ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಜಯನಗರ | ಲಿಂಗಾಯತರಿಗೆ ಬಿಜೆಪಿ ಟಿಕೆಟ್‌ಗೆ ಹಕ್ಕೊತ್ತಾಯ

ಮಠಾಧೀಶರ ಪರಿಷತ್ತಿನ ಸ್ವಾಮೀಜಿಗಳು–ನಳಿನ್‌ಕುಮಾರ್‌ ಕಟೀಲ್‌ ಭೇಟಿ
ಅಕ್ಷರ ಗಾತ್ರ

ಹೊಸಪೇಟೆ (ವಿಜಯನಗರ): ನಗರದ ಕೊಟ್ಟೂರು ಸ್ವಾಮಿ ಸಂಸ್ಥಾನ ಮಠವು ಸೋಮವಾರ ಬಿರುಸಿನ ರಾಜಕೀಯ ಚಟುವಟಿಕೆಗಳಿಗೆ ಸಾಕ್ಷಿಯಾಯಿತು.

ಮಠಾಧೀಶರ ಧರ್ಮ ಪರಿಷತ್ತಿನ 11 ಜನ ಸ್ವಾಮೀಜಿಗಳು ಹಾಗೂ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್‌ಕುಮಾರ್‌ ಕಟೀಲ್‌ ನಡುವೆ ಗೌಪ್ಯ ಮಾತುಕತೆಗೆ ಸಭೆ ನಿಗದಿಯಾಗಿತ್ತು. ಅದರಂತೆಯೇ ಕಟೀಲ್‌ ಅವರು ಬೆಳಿಗ್ಗೆ ಮಠಕ್ಕೆ ಭೇಟಿ ನೀಡಿದ್ದರು. ಈ ವಿಷಯ ತಿಳಿದು ಪ್ರವಾಸೋದ್ಯಮ ಸಚಿವ ಆನಂದ್ ಸಿಂಗ್‌ ಅಲ್ಲಿಗೆ ದೌಡಾಯಿಸಿದ್ದರು. ಇದರಿಂದಾಗಿ ಸಭೆಯಲ್ಲಿ ಮುಕ್ತವಾಗಿ ಚರ್ಚೆಯಾಗಬೇಕಿದ್ದ ಅನೇಕ ವಿಷಯಗಳ ಬಗ್ಗೆ ಅಷ್ಟೇನೂ ಗಂಭೀರವಾಗಿ ಚರ್ಚೆಗಳು ಆಗಲಿಲ್ಲ. ಆದರೆ, ಪರಿಷತ್ತಿನ ಸ್ವಾಮೀಜಿಗಳು, ವೀರಶೈವ ಲಿಂಗಾಯತ ಸಮಾಜದ ರಾಜಕೀಯ ಪ್ರಾತಿನಿಧ್ಯದ ಕುರಿತು ಕಟೀಲ್‌ ಅವರ ಗಮನ ಸೆಳೆದರು ಎಂದು ತಿಳಿದು ಬಂದಿದೆ.

‘ಅವಿಭಜಿತ ಬಳ್ಳಾರಿ ಜಿಲ್ಲೆಯ ಹತ್ತು ವಿಧಾನಸಭಾ ಕ್ಷೇತ್ರಗಳ ಪೈಕಿ 3 ಕ್ಷೇತ್ರಗಳಷ್ಟೇ ಸಾಮಾನ್ಯ ವರ್ಗಕ್ಕೆ ಮೀಸಲಾಗಿವೆ. ಇದರಲ್ಲಿ ಬಳ್ಳಾರಿ ನಗರ, ವಿಜಯನಗರ ಹಾಗೂ ಹರಪನಹಳ್ಳಿ ಕ್ಷೇತ್ರಗಳು ಸೇರಿವೆ. ಉಳಿದ ಏಳು ಕ್ಷೇತ್ರಗಳು ಮೀಸಲು ಕ್ಷೇತ್ರಗಳಾಗಿವೆ. ಹೆಚ್ಚಿನ ಸ್ಥಾನಗಳು ಮೀಸಲು ಕ್ಷೇತ್ರಗಳಾಗಿರುವುದರಿಂದ ಲಿಂಗಾಯತರಿಗೆ ರಾಜಕೀಯ ಪ್ರಾತಿನಿಧ್ಯ ಇಲ್ಲದಂತಾಗಿದೆ. ಈ ಕ್ಷೇತ್ರಗಳಲ್ಲಿ ಸಮಾಜಕ್ಕೆ ಪ್ರಾತಿನಿಧ್ಯ ನೀಡಬೇಕು’ ಎಂದು ಸ್ವಾಮೀಜಿಗಳು ಬೇಡಿಕೆ ಇಟ್ಟರು.

ಅದಕ್ಕೆ ಪ್ರತಿಕ್ರಿಯಿಸಿದ ಕಟೀಲ್‌, ‘ನಮ್ಮ ಪಕ್ಷವು ಇಡೀ ರಾಜ್ಯಕ್ಕೆ ಸಂಬಂಧಿಸಿದಂತೆ ಆಯಾ ಸಮುದಾಯಗಳಿಗೆ ತಕ್ಕಂತೆ ರಾಜಕೀಯ ಪ್ರಾತಿನಿಧ್ಯ ನೀಡುತ್ತದೆ ಹೊರತು ಜಿಲ್ಲೆಗೆ ತಕ್ಕಂತೆ ಅಲ್ಲ. ಆದರೆ, ನಿಮ್ಮ ಮನವಿಯನ್ನು ಪಕ್ಷದ ವರಿಷ್ಠರಿಗೆ ತಿಳಿಸುತ್ತೇನೆ’ ಎಂದು ಭರವಸೆ ನೀಡಿದ್ದಾರೆ ಎಂದು ಗೊತ್ತಾಗಿದೆ.

‘ಸ್ವಾಮೀಜಿಗಳು ಹಾಗೂ ಕಟೀಲ್‌ ಅವರ ಮಧ್ಯೆ ಸಭೆ ನಿಗದಿಯಾಗಿತ್ತು. ಆದರೆ, ಆನಂದ್‌ ಸಿಂಗ್‌ ಅವರನ್ನು ಆಹ್ವಾನಿಸದಿದ್ದರೂ ಸಹ ಬಂದಿದ್ದರು. ಅವರು ಬಂದದ್ದರಿಂದ ಅನೇಕ ವಿಚಾರಗಳ ಕುರಿತು ನಡೆಯಬೇಕಿದ್ದ ಚರ್ಚೆ ಸಾಧ್ಯವಾಗಲಿಲ್ಲ’ ಎಂದು ಹೆಸರು ಹೇಳಲಿಚ್ಛಿಸದ ಲಿಂಗಾಯತ ಸಮಾಜದ ಮುಖಂಡರೊಬ್ಬರು ತಿಳಿಸಿದ್ದಾರೆ.

‘ಸ್ವಾಮೀಜಿಗಳು ರಾಜಕೀಯದ ಬಗ್ಗೆ ಮಾತನಾಡಬಾರದು. ಆದರೆ, ಅವಿಭಜಿತ ಜಿಲ್ಲೆಯಲ್ಲಿ ಲಿಂಗಾಯತ ಸಮಾಜಕ್ಕೆ ರಾಜಕೀಯ ಪ್ರಾತಿನಿಧ್ಯ ಸಿಗದೇ ಅನ್ಯಾಯವಾಗುತ್ತಿದೆ. ಬರುವ ಚುನಾವಣೆಯಲ್ಲಿ ಲಿಂಗಾಯತ ಸಮಾಜದ ಜನಾನುರಾಗಿ ಮುಖಂಡರಿಗೆ ಟಿಕೆಟ್‌ ಕೊಡಬೇಕೆಂದು ಕಟೀಲ್‌ ಅವರಿಗೆ ತಿಳಿಸಲಾಗಿದೆ’ ಎಂದು ಕಲ್ಯಾಣ ಸ್ವಾಮೀಜಿ ತಿಳಿಸಿದ್ದಾರೆ.

ಮಠಾಧೀಶರ ಪರಿಷತ್ತಿನ ನಂದಿಪುರ ಮಹೇಶ್ವರ ಸ್ವಾಮೀಜಿ, ಕೊಟ್ಟೂರು ಚಾನುಕೋಟಿ ಸಿದ್ದಲಿಂಗ ಸ್ವಾಮೀಜಿ, ಹಿರೇಹಡಗಲಿ ಅಭಿನವ ಹಾಲಸ್ವಾಮೀಜಿ, ಕೂಡ್ಲಿಗಿ ಪ್ರಶಾಂತ ಸ್ವಾಮೀಜಿ, ಗದ್ದಿಕೇರಿ ಚರಂತಪ್ಪ ಸ್ವಾಮೀಜಿ, ಹಂಪಸಾಗರ ಸ್ವಾಮೀಜಿ, ಬೆಣ್ಣೆಹಳ್ಳಿ ಸ್ವಾಮೀಜಿ, ಕುರುಗೋಡು, ಗರಗ– ನಾಗಲಾಪುರ ಸ್ವಾಮೀಜಿ, ಉತ್ತಂಗಿ ಸ್ವಾಮೀಜಿ ಇದ್ದರು. ಕೊಟ್ಟೂರು ಬಸವಲಿಂಗ ಸ್ವಾಮೀಜಿ ಪೂರ್ವನಿರ್ಧರಿತ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಶ್ರೀಧರಗಡ್ಡೆಗೆ ಹೋಗಿದ್ದರು. ಆದರೆ, ಕರೆ ಮಾಡಿ ಕಟೀಲ್‌ ಹಾಗೂ ಸಿಂಗ್‌ ಅವರೊಂದಿಗೆ ಮಾತನಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT