ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೊಸಪೇಟೆ: ಕಾಕುಬಾಳು ಶಾಲೆಯಲ್ಲಿ ಕೊಠಡಿಗಳ ಕೊರತೆ, ಕಲ್ಯಾಣ ಮಂಟಪವೇ ಪಾಠಶಾಲೆ!

ಸಭಾಂಗಣದಲ್ಲಿ 1ರಿಂದ 4ನೇ ತರಗತಿ ವರೆಗೆ ಪಾಠ
Last Updated 4 ಆಗಸ್ಟ್ 2022, 12:28 IST
ಅಕ್ಷರ ಗಾತ್ರ

ಹೊಸಪೇಟೆ (ವಿಜಯನಗರ): ತಾಲ್ಲೂಕಿನ ಕಾಕುಬಾಳು ಸರ್ಕಾರಿ ಪ್ರಾಥಮಿಕ ಶಾಲೆಯ ಮಕ್ಕಳಿಗೆ ಕೊಠಡಿಗಳ ಸೌಲಭ್ಯ ಇಲ್ಲದ ಕಾರಣ ಗ್ರಾಮದ ಜಡೇಸಿದ್ದೇಶ್ವರ ಕಲ್ಯಾಣ ಮಂಟಪದಲ್ಲೇ ಪಾಠ, ಪ್ರವಚನ ಮಾಡುತ್ತಿದ್ದು, ಅವರ ಓದಿಗೆ ಹಿನ್ನಡೆಯಾಗುತ್ತಿದೆ.

ಶಾಲೆಯಲ್ಲಿ 1ರಿಂದ 8ನೇ ತರಗತಿಯ ವರೆಗೆ ಕನ್ನಡ ಮಾಧ್ಯಮ, 1ರಿಂದ 4ನೇ ತರಗತಿ ವರೆಗೆ ಇಂಗ್ಲಿಷ್‌ ಮಾಧ್ಯಮ ಇದೆ. ಕನ್ನಡ ಮಾಧ್ಯಮದಲ್ಲಿ ಒಟ್ಟು 337 ವಿದ್ಯಾರ್ಥಿಗಳು ಓದುತ್ತಿದ್ದರೆ, ಆಂಗ್ಲ ಮಾಧ್ಯಮದಲ್ಲಿ 95 ಮಕ್ಕಳು ವ್ಯಾಸಂಗ ಮಾಡುತ್ತಿದ್ದಾರೆ. ಆದರೆ, ಇವರ ಸಂಖ್ಯೆಗೆ ಅನುಗುಣವಾಗಿ ಶಾಲೆಯಲ್ಲಿ ಕೊಠಡಿಗಳೇ ಇಲ್ಲ! ಶಾಲೆಯವರು ಅನಿವಾರ್ಯವಾಗಿ 1ರಿಂದ 4ನೇ ತರಗತಿಯ ಆಂಗ್ಲ ಭಾಷೆಯ 95 ಮಕ್ಕಳಿಗೆ ಕಲ್ಯಾಣ ಮಂಟಪದ ಒಂದೇ ಸಭಾಂಗಣದಲ್ಲಿ ಕೂರಿಸಿ ಪಾಠ ಮಾಡುತ್ತಿದ್ದಾರೆ.

ಗ್ರಾಮಸ್ಥರ ಪ್ರಕಾರ, ಸಭಾಂಗಣದಲ್ಲಿ ಪ್ರತಿಧ್ವನಿ ಕೇಳಿಸುತ್ತದೆ. ಒಂದೇ ಸಭಾಂಗಣದಲ್ಲಿ ನಾಲ್ಕು ಕಡೆಗಳಲ್ಲಿ ವಿದ್ಯಾರ್ಥಿಗಳನ್ನು ಗುಂಪು ಗುಂಪಾಗಿ ಕೂರಿಸಿ ಪಾಠ ಮಾಡುವುದರಿಂದ ಅವರು ಒಂದೇ ಚಿತ್ತದಿಂದ ಪಾಠ ಆಲಿಸಲು ಸಾಧ್ಯವಾಗುತ್ತಿಲ್ಲ. ಒಟ್ಟಿನಲ್ಲಿ ಅವರ ಓದಿಗೆ ಹಿನ್ನಡೆ ಉಂಟಾಗುತ್ತಿದೆ. ಈ ಕುರಿತು ಅನೇಕ ಸಲ ಸಂಬಂಧಿಸಿದವರಿಗೆ ವಿಷಯ ತಿಳಿಸಿದರೂ ಪ್ರಯೋಜನವಾಗಿಲ್ಲ ಎಂದು ದೂರಿದ್ದಾರೆ.

ಶಾಲೆಯಲ್ಲಿ ಹತ್ತು ಕೊಠಡಿಗಳಿದ್ದವು. ಎರಡು ಸಂಪೂರ್ಣ ಶಿಥಿಲಗೊಂಡಿದ್ದರಿಂದ ಅವುಗಳನ್ನು ನೆಲಸಮಗೊಳಿಸಿ, ಅವುಗಳ ಜಾಗದಲ್ಲಿ ಹೊಸ ಕಟ್ಟಡಗಳನ್ನು ನಿರ್ಮಿಸಲಾಗುತ್ತಿದೆ. ನಿರ್ಮಾಣಕ್ಕೆ ಗಡುವು ಈಗಾಗಲೇ ಪೂರ್ಣಗೊಂಡಿದೆ. ಸದ್ಯಕ್ಕಿರುವ ಎಂಟು ಕೊಠಡಿಗಳ ಪೈಕಿ ಎರಡರಲ್ಲಿ ಮಳೆ ನೀರು ಜಿನುಗುತ್ತದೆ. ಅವುಗಳು ಇದ್ದೂ ಇಲ್ಲದಂತಿವೆ. ವಿದ್ಯಾರ್ಥಿಗಳ ಸಂಖ್ಯೆಗೆ ಅನುಗುಣವಾಗಿ ಒಟ್ಟು 16 ಕೊಠಡಿಗಳು ಬೇಕಿದೆ.

ಮೂಲಗಳ ಪ್ರಕಾರ, ಶಾಲೆಗೆ 16ರಿಂದ 18 ಜನ ಶಿಕ್ಷಕರ ಅಗತ್ಯವಿದೆ. ಆದರೆ, ಸದ್ಯ ತಲಾ ಆರು ಜನ ಕಾಯಂ, ಅತಿಥಿ ಶಿಕ್ಷಕರಿದ್ದಾರೆ. ಒಂದೆಡೆ ತರಗತಿ ಕೊಠಡಿಗಳು, ಇನ್ನೊಂದೆಡೆ ಶಿಕ್ಷಕರ ಕೊರತೆಯಿಂದ ವಿದ್ಯಾರ್ಥಿಗಳ ಶೈಕ್ಷಣಿಕ ಬೆಳವಣಿಗೆಗೆ ತೊಡಕಾಗಿದೆ. ಮೂಲಸೌಕರ್ಯವೂ ನಿರೀಕ್ಷಿತ ಮಟ್ಟದಲ್ಲಿಲ್ಲ ಎನ್ನುವುದು ಗ್ರಾಮಸ್ಥರ ಆರೋಪ.

‘ಸರ್ಕಾರಿ ಶಾಲೆಗೆ ಪ್ರೀತಿ, ಅಭಿಮಾನದಿಂದ ನಮ್ಮ ಮಕ್ಕಳನ್ನು ಓದಲು ಕಳಿಸುತ್ತಿದ್ದೇವೆ. ಆದರೆ, ಅಲ್ಲಿ ವ್ಯವಸ್ಥೆಯೇ ಸರಿಯಿಲ್ಲ. ಇಂದು, ನಾಳೆ ಸರಿಪಡಿಸುವುದಾಗಿ ಕಾಲಹರಣ ಮಾಡಲಾಗುತ್ತಿದೆ. ಇದೇ ರೀತಿಯ ಧೋರಣೆ ತಾಳಿದರೆ ಪೋಷಕರು ಅವರ ಮಕ್ಕಳನ್ನು ಅನಿವಾರ್ಯವಾಗಿ ಖಾಸಗಿ ಶಾಲೆಗಳಿಗೆ ಕಳಿಸಬಹುದು’ ಎಂದು ಗ್ರಾಮಸ್ಥರು ಆತಂಕ ವ್ಯಕ್ತಪಡಿಸಿದ್ದಾರೆ.

ಕೊಠಡಿಗಳ ಕೊರತೆಯಿಂದ ಶಾಲೆಯ ವಿದ್ಯಾರ್ಥಿಗಳಿಗೆ ಆಗುತ್ತಿರುವ ಸಮಸ್ಯೆಯ ಬಗ್ಗೆ ಮೇಲಧಿಕಾರಿಗಳ ಗಮನಕ್ಕೆ ತರಲಾಗಿದೆ.

–ಸುರೇಶ್‌, ಮುಖ್ಯಶಿಕ್ಷಕ, ಸರ್ಕಾರಿ ಶಾಲೆ, ಕಾಕುಬಾಳು

ವಿದ್ಯಾರ್ಥಿಗಳಿಗೆ ಕಲ್ಯಾಣ ಮಂಟಪದಲ್ಲಿ ಕೂರಿಸಿ ಪಾಠ ಹೇಳಿಕೊಡುತ್ತಿರುವ ವಿಷಯ ನನ್ನ ಗಮನಕ್ಕೆ ಬಂದಿಲ್ಲ. ಬಿ.ಒ. ಮೂಲಕ ತಿಳಿಯುವೆ.

–ಜಿ. ಕೊಟ್ರೇಶ್‌, ಡಿ.ಡಿ.ಪಿ.ಐ, ವಿಜಯನಗರ ಜಿಲ್ಲೆ

ಶಾಲೆಯ ಎರಡು ಕೊಠಡಿಗಳ ನಿರ್ಮಾಣ ಕಾರ್ಯ ಮುಗಿಯುವ ಹಂತಕ್ಕೆ ಬಂದಿದೆ. ಇನ್ನೆರಡು ವಾರಗಳಲ್ಲಿ ಅಲ್ಲಿ ತರಗತಿಗಳನ್ನು ನಡೆಸಬಹುದು.

–ಚನ್ನಬಸಪ್ಪ, ಕ್ಷೇತ್ರ ಶಿಕ್ಷಣಾಧಿಕಾರಿ, ಹೊಸಪೇಟೆ

ಅಂಕಿ ಅಂಶ

432 ಒಟ್ಟು ವಿದ್ಯಾರ್ಥಿಗಳ ಸಂಖ್ಯೆ

337 ಕನ್ನಡ ಮಾಧ್ಯಮದ ಮಕ್ಕಳು

95 ಇಂಗ್ಲಿಷ್‌ ಮಾಧ್ಯಮದ ಮಕ್ಕಳು

06 ಕಾಯಂ ಶಿಕ್ಷಕರು

06 ಅತಿಥಿ ಶಿಕ್ಷಕರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT