ಆರೋಪಿಸಲಾಗಿದೆ. ಬ್ಯಾಂಕಿನ ಅಧ್ಯಕ್ಷ ಆನಂದ್‌ ಸಿಂಗ್‌ ಇದರಲ್ಲಿ ಭಾಗಿಯಾಗಿರುವ ಆರೋಪಗಳಿವೆ. ಒಂದು ಹುದ್ದೆಗೆ ₹20ರಿಂದ ₹30 ಲಕ್ಷ ಪಡೆದಿರುವ ಮಾಹಿತಿ ಇದೆ. 58 ಹುದ್ದೆಗಳಿಗೆ 6 ಸಾವಿರ ಅರ್ಜಿಗಳು ಬಂದಿದ್ದವು. ಆದರೆ, ಎಲ್ಲರಿಗೂ ಪರೀಕ್ಷೆ ನಡೆಸಿಲ್ಲ. ಪರೀಕ್ಷೆ ಬರೆದ ಎಲ್ಲರಿಗೂ ಸಂದರ್ಶನಕ್ಕೆ ಕರೆದಿಲ್ಲ. ಮೌಖಿಕ ಸಂದರ್ಶನದ ಹೆಸರಲ್ಲಿ ಎಲ್ಲ ನಿಯಮಗಳನ್ನು ಗಾಳಿಗೆ ತೂರಿದ್ದಾರೆ. ಬೇಕಾದವರನ್ನು ಆಯ್ಕೆ ಮಾಡಿ ಹಣಕಾಸಿನ ಅವ್ಯವಹಾರ ನಡೆದಿರುವುದು ಮಾಧ್ಯಮಗಳಲ್ಲಿ ವರದಿಯಾಗಿದೆ ಎಂದು ಆರೋಪಿಸಿದರು.
ಆಯ್ಕೆಯಾದ ಕೆಲ ಅಭ್ಯರ್ಥಿಗಳು ತಮ್ಮ ಆಸ್ತಿ ಮಾರಾಟ ಮಾಡಿ ಹಣ ಹೊಂದಿಸಿದ್ದಾರೆಂಬ ಮಾಹಿತಿ ಇದೆ.

ಇದರಲ್ಲಿ ಬಹುತೇಕರು ರೈತ ಕುಟುಂಬಕ್ಕೆ ಸೇರಿದ್ದು, ರೈತರಿಗೆ ಅನ್ಯಾಯವಾಗಿದೆ. ಮೆರಿಟ್‌ ಅಭ್ಯರ್ಥಿಗಳಿಗೂ ಅನ್ಯಾಯವಾಗಿದೆ. ಈ ಕುರಿತು ಆನಂದ್‌ ಸಿಂಗ್‌ ಇದುವರೆಗೆ ಮಾತನಾಡಿಲ್ಲ. ತನಿಖೆ ನಡೆಸಲು ಮುಂದಾಗಿಲ್ಲ. ಅವರ ಸಂಬಂಧಿಯ ಹೆಸರು ಕೇಳಿ ಬಂದಿದ್ದರೂ ಮೌನ ವಹಿಸಿರುವುದು ಹಲವು ಸಂದೇಹಗಳಿಗೆ ಎಡೆಮಾಡಿಕೊಟ್ಟಿದೆ. ಸಚಿವರೇ ಇದರ ಹೊಣೆ ಹೊರಬೇಕು. ತಕ್ಷಣವೇ ಸಚಿವರು ರಾಜೀನಾಮೆ ನೀಡಬೇಕೆಂದು ಒತ್ತಾಯಿಸಿದರು.

ಪ್ರಕರಣವನ್ನು ಕೂಡಲೇ ಸಿಒಡಿ ತನಿಖೆಗೆ ಒಪ್ಪಿಸಬೇಕು. ಹಾಲಿ ನೇಮಕಾತಿ ರದ್ದುಪಡಿಸಬೇಕು. ಪತ್ರಕರ್ತರಿಗೆ ಬೆದರಿಕೆ ಹಾಕಿರುವವರನ್ನು ಗಡಿಪಾರು ಮಾಡಬೇಕು. ಈ ಹಗರಣದ ಕುರಿತು ಮಾತನಾಡುವವರ ಬಾಯಿ ಮುಚ್ಚಿಸುವ ಕೆಲಸ ತೆರೆಮರೆಯಲ್ಲಿ ನಡೆದಿದೆ. ಈ ಭ್ರಷ್ಟಾಚಾರ ಪ್ರಕರಣದ ಸಮಗ್ರ ತನಿಖೆ ನಡೆಸಿ, ತಪ್ಪಿತಸ್ಥರಿಗೆ ಶಿಕ್ಷೆಯಾಗಬೇಕು ಎಂದು ಆಗ್ರಹಿಸಿದರು.

ಪಕ್ಷದ ಮುಖಂಡರಾದ ಯು. ಬಸವರಾಜ, ಆರ್‌. ಭಾಸ್ಕರ್‌ ರೆಡ್ಡಿ, ಮರಡಿ ಜಂಬಯ್ಯ ನಾಯಕ, ಸೋಮಶೇಖರ್‌ ಬಣ್ಣದಮನೆ, ಎನ್‌. ಯಲ್ಲಾಲಿಂಗ, ಜೆ. ಶಿವುಕುಮಾರ, ವಿ. ಸ್ವಾಮಿ, ಎ. ಕರುಣಾನಿಧಿ, ಎಂ. ಗೋಪಾಲ್‌, ಈಡಿಗರ ಮಂಜುನಾಥ, ಯಲ್ಲಮ್ಮ, ಕೆ. ನಾಗರತ್ನ, ಸ್ವಪ್ನ, ಶಕುಂತಲಾ ಇತರರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT