ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಜಯನಗರ: ನಾವಿಕನಿಲ್ಲದ ದೋಣಿಯಂತಾದ ಜೆಡಿಎಸ್

ಚುನಾವಣೆಗಳಿಗಷ್ಟೇ ಸೀಮಿತವಾಯಿತೇ ತೆನೆಹೊತ್ತ ಪಕ್ಷದ ಚಟುವಟಿಕೆಗಳು
Last Updated 22 ಸೆಪ್ಟೆಂಬರ್ 2021, 10:48 IST
ಅಕ್ಷರ ಗಾತ್ರ

ಹೊಸಪೇಟೆ (ವಿಜಯನಗರ): ಅವಿಭಜಿತ ಬಳ್ಳಾರಿ ಜಿಲ್ಲೆಯಲ್ಲಿ ಜೆಡಿಎಸ್‌ ಪಕ್ಷ ನಾವಿಕನಿಲ್ಲದ ಡೋಣಿಯಂತಾಗಿದೆ.

ಜಿಲ್ಲೆಯಲ್ಲಿ ಪಕ್ಷದ ಚುಕ್ಕಾಣಿ ಹಿಡಿದವರು, ಈ ಹಿಂದಿನ ಲೋಕಸಭೆ, ವಿಧಾನಸಭೆ ಚುನಾವಣೆಗೆ ಸ್ಪರ್ಧಿಸಿದವರು ಮೌನ ವಹಿಸಿದ್ದಾರೆ. ಯಾರೂ ಪಕ್ಷದ ಚಟುವಟಿಕೆಗಳನ್ನು ಮುಂದುವರೆಸಿಕೊಂಡು ಹೋಗುತ್ತಿಲ್ಲ. ಇದರಿಂದಾಗಿ ಜಿಲ್ಲೆಯಲ್ಲಿ ಜೆಡಿಎಸ್‌ ಇಲ್ಲದಂತಾಗಿದೆ. ಕೆಲವೇ ಕೆಲವು ಸಂಖ್ಯೆಯಲ್ಲಿರುವ ಪಕ್ಷದ ನಿಷ್ಠಾವಂತ ಕಾರ್ಯಕರ್ತರು ಗೊಂದಲಕ್ಕೆ ಒಳಗಾಗಿದ್ದಾರೆ. ಈ ಪೈಕಿ ಕೆಲವರು ಅನ್ಯ ಪಕ್ಷದತ್ತ ಹೊರಳಿದ್ದಾರೆ.

ಸದ್ಯದ ಪರಿಸ್ಥಿತಿ ನೋಡಿದರೆ, ಜೆಡಿಎಸ್‌ ಪಕ್ಷವು ಚುನಾವಣೆ ಬಂದಾಗಲಷ್ಟೇ ಸಕ್ರಿಯವಾಗುತ್ತದೆ. ಬಳಿಕ ಪಕ್ಷದ ಯಾವುದೇ ಕೆಲಸ ಕಾರ್ಯಗಳು ನಡೆಯುವುದಿಲ್ಲ ಎಂಬ ಮಾತನ್ನೂ ಪುಷ್ಟೀಕರಿಸುವ ರೀತಿಯಲ್ಲಿ ನಿಷ್ಕ್ರಿಯವಾಗಿದೆ. ಪಕ್ಷದ ಜಿಲ್ಲಾ ಅಧ್ಯಕ್ಷ ಎನ್‌.ಟಿ. ಬೊಮ್ಮಣ್ಣ ಅವರು ಅನಾರೋಗ್ಯದಿಂದ ಹಾಸಿಗೆ ಹಿಡಿದಿದ್ದಾರೆ. ಈಗಷ್ಟೇ ಆರೋಗ್ಯದಲ್ಲಿ ಸುಧಾರಣೆಯಾಗಿದೆ. ಆದರೆ, ಜಿಲ್ಲೆಯಾದ್ಯಂತ ಸಂಚರಿಸಿ ಪಕ್ಷ ಸಂಘಟಿಸುವ ಸ್ಥಿತಿಯಲ್ಲಿ ಅವರಿಲ್ಲ. ಈ ಕುರಿತು ಸ್ವತಃ ಅವರೇ ಪಕ್ಷದ ವರಿಷ್ಠರಿಗೆ ಪತ್ರ ಬರೆದು, ಹೊಸಬರಿಗೆ ಜವಾಬ್ದಾರಿ ವಹಿಸುವಂತೆ ಕೋರಿದ್ದಾರೆ. ಆದರೆ, ಪಕ್ಷವು ಇನ್ನಷ್ಟೇ ಈ ನಿಟ್ಟಿನಲ್ಲಿ ತೀರ್ಮಾನಕ್ಕೆ ಬರಬೇಕಿದೆ.

2013ರ ಚುನಾವಣೆಯಲ್ಲಿ ಹಗರಿಬೊಮ್ಮನಹಳ್ಳಿ ಕ್ಷೇತ್ರದಿಂದ ಜೆಡಿಎಸ್‌ನಿಂದ ಸ್ಪರ್ಧಿಸಿ ಭೀಮಾ ನಾಯ್ಕ ಜಯಶಾಲಿಯಾಗಿದ್ದರು. ಆದರೆ, ಅವರೆಂದೂ ಜೆಡಿಎಸ್‌ ಸಂಘಟಿಸುವ ಕೆಲಸ ಮಾಡಲಿಲ್ಲ ಎಂದು ಆರೋಪಿಸುತ್ತಾರೆ ಜೆಡಿಎಸ್‌ ಮುಖಂಡರು. ಬಳಿಕ ಅವರು ಕಾಂಗ್ರೆಸ್‌ ಸೇರ್ಪಡೆಯಾಗಿದ್ದರು. 2018ರ ಚುನಾವಣೆಯಲ್ಲಿ ಎಲ್ಲಾ ಕ್ಷೇತ್ರಗಳಿಂದ ಜೆಡಿಎಸ್‌ ಅಭ್ಯರ್ಥಿಗಳು ಕಣಕ್ಕಿಳಿದಿದ್ದರು. ಆದರೆ, ಎಲ್ಲೆಡೆ ಠೇವಣಿ ಕಳೆದುಕೊಂಡು ತೀವ್ರ ಮುಖಭಂಗ ಅನುಭವಿಸಿತ್ತು.

ಮೂರು ವರ್ಷಗಳ ಹಿಂದೆ ನಡೆದ ವಿಧಾನ ಪರಿಷತ್ತಿನ ಚುನಾವಣೆಗೆ ಜೆಡಿಎಸ್‌ನಿಂದ ಸ್ಪರ್ಧಿಸಿದ್ದ ಪ್ರತಾಪ ರೆಡ್ಡಿ ಅವರು ಬಹಳ ಕಡಿಮೆ ಮತಗಳ ಅಂತರದಿಂದ ಪರಾಭವಗೊಂಡಿದ್ದರು. ಆದರೆ, ಅವರೂ ಸೇರಿದಂತೆ ವಿಧಾನಸಭೆ ಚುನಾವಣೆಗೆ ಸ್ಪರ್ಧಿಸಿದ ಯಾರೊಬ್ಬರೂ ಪಕ್ಷದ ಚಟುವಟಿಕೆಗಳನ್ನು ಮುನ್ನಡೆಸುತ್ತಿಲ್ಲ. ಅವರು ಸ್ವರ್ಧಿಸಿದ ಕ್ಷೇತ್ರಗಳ ಕಡೆಗೂ ಮುಖ ಮಾಡಿಲ್ಲ.

ಅಖಂಡ ಬಳ್ಳಾರಿ ಜಿಲ್ಲೆ ವಿಭಜನೆಗೊಂಡು ವಿಜಯನಗರ ಪ್ರತ್ಯೇಕ ಜಿಲ್ಲೆಯಾಗಿದೆ. ಹೀಗಿದ್ದರೂ ಎರಡು ಜಿಲ್ಲೆಗಳಿಗೆ ಈ ಹಿಂದಿನ ಪದಾಧಿಕಾರಿಗಳೇ ಮುಂದುವರೆದಿದ್ದಾರೆ. ರಾಜ್ಯ, ಕೇಂದ್ರದಲ್ಲಿ ಅಧಿಕಾರದಲ್ಲಿರುವ ಬಿಜೆಪಿ ಒಂದಿಲ್ಲೊಂದು ಕಾರ್ಯಕ್ರಮಗಳು, ಸರ್ಕಾರದ ಸಾಧನೆಗಳನ್ನು ಜನರಿಗೆ ತಿಳಿಸುತ್ತ ಸಕ್ರಿಯವಾಗಿದೆ. ಇನ್ನೊಂದೆಡೆ ಕಾಂಗ್ರೆಸ್‌, ಸರ್ಕಾರದ ವೈಫಲ್ಯವನ್ನು ಜನರಿಗೆ ತಿಳಿಸುತ್ತ ವಿರೋಧ ಪಕ್ಷದ ಕೆಲಸ ಮಾಡುತ್ತಿದೆ. ಆದರೆ, ಪ್ರಾದೇಶಿಕ ಪಕ್ಷವೆಂದು ಗುರುತಿಸಿಕೊಳ್ಳುವ ಜೆಡಿಎಸ್‌ನಿಂದ ಯಾವುದೇ ರಚನಾತ್ಮಕ ಕೆಲಸಗಳು ನಡೆಯುತ್ತಿಲ್ಲ. ಇದು ಪಕ್ಷದ ಯುವ ಕಾರ್ಯಕರ್ತರನ್ನು ಕಂಗೆಡಿಸಿದೆ.

‘ಪಕ್ಷದ ವರಿಷ್ಠರು ಜಿಲ್ಲೆಯಲ್ಲಿ ಜೆಡಿಎಸ್‌ ಪಕ್ಷವನ್ನು ಬಲಪಡಿಸಲು ಗಂಭೀರವಾಗಿ ಯೋಚಿಸಬೇಕು. ಕ್ರಿಯಾಶೀಲರಾದವರಿಗೆ ಪಕ್ಷದ ಜವಾಬ್ದಾರಿ ವಹಿಸಬೇಕು. ಇಲ್ಲವಾದರೆ ಪಕ್ಷ ಇನ್ನಷ್ಟು ದುರ್ಬಲಗೊಳ್ಳುತ್ತದೆ’ ಎನ್ನುತ್ತಾರೆ ಜೆಡಿಎಸ್‌ ಯುವ ಮುಖಂಡ ಎಚ್‌. ಶಬ್ಬೀರ್‌.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT