ಸೋಮವಾರ, 9 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ವಿಜಯನಗರ | ನಗರಸಭೆ: ಶಾಸಕ ಗವಿಯಪ್ಪ ತಟಸ್ಥ?

ಕಾಂಗ್ರೆಸ್ ವಶಕ್ಕೆ ಪಡೆಯಲು ಕಾರ್ಯತಂತ್ರ: ಅಸ್ಲಾಂ ಮಾಳ್ಗಿಯತ್ತ ಒಲವು?
Published 28 ಆಗಸ್ಟ್ 2024, 4:34 IST
Last Updated 28 ಆಗಸ್ಟ್ 2024, 4:34 IST
ಅಕ್ಷರ ಗಾತ್ರ

ಹೊಸಪೇಟೆ (ವಿಜಯನಗರ): ಹೊಸಪೇಟೆ ನಗರಸಭೆಗೆ ಅಧ್ಯಕ್ಷ, ಉಪಾಧ್ಯಕ್ಷ ಚುನಾವಣೆಗೆ ದಿನಾಂಕ ಪ್ರಕಟವಾಗದಿದ್ದರೂ, ತೆರೆಮರೆಯ ಕಸರತ್ತು ಜೋರಾಗಿದೆ. ಕಾಂಗ್ರೆಸ್‌ನ ಅಸ್ಲಾಂ ಮಾಳ್ಗಿ ಅವರು ಅಧ್ಯಕ್ಷರಾಗುವ ಸಾಧ್ಯತೆಯೇ ಹೆಚ್ಚು ಎನ್ನಲಾಗುತ್ತಿದ್ದು, ಶಾಸಕ ಎಚ್‌.ಆರ್‌. ಗವಿಯಪ್ಪ ಅವರ ನಡೆ ನಿಗೂಢವಾಗಿದೆ.

ಶಾಸಕರಿಂದಲೇ ಚುನಾವಣೆ ವಿಳಂಬವಾಗುತ್ತಿದೆ ಎಂಬ ಆರೋಪವೂ ಕೇಳಿಬಂದಿದೆ. ಆದರೆ ಈ ಕುರಿತು ‘ಪ್ರಜಾವಾಣಿ’ ಜೊತೆ ಮಾತನಾಡಿದ ಅವರು, ‘ಚುನಾವಣೆ ಬೇಗ ನಡೆಯಲಿ ಎಂದು ನಾನೂ ಹಾರೈಸುತ್ತೇನೆ. ನಾನು ನಗರಸಭೆ ಚುನಾವಣೆಯ ತಂಟೆಗೇ ಬರುತ್ತಿಲ್ಲ, ಯಾರು ಬೇಕಾದರೂ ಅಧ್ಯಕ್ಷರಾಗಲಿ’ ಎಂದು ಸ್ಪಷ್ಟಪಡಿಸಿದರು.

ಪಕ್ಷದ ಜಿಲ್ಲಾ ಘಟಕದ ಅಧ್ಯಕ್ಷರು ಮುಸ್ಲಿಂ ಸಮುದಾಯದವರು, ಜಿಲ್ಲಾ ಉಸ್ತುವಾರಿ ಸಚಿವರು, ಹುಡಾ ಅಧ್ಯಕ್ಷರು ಸಹ ಮುಸ್ಲಿಂ ಸಮುದಾಯದವರು. ನಗರಸಭೆಗೆ ಸಹ ಮುಸ್ಲಿಂ ಸಮುದಾಯದವರು ಅಧ್ಯಕ್ಷರಾದರೆ ತಪ್ಪು ಸಂದೇಶ ಹೋಗುವ ಅಪಾಯ ಇದೆ, ಹೀಗಾಗಿ ಬೇರೆ ಅಭ್ಯರ್ಥಿಗೆ ಅವಕಾಶ ಕೊಡಿ ಎಂಬ ಕ್ಷೀಣ ಧ್ವನಿಯೂ ಇದೆ, ಆದರೆ ಅದನ್ನು ಮಟ್ಟಹಾಕುವ ಕೆಲಸ ನಡೆದಿದೆ ಎಂದು ಮೂಲಗಳಿಂದ ತಿಳಿದುಬಂದಿದೆ.

ಅಧ್ಯಕ್ಷ ಸ್ಥಾನ ಹಿಂದುಳಿದ ವರ್ಗ ಎ ಮತ್ತು ಉಪಾಧ್ಯಕ್ಷ ಸ್ಥಾನ ಸಾಮಾನ್ಯ ವರ್ಗಕ್ಕೆ ಮೀಸಲಾಗಿದೆ. ಈಗಾಗಲೇ 12 ಸದಸ್ಯರನ್ನು ಹೊಂದಿರುವ ಕಾಂಗ್ರೆಸ್‌ಗೆ ಸಂಸದ ಮತ್ತು ಶಾಸಕರ ಬಲವೂ ಇದೆ. 12 ಮಂದಿ ಪಕ್ಷೇತರರು ಮತ್ತು ಒಬ್ಬ ಎಎ‍ಪಿ ಸದಸ್ಯರ ಪೈಕಿ 5 ಮಂದಿ ಕಾಂಗ್ರೆಸ್‌ಗೆ ಒಲವು ತೋರಿಸಿದ್ದಾರೆ ಎಂದು ಹೇಳಲಾಗುತ್ತಿದೆ.

ಈ ಮಧ್ಯೆ, ಕಾಂಗ್ರೆಸ್ ಪಕ್ಷದ ವೀಕ್ಷಕ ವಿಜಯ್‌ ಸಿಂಗ್ ಮತ್ತು ಆನಂದ ನ್ಯಾಮಗೌಡ ಅವರು ಚುನಾವಣೆ ಸಂಬಂಧ ಗುರುವಾರ (ಆ.29) ಸಭೆ ಕರೆದಿದ್ದು, ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ಅಭ್ಯರ್ಥಿ ಅಂತಿಮಗೊಳಿಸುವ ಸಾಧ್ಯತೆ ಇದೆ.

‘ಚುನಾವಣೆ ನಡೆಯುವ ಎರಡು ದಿನದ ಮೊದಲು ತಿಳಿಸಿದರೆ ಬರುವುದಾಗಿ ಸಂಸದರು ತಿಳಿಸಿದ್ದಾರೆ. ಶಾಸಕ ಗವಿಯಪ್ಪ ಅವರಿಂದ ಇದುವರೆಗೂ ಸ್ಪಷ್ಟ ಉತ್ತರ ಬಂದಿಲ್ಲ, ಆದರೆ ಶೀಘ್ರ ದಿನಾಂಕ ನಿಗದಿಪಡಿಸುವ ವಿಶ್ವಾಸ ಇದೆ. ಕಳೆದ ಬಾರಿ ಗೆದ್ದವರಿಂದ ನಗರದ ಅಭಿವೃದ್ಧಿ ಆಗಿಲ್ಲ ಎಂಬ ಬೇಸರ ಎಲ್ಲೆಡೆ ಇದೆ. ಹೀಗಾಗಿ ಮಾಜಿ ಸಚಿವ ಆನಂದ್ ಸಿಂಗ್ ಅವರ ಪ್ರಯತ್ನದ ಹೊರತಾಗಿಯೂ ಕಾಂಗ್ರೆಸ್ ಈ ಬಾರಿ ನಗರಸಭೆಯ ಹಿಡಿತ ಸಾಧಿಸುವ ವಿಶ್ವಾಸ ಇದೆ’ ಎಂದು ಪಕ್ಷದ ಜಿಲ್ಲಾ ಘಟಕದ ಅಧ್ಯಕ್ಷ ಸಿರಾಜ್‌ ಶೇಖ್‌ ತಿಳಿಸಿದರು.

‘ಕಮಲಾಪುರ ಪುರಸಭೆಗೆ ಸೆ.4ರಂದು ಚುನಾವಣೆ ನಡೆಯುವ ಸಾಧ್ಯತೆ ಇದೆ. ಮರಿಯಮ್ಮನಹಳ್ಳಿ ಪಟ್ಟಣ ಪಂಚಾಯಿತಿಯಲ್ಲಿ ಆ.30ರಂದು ಚುನಾವಣೆ ಇದೆ. ಜಿಲ್ಲೆಯ ಏಳು ನಗರ ಸ್ಥಳೀಯ ಸಂಸ್ಥೆಗಳಲ್ಲಿ ಕಾಂಗ್ರೆಸ್‌ಗೆ ಸ್ಪಷ್ಟ ಬಹುಮತ ಇದೆ. ಪಕ್ಷವನ್ನು ಇನ್ನಷ್ಟು ಬಲವರ್ಧನೆಗೆ ಕಾರ್ಯಯೋಜನೆ ಸಿದ್ಧವಾಗಿದೆ’ ಎಂದು ಅವರು ಹೇಳಿದರು.

‘ಮತ ಚಲಾಯಿಸಲೂ ಬರುವುದಿಲ್ಲ’

‘ನಗರಸಭೆ ಒಂದು ಸ್ವತಂತ್ರ ಅಂಗಸಂಸ್ಥೆ. ಅದರಲ್ಲಿ ಶಾಸಕರ ಹಸ್ತಕ್ಷೇಪ ಅನಗತ್ಯ. ಹೀಗಾಗಿ ಚುನಾವಣೆಯಲ್ಲಿ ನಾನು ಮತ ಚಲಾಯಿಸಬೇಕೆಂದೇನೂ ಇಲ್ಲ. ಸಂಸದರು ಮತ ಚಲಾಯಿಸಿದರೆ ಅದು ಅವರ ಇಷ್ಟ. ಪಕ್ಷ ಹೇಳಿದರೂ ನಾನು ಮತ ಚಲಾಯಿಸಲು ಬರುವುದಿಲ್ಲ’ ಎಂದು ಶಾಸಕ ಎಚ್.ಆರ್. ಗವಿಯಪ್ಪ ಖಡಾಖಂಡಿತವಾಗಿ ತಿಳಿಸಿದ್ದಾರೆ.

ಡಮ್ಮಿ ಅಭ್ಯರ್ಥಿ ನಿಲ್ಲಿಸುವ ತಂತ್ರ?

ಬಿಜೆಪಿಯಿಂದ ‘ಡಮ್ಮಿ’ ಅಭ್ಯರ್ಥಿಯನ್ನು ಮೊದಲಿಗೆ ನಿಲ್ಲಿಸಿ ಕೊನೆಯ ಕ್ಷಣದಲ್ಲಿ ನಾಮಪತ್ರ ಹಿಂದೆಕ್ಕೆ ಪಡೆಯುವ ತಂತ್ರ ಹೆಣೆಯಲಾಗಿದೆ. ಕೊನೆಗೆ ಅವಿರೋಧವಾಗಿ ಆಯ್ಕೆ ಆಗುವ ರೀತಿಯಲ್ಲಿ ಯೋಜನೆ ರೂಪಿಸಲಾಗಿದೆ. ಪ್ರಭಾವಿಯೊಬ್ಬರ ಅಣತಿಯಂತೆ ಇದೆಲ್ಲವೂ ನಡೆಯುತ್ತಿದೆ ಎಂದು ಮೂಲಗಳು ತಿಳಿಸಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT