ಹೊಸಪೇಟೆ (ವಿಜಯನಗರ): ಅಂತರರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಪ್ರಯುಕ್ತ ವಿಜಯನಗರ ಜಿಲ್ಲೆಯಲ್ಲಿ ಭಾನುವಾರ ಬೆಳಿಗ್ಗೆ 10 ಗಂಟೆಗೆ ಸರಿಯಾಗಿ 40 ಸಾವಿರಕ್ಕೂ ಅಧಿಕ ಮಂದಿ ಸುಮಾರು 40 ಕಿ.ಮೀ. ಉದ್ದದ ಮಾನವ ಸರಪಳಿ ರಚಿಸಿ ಸ್ವಾತಂತ್ರ್ಯ, ಸಮಾನತೆ ಮತ್ತು ಭ್ರಾತೃತ್ವದ ಸಂದೇಶ ಸಾರಿದರು.
ಬೀದರ್‌ನಿಂದ ಚಾಮರಾಜನಗರ ವರೆಗಿನ 2,500 ಕಿ.ಮೀ.ಉದ್ದದ ಮಾನವ ಸರಪಳಿ ನಿರ್ಮಿಸಿ ವಿಶ್ವದಾಖಲೆ ಬರೆಯುವ ಅಭಿಯಾನದಲ್ಲಿ ಜಿಲ್ಲೆಯ ಜನತೆ ಸಹ ಉತ್ಸಾಹದಿಂದ ಪಾಲ್ಗೊಂಡು ಕಾರ್ಯಕ್ರಮ ಯಶಸ್ವಿಗೊಳಿಸಿದರು.
ಕೊಪ್ಪಳ ಜಿಲ್ಲೆಯ ಗಡಿ ಭಾಗವಾದ ಮುನಿರಾಬಾದ್‌ನ ತುಂಗಭದ್ರಾ ಸೇತುವೆಯ ಗಣೇಶ ಗುಡಿ ಪ್ರದೇಶದಿಂದ ಆರಂಭವಾದ ಮಾನವ ಸರಪಳಿ, ಬಳ್ಳಾರಿ ಜಿಲ್ಲೆಯ ಗಡಿಭಾಗವಾದ ಭುವನಹಳ್ಳಿಯವರೆಗೆ ಚಾಚಿಕೊಂಡಿತು. ಟಿ.ಬಿ.ಡ್ಯಾಂ, ಜಿಲ್ಲಾಧಿಕಾರಿ ಕಚೇರಿ, ಸಾಯಿಬಾಬಾ ವೃತ್ತ, ಬಸವೇಶ್ವರ ವೃತ್ತ, ಕಾಲೇಜು ರಸ್ತೆ, ಅಂಬೇಡ್ಕರ್ ವೃತ್ತ, ಪುನೀತ್ ರಾಜ್‌ಕುಮಾರ್ ವೃತ್ತ, ಕೇಂದ್ರ ಬಸ್ ನಿಲ್ದಾಣ, ಬಳ್ಳಾರಿ ರಸ್ತೆ, ಕಾರಿಗನೂರು, ವಡ್ಡರಹಳ್ಳಿ, ಪಿ.ಕೆ.ಹಳ್ಳಿ, ಬೈಲವದ್ದಿಗೇರಿ, ಗಾದಿಗನೂರು ಹಾಗೂ ಭುವನಹಳ್ಳಿಯವರೆಗೆ ಸಾವಿರಾರು ಸಂಖ್ಯೆಯಲ್ಲಿ ವಿದ್ಯಾರ್ಥಿಗಳು, ಆಟೋ, ಟ್ಯಾಕ್ಸಿ ಚಾಲಕರು, ವಿವಿಧ ಸಂಘಟನೆಗಳ ಕಾರ್ಯಕರ್ತರು, ನರೇಗಾ ಕಾರ್ಮಿಕರು, ಕಟ್ಟಡ ಕಾರ್ಮಿಕರು, ಅಂಗನವಾಡಿ–ಆಶಾ ಕಾರ್ಯಕರ್ತರ ಸಹಿತ ಸಾರ್ವಜನಿಕರು ಉತ್ಸಾಹದಿಂದ ಮಾನವ ಸರಪಳಿ ರಚಿಸಿದರು ಹಾಗೂ ಕೊನೆಯಲ್ಲಿ ಜೈ ಹಿಂದ್, ಜೈ ಕರ್ನಾಟಕ, ಜೈ ಭೀಮ್ ಎಂದು ಘೋಷಣೆ ಕೂಗಿದರು.
ನಗರದ ಅಂಬೇಡ್ಕರ್ ವೃತ್ತದಲ್ಲಿ ನಿರ್ಮಿಸಲಾಗಿದ್ದ ವೇದಿಕೆಯಲ್ಲಿ ಶಾಸಕ ಎಚ್.ಆರ್.ಗವಿಯಪ್ಪ ಅವರ ಅಧ್ಯಕ್ಷತೆಯಲ್ಲಿ ಸಭಾ ಕಾರ್ಯಕ್ರಮ ನಡೆಯಿತು. ಪ್ರಜಾಪ್ರಭುತ್ವ ಇರುವುದಕ್ಕೇ ನಾವೆಲ್ಲ ಇಂದು ಸ್ವಾತಂತ್ರ್ಯದ ಅನುಭವ ಪಡಯುತ್ತಿದ್ದೇವೆ, ಎಲ್ಲರಿಗೂ ಅಧಿಕಾರ ಸಿಗುವಂತಾಗಿದೆ. ಇಂತಹ ಪ್ರಜಾಪ್ರಭುತ್ವವನ್ನು ಗಟ್ಟಿಗೊಳಿಸುವ ನಿಟ್ಟಿನಲ್ಲಿ ಅಂಬೇಡ್ಕರ್ ಅವರ ಕೊಡುಗೆ ಅಪಾರ ಎಂದು ಶಾಸಕರು ಹೇಳಿದರು.
ಜಿಲ್ಲಾಧಿಕಾರಿ ಎಂ.ಎಸ್.ದಿವಾಕರ್, ಜಿಲ್ಲಾ ಪೊಲೀಸ್ ವರಿಷ್ಠ ಶ್ರೀಹರಿಬಾಬು ಬಿ.ಎಲ್., ಹೊಸಪೇಟೆ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಚ್.ಎನ್.ಎಫ್. ಮೊಹಮ್ಮದ್ ಇಮಾಮ್ ನಿಯಾಜಿ, ಕಲಾವಿದೆ ಮಂಜಮ್ಮ ಜೋಗತಿ, ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕ ಎಚ್.ವಿ.ಮಂಜುನಾಥ್ ಇತರರು ಇದ್ದರು.
ಆರಂಭದಲ್ಲಿ ಜಿಲ್ಲಾಧಿಕಾರಿ ಎಂ.ಎಸ್.ದಿವಾಕರ್ ಅವರು ಸಂವಿಧಾನ ಪೀಠಿಕೆಯನ್ನು ಬೋಧಿಸಿದರು. ಕಲಾತಂಡಗಳ ಪ್ರದರ್ಶನ ಗಮನ ಸೆಳೆಯಿತು. ಒಂದು ರೀತಿಯಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.