ಹೊಸಪೇಟೆ (ವಿಜಯನಗರ): ಮಾದಿಗ ಮೀಸಲಾತಿ ಹೋರಾಟ ರಾಜ್ಯ ಸಮಿತಿ ನೇತೃತ್ವದಲ್ಲಿ ಪರಿಶಿಷ್ಟ ಜಾತಿ ಒಳ ಮೀಸಲಾತಿ ವರ್ಗೀಕರಣಕ್ಕಾಗಿ ಕೇಂದ್ರ ಸರ್ಕಾರವನ್ನು ಒತ್ತಾಯಿಸಿ ‘ಎದ್ದೇಳು ಮಾದಿಗ ಚಲೋ ಹೈದರಾಬಾದ್’ ಶನಿವಾರ ನಡೆಯಲಿದೆ ಎಂದು ವಿಜಯನಗರ ಜಿಲ್ಲಾ ಡಾ.ಬಿ.ಆರ್.ಅಂಬೇಡ್ಕರ್ ಸಂಘದ ಗೌರವಾಧ್ಯಕ್ಷ ಎಂ.ಸಿ.ವೀರಸ್ವಾಮಿ ಹೇಳಿದರು.
ಇಲ್ಲಿನ ಡಾ.ಬಿ.ಆರ್.ಅಂಭೇಡ್ಕರ್ ಪುತ್ಥಳಿ ಜೈ ಭೀಮ್ ವೃತ್ತದಲ್ಲಿ ಗುರುವಾರ ಹೊಸಪೇಟೆ ತಾಲ್ಲೂಕು ಮಾದಿಗ ಸಮಾಜದ ಮುಖಂಡರು ಸಮಾವೇಶದ ಕರಪತ್ರ ಬಿಡುಗಡೆ ಮಾಡಿದ ವೇಳೆ ಅವರು ಮಾತನಾಡಿದರು.
ವಿಜಯನಗರ ಜಿಲ್ಲಾ ಡಾ.ಬಿ.ಆರ್.ಅಂಬೇಡ್ಕರ್ ಸಂಘದ ಅಧ್ಯಕ್ಷ ಕೆ.ಪಿ. ಉಮಾಪತಿ ಮಾತನಾಡಿ, ‘ಅಧಿಕಾರಕ್ಕೆ ಬಂದ ತಕ್ಷಣ ಎ.ಜೆ. ಸದಾಶಿವ ಆಯೋಗದ ವರದಿಯನ್ನು ಜಾರಿಗೆ ತರಲು ಕೇಂದ್ರಕ್ಕೆ ಶಿಫಾರಸು ಮಾಡುವುದಾಗಿ ಹೇಳಿದ್ದ ಕಾಂಗ್ರೆಸ್ ತನ್ನ ಭರವಸೆ ಈಡೇರಿಸಿಲ್ಲ. ಇನ್ನಾದರೂ ಬೇಡಿಕೆಗೆ ಸ್ಪಂದಿಸದಿದ್ದರೆ ಮುಂಬರುವ ಚುನಾವಣೆಗಳಲ್ಲಿ ಪಾಠ ಕಲಿಸುವುದು ನಿಶ್ಚಿತ’ ಎಂದರು.
ನಗರಸಭೆ ಮಾಜಿ ಅಧ್ಯಕ್ಷೆ ಸಂಕಮ್ಮ, ದಲಿತ ಸಂಘರ್ಷ ಸಮಿತಿಯ ಕಾರಿಗನೂರ ಲಕ್ಷಣ, ಕೊಟಗಿನಹಾಳ್ ಮಲ್ಲಿಕಾರ್ಜುನ, ಮುಖಂಡರಾದ ನಿಂಬಗಲ್ ರಾಮಕೃಷ್ಣ, ಸೆಲ್ವಂ, ಎಸ್.ಬಿ. ಮಂಜುನಾಥ ಇದ್ದರು.