ಹೊಸಪೇಟೆ (ವಿಜಯನಗರ): 20 ವರ್ಷ ವಯಸ್ಸಿನ ಯುವತಿ ವಿಧಿ ಕುಮಾರಿ ಜೈನ ಧರ್ಮದ ಸನ್ಯಾಸ ದೀಕ್ಷೆ ಸ್ವೀಕರಿಸಲು ನಿರ್ಧರಿಸಿದ್ದಾರೆ.
ಎಸ್ಸೆಸ್ಸೆಲ್ಸಿಯಲ್ಲಿ ಶೇ 94.8, ಪಿಯುಸಿಯಲ್ಲಿ ಶೇ 99ರಷ್ಟು ಅಂಕ ಗಳಿಸಿರುವ ವಿಧಿ ಕುಮಾರಿ ಅವರು ಆಚಾರ್ಯ ಭಗವಂತ ನರರತ್ನ ಸೂರಿಶ್ವರಜೀ ಮಹಾರಾಜ ಅವರ ಸಾನ್ನಿಧ್ಯದಲ್ಲಿ ಸನ್ಯಾಸ ದೀಕ್ಷೆ ಸ್ವೀಕರಿಸುವರು. ಶ್ರೀ ಆದಿನಾಥ ಜೈನ ಶ್ವೇತಾಂಬರ ಸಂಘದಿಂದ ನಗರದಲ್ಲಿ ಜ. 17 ಹಾಗೂ 18ರಂದು ಪ್ರಥಮ ಜೈನ ದೀಕ್ಷಾ ಸಮಾರಂಭ ಆಯೋಜಿಸಲಾಗಿದೆ. ಜ. 17ರಂದು ವಿಧಿ ಕುಮಾರಿ ಶೋಭಾಯಾತ್ರೆ ನಡೆಯಲಿದೆ. ಮರುದಿನ ನರರತ್ನ ಮಹಾರಾಜರು ದೀಕ್ಷೆ ನೀಡುವರು.
‘ನಾನು ಗದಗ ಜಿಲ್ಲೆಯಲ್ಲಿ ಚಾತುರ್ಮಾಸ ಮಾಡಿದ್ದೆ. ಅದರಲ್ಲಿ ಪಾಲ್ಗೊಂಡಿದ್ದ ವಿಧಿ ಕುಮಾರಿ ಜೈನ ಧರ್ಮದ ತತ್ವ ಸಿದ್ಧಾಂತಗಳಿಗೆ ಆಕರ್ಷಣೆಗೊಂಡು ಸನ್ಯಾಸ ದೀಕ್ಷೆ ಪಡೆಯಲು ನಿರ್ಧರಿಸಿದ್ದಾರೆ. 17ನೇ ವಯಸ್ಸಿನಲ್ಲಿದ್ದಾಗ 48 ದಿವಸ ಉಪಧ್ಯಾನ ತಪ ಕೂಡ ಅವರು ಮಾಡಿದ್ದರು. ಕಾಂತಿಲಾಲ್‌ಜೀ ಹಾಗೂ ರೇಖಾದೇವಿ ಜಿರಾವಾಲ ದಂಪತಿಯ ಮೂರನೇ ಮಗಳಾದ ವಿಧಿ ಕುಮಾರಿ ಅವರು ಸ್ವಯಂಪ್ರೇರಣೆಯಿಂದ ಧರ್ಮ ಪ್ರಸಾರ ಕಾರ್ಯದಲ್ಲಿ ತೊಡಗಿಸಿಕೊಳ್ಳಲು ಮುಂದೆ ಬಂದಿದ್ದಾರೆ’ ಎಂದು ನರರತ್ನ ಮಹಾರಾಜರು ಭಾನುವಾರ ನಗರದಲ್ಲಿ ಮಾಹಿತಿ ನೀಡಿದರು.
‘ನನಗೀಗ 52 ವರ್ಷ. 10ನೇ ವಯಸ್ಸಿನಲ್ಲೇ ನಾನು ಕೂಡ ಸನ್ಯಾಸ ಸ್ವೀಕರಿಸಿದ್ದೆ. ಇದುವರೆಗೆ ನೂರಕ್ಕೂ ಹೆಚ್ಚು ಜನರಿಗೆ ದೀಕ್ಷೆ ಕೊಟ್ಟಿರುವೆ. 8 ವರ್ಷ ಮೇಲಿನ ಅನೇಕರು ಸನ್ಯಾಸ ದೀಕ್ಷೆ ಪಡೆದುಕೊಂಡಿದ್ದಾರೆ’ ಎಂದು ವಿವರಿಸಿದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.